ಭ್ರಮೆಯಲ್ಲಿ ಬದುಕುವ ಆದಿ, ಅಚಾನಕ್‌ ಆಗಿ ಆತನ ಬದುಕಿಗೆ ಬರುವ ಹೆಣ್ಣುಮಗುವಿನ ಕಥೆ ಈ ಸೀರೀಸ್‌ನ ಎರಡನೇ ಭಾಗದಲ್ಲಿತ್ತು. ಮೂರನೆಯ ಹಾಗೂ ಕೊನೆಯ ಭಾಗದಲ್ಲಿ ಹಾಗೆ ಬಂದ ಮಗು ಆದಿಯ ಜಗತ್ತಾಗುವ ಕಥೆ ಇದೆ.

ಪ್ರಿಯಾ ಕೆರ್ವಾಶೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೊಂದು ಲೈಟ್‌ ಹಾರ್ಟೆಡ್‌ ಕಥೆ. ಅಪ್ಪ ಮಗಳ ಜಗತ್ತನ್ನು ಅನನ್ಯ ಬಗೆಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಕೃಷ್ಣ ಮಾಡಿದ್ದಾರೆ. ಕಥೆ ಶುರುವಾಗುವುದು ಇಂಟರ್‌ವಲ್‌ ನಂತರ. ಅಲ್ಲಿಯವರೆಗೆ ನಗೆ ಬರಿಸದ ಜೋಕ್‌ಗಳು, ಹೆಲ್ದಿ ಫ್ಲರ್ಟ್‌ಗಳನ್ನು ಸಹಿಸಬೇಕಾದ ಟಾಸ್ಕ್‌ ಇದೆ. ಪತ್ನಿ ನಿಧಿಯನ್ನು ಕಳೆದುಕೊಂಡು ಅವಳ ಭ್ರಮೆಯಲ್ಲಿ ಬದುಕುವ ಆದಿ, ಅಚಾನಕ್‌ ಆಗಿ ಆತನ ಬದುಕಿಗೆ ಬರುವ ಹೆಣ್ಣುಮಗುವಿನ ಕಥೆ ಈ ಸೀರೀಸ್‌ನ ಎರಡನೇ ಭಾಗದಲ್ಲಿತ್ತು. ಮೂರನೆಯ ಹಾಗೂ ಕೊನೆಯ ಭಾಗದಲ್ಲಿ ಹಾಗೆ ಬಂದ ಮಗು ಆದಿಯ ಜಗತ್ತಾಗುವ ಕಥೆ ಇದೆ.

ರೂಮ್‌ನಲ್ಲಿ ಫೋಟೋದಲ್ಲಷ್ಟೇ ಇರುವ ಅಮ್ಮ, ತಾಯಿಯ ವಾತ್ಸಲ್ಯ ತೋರುವ ಜಗ್ಗ ಮಮ್ಮಿ, ತರಲೆ ವಿಜು ಮಾಮ ಇದು ನಿಧಿ ಮತ್ತವಳ ಪಪ್ಪ ಆದಿಯ ಜಗತ್ತು. ನಿಧಿಯ ಶಾಲೆ, ಅಲ್ಲವಳ ತುಂಟಾಟ, ಆದಿಗೆ ಲೈನ್‌ ಹೊಡೆಯೋ ಕ್ಯೂಟ್‌ ಟೀಚರ್‌, ಸ್ಟ್ರಿಕ್ಟ್‌ ಪ್ರಿನ್ಸಿಪಾಲ್‌ ಇವೆಲ್ಲ ಆ ಜಗತ್ತಿನ ಮತ್ತೊಂದು ಮಗ್ಗುಲು. ಇಂಥಾ ಹಸನಾದ ಬದುಕಿಗೆ ಎದುರಾಗುವ ಆಘಾತವೇನು, ಅಪ್ಪ ಮಗಳ ಸಂಬಂಧಕ್ಕೆ ಸಿಗುವ ಹೊಸ ಡೆಫಿನಿಷನ್‌ ಏನು ಎನ್ನುವುದು ಕಥೆಯ ತಿರುಳು.

ಚಿತ್ರ: ಲವ್‌ ಮಾಕ್‌ಟೇಲ್‌ 3

ನಿರ್ದೇಶನ : ಡಾರ್ಲಿಂಗ್‌ ಕೃಷ್ಣ
ತಾರಾಗಣ : ಡಾರ್ಲಿಂಗ್‌ ಕೃಷ್ಣ, ಸಂವೃತಾ, ನೇಯಾರ ದೀಪಕ್‌, ರೇಖಾ ಕೂಡ್ಲಿಗಿ, ಮಿಲನಾ ನಾಗರಾಜ್‌
ರೇಟಿಂಗ್‌ : 3

‘ಪಪ್ಪ.. ನೀನು, ಮಮ್ಮಿ ಲಂಡನ್‌ನಲ್ಲಿ ಮೊದಲ ಸಲ ಸಿಕ್ಕಾಗ ಏನಾಯ್ತು?’ ಅಂತ ದಿನಾ ಕೇಳುವ ಮಗಳಿಗೆ ಅಪ್ಪ ದಿನಕ್ಕೊಂದು ದೇಶದಲ್ಲಿ ಅರಳುವ ತನ್ನ ಹಾಗೂ ನಿಧಿಯ ಕಥೆ ಹೇಳುತ್ತಾನೆ. ಮಗಳಿಗೆ ಅಪ್ಪನ ಕಥೆಗಿಂತ ತಾನು ಆ ಪ್ರಶ್ನೆ ಕೇಳಿದಾಗ ಅಪ್ಪನ ಮುಖದಲ್ಲಿ ಅಪರೂಪಕ್ಕೆ ಅರಳುವ ಕ್ಯೂಟ್‌ ನಗು ಇಷ್ಟ. ಈ ಪ್ರಶ್ನೆ, ನಗು ಮತ್ತು ಮಗು ಇಡೀ ಸಿನಿಮಾದ ಅಂತರ್‌ಧ್ವನಿಯಾಗಿ ಮನಸ್ಸಲ್ಲುಳಿಯುತ್ತಾರೆ. ಕೊನೆಯ ಭಾಗದಲ್ಲಿ ಎಮೋಶನಲ್‌ ಆಗಿ ಕನೆಕ್ಟ್‌ ಆಗುವ ಸಿನಿಮಾ ಶುರುವಿನಿಂದಲೇ ಕೊಂಚ ಬಿಗಿಯ ಕ್ರಾಫ್ಟ್‌ಗೆ ಒತ್ತುಕೊಟ್ಟಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು.