ಚಿತ್ರ ವಿಮರ್ಶೆ: ಭರಾಟೆ
ನಿರ್ದೇಶಕ ಚೇತನ್ ಕುಮಾರ್ ಅಪೂರ್ವ ಚೈತನ್ಯದ ನಿರ್ದೇಶಕ. ಒಂದು ಸಾಧಾರಣ ದೃಶ್ಯವನ್ನೂ ಅಪಾರ ಬೆರಗಿನಿಂದ ನೋಡುವುದು ಹೇಗೆಂದು ಅವರಿಗೆ ಗೊತ್ತು. ತಾನು ಹೇಳಬೇಕಾದ ಕತೆಯನ್ನು ಹೀಗೆಯೇ ಹೇಳಬೇಕು ಅನ್ನುವುದು ಒಬ್ಬ ನಿರ್ದೇಶಕನಿಗೆ ಗೊತ್ತಿದ್ದರೆ, ಅವನು ಅರ್ಧ ಗೆದ್ದಂತೆ.
ಜೋಗಿ
ಚೇತನ್‌ಕುಮಾರ್ ಶಕ್ತಿ ಅವರ ನಿರೂಪಣೆಯ ಶೈಲಿಯಲ್ಲಿದೆ. ತಂಗಿಯನ್ನು ನೋಡಲು ಬರುವ ಅಣ್ಣ ಕೂಡ ಇಪ್ಪತ್ತು ಕಾರುಗಳ ಮೆರವಣಿಗೆಯಲ್ಲಿ ಸಾಗುತ್ತಿರುವ ಬಸ್ಸಿನ ಮುಂದೆ ಬಂದಿಳಿಯುತ್ತಾನೆ. ಆಯುರ್ವೇದದ ಔಷಧಿ ಅರೆಯುವುದರಿಂದ ಹಿಡಿದು ಅನಿರೀಕ್ಷಿತ ಸಾವಿನ ತನಕ ಎಲ್ಲವನ್ನೂ ಎಷ್ಟು ಸಾಧ್ಯವೋ ಅಷ್ಟು ಆಕರ್ಷಕವಾಗಿಯೂ ಅತಿರೇಕವಾಗಿಸಿಯೂ ತೋರಿಸುತ್ತಾರೆ.
ಶ್ರೀ ಮುರಳಿಗೂ ಸೈರಾಗೂ ನರಸಿಂಹ ರೆಡ್ಡಿಗೂ ಇದೆ ಸಂಬಂಧ!
ನೂರಾರು ಸಹಕಲಾವಿದರನ್ನು ಚಿತ್ರದ ಅಷ್ಟೂ ಫ್ರೇಮ್ಗಳಲ್ಲೂ ನಿಭಾಯಿಸುವ ಕಲೆಯನ್ನೂ ಚೇತನ್ ಮೈಗೂಡಿಸಿಕೊಂಡಿದ್ದಾರೆ. ಭರಾಟೆ ಚಿತ್ರದ ಕತೆಯೇನು ಅಂತ ಕೇಳುವ ಗೋಜಿಗೇ ಹೋಗದೇ ಸುಮ್ಮನೆ ಪರದೆಯ ಮೇಲೆ ಕಣ್ಣಿಟ್ಟುಕೊಂಡು ಕೂರುವಂತೆ ಮಾಡುವುದು ಪ್ರತಿಯೊಂದು ದೃಶ್ಯದಲ್ಲಿ ತುಂಬಿತುಳುಕುವ ಮಂದಿ.
ಚೇತನ್ ಪ್ರತಿದೃಶ್ಯವನ್ನೂ ಅದಕ್ಕೆ ತಕ್ಕ ಪರಿಸರ ಮತ್ತು ಪರಿಕರದಿಂದ ತುಂಬುವ ರೀತಿ. ಅದು ಫ್ಲಾಷ್‌ಬ್ಯಾಕ್ ಆದರೂ ಸರಿಯೇ, ವರ್ತಮಾನವಾದರೂ ಅಷ್ಟೇ, ಚೇತನ್ ಪ್ರತಿದೃಶ್ಯಕ್ಕೂ ಅಗತ್ಯಕ್ಕಿಂತ ಕೊಂಚ ಹೆಚ್ಚಿಗೇ ಬಣ್ಣ ಬಳಿಯುತ್ತಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದು ಕತೆಯ ಕುರಿತೂ ಅವರ ಗಾಢನಂಬುಗೆ. ಹೀಗಾಗಿ, ಕತೆಯೂ ಸೇರಿದಂತೆ ಹಳೆಯ ಕಾರುಗಳಿಂದ ಹಿಡಿದು ಹೊಸಕಾಲದ ಬಣ್ಣಬಣ್ಣದ ಕಾರು-ಜೀಪುಗಳ ತನಕ ಪ್ರತಿಯೊಂದನ್ನೂ ಚೇತನ್ ವಿನೂತನವಾಗಿ ಅಲಂಕರಿಸುತ್ತಾರೆ. ಅವರ ಕಲಾಸ್ಪರ್ಶಕ್ಕೆ ಸಿಲುಕದ ಒಂದೇ ಒಂದು ಪ್ರಾಪರ್ಟಿ ಕೂಡ ಸಿನಿಮಾದಲ್ಲಿ ಕಾಣಿಸದು.
‘ಕಿಸ್’ ಮಾಡೋಕೆ ರೆಡಿಯಾದ ‘ಭರಾಟೆ’ ಬೆಡಗಿ ಶ್ರೀಲಿಲಾ!
ಥರಾವರಿ ಆಯುಧ, ವಿಚಿತ್ರ ಉಡುಗೆತೊಡುಗೆ, ವರ್ಣರಂಜಿತ ವಿನ್ಯಾಸ, ಮನೆಯ ಒಳಾಂಗಣ, ಮರಳುಗಾಡು, ನೀಲಿ ನೀಲಿ ಊರು, ಅಲ್ಲಲ್ಲಿ ಕಾಣಿಸುವ ತುಂಡು ಆಕಾಶ- ಎಲ್ಲವನ್ನೂ ಸಿಂಗರಿಸಿಯೇ ನಮ್ಮ ಮುಂದಿಡುತ್ತಾರೆ. ಆಫ್‌ಕೋರ್ಸ್, ಕತೆಯನ್ನು ಕೂಡ. ಕೊಂಚ ಇತಿಹಾಸ ಮತ್ತು ಹೆಚ್ಚು ವರ್ತಮಾನದ ಕತೆಯನ್ನು ಬೆರೆಸಿ ಹೇಳುವುದು ಚೇತನ್ ಶೈಲಿ. ಇಲ್ಲೂ ಅವರು ಅದರಿಂದ ದೂರ ಸರಿದಿಲ್ಲ. ರತ್ನಾಕರ, ಬಲ್ಲಾಳ ಎಂಬ ಮನೆತನಗಳಿವೆ, ಪ್ರತಿ ಮನೆತನಕ್ಕೂ ಒಂದೊಂದು ಇತಿಹಾಸವಿದೆ. ಅದರೊಟ್ಟಿಗೆ ಇಂದಿನ ರಾಜಕೀಯ ಬೆರೆತಿದೆ. ಇಲ್ಲಿ ಪ್ರತಿಯೊಬ್ಬರೂ ಶ್ರೀಮಂತರೇ, ಶ್ರೀಮಂತರೆಲ್ಲರೂ ಪುತ್ರಶೋಕದಿಂದ ನರಳಿದವರೇ. ನೊಂದವನ ಕ್ರೌರ್ಯ ಒಂದು ಕೈ ಮಿಗಿಲು ಎಂಬಂತೆ ಪರಸ್ಪರರ ಮೇಲೆ ದ್ವೇಷ ಸಾಧಿಸುವ ನಾಲ್ಕು ರಣಭಯಂಕರರ ನಡುವೆ, ಕೊಲ್ಲುವುದಕ್ಕಿಂತ ಕಾಯುವುದು ದೊಡ್ಡದು ಎಂದು ನಂಬಿದ ಕುಟುಂಬದ ಕತೆಯನ್ನು ಚೇತನ್ ಹೇಳುತ್ತಾರೆ.
ಚೇತನ್ ಕತೆ ಹೇಳುವ ಶೈಲಿಯೂ ಸೊಗಸಾಗಿದೆ. ವಿಲಾಸ್ ನಾಯಕ್ ಮಾಡುವ ಸ್ಪೀಡ್ ಪೇಂಟಿಂಗಿನ ಹಾಗೆ ಅವರು ಅಲ್ಲೊಂದು ಇಲ್ಲೊಂದು ಬಣ್ಣದ ಬಿಂದುಗಳನ್ನು ಸುಮ್ಮನೆ ರಾಚುತ್ತಾರೆ. ಅದ್ಯಾರು, ಇದ್ಯಾರು, ಅವರೇಕೆ ಬಂದರು, ಇವರು ಯಾಕಿದ್ದಾರೆ ಎಂದು ಅಚ್ಚರಿಗೊಳಿಸುತ್ತಾ, ಒಮ್ಮೊಮ್ಮೆ ತಾವೇ ಅಚ್ಚರಿಗೊಳ್ಳುತ್ತಾ, ಆ ಬಿಂದುಗಳನ್ನು ಸಸೂತ್ರವಾಗಿ ಬೆಸೆಯುತ್ತಾರೆ. ಅದಕ್ಕೊಂದು ಅವರದೇ ಆದ ತರ್ಕಬದ್ಧ ತೀರ್ಮಾನವನ್ನೂ ಕೊಡುತ್ತಾರೆ. ಈ ಚಟುವಟಿಕೆಯಲ್ಲಿ ಬೀಳುವ ಹೆಣಗಳ ಲೆಕ್ಕ, ಯಮ ನೋಡಿ ನಕ್ಕ!
ಅದ್ಧೂರಿಯಾಗಿ ರೋರಿಂಗ್ ಸ್ಟಾರ್ 'ಭರಾಟೆ' ರಿಲೀಸ್!
ತನ್ನದು ನಿರ್ದೇಶಕನ ಸಿನಿಮಾ ಅಂತ ಗೊತ್ತಿದ್ದೂ ನಟರಿಂದಲೇ ಸಿನಿಮಾ ಮುನ್ನಡೆಯುವಂತೆ ಮಾಡುವ ಜಾಣ್ಮೆಯೂ ಚೇತನ್‌ಗಿದೆ. ಭರಾಟೆಯಂಥ ಸಿನಿಮಾವನ್ನು ತಾಳಿಕೊಳ್ಳುವುದು ಎಂಥಾ ಕಲಾವಿದನಿಗೂ ಕಷ್ಟ. ನಿರ್ದೇಶಕ ತನ್ನ ಮೇಲೆ ಹೇರುವ ಎಲ್ಲ ದಿವ್ಯಶಕ್ತಿಗಳನ್ನೂ ಆತ ನಂಬಬೇಕು, ನೋಡುವವರಿಗೆ ನಂಬಿಸಲೂ ಬೇಕು. ಆ ಕೆಲಸವನ್ನು ಮುರಳಿ
ಅದೆಷ್ಟು ಶ್ರದ್ಧೆಯಿಂದಲೂ ತನ್ಮಯತೆಯಿಂದಲೂ ಮಾಡಿದ್ದಾರೆಂದರೆ ಮಾತು, ಮೌನ, ಭಂಗಿ, ಚಲನೆ, ನಿಶ್ಚಲತೆ, ಕಣ್ಣೋಟ ಮತ್ತು ಮುಗುಳುನಗೆಯನ್ನು ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಬಳಸುತ್ತಾರೆ. ಅಲ್ಲಲ್ಲಿ ತಮ್ಮ ಶಕ್ತಿಗೆ ತಾವೇ ನಾಚುತ್ತಾರೆ, ತಮ್ಮ ಪವಾಡಕ್ಕೆ ತಾವೇ ಮಣಿಯುತ್ತಾರೆ.
ನಾಯಕಿ ಶ್ರೀಲೀಲಾ ಚಂದನದ ಗೊಂಬೆ. ಅವರು ತೆರೆಯನ್ನು ತೂಗುದೀಪದಂತೆ ಬೆಳಗುವ ಪರಿಯೇ ಸೊಗಸು. ಕನ್ನಡಕ್ಕೊಬ್ಬಳು ಚೆಂದದ ನಾಯಕಿ ಬಹುಕಾಲದ ನಂತರ ಸಿಕ್ಕಿದ್ದಾರೆ ಎಂದು ಘೋಷಿಸಬಹುದು. ಅವರ ಜೊತೆಗೇ ನಟಭಯಂಕರ ತ್ರಿಮೂರ್ತಿಗಳಾದ ರವಿಶಂಕರ್, ಸಾಯಿಕುಮಾರ್ ಮತ್ತು ಅಯ್ಯಪ್ಪ ಶರ್ಮ ಒಬ್ಬರನ್ನೊಬ್ಬರು ಮೀರಿಸುತ್ತಾ ಅಬ್ಬರಿಸುತ್ತಾರೆ. ಹಿತವಾದ ಅಚ್ಚರಿ ಕೊಡುವುದಕ್ಕೆ ಶೋಭರಾಜ್, ಶಂಕರ್ ಅಶ್ವತ್ಥ್, ಧರ್ಮ, ಅಶ್ವತ್ಥ್ ನೀನಾಸಂ, ರವಿಚೇತನ್, ಅಲೋಕ್, ಗಿರಿ, ವಾಣಿಶ್ರೀ, ಶರತ್ ಲೋಹಿತಾಳ್ವ, ಅವಿನಾಶ್, ಸುಮನ್- ಹೀಗೆ ನೆನೆದವರು,
ನೆನೆಯದವರೆಲ್ಲ ಧಿಗ್ಗನೆ ್ರತ್ಯಕ್ಷರಾಗುತ್ತಾರೆ. ಹಳೆಯ ಸೀರಿಯಲ್ಲು ನಟಿಯರೆಲ್ಲ ಇಲ್ಲಿ ಮೆರವಣಿಗೆಯಲ್ಲಿ ಸಾಗುತ್ತಾರೆ. ಸದಾ ಒದ್ದೆಕಣ್ಣುಗಳ ಪ್ರೀತಿಯ ಅಮ್ಮನಾಗಿ ತಾರಾ ಇಷ್ಟವಾಗುತ್ತಾರೆ. ರಚಿತಾ ರಾಮ್ ಬೇಸರಕ್ಕೆ ಮದ್ದು! ಅತಿ ಹೆಚ್ಚು ಕನ್ನಡ ಕಲಾವಿದರನ್ನು ಬಳಸಿಕೊಂಡಿರುವ ಚಿತ್ರ ಇದೆಂದು ಕಾಣುತ್ತದೆ.
'ಭರಾಟೆ' ಅಚ್ಚರಿಗಳ ಮೂಟೆ; ಚಿತ್ರವನ್ನು ಯಾಕೆ ನೋಡಬೇಕು?
ಚೇತನ್‌ಕುಮಾರ್ ಸಿನಿಮಾಗಳ ಶೈಲಿಯ ಹಾಡುಗಳೆಲ್ಲ ಇಲ್ಲೂ ಇವೆ. ಅರ್ಜುನ್ ಜನ್ಯ ಸಂಗೀತದಲ್ಲಿ ಮೂರು ಹಾಡುಗಳು ಹಿತವಾಗಿವೆ. ಮುರಳೀ-ಶ್ರೀಲೀಲಾ ಮತ್ತು ಚಿತ್ರೀಕರಣಗೊಂಡ ತಾಣಗಳಿಂದಾಗಿ ಅವು ಮತ್ತಷ್ಟು ಇಷ್ಟವಾಗಬಹುದು. ಈ ಚಿತ್ರದಲ್ಲಿ ಗಮನಿಸಲೇಬೇಕಾದ ಇಬ್ಬರೆಂದರೆ ಛಾಯಾಗ್ರಾಹಕ ಮತ್ತು ಕಲಾ ನಿರ್ದೇಶಕ. ಅವರಿಬ್ಬರ ಸಂಯೋಜನೆಯನ್ನು ವಿಶೇಷವಾಗಿ ಗಮನಿಸಬಹುದು.
ಚೇತನ್ ಚಿತ್ರಗಳು ಉತ್ಸವದಂತೆಯೋ ಜಾತ್ರೆಯಂತೆಯೋ ಇರುತ್ತವೆ. ಅದರೊಟ್ಟಿಗೆ, ಈ ಚಿತ್ರದಲ್ಲಿ ಈ ಕಾಲಕ್ಕೆ ತಕ್ಕ ಪರಿವೇಷವನ್ನೂ ಕಾಣಬಹುದು. ಆಯುರ್ವೇದ, ದೈವಾರಾಧನೆ, ಒಳ್ಳೆಯತನ, ದೇಶಭಕ್ತಿ, ಕನ್ನಡ ಪ್ರೇಮ, ಸರ್ವೇಜನಾ ಸುಖಿನೋ ಭವಂತು, ಭವ್ಯ ಇತಿಹಾಸ, ಪಾಳೇಗಾರಿಕೆ, ಮೃತ್ಯುಂಜಯ ಹೋಮಗಳನ್ನು ಅವರು ಎಲ್ಲಿ ಬೇಕೋ ಅಲ್ಲಿ, ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಭರಾಟೆಯನ್ನೊಂದು ಸಾಕ್ಷಾತ್ ಸ್ವದೇಶಿ ಸಿನಿಮಾ ಮಾಡಿದ್ದಾರೆ. ಚಿತ್ರದ ನಾಯಕ ಜಗನ್ಮೋಹನ ತಾನು ಹೊಡೆದು ನುಜ್ಜುಗುಜ್ಜು ಮಾಡಿದವರ ಚಿಕಿತ್ಸೆಯನ್ನು ತಾನೇ ಮಾಡುವಂತೆ, ಚೇತನ್ ಕೂಡ ತಾನು ಮುರಿದದ್ದನ್ನು ತಾನೇ ಕಟ್ಟುತ್ತಾ, ತಾನು ಕಟ್ಟಿದ್ದನ್ನು ತಾನೇ ಮುರಿಯುತ್ತಾ ಹೋಗುವುದು ಕೂಡ ಅವರ ಶೈಲಿಯೆಂದು ಭಾವಿಸತಕ್ಕದ್ದು!
ಒಂದೇ ಹಾಡಿಗೆ 13 ಗೆಟಪ್‌ಗಳು; ಶ್ರೀಮುರಳಿ ಪತ್ನಿ ಕೈವಾಡ!
ಈ ಚಿತ್ರದಲ್ಲಿ ಕೌಂಟ್ ಮಾಡುವಂಥದ್ದೇನಿದೆ ಎಂದು ಕೇಳುವ ಪ್ರಜ್ಞಾವಂತರು ಬೀಳುವ ಹೆಣಗಳನ್ನೂ ಚೂರಾಗುವ ಕಾರುಜೀಪುಗಳನ್ನೂ ಹಾರುವ ವಸ್ತುಗಳನ್ನೂ ಎಣಿಸುತ್ತಾ
ಕಾಲಕಳೆಯಬಹುದು! ಅಂದಹಾಗೆ ಈ ಚಿತ್ರದ ಅವಧಿ ಎರಡೂಮುಕ್ಕಾಲು ಗಂಟೆ!