ದೇಶಾದ್ರಿ ಹೊಸ್ಮನೆ 

ನಿಮ್ಮ ಪ್ರಕಾರ ಭರಾಟೆ ಅಂದ್ರೆನು? ಅದರ ವಿಶೇಷತೆ ಏನು?

ಭರಾಟೆ ಅಂದ್ರೆ ಸೌಂಡು. ಅದು ಮಾತಿನ ಸೌಂಡ್ ಆಗಿರಬಹುದು, ಹಾಡಿನ ಸೌಂಡ್ ಆಗಿರಬಹುದು ಇಲ್ಲವೇ ಆ್ಯಕ್ಷನ್ ಸೌಂಡ್ ಆಗಿರಲೂಬಹುದು. ಚಿತ್ರದಲ್ಲಿ ಅದರ ಸೌಂಡ್ ಏನು ಅನ್ನೋದು ಸಸ್ಪೆನ್ಸ್. ಇನ್ನು ಪ್ರೇಕ್ಷಕರ ದೃಷ್ಟಿಯಿಂದ ಭರಾಟೆ ಅಂದ್ರೆ ಭರಪೂರ ಮನರಂಜನೆ. ಹಾಗೆಯೇ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್. ಒಬ್ಬ ಕಾಮನ್ ಆಡಿಯನ್ಸ್ ಒಂದು ಸಿನಿಮಾ ಅಂದ್ರೆ ಏನೆಲ್ಲ ಇರಬೇಕೆಂದು ಬಯಸುತ್ತಾನೋ ಅದೆಲ್ಲ ಅಂಶಗಳಿರುವ ಶುದ್ಧ ಕಮರ್ಷಿಯಲ್ ಸಿನಿಮಾ.

ನಿರ್ದೇಶಕರ ಪ್ರಕಾರ ಈ ಸಿನಿಮಾ ಶುರುವಾಗಿದ್ದೇ ನಿಮ್ಮಿಂದ ಅಂತೆ...?

ಶ್ರೀಮುರುಳಿ ತಾಳ್ಮೆಗೆ ಮಾರು ಹೋದೆ: ಶ್ರೀಲೀಲಾ

ಒಂದ್ರೀತಿ ಸತ್ಯ, ಇನ್ನೊಂದು ಬಗೆಯಲ್ಲಿ ಕಾಕತಾಳೀಯ. ಯಾಕಂದ್ರೆ, ಎಲ್ಲ ಕೂಡಿ ಬಂದ ಕಾರಣಕ್ಕೆ ಶುರುವಾದ ಸಿನಿಮಾ ಇದು. ಹಾಗೊಂದು ವೇಳೆ ಇಂತಹ ಕತೆ ‘ಉಗ್ರಂ’ ಟೈಮ್‌ನಲ್ಲಿ ಸಿಕ್ಕಿದ್ದರೆ ಒಪ್ಪಿಕೊಳ್ಳುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ಯಾಕಂದ್ರೆ ಆ ಟೈಮ್ ಹಾಗಿತ್ತು. ಅವತ್ತು ನಾನು ಒಪ್ಪಿಕೊಳ್ಳಲು ಆಗದೇ ಇದ್ದ ಈ ಕತೆ ಇವತ್ತು ನನ್ನನ್ನು ಹುಡುಕಿಕೊಂಡು ಬಂದಿದ್ದಕ್ಕೆ ಕಾರಣ ನಿರ್ದೇಶಕ ಚೇತನ್ ಮತ್ತು ನಿರ್ಮಾಪಕ ಸುಪ್ರಿತ್. ‘ಮಫ್ತಿ’ ನಂತರ ನಿರ್ದೇಶಕ ಚೇತನ್ ಜತೆಗೆ ಕೆಲಸ ಮಾಡುವ ಆಸೆಯಿತ್ತು. ಒಳ್ಳೆಯ ಕತೆ ಸಿಕ್ಕರೆ ಸಿನಿಮಾ ಮಾಡೋಣ ಅಂದಿದ್ದೆ. ಅದಾಗಿ ಒಂದಷ್ಟು ದಿನಗಳಲ್ಲಿಚೇತನ್ ಈ ಕತೆ ಕುರಿತು ಚರ್ಚಿಸಿದರು. ಈ ಹೊತ್ತಿಗೆ ನನಗಿದು ಪರ್ಫೆಕ್ಟ್ ಅಂತೆನಿಸಿತು.

ಮಾಸ್ ಆಡಿಯನ್ಸ್‌ಗೆ ಇದು ಪಕ್ಕ ಪೈಸಾ ವಸೂಲ್ ಸಿನೆಮಾ. ದೊಡ್ಡ ತಾರಾಗಣ, ಅದ್ದೂರಿ ನಿರ್ಮಾಣದಂತೆಯೇ ಕತೆಯಲ್ಲೂ ಸಾಕಷ್ಟು ಹೊಸತನವಿರುವ ಒಂದೊಳ್ಳೆ ಪ್ರಯತ್ನ. ಪ್ರತಿಯೊಬ್ಬರಿಗೂ ಇದು ಇಷ್ಟವಾಗುತ್ತೆ ಎನ್ನುವ ನಂಬಿಕೆ ನನ್ನದು. - ಚೇತನ್ ಕುಮಾರ್ ನಿರ್ದೇಶಕ

ಇವತ್ತಿಗೆ ಈ ಕತೆಯೇ ಯಾಕೆ ಸೂಕ್ತ? 

ಕಾರಣ ಏನು ಅಂತ ಈಗಲೇ ಹೇಳಲಾರೆ. ಅದು ಸಿನಿಮಾ ನೋಡಿದಾಗ ನಿಮಗೂ ಗೊತ್ತಾಗುತ್ತೆ. ಅದು ಬಿಟ್ಟರೆ, ಅಭಿಮಾನಿಗಳು ನನ್ನ ಮೇಲಿಟ್ಟ ನಿರೀಕ್ಷೆ ಒಂದು ಕಾರಣ. ‘ಉಗ್ರಂ’ ನಂತರ ಪ್ರೇಕ್ಷಕರಿಗೆ ನಾನು ಮಾಸ್ ಹೀರೋ ಆಗಿ ಕಾಣಿಸಿಕೊಂಡರೆ ಖುಷಿ. ಆ ನಂತರ ಬಂದ ‘ರಥಾವರ’ ಹಾಗೂ ‘ಮಫ್ತಿ’ ಚಿತ್ರಗಳಲ್ಲೂ ಆ ಅನುಭವ ಕಂಡೆ. ಅಭಿಮಾನಿಗಳ ನಿರೀಕ್ಷೆ ಹೀಗಿರುವಾಗ ಆ್ಯಕ್ಷನ್ ಜತೆಗೆಯೇ ಹೊಸ ರೀತಿಯ ಪಾತ್ರದಲ್ಲೂ ಕಾಣಿಸಿಕೊಳ್ಳೋಣ ಎನ್ನುವುದು ನನ್ನಾಸೆ. ಅದಕ್ಕೆ ಸೂಕ್ತ ಎನಿಸಿದ್ದು ಈ ಸಿನಿಮಾದ ಕತೆ.

ರಿಲೀಸ್‌ಗೂ ಮುನ್ನ ಮತ್ತೊಂದು ಟ್ರೇಲರ್‌; ಶುರುವಾಯ್ತು ಭರಾಟೆ ಅಬ್ಬರ!

ಭರಾಟೆ ಅಂದ್ರೆ ಇಲ್ಲಿ ತನಕ ಪ್ರಚಾರವಾಗಿದ್ದು ಪಕ್ಕಾ ಮಾಸ್ ಸಿನಿಮಾ ಅಂತ, ಇದು ನಿಜನಾ?

ಮಾಸ್ ಆ್ಯಂಡ್ ಕ್ಲಾಸ್ ಎರಡು ವರ್ಗಕ್ಕೂ ಇಷ್ಟವಾಗುವ ಹತ್ತಾರು ಎಲಿಮೆಂಟ್ಸ್ ಈ ಸಿನಿಮಾದಲ್ಲಿವೆ. ಆ್ಯಕ್ಷನ್ ಜತೆಗೆ ಮೇಕಿಂಗ್‌ನಲ್ಲಿ ಇದು ಪಕ್ಕಾ ಮಾಸ್ ಸಿನಿಮಾ. ಕತೆಯ ವಿಚಾರಕ್ಕೆ ಹೊರಟರೆ ಶುದ್ಧ ಕ್ಲಾಸ್ ಸಿನಿಮಾ. ಆ ಮಟ್ಟಿಗೆ ಇದೊಂದು ಹೊಸ ಪ್ರಯತ್ನದ ಸಿನಿಮಾ. ಹಾಗಂತ ಈ ಕತೆ ತುಂಬಾ ಹೊಸತು, ಎಲ್ಲಿಯೂ ಬಂದಿಲ್ಲ ಅಂತ ಹೇಳಲಾರೆ. ಕನ್ನಡದಲ್ಲೂ ಒಂದಷ್ಟು ಸಿನಿಮಾದಲ್ಲಿ ಇದು ಬಂದಿರಬಹುದು, ಆದರೆ ಅದೊಂದು ಎಳೆ ಇಟ್ಟುಕೊಂಡು ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗುವ ಹಾಗೆ ನಿರೂಪಿಸಿದ ರೀತಿ ಮಾತ್ರ ತುಂಬಾ ಭಿನ್ನ.

ನಿಮ್ಮ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಭರಾಟೆ ಹೇಗೆ ಭಿನ್ನ?

ಪ್ರೇಕ್ಷಕರನ್ನು ನಗಿಸುವ ಸಾಹಸ ಮಾಡಿದ್ದೇನೆ. ಜತೆಗೆ ಇಡೀ ಸಿನಿಮಾದ ಉದ್ದಕ್ಕೂ ಕಲರ್‌ಫುಲ್ ಆಗಿ ಕಾಣಿಸಿಕೊಂಡಿದ್ದೇನೆ. ದೊಡ್ಡ ತಾರಾಗಣ ಇರುವಂತಹ ಸಿನಿಮಾದಲ್ಲಿ ಇದೇ ಮೊದಲು ಬಣ್ಣ ಹಚ್ಚಿದ್ದೇನೆ.

ಭರಾಟೆ ಆ್ಯಕ್ಷನ್‌ ಟ್ರೇಲರ್‌ಗೆ ಜನ ಮೆಚ್ಚುಗೆ!

ಭರಾಟೆಯ ಐದು ಅಚ್ಚರಿಯ ನಟರು ಯಾರು?

ಸದ್ಯಕ್ಕೆ ಸಸ್ಪೆನ್ಸ್. ಚಿತ್ರಮಂದಿರದಲ್ಲೇ ಅದು ರಿವೀಲ್. ಅದು ಬಿಟ್ಟು ಸಾಯಿ ಕುಮಾರ್, ರವಿಶಂಕರ್, ಅಯ್ಯಪ್ಪ ಹಾಗೂ ತಾರಾ ಮೇಡಂ ಬಗ್ಗೆ ಹೇಳಲೇಬೇಕು. ಅಂತಹ ಲೆಜೆಂಡ್ಗಳ ಜತೆಗೆ ಅಭಿನಯಿಸಿದ್ದೇ ನನ್ನ ಪುಣ್ಯ. ಅವರ ಜತೆಗೆ ಅಭಿನಯಿಸಲು ಅವಕಾಶ ಸಿಕ್ಕಾಗ ಇನ್ನಷ್ಟು ಕಲಿಯಲು ಸಾಧ್ಯವಾಗುತ್ತದೆ ಎನ್ನುವುದು ನನ್ನ ಭಾವನೆ. ಆ ಅನುಭವ ಈ ಚಿತ್ರದ ಮೂಲಕ ಸಿಕ್ಕಿದೆ. ನಂಗಂತೂ ಈ ಸಿನಿಮಾ ಸಾಕಷ್ಟು ಕೊಟ್ಟಿದೆ. ಅದರ ಪ್ರತಿಫಲ ತೆರೆ ಮೇಲೂ ಕಾಣಲಿ

ನಿರ್ದೇಶಕ ಚೇತನ್ ಅವರ ಕೆಲಸದ ಬಗ್ಗೆ ಹೇಳೋದಾದ್ರೆ...

ಹಾರ್ಡ್ ವರ್ಕರ್. ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುವ ಹಠವಾದಿ. ನನ್ನ ಮಾತ್ರವಲ್ಲ, ಯಾವುದೇ ಸ್ಟಾರ್ ಕೈಯಲ್ಲೂ ತಾನು ಬಯಸಿದಂತೆ ಕೆಲಸ ತೆಗೆಸಿಕೊಳ್ಳಬಲ್ಲ ನಿರ್ದೇಶಕ. ಜತೆಗೆ
ತಾಳ್ಮೆ ಯಿಂದ ಇಡೀ ತಂಡವನ್ನು ಗುರಿ ಮುಟ್ಟುವ ತನಕ ಮುನ್ನೆಡೆಸಿಕೊಂಡು ಹೋಗಬಲ್ಲ ಬುದ್ಧಿವಂತ ಕ್ಯಾಪ್ಟನ್. ನಂಗಂತೂ ತುಂಬಾ ಟಾರ್ಚರ್ ಕೊಟ್ಟಿದ್ದಾರೆ. ಅವರನ್ನು ನಾನು ಅಷ್ಟೇ ಗೋಳು ಹೊಯ್ದುಕೊಂಡಿದ್ದೇನೆ. ಅವರ ಜತೆಗೆ ಎಷ್ಟೇ ಸಿನಿಮಾಗಳ ಅವಕಾಶ ಸಿಕ್ಕರೂ ಖುಷಿಯಿಂದಲೇ ಅಭಿನಯಿಸಬಹುದು.

ಒಂದೇ ಹಾಡಿಗೆ 13 ಗೆಟಪ್‌ಗಳು; ಶ್ರೀಮುರಳಿ ಪತ್ನಿ ಕೈವಾಡ!

ಸೆಟ್‌ನಲ್ಲಿ ನಾಯಕಿ ಶ್ರೀಲೀಲಾಗೆ ನೀವು ತುಂಬಾ ಬೈಯ್ದಿದ್ದು ನಿಜನಾ?

ಛೇ, ಹಾಗೆಲ್ಲ ಉಂಟೇ? ತುಂಬಾ ಒಳ್ಳೆಯ ನಟಿ ಅವರು. ನಟನೆಯಲ್ಲಿ ತುಂಬಾ ಶ್ರದ್ಧೆಯಿದೆ. ಆದರೂ ಕೆಲವೊಮ್ಮೆ ಸೆಟ್ನಲ್ಲಿದ್ದಾಗ ಸಿನಿಮಾದ ಔಟ್‌ಪುಟ್ ಚೆನ್ನಾಗಿ ಬರಬೇಕು, ಕೆಲಸದಲ್ಲಿ ಶ್ರದ್ಧೆ ಇರಬೇಕು ಅಂತ ಹಿರಿಯ ಕಲಾವಿದರು ನಮಗೂ ಬೈಯ್ತಾರೆ. ಅದು ನಮ್ಮನ್ನು ತಿದ್ದುವ ಕಾರಣಕ್ಕೆ ಮಾತ್ರ. ಇಂತಹ ಸಲಹೆ, ಸೂಚನೆಗಳನ್ನು ಸೆಟ್‌ನಲ್ಲಿದ್ದಾಗ ಅವರಿಗೆ ನಾನು ಕೊಟ್ಟಿರಬಹುದಷ್ಟೆ. ಅದನ್ನೇ ಹಿರಿಯ ಕಲಾವಿದರು ನಮಗೂ ಹೇಳಿದ್ದಾರೆ.

ಟೀಸರ್, ಟ್ರೇಲರ್‌ಗಳಲ್ಲಿ ನೀವು ಸಿಕ್ಕಾಪಟ್ಟೆ ಕಲರ್ ಫುಲ್ ಆಗಿ ಕಾಣಿಸಿಕೊಂಡಿದ್ದರ ಗುಟ್ಟೇನು?

ಚಿತ್ರದಲ್ಲಿ ನನ್ನ ಕ್ಯಾರೆಕ್ಟರ್ ಇರೋದೇ ಹಾಗೆ. ಶುದ್ಧ ಪಕ್ಕದ್ಮನೆ ಹುಡುಗ ನಾನು. ಎಲ್ಲರ ಫ್ಯಾಮಿಲಿಯಲ್ಲೂ ಇಂತಹ ಒಬ್ಬ ಹುಡುಗ ಇದ್ದೇ ಇರುತ್ತಾನೆ.ಆತ ಹಾನೆಸ್ಟ್ ಆಗಿರುತ್ತಾನೆ. ಕಲರ್‌ಫುಲ್ ಆಗಿರುತ್ತಾನೆ. ತನಗೆ ಸರಿ ಎನಿಸಿದ್ದನ್ನೇ ಮಾಡುತ್ತಿರುತ್ತಾನೆ. ತಾನು ಎನ್ನುವುದಕ್ಕಿಂತ ಸಮಾಜ, ಕುಟುಂಬ ಅಂತೆಲ್ಲ ಅತೀವ ಕಾಳಜಿ ಹೊಂದಿರುತ್ತಾನೆ. ಆತ ಈ ಸಿನಿಮಾದ ಕಥಾ ನಾಯಕನೂ ಹೌದು.

ಪ್ರೇಕ್ಷಕರು ಈ ಚಿತ್ರವನ್ನು ಯಾಕೆ ನೋಡಬೇಕು ?

-ಸಿಂಪಲ್ ಟೀಮ್ ನಮ್ದು. ಹಾನೆಸ್ಟ್ ಆಗಿ ಸಿನಿಮಾ ಮಾಡಿದ್ದೇವೆ. ಪ್ರತಿ ಫ್ರೇಮ್ನಲ್ಲೂ ಶ್ರದ್ಧೆ ಕಾಣಿಸುತ್ತದೆ. ಪ್ರೇಕ್ಷಕರಿಗೆ ಮೆಚ್ಚುಗೆ ಆಗುವ ಹಾಗೆ ಸಿನಿಮಾ ಮಾಡಿದ್ದೇವೆನ್ನುವ ವಿಶ್ವಾಸವಿದೆ.

- ಸಾಕಷ್ಟು ಎಮೋಷನಲ್ ಎಲಿಮೆಂಟ್ಸ್ ಇರುವ ಫ್ಯಾಮಿಲಿ ಎಂಟರ್‌ಟೈನರ್. ನಗು ಅಂದ್ರೆ ಭಯ ಪಡುತ್ತಿದ್ದವನನ್ನು ಕಾಮಿಡಿ ನಟನನ್ನಾಗಿ ತೋರಿಸಿದ್ದಾರೆ ನಿರ್ದೇಶಕರು.

- ಪ್ರೀತಿಯಿದೆ. ರೊಮ್ಯಾನ್ಸ್ ಇದೆ. ಮೈನವಿರೇಳಿಸುವ ಆ್ಯಕ್ಷನ್ ಇದೆ. ಕಾಸು ಕೊಟ್ಟು ಸಿನಿಮಾ ನೋಡುವರಿಗೆ ಪೈಸಾ ವಸೂಲ್ ಗ್ಯಾರಂಟಿ. ಚಿತ್ರಮಂದಿರಕ್ಕೆ ಧೈರ್ಯದಿಂದ ಬನ್ನಿ, ಸಿನಿಮಾ ನೋಡಿ.