ಹೀರೋನ ಒಂದು ಏಟಿಗೇ ರಕ್ತ ಕಾರುವ, ಗಾಳಿಯಲ್ಲಿ ಹಾರುವ ಹತ್ತಾರು ವಿಲನ್‌ಗಳು, ನೆಲಕ್ಕೆ ಗುದ್ದಿದರೆ ನೆಲವೇ ಒಡೆಯುವಂಥಾ ಹೀರೋ ಕೇಂದ್ರಿತ ವೈಭವೀಕರಣಗಳು ಸಾಕಷ್ಟಿವೆ. ಬೋನಸ್‌ನಂತೆ ಡ್ಯಾನ್ಸಿಂಗ್ ಸ್ಟೈಲ್ ಫೈಟ್ ಇದೆ.
ಪ್ರಿಯಾ ಕೆರ್ವಾಶೆ
‘ಮಾರ್ಕ್’ ಸಿನಿಮಾ ಹೇಗಿರಬಹುದು ಅನ್ನುವ ಸಣ್ಣ ಅಂದಾಜು ಚಿತ್ರದ ಟ್ರೇಲರ್ ನೋಡಿದರೆ ತಿಳಿಯುತ್ತದೆ. ಆ ಕಣ್ಣಂದಾಜಿಗೆ ಸಿನಿಮಾ ಮೋಸ ಮಾಡೋದಿಲ್ಲ. ಹಾಗೆಂದು ಗೆಸ್‌ವರ್ಕ್‌ಗಿಂತ ಹೆಚ್ಚಿನದನ್ನೂ ಇಲ್ಲಿ ಪ್ರೇಕ್ಷಕ ನಿರೀಕ್ಷಿಸುವಂತಿಲ್ಲ. ಸಸ್ಪೆಂಡೆಡ್ ಎಸ್.ಪಿ. ಅಜಯ್ ಮಾರ್ಕಂಡೇಯ (ಸುದೀಪ್)ನದು ವಿಲಕ್ಷಣ ವ್ಯಕ್ತಿತ್ವ. ಸಸ್ಪೆನ್ಶನ್‌ನಲ್ಲಿದ್ದರೂ, ಅಧಿಕಾರದಲ್ಲಿದ್ದರೂ ಈತ ವಿಲನ್‌ಗಳಿಗೆ ಯಮ, ಶತ್ರು ಸಂಹಾರವೇ ಈತನ ಜೀವನಧರ್ಮ. ಇಂಥಾ ಮಾರ್ಕ್ ಮುಂದೆ ಮೂರು ಸವಾಲುಗಳಿವೆ. ಅಪಹರಣಕ್ಕೊಳಗಾಗಿ ಸಾವಿನ ಭೀತಿಯಲ್ಲಿರುವ 18 ಮಕ್ಕಳ ರಕ್ಷಣೆ ಮಾಡಬೇಕು,
ತಾಯಿಯನ್ನೇ ಕೊಂದು ಸಿಎಂ ಆಗಲು ಹೊರಟಿರುವ ಆದಿ ಕೇಶವನ ಪಿತೂರಿಯನ್ನು ಬಯಲು ಮಾಡಬೇಕು, ಡ್ರಗ್ ಮಾಫಿಯಾಕ್ಕೊಂದು ಗತಿ ಕಾಣಿಸಬೇಕು. ಇದನ್ನು ಪೂರೈಸಲು ಇರುವುದು ಆತನ ಮುಂದಿರುವುದು ಕೇವಲ ಎರಡು ರಾತ್ರಿ, ಒಂದು ಹಗಲಿನ ಅವಧಿ. ಸಾವಿರಾರು ಸಂಖ್ಯೆಯಲ್ಲಿ ಮಾರಕಾಸ್ತ್ರ ಹಿಡಿದ ವಿಲನ್‌ಗಳು, ಬೆರಳೆಣಿಕೆಯ ಪೊಲೀಸರು, ಒಬ್ಬ ಮಾರ್ಕ್. ಈ ಸರ್ಕಲ್‌ನಲ್ಲೇ ಕಥೆಯ ಪ್ರಯಾಣ. ಶಕ್ತಿ, ಯುಕ್ತಿ ಮತ್ತು ಇಚ್ಛಾಶಕ್ತಿಗಳಿಂದ ಮಾರ್ಕ್ ಸೀಮಿತ ಸಮಯದಲ್ಲಿ ಈ ಚಾಲೆಂಜ್‌ಗಳನ್ನು ಹೇಗೆ ಗೆಲ್ಲುತ್ತಾನೆ ಅನ್ನುವುದು ಒನ್‌ಲೈನ್.
ಹೀರೋನ ಒಂದು ಏಟಿಗೇ ರಕ್ತ ಕಾರುವ, ಗಾಳಿಯಲ್ಲಿ ಹಾರುವ ಹತ್ತಾರು ವಿಲನ್‌ಗಳು, ನೆಲಕ್ಕೆ ಗುದ್ದಿದರೆ ನೆಲವೇ ಒಡೆಯುವಂಥಾ ಹೀರೋ ಕೇಂದ್ರಿತ ವೈಭವೀಕರಣಗಳು ಸಾಕಷ್ಟಿವೆ. ಬೋನಸ್‌ನಂತೆ ಡ್ಯಾನ್ಸಿಂಗ್ ಸ್ಟೈಲ್ ಫೈಟ್ ಇದೆ. ಸಿನಿಮಾದುದ್ದಕ್ಕೂ ಪವರ್‌ಫುಲ್ ಬಿಜಿಎಂ ಇದೆ. ಮಿಸ್ ಆಗಿರುವುದು ಮೌನ, ಬುದ್ಧಿ ಓಡಿಸಲು ಪ್ರೇಕ್ಷಕನಿಗೆ ನೀಡಬೇಕಿದ್ದ ಸಮಯ. ‘ಅಂಧಕಾರ ತುಂಬಿದ ಅಂದವಾದ ಬಾಳಲಿ’ ಎಂಬ ಮಕ್ಕಳ ಹಾಡಿದೆ. ಘನ ಗಾಂಭೀರ್ಯದ ಪದಗಳ ಜೊತೆಗೆ ಹುಟ್ಟು ಸಾವಿನಂಥಾ ಪಾರಮಾರ್ಥಿಕ ವಿಚಾರಗಳು ಬರುವ ಇಂಥಾ ಹಾಡನ್ನು ಈ ಕಾಲದ ಮಕ್ಕಳ ಬಾಯಲ್ಲಿ ಕೇಳುವ ಫೀಲನ್ನು ಅನುಭವಿಸಿಯೇ ತಿಳಿಯಬೇಕು.
ಚಿತ್ರ: ಮಾರ್ಕ್
ನಿರ್ದೇಶನ: ವಿಜಯ್ ಕಾರ್ತಿಕೇಯ
ತಾರಾಗಣ: ಕಿಚ್ಚ ಸುದೀಪ್, ನವೀನ್ ಚಂದ್ರ, ಶೈನ್ ಟಾಮ್ ಚಾಕೊ, ಯೋಗಿ ಬಾಬು, ಗೋಪಾಲಕೃಷ್ಣ ದೇಶಪಾಂಡೆ
ರೇಟಿಂಗ್: 3
ಸುದೀಪ್ ಎನರ್ಜಿ, ಕ್ವಿಕ್‌ನೆಸ್, ಅಭಿನಯ ಒಂದಕ್ಕಿಂತ ಒಂದು ಮಿಗಿಲು. ಹೀರೋ ಅಬ್ಬರ, ಕಥೆಯ ವೇಗದ ಮುಂದೆ ಯೋಗಿ ರಾಜ್ ಕಾಮಿಡಿ ಬಿಟ್ಟರೆ ಉಳಿದ ಪಾತ್ರಗಳು ದಾಖಲಾಗೋದಿಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ಹೆಚ್ಚಿನ ಅಚ್ಚರಿ ನಿರೀಕ್ಷಿಸುವಂತಿಲ್ಲ. ಥೇಟರಿಂದ ಹೊರಬಂದ ಮೇಲೂ ಮನಸ್ಸು ಮೆಲುಕು ಹಾಕುವುದು ಮಾರ್ಕ್‌ನ ಡ್ಯಾನ್ಸಿಂಗ್ ಫೈಟ್ ಮತ್ತು ಅಜನೀಶರ ಬ್ಯಾಗ್ರೌಂಡ್ ಸ್ಕೋರ್. ಅಷ್ಟರಮಟ್ಟಿಗೆ ಸ್ಟಾರ್ ಕೇಂದ್ರಿತ ಆ್ಯಕ್ಷನ್ ಸಿನಿಮಾವೊಂದರ ಉದ್ದೇಶ ಈಡೇರಿದಂತಾಗಿದೆ.


