Mruthyudevathe Review: ಅನಿರೀಕ್ಷಿತ ತಿರುವುಗಳು, ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹಾಗೂ ಮಹಿಳಾ ಶಕ್ತಿಯ ಸಂದೇಶ ಹೊಂದಿರುವ ಮೃತ್ಯುದೇವತೆ ಸಿನಿಮಾದ ಸಂಪೂರ್ಣ ವಿಮರ್ಶೆ. ಕಥೆ, ನಟನ, ನಿರ್ದೇಶನ ಮತ್ತು ಹೈಲೈಟ್ಸ್ ಓದಿ.
ಆರ್.ಎಸ್.
ಇಬ್ಬರು ತರುಣರು, ಇಬ್ಬರು ತರುಣಿಯರು ಒಂದು ಹಳ್ಳಿಗೆ ಪ್ರವಾಸ ಹೋಗುವಲ್ಲಿಂದ ಕತೆ ಆರಂಭವಾಗುತ್ತದೆ. ಆ ಎರಡು ಜೋಡಿ ಜನರೇ ಇಲ್ಲದ ಖಾಲಿ ಮನೆಯಂತಿರುವ ಹೋಮ್‌ಸ್ಟೇಗೆ ಹೋಗಿ ಅಲ್ಲಿ ಇದ್ದಕ್ಕಿದ್ದಂತೆ ಅನಿರೀಕ್ಷಿತ ಘಟನೆ ನಡೆಯುವಲ್ಲಿಂದ ಕತೆ ತಿರುವು ಪಡೆದುಕೊಳ್ಳುತ್ತದೆ. ಅಲ್ಲಿಂದ ಮುಂದೇನು ಅನ್ನುವುದು ಕಥನ ಕುತೂಹಲ.
ದುಡ್ಡು ಮತ್ತು ಅಧಿಕಾರದ ಅಹಂಕಾರ ಹೊಂದಿದ ಇಬ್ಬರು ತರುಣರ ಆಲೋಚನೆಗಳೇನು, ಅವರು ಹೆಣ್ಣನ್ನು ನೋಡುವ ದೃಷ್ಟಿ ಯಾವುದು ಎಂಬುದನ್ನು ನಿರ್ದೇಶಕರು ಪದರು ಪದರಾಗಿ ವಿವರಿಸುತ್ತಾ ಹೋಗುತ್ತಾರೆ. ಯಾವ ಮನಸ್ಥಿತಿಯಿಂದ ಶೋಷಣೆ ಆಗುತ್ತದೆ ಅನ್ನುವುದನ್ನು ದೃಶ್ಯಗಳ ಮೂಲಕ ಕಟ್ಟುತ್ತಾ ಹೋಗುತ್ತಾರೆ. ಮೊದಲಾರ್ಧ ಪೂರ್ತಿ ಅವರು ಈ ರೀತಿಯ ಮಾನಸಿಕ ವಿಶ್ಲೇಷಣೆ ಮಾಡುತ್ತಾ ಹೋಗುತ್ತಾರೆ.
ದ್ವಿತೀಯಾರ್ಧದಲ್ಲಿ ಕತೆ ಮತ್ತೊಂದು ತಿರುವು ತೆಗೆದುಕೊಳ್ಳುತ್ತದೆ. ಅಲ್ಲಿಂದ ಮುಂದೆ ಅವರು ಈ ಸಮಸ್ಯೆಗೆ ಏನು ಪರಿಹಾರ ಸಿಗಬಹುದು ಎಂಬುದನ್ನು ಸೂಚಿಸುತ್ತಾ ಹೋಗುತ್ತಾರೆ. ಹೆಣ್ಣಿನ ಶಕ್ತಿ, ಹೆಣ್ಣಿನ ಘನತೆಯನ್ನು ನಾಯಕಿ ಪಾತ್ರದ ಮೂಲಕ ತೋರಿಸುತ್ತಾರೆ. ಅಂತಿಮವಾಗಿ ಕತೆಗೆ ತಾರ್ಕಿಕ ಅಂತ್ಯ ದೊರೆಯುತ್ತದೆ.
ಚಿತ್ರ: ಮೃತ್ಯುದೇವತೆ
ನಿರ್ದೇಶನ: ನವೀನ್ ಮಹಾದೇವ
ತಾರಾಗಣ: ಸಾರಿಕಾ ರಾವ್, ನವೀನ್ ಮಹಾದೇವ್, ಮಹೀನ್ ಕುಬೇರ್, ವಿನಯ ಪ್ರಸಾದ್, ಡಯಾನ ಜೆಸ್ಸಿಕಾ
ಆರಂಭದಲ್ಲಿ ಸಾವಧಾನದ ನಡೆಯನ್ನು ನಿರ್ದೇಶಕರು ಅನುಸರಿಸಿದ್ದಾರೆ. ಅವರಿಗೆ ಯಾವುದಕ್ಕೂ ಅವಸರವಿಲ್ಲ. ಸಹನೆಯಿಂದ ಒಂದೊಂದೇ ಅಂಶವನ್ನು ದಾಟಿಸುತ್ತಾ ಹೋಗುತ್ತಾರೆ. ಆಮೇಲೆ ತೀವ್ರತೆ ಪಡೆದುಕೊಂಡ ಮೇಲೆ ಹುಡುಕಾಟದ ದಾರಿಗೆ ಇಳಿಯುತ್ತಾರೆ. ಅಷ್ಟರ ಮಟ್ಟಿಗೆ ಅವರ ಕಥನಶಕ್ತಿ ಅನೂಹ್ಯವಾಗಿ ಮೂಡಿಬಂದಿದೆ. ವಿನಯಪ್ರಸಾದ್ ಹೊರತಾಗಿ ಬಹುತೇಕ ಯುವಪ್ರತಿಭೆಗಳೇ ನಟಿಸಿದ್ದು, ನಟನೆಯಲ್ಲಿ ಉತ್ತಮ ಪ್ರಯತ್ನ ತೋರಿದ್ದಾರೆ.


