ಫ್ಲರ್ಟ್ ಒಬ್ಬನ ಆತ್ಮಕತೆಯಂತೆ ಶುರುವಾಗುವ ಕತೆ ನಿಧಾನಕ್ಕೆ ಪಥ ಬದಲಿಸುತ್ತದೆ. ಅಂತಿಮ ಹಂತಕ್ಕೆ ಬರುವ ವೇಳೆಗೆ ಎಲ್ಲವೂ ಬದಲಾಗಿರುತ್ತದೆ. ಪ್ರಥಮಾರ್ಧದಲ್ಲಿ ಕತೆಯ ಯಾವೊಂದು ಅಂಶವನ್ನೂ ಬಿಟ್ಟುಕೊಡುವುದಿಲ್ಲ.
ಆರ್.ಎಸ್.
ಪ್ರೇಮಕತೆಯೋ, ಸ್ನೇಹವೋ, ದ್ವೇಷದ ಕತೆಯೋ, ಥ್ರಿಲ್ಲರೋ ಎಂದು ತಕ್ಷಣ ಹೇಳಲಾಗದಂತೆ ಹಲವು ವಿಚಾರಗಳನ್ನು ಮಿಳಿತಗೊಳಿಸಿ ಚಿತ್ರಕತೆ ಮೇಲೆ ಬಹಳ ಗಮನ ಹರಿಸಿ ರೂಪಿಸಿರುವ ಅಚ್ಚುಕಟ್ಟು ಸಿನಿಮಾ ಇದು. ಈ ಸಿನಿಮಾ ಶುರುವಾಗುವುದು ಕೋರ್ಟ್‌ನಲ್ಲಿ. ಒಬ್ಬ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್ ವಿಚಾರಣೆ ಮೂಲಕ ಕತೆ ಆರಂಭವಾಗುತ್ತದೆ. ಆರೋಪಿಯ ಸ್ಥಾನದಲ್ಲಿ ನಿಂತಿರುವುದು ನಾಯಕ. ಅಲ್ಲಿಗೆ ಈ ಸಿನಿಮಾದಲ್ಲಿ ಮುಂದೊಂದು ತಿರುವು ಬರುತ್ತದೆ ಎಂದು ಗೊತ್ತಾಗುತ್ತದೆ. ನೋಡುಗರು ಕಾಯುತ್ತಾ ಇದ್ದಂತೆ ಒಂದಲ್ಲ ಎರಡಲ್ಲ ನಾನಾ ತಿರುವುಗಳು ಬರುತ್ತವೆ.
ಫ್ಲರ್ಟ್ ಒಬ್ಬನ ಆತ್ಮಕತೆಯಂತೆ ಶುರುವಾಗುವ ಕತೆ ನಿಧಾನಕ್ಕೆ ಪಥ ಬದಲಿಸುತ್ತದೆ. ಅಂತಿಮ ಹಂತಕ್ಕೆ ಬರುವ ವೇಳೆಗೆ ಎಲ್ಲವೂ ಬದಲಾಗಿರುತ್ತದೆ. ಪ್ರಥಮಾರ್ಧದಲ್ಲಿ ಕತೆಯ ಯಾವೊಂದು ಅಂಶವನ್ನೂ ಬಿಟ್ಟುಕೊಡುವುದಿಲ್ಲ. ದ್ವಿತೀಯಾರ್ಧದಲ್ಲಿ ಅಲ್ಲಲ್ಲಿ ಟ್ವಿಸ್ಟ್‌ಗಳನ್ನು ಇಟ್ಟು ಕತೆಯನ್ನು ಆಶ್ಚರ್ಯಕರವಾಗಿ, ಕುತೂಹಲಕರವಾಗಿ ಹೆಣೆದಿದ್ದಾರೆ. ಚಂದನ್ ಕುಮಾರ್ ತಮ್ಮ ನಿರ್ದೇಶನದ ಮೊದಲ ಸಿನಿಮಾದಲ್ಲಿಯೇ ಅಷ್ಟರ ಮಟ್ಟಿಗೆ ಚಿತ್ರಕತೆ ಮೇಲೆ ಗಮನಹರಿಸಿ ಮೆಚ್ಚುಗೆ ಗಳಿಸುತ್ತಾರೆ. ಖ್ಯಾತ ನಿರ್ದೇಶಕರಾದ ಅಬ್ಬಾಸ್ ಮಸ್ತಾನ್ ಶೈಲಿಯ ಚಿತ್ರಕತೆಯನ್ನು ಆಸಕ್ತಿಕರವಾಗಿ ಬರೆದಿದ್ದಾರೆ.
ಚಿತ್ರ: ಫ್ಲರ್ಟ್
ನಿರ್ದೇಶನ: ಚಂದನ್ ಕುಮಾರ್
ತಾರಾಗಣ: ಚಂದನ್ ಕುಮಾರ್, ನಿಮಿಕಾ ರತ್ನಾಕರ್, ಗಿರಿ ಶಿವಣ್ಣ, ವಿನಯ್ ಗೌಡ, ಸಾಧು ಕೋಕಿಲ, ರಂಗಾಯಣ ರಘು
ರೇಟಿಂಗ್: 3
ಚಿತ್ರಕತೆ ಜೊತೆಗೆ ಚಿತ್ರಕ್ಕೆ ಆಧಾರವಾಗಿರುವುದು ಕಲಾವಿದರು. ಚಂದನ್ ಕುಮಾರ್ ನಟನೆ, ಸ್ಕ್ರೀನ್ ಪ್ರೆಸೆನ್ಸ್ ಎರಡೂ ಸೊಗಸು. ಗಿರಿ ಶಿವಣ್ಣ ಅದ್ಭುತವಾಗಿ ನಟಿಸಿದ್ದಾರೆ. ನಿಮಿಕಾ ರತ್ನಾಕರ್ ಉಪಸ್ಥಿತಿ ಸ್ಕ್ರೀನ್ ಅನ್ನು ಬೆಳಗಿಸುತ್ತದೆ. ಕೊಂಚ ವೇಗ ಜಾಸ್ತಿ ಮಾಡಿದ್ದರೆ ಚೆನ್ನಾಗಿತ್ತು ಅನ್ನಿಸುವ ಕತೆಯನ್ನು ಚಂದನ್ ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಸ್ಟೈಲಿಶ್ ಫ್ರೇಮ್‌ಗಳು, ಅಚ್ಚರಿಯೆಂಬಂತೆ ಕಾಣಿಸಿಕೊಳ್ಳುವ ಕಿಚ್ಚ ಸುದೀಪ್ ಈ ಸಿನಿಮಾವನ್ನು ಮತ್ತಷ್ಟು ಆಕರ್ಷಕವಾಗಿಸಿದ್ದಾರೆ.


