720 feet deep river: ಜಗತ್ತಿನ ಅತ್ಯಂತ ಭಯಾನಕ ನದಿ ಅಮೆಜಾನ್ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು! ಸೂರ್ಯನ ಬೆಳಕೇ ತಲುಪದ ಕಡುಗತ್ತಲೆಯ ಆಳದಲ್ಲಿ ಕಣ್ಣಿಲ್ಲದ ಜೀವಿಗಳು ವಾಸಿಸುವ, ಒಮ್ಮೆ ಸುಳಿಗೆ ಸಿಲುಕಿದ ಹಲವರು ವಾಪಾಸ್ ಬಾರದ ನಿಗೂಢ 'ಮೃತ್ಯುಕೂಪ'ವೊಂದು ಭೂಮಿಯ ಮೇಲಿದೆ. ವಿಜ್ಞಾನಿಗಳಿಗೂ ಸಂಪೂರ್ಣ ಆಳ ಭೇದಿಸಲು ಸಾಧ್ಯವಾಗದ ಆ ಭಯಾನಕ ನದಿ ಯಾವುದು? ಅದರ ರೋಚಕ ರಹಸ್ಯ ಇಲ್ಲಿದೆ!

ಜಗತ್ತಿನ ಅತ್ಯಂತ ಭಯಾನಕ ನದಿ ಯಾವುದು ಎಂದರೆ ತಕ್ಷಣ ಅಮೆಜಾನ್ ನೆನಪಾಗುತ್ತದೆ. ಆದರೆ ಮಧ್ಯ ಆಫ್ರಿಕಾದ ದಟ್ಟ ಕಾಡುಗಳ ನಡುವೆ ಹರಿಯುವ 'ಕಾಂಗೋ ನದಿ' (Congo River) ಅಮೆಜಾನ್‌ಗಿಂತಲೂ ಭೀಕರ ಹಾಗೂ ಜಗತ್ತಿನ ಅತ್ಯಂತ ಆಳವಾದ ನದಿಯಾಗಿದೆ. ಈಶಾನ್ಯ ಜಾಂಬಿಯಾದಲ್ಲಿ ಹುಟ್ಟಿ ಸುಮಾರು 4,700 ಕಿ.ಮೀ ದೂರ, ಆಫ್ರಿಕಾದ 10 ದೇಶಗಳ ಮೂಲಕ ಹರಿದು ಅಟ್ಲಾಂಟಿಕ್ ಸಾಗರ ಸೇರುವ ಈ ನದಿ, ಅಮೆರಿಕದ ಮಿಸಿಸಿಪಿ ನದಿಗಿಂತ ಎರಡು ಪಟ್ಟು ಹೆಚ್ಚು ನೀರನ್ನು ಪ್ರತಿ ಸೆಕೆಂಡ್‌ಗೆ ಸಾಗರಕ್ಕೆ ತಳ್ಳುತ್ತದೆ. ಈ ನದಿಯ ಎರಡೂ ಬದಿಗಳಲ್ಲಿ 50 ಕೋಟಿ ಎಕರೆ ಪ್ರದೇಶದಲ್ಲಿ ಹರಡಿರುವ, ಭೂಮಿಯ ಶ್ವಾಸಕೋಶದಂತಿರುವ 'ಕಾಂಗೋ ಮಳೆಕಾಡು' ಸಹ ಇದೆ.

720 ಅಡಿ ಆಳದ ರಹಸ್ಯ

2009ರಲ್ಲಿ ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ಸೋನಾರ್ ತಂತ್ರಜ್ಞಾನದಿಂದ ಅಳೆದಾಗ ಕಾಂಗೋ ನದಿಯ ಆಳ ಬರೋಬ್ಬರಿ 720 ಅಡಿ ಇರುವುದು ಪತ್ತೆಯಾಗಿ ವಿಜ್ಞಾನಿಗಳನ್ನೇ ಬೆಚ್ಚಿಬೀಳಿಸಿತ್ತು. ಇದು ಅಮೆಜಾನ್ ನದಿಯ ಆಳಕ್ಕಿಂತ (330 ಅಡಿ) ಎರಡು ಪಟ್ಟು ಹೆಚ್ಚು! ಸಮುದ್ರದಲ್ಲಿ 660 ಅಡಿಯ ನಂತರ ಸೂರ್ಯನ ಬೆಳಕೇ ತಲುಪುವುದಿಲ್ಲ. ಆದರೆ ಕಾಂಗೋ ನದಿ ಅದಕ್ಕಿಂತಲೂ ಆಳವಾಗಿದೆ. ಕೊನೆಯ 100 ಕಿ.ಮೀ.ನಲ್ಲಿ 656 ಅಡಿ ಎತ್ತರದಿಂದ ಧುಮುಕುವ ಈ ನದಿ, ಜಗತ್ತಿನ ಅತಿ ಹೆಚ್ಚು ನೀರಿನ ಪ್ರಮಾಣ ಹೊಂದಿರುವ 'ಲಿವಿಂಗ್‌ಸ್ಟನ್ ಜಲಪಾತ'ವನ್ನು ಸೃಷ್ಟಿಸುತ್ತದೆ.

ಕತ್ತಲೆಯ ಲೋಕದ ಅಂಧ ಮೀನು

ನದಿಯ 520 ಅಡಿಗೂ ಹೆಚ್ಚಿನ ಕಡುಗತ್ತಲೆಯಲ್ಲಿ ಜಗತ್ತಿನ ಏಕೈಕ 'ಅಂಧ ಸಿಕ್ಲಿಡ್ ಮೀನು' (Blind Cichlid) ವಾಸಿಸುತ್ತದೆ. ಸಂಪೂರ್ಣ ಬಿಳಿ ಮತ್ತು ಪಾರದರ್ಶಕವಾಗಿರುವ ಈ ಮೀನುಗಳು ನೀರಿನ ರಭಸಕ್ಕೆ ಮೇಲ್ಮೈಗೆ ಬಂದರೆ ಒತ್ತಡ ತಾಳಲಾರದೆ ಸಾಯುತ್ತವೆ. ಇನ್ನು ನದಿಯ ಮೇಲ್ಭಾಗದಲ್ಲಿ 50 ಕೆ.ಜಿ ತೂಕದ, 32 ಚೂಪಾದ ಹಲ್ಲುಗಳಿರುವ ಭಯಾನಕ 'ಗೊಲಾಯತ್ ಟೈಗರ್ ಫಿಶ್' ಹಾಗೂ 20 ಅಡಿ ಉದ್ದದ ನೈಲ್ ಮೊಸಳೆಗಳು ಬೇಟೆಗಾಗಿ ಕಾಯುತ್ತಿರುತ್ತವೆ. ನದಿ ದಡದ ಕಾಡಿನಲ್ಲಿ ಬ್ಲಾಕ್ ಮಾಂಬಾ, ಗ್ಯಾಬೂನ್ ವೈಪರ್‌ನಂತಹ ವಿಷಕಾರಿ ಹಾವುಗಳೂ ಇರುತ್ತವೆ.

ನೂರಾರು ಜನರನ್ನು ಬಲಿ ಪಡೆದ ಮೃತ್ಯುಕೂಪ

1874ರಲ್ಲಿ ಪತ್ರಕರ್ತ ಹೆನ್ರಿ ಮಾರ್ಟನ್ ಸ್ಟಾನ್ಲಿ 356 ಜನರೊಂದಿಗೆ ಈ ನದಿ ದಾಟಲು ಹೊರಟು, 999 ದಿನಗಳ ನರಕಯಾತನೆಯ ಬಳಿಕ ಕೇವಲ 114 ಜನ ಮಾತ್ರ ಬದುಕುಳಿದಿದ್ದರು. 2010ರಲ್ಲಿ ಅನುಭವಿ ರಿವರ್ ಗೈಡ್ ಹೆನ್ರಿ ಕೊಡ್ಜಿ ಅವರನ್ನು ನೈಲ್ ಮೊಸಳೆ ನೀರೊಳಗೆ ಎಳೆದೊಯ್ದಿತ್ತು. 2010, 2018, 2021 ಹಾಗೂ 2023ರಲ್ಲೂ ದೋಣಿ ದುರಂತಗಳಿಂದ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಕಾಂಗೋ ನದಿಯ ಸಂಪೂರ್ಣ ಆಳವನ್ನು ಭೇದಿಸಲು ಇಂದಿಗೂ ಸಾಧ್ಯವಾಗಿಲ್ಲ ಎಂಬುದು ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾಗಿದೆ.

ಕೋಟ್ಯಂತರ ಜನರ ಜೀವನಾಡಿ

ಕಾಂಗೋ ನದಿಯನ್ನು 1971ರಿಂದ 1997ರವರೆಗೆ ಅಧಿಕೃತವಾಗಿ 'ಝೈರ್ ನದಿ' (Zaire River) ಎಂದು ಕರೆಯಲಾಗುತ್ತಿತ್ತು. ಸ್ಥಳೀಯ ಕಿಕೋಂಗೊ ಭಾಷೆಯಲ್ಲಿ ಇದಕ್ಕೆ 'ಎಲ್ಲಾ ನದಿಗಳನ್ನೂ ನುಂಗುವ ಮಹಾನದಿ' ಎಂಬ ಅರ್ಥವಿದೆ. ಈ ನದಿ ಎಷ್ಟೇ ಭಯಾನಕ ಹಾಗೂ ಅಪಾಯಕಾರಿಯಾಗಿದ್ದರೂ, ಮಧ್ಯ ಆಫ್ರಿಕಾದ ಕೋಟ್ಯಂತರ ಜನರಿಗೆ ಇದೇ ನಿಜವಾದ ಜೀವನಾಡಿಯಾಗಿದೆ. ದಟ್ಟ ಕಾಡುಗಳ ನಡುವೆ ರಸ್ತೆ ಹಾಗೂ ರೈಲು ಮಾರ್ಗಗಳ ಕೊರತೆಯಿರುವುದರಿಂದ ಸ್ಥಳೀಯರು ಸಾರಿಗೆ, ಕುಡಿಯುವ ನೀರು, ಕೃಷಿ ಮತ್ತು ಮೀನುಗಾರಿಕೆಗೆ ಕಾಂಗೋ ನದಿಯನ್ನೇ ಪ್ರಮುಖವಾಗಿ ಅವಲಂಬಿಸಿದ್ದಾರೆ. ಅಷ್ಟೇ ಅಲ್ಲದೆ, ಈ ನದಿಯ ನೀರಿನ ಅಗಾಧ ವೇಗ ಮತ್ತು ಎತ್ತರದಿಂದ ಧುಮುಕುವ ಜಲಪಾತಗಳ ಕಾರಣದಿಂದಾಗಿ ಇದು ಬೃಹತ್ ಜಲವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಪ್ರಸಿದ್ಧ 'ಇಂಗಾ ಅಣೆಕಟ್ಟುಗಳು' (Inga Dams) ಆಫ್ರಿಕಾ ಖಂಡದ ವಿದ್ಯುತ್ ಪೂರೈಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಭವಿಷ್ಯದ ಬೃಹತ್ ಜಲವಿದ್ಯುತ್ ಯೋಜನೆಗಳಿಗೂ ಈ ನದಿ ಆಧಾರಸ್ತಂಭವಾಗಿದೆ.

View post on Instagram