ಕೆಲ ಗಂಟೆಗಳ ಹಿಂದೆ ಕ್ಲೀನ್ ಮಾಡಿದ್ದ ಕಾರಿನ ಮೇಲೆ ಪಕ್ಷಿಗಳ ಹಿಕ್ಕೆ ಬಿದ್ದಿದ್ದು ಕಂಡ್ರೆ ಕೋಪ ನೆತ್ತಿಗೇರುತ್ತೆ. ಎಲ್ಲೇ ನಿಲ್ಲಿಸಿದ್ರೂ ಪಕ್ಷಿಗಳ ಹಿಕ್ಕೆಯಿಂದ ಕಾರಿನ ಡಿಸೈನ್ ಬದಲಾಗಿರುತ್ತೆ. ಅದಕ್ಕೆ ಬರೀ ನೀವು ನಿಲ್ಲಿಸಿದ ಜಾಗ ಕಾರಣ ಅಲ್ಲ, ನಿಮ್ಮ ಕಾರಿನ ಬಣ್ಣವೂ ಇದಕ್ಕೆ ಒಂದು ಕಾರಣ.
ಸಾಮಾನ್ಯವಾಗಿ ಮರದ ಕೆಳಗೆ, ಕರೆಂಟ್ ಕಂಬದ ಕೆಳಗೆ ಅಥವಾ ಪಕ್ಷಿಗಳು ಕುಳಿತುಕೊಳ್ಳುವ ಜಾಗದ ಸಮೀಪ ಕಾರು ನಿಲ್ಲಿಸಿದಾಗ ಅದರ ಮೇಲೆ ಹಿಕ್ಕೆ ಬೀಳುವುದು ಸಾಮಾನ್ಯ ಅಂತ ನಾವು ಅಂದ್ಕೊಳ್ತೇವೆ. ಪಾರ್ಕಿಂಗ್ ಸ್ಥಳ ಬದಲಾಯಿಸಿದ್ರೂ ಕಾರಿನ ಮೇಲೆ ಪದೇಪದೇ ಹಿಕ್ಕೆ ಬಿದ್ದ ಅನೇಕ ಉದಾಹರಣೆಗಳ ನಂತ್ರ ಈ ಬಗ್ಗೆ ಸಾಕಷ್ಟು ಸಮೀಕ್ಷೆ ನಡೆಸಲಾಗಿದೆ. ಹಿಕ್ಕೆಗೂ, ಕಾರಿನ ಬಣ್ಣಕ್ಕೂ ಸಂಬಂಧ ಇದ್ಯಾ ಅಂತ ಪರೀಕ್ಷೆ ಮಾಡಲಾಗಿದೆ.
ಕೆಂಪು, ಕಂದು ಕಾರಿನ ಮೇಲೆ ಹಿಕ್ಕೆ
ಅಮೆರಿಕದಲ್ಲಿ ಸುಮಾರು 1,000 ಕಾರು ಚಾಲಕರ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಕಾರಿನ ಬಣ್ಣಕ್ಕೂ ಪಕ್ಷಿಗಳ ಹಿಕ್ಕೆಗೂ ಸಂಬಂಧವಿದೆ ಎಂಬುದನ್ನು ಪತ್ತೆ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ ಕಂದು ಬಣ್ಣದ ಕಾರುಗಳ ಮೇಲೆ ಹೆಚ್ಚು ಹಿಕ್ಕೆಗಳನ್ನು ಪಕ್ಷಿಗಳು ಹಾಕುತ್ತವೆ ಎಂಬುದು ಪತ್ತೆಯಾಗಿದೆ. ಇದ್ರ ನಂತ್ರ ಕೆಂಪು, ಕಪ್ಪು, ಕಿತ್ತಳೆ, ನೀಲಿ, ಬಿಳಿ ಮತ್ತು ಸಿಲ್ವರ್ ಗ್ರೇ ಬಣ್ಣಗಳ ಕಾರುಗಳ ಹೆಸರುಗಳು ಕೇಳಿ ಬಂದಿವೆ.
ಇನ್ನೊಂದು ಬ್ರಿಟಿಷ್ ಸಮೀಕ್ಷೆ ಫಲಿತಾಂಶ ಸ್ವಲ್ಪ ಭಿನ್ನವಾಗಿದೆ. ಅಲ್ಲಿ ಕೆಂಪು ಬಣ್ಣದ ಕಾರುಗಳು ಪಕ್ಷಿಗಳನ್ನು ಹೆಚ್ಚು ಆಕರ್ಷಿಸುತ್ತವೆ ಎಂದು ಹೇಳಲಾಗಿದ್ದು, ನಂತರ ನೀಲಿ ಬಣ್ಣದ ಕಾರುಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲ, ಬ್ರಿಸ್ಟಲ್ ವಿಶ್ವವಿದ್ಯಾಲಯದ ಸುಮಾರು 40 ತರಬೇತಿ ಶಿಕ್ಷಕರು ನಡೆಸಿದ ಮತ್ತೊಂದು ಸಮೀಕ್ಷೆಯಲ್ಲಿ 1,760 ಕಾರುಗಳನ್ನು ಗಮನಿಸಲಾಗಿದೆ. ಈ ಸಮೀಕ್ಷೆಯಲ್ಲಿ ಬಿಳಿ ಬಣ್ಣದ ಕಾರುಗಳ ಮೇಲೆ ಹೆಚ್ಚು ಪಕ್ಷಿಗಳ ಹಿಕ್ಕೆಯ ಗುರುತುಗಳು ಕಂಡುಬಂದಿದ್ದವು. ಕಪ್ಪು ಬಣ್ಣದ ಕಾರುಗಳಲ್ಲಿ ಕಡಿಮೆ ಗುರುತುಗಳು ಕಂಡುಬಂದಿದ್ದವು.
ಹಾಗಾದರೆ ಯಾವ ಬಣ್ಣದ ಕಾರಿನ ಮೇಲೆ ಪಕ್ಷಿಗಳು ಹೆಚ್ಚು ಹಿಕ್ಕೆ ಮಾಡುತ್ತವೆ ಎಂಬುದಕ್ಕೆ ಒಂದೇ ಖಚಿತ ಉತ್ತರ ಸಿಗುವುದಿಲ್ಲ. ವಿವಿಧ ಸಮೀಕ್ಷೆಗಳಲ್ಲಿ ವಿಭಿನ್ನ ಫಲಿತಾಂಶಗಳು ಬಂದಿವೆ. ಇದರ ಹಿಂದೆ ಪಕ್ಷಿಗಳ ದೃಷ್ಟಿ ಸಾಮರ್ಥ್ಯವೂ ಒಂದು ಕಾರಣವಾಗಿರಬಹುದು ಎಂಬ ಅಭಿಪ್ರಾಯವಿದೆ. ಮನುಷ್ಯರಿಗಿಂತ ಪಕ್ಷಿಗಳು ಬಣ್ಣಗಳನ್ನು ವಿಭಿನ್ನ ರೀತಿಯಲ್ಲಿ ಗುರುತಿಸುವ ಸಾಮರ್ಥ್ಯ ಹೊಂದಿವೆ. ಕೆಲವು ಪಕ್ಷಿಗಳು ಅತಿನೇರಳೆ (UV) ಬೆಳಕನ್ನೂ ನೋಡಬಲ್ಲವು. ಹೀಗಾಗಿ ಕೆಲವು ಬಣ್ಣಗಳು ಅಥವಾ ಮೇಲ್ಮೈಗಳು ಅವುಗಳ ಕಣ್ಣಿಗೆ ಹೆಚ್ಚು ಸ್ಪಷ್ಟವಾಗಿ ಅಥವಾ ಆಕರ್ಷಕವಾಗಿ ಕಾಣುವ ಸಾಧ್ಯತೆ ಇದೆ. ಆದರೆ ಇದನ್ನು ಆಧರಿಸಿ ಈ ಬಣ್ಣದ ಕಾರನ್ನು ಪಕ್ಷಿಗಳು ಹೆಚ್ಚು ಗುರಿಯಾಗಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕಾರು ನಿಲ್ಲಿಸುವ ಸ್ಥಳ, ಸುತ್ತಮುತ್ತಲಿನ ಮರಗಳು, ವಿದ್ಯುತ್ ತಂತಿಗಳು, ಪಕ್ಷಿಗಳ ಸಂಖ್ಯೆ ಮತ್ತು ಅವುಗಳ ಚಟುವಟಿಕೆಗಳೂ ಪ್ರಮುಖ ಪಾತ್ರ ವಹಿಸುತ್ತವೆ.


