Mango Pachcha Movie Review: ‌ನಟ ಕಿಚ್ಚ ಸುದೀಪ್‌ ಅಕ್ಕನ ಮಗ ಸಂಚಿತ್‌ ಸಂಜೀವ್ ಹೀರೋ ಆಗಿ ಕಾಣಿಸಿಕೊಂಡಿರುವ ‘ಮ್ಯಾಂಗೋ ಪಚ್ಚ’ ರಿಲೀಸ್‌ ಆಗಿದ್ದು, ಮೊದಲ ಸಿನಿಮಾದಲ್ಲಿ ಸಂಚಿತ್‌ ಅವರು ಮಾಸ್‌ ಹೀರೋ ಎಂದು ಸಾಬೀತುಪಡಿಸಿದ್ದಾರೆ. ಹಾಗಿದ್ದರೆ ಈ ಸಿನಿಮಾ ಹೇಗಿದೆ? 

ಮ್ಯಾಂಗೋ ಪಚ್ಚ ಸಿನಿಮಾ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾರಾಗಣ

ಸಂಚಿತ್‌ ಸಂಜೀವ್‌

ಕಾಜಲ್‌ ಕುಂದರ್‌

ಜೈ

ಮ್ಯಾಕ್ಸ್‌ ಮಂಜು

ಮಯೂರ್‌ ಪಟೇಲ್‌

ಹರಿಣಿ ಶ್ರೀಕಾಂತ್‌

ನಿರ್ದೇಶನ-ವಿವೇಕ್‌

ನಿರ್ಮಾಪಕರು-ಸುಪ್ರಿಯಾನ್ವಿ ಸ್ಟುಡಿಯೋ

ಆರಡಿ ಎತ್ತರ, ಮೊನಚಾದ ಕತ್ತಿಯಂತಿರೋ ಧ್ವನಿ, ಕಣ್ಣಲ್ಲೇ ಕೊಲ್ಲಬಹುದು ಎನ್ನುವಂಥ ಲುಕ್.‌ ನಟನೆ ನೋಡಿದರೆ ಹೊಸಬರು ಎಂದು ಒಮ್ಮೆಯೂ ಡೌಟ್‌ ಬರೋದಿಲ್ಲ. ಹೌದು, ಕನ್ನಡ ಚಿತ್ರರಂಗಕ್ಕೆ ಭರವಸೆಯ ನಾಯಕನ ಎಂಟ್ರಿಯಾಗಿದೆ. ಸಿನಿಮಾಗಳನ್ನು ನೋಡಲು ವೀಕ್ಷಕರು ಥಿಯೇಟರ್‌ಗೆ ಬರೋದು ಕಷ್ಟ ಆಗಿರೋವಾಗ ನಟ ಕಿಚ್ಚ ಸುದೀಪ್‌ ಸೋದರ ಅಳಿಯ ಸಂಚಿತ್‌ ಸಂಜೀವ್‌ ಅವರು ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅದೇ ‘ಮ್ಯಾಂಗೋ ಪಚ್ಚ’ ಸಿನಿಮಾ ಮೂಲಕ.

ಭರವಸೆಯ ನಟ ಸಂಚಿತ್‌ ಸಂಜೀವ್!‌

ಮಾದಕ ದ್ರವ್ಯದ ಬಗ್ಗೆಯೇ ‘ಮ್ಯಾಂಗೋ ಪಚ್ಚ’ ಸಿನಿಮಾ ಸಾಗುತ್ತದೆ. ಪ್ರಶಾಂತ್‌ ಹೇಗೆ ಪಚ್ಚನಾದ, ಆಮೇಲೆ ಮ್ಯಾಂಗೋ ಪಚ್ಚನಾದ ಎಂಬುದೇ ಈ ಸಿನಿಮಾದ ಕಥೆ. ಸಿನಿಮಾದ ಆರಂಭ, ಅಂತ್ಯ ಎರಡೂ ಕ್ರೈಮ್‌ನಿಂದಲೇ. ಮೊದಲ ಸಿನಿಮಾದಲ್ಲಿ ಸಂಚಿತ್‌ ತಮ್ಮ ನಟನೆ ಸಾಮರ್ಥ್ಯ ಏನು ಎನ್ನೋದನ್ನು ತೋರಿಸಿದ್ದಾರೆ. ಎಷ್ಟೋ ಕಡೆ ಸಂಚಿತ್‌ ಅವರನ್ನು ನೋಡಿದರೆ, ಕಿಚ್ಚ ಸುದೀಪ್‌ ಅವರನ್ನು ನೋಡಿದಂತೆ ಭಾಸ ಆಗುವುದು. ಇನ್ನು ಕಿಚ್ಚ ಸುದೀಪ್‌ರಂತೆ ಸಂಚಿತ್‌ ಧ್ವನಿ ಕೂಡ ವಿಭಿನ್ನವಾಗಿದೆ. ಮಾಸ್ ಹೀರೋ ಪಾತ್ರಕ್ಕೆ ಸಂಚಿತ್‌ ಪಟ್ಟ ಕಷ್ಟ ಏನು ಎನ್ನೋದು ತೆರೆ ಮೇಲೆ ಕಾಣಿಸುತ್ತದೆ. ಪಚ್ಚ ಪಾತ್ರಕ್ಕೆ ಸಂಚಿತ್‌ ನ್ಯಾಯ ಒದಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಭಿನ್ನ ಪಾತ್ರಗಳಲ್ಲಿ ಸಂಚಿತ್‌ ಕಾಣಿಸಿಕೊಳ್ತಾರೆ, ಜನರಿಗೆ ಇಷ್ಟ ಆಗ್ತಾರೆ ಎನ್ನೋದರಲ್ಲಿ ಯಾವುದೇ ಸಂಶಯವಿಲ್ಲ. ಇಡೀ ಸಿನಿಮಾ ಪೂರ್ತಿ ಸಂಚಿತ್‌ ಧ್ವನಿ ಮೊಳಗುತ್ತದೆ.

ಸಿನಿಮಾ ಹೇಗಿದೆ?

ಸರಳವಾದ ಕಥೆಯನ್ನು ಮೊನಚಾಗಿ ಒಂದೂವರೆ ಗಂಟೆಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಇದನ್ನು ಮೆಚ್ಚಲೇಬೇಕು. ಕನ್ನಡದಲ್ಲಿ ಇದೊಂದು ಒಳ್ಳೆಯ ಸಸ್ಪೆನ್ಸ್‌ ಥ್ರಿಲ್ಲರ್‌ ಪ್ರಯತ್ನ ಎನ್ನಬಹುದು. ಸಿಂಪಲ್‌ ಆಗಿ ಹೇಳಿದ್ದು, ಇನ್ನೊಂದಿಷ್ಟು ಸ್ಕ್ರಿಪ್ಟ್‌ ಮೇಲೆ ಕೆಲಸ ಮಾಡಬಹುದಿತ್ತು ಎಂದೆನಿಸುವುದು. ಕಾಜಲ್‌ ಕುಂದರ್‌ ನಾಯಕಿ ಎನ್ನೋದಕ್ಕಿಂತ ನಟಿಯಾಗಿ, ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರೆ. ಮ್ಯಾಕ್ಸ್‌ ಮಂಜು ಇಲ್ಲಿ ಸೈಲೆಂಟ್‌ ಆಗಿಯೇ ಕಾಣಿಸಿಕೊಳ್ತಾರೆ. ಇನ್ನೊಂದು ಕಡೆ ಇಷ್ಟುದಿನ ನೋಡಿದ್ದಕ್ಕಿಂತ ವಿಭಿನ್ನವಾಗಿ ಮಯೂರ್‌ ಪಟೇಲ್‌ ಅವರು ಇಲ್ಲಿ ನಾಗಪ್ಪನಾಗಿ ಕಾಣಿಸಿಕೊಳ್ತಾರೆ. ನಟ ವಿಜಯ್‌ ರಾಘವೇಂದ್ರ ಅಕ್ಕನ ಮಗ ಜೈ ಕೂಡ ಕೊಟ್ಟ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ರಕ್ತ ಸಂಬಂಧ, ತಾಯಿ-ಮಕ್ಕಳ ಬಾಂಧವ್ಯ, ಲವ್‌ಸ್ಟೋರಿಯನ್ನು ಇಲ್ಲಿ ಟಚ್‌ ಮಾಡಿದ್ದರೂ ಕೂಡ ಇನ್ನಷ್ಟು ತೀವ್ರತೆ ಬೇಕು ಎಂದೆನಿಸುತ್ತದೆ . ಕಾಲಕ್ಕೆ ತಕ್ಕಂತೆ ಬದಲಾವಣೆ ಎನ್ನುವಂತೆ ಫ್ರೆಶ್‌ ಸಂಗೀತವೂ ಇದೆ. ಸಾನ್ವಿ ಸುದೀಪ್‌ ಗಾಯನ ಕೂಡ ಹೊಸತನ ಕೊಡುವುದು.‌ ಇದೊಂದು ಸಿಂಪಲ್‌ ಕಥೆ, ಇಂದಿನ ಪ್ಯಾನ್‌ ಇಂಡಿಯಾ ಸಿನಿಮಾಗಳಿಗೆ ಹೋಲಿಸಿದರೆ, ಸಿಂಪಲ್‌ ಆಗಿ ಸಾಗುವುದು, ಆದರೆ ಒಳ್ಳೆಯ ಪ್ರಯತ್ನ ಎಂದು ಗಟ್ಟಿಯಾಗಿ ಹೇಳಬಹುದು. ಕೊನೆಯಲ್ಲಿ ಒಂದಿಷ್ಟು ಸರ್ಪ್ರೈಸ್‌ ಕೊಟ್ಟಿದ್ದು, ಈ ಸಿನಿಮಾದ ಸೀಕ್ವೆಲ್‌ ಬರಲಿದೆ ಎಂಬ ಸುಳಿವು ಕೂಡ ಸಿಗುವುದು.