ಆಸೆಗೆ ಮಿತಿ ಇಲ್ಲ, ಸಂತೋಷ ಕೈಗೆಟುಕುವುದಿಲ್ಲ. ಇಂದ್ರಿಯಗಳನ್ನು ತೃಪ್ತಿಪಡಿಸಲು ನಿಮ್ಮಿಂದ ಎಂದಿಗೂ ಸಾಧ್ಯವೇ ಇಲ್ಲ. ಹಾಗಾಗಿ ಬಯಕೆಯನ್ನು ಬದಿಗಿಟ್ಟು, ಇರೋದನ್ನು ಪ್ರೀತಿಸಲು ಶುರು ಮಾಡಿದ್ರೆ ಸಂತೋಷ ಅರಸಿಬರುತ್ತೆ.
ಆಸೆಯೇ ದುಃಖಕ್ಕೆ ಮೂಲ ಕಾರಣ ಎಂಬ ಗಾಧೆಯಿದೆ. ಇದು ನೂರಕ್ಕೆ ನೂರು ಸತ್ಯ. ಮನುಷ್ಯ ತನ್ನ ಇಂದ್ರಿಯ ಸುಖವನ್ನು ಬಯಸ್ತಾನೆ. ಆ ಸುಖಕ್ಕೆ ಕೊನೆಯೇ ಇಲ್ಲ. ಬಡವ, ಶ್ರೀಮಂತನಾಗಲು ಬಯಸಿದ್ರೆ ಶ್ರೀಮಂತ ಮತ್ತಷ್ಟು ಶ್ರೀಮಂತಿಕೆ ಬಯಸ್ತಾನೆ. ನಾಲಿಗೆ ರುಚಿಯಾದ ಆಹಾರ ಬಯಸಿದ್ರೆ ಮನಸ್ಸು ಮೋಜು, ಮಸ್ತಿಯನ್ನು ಬಯಸುತ್ತದೆ. ಆದ್ರೆ ಬಯಸಿದ್ದು ಸಿಕ್ಕ ನಂತ್ರವೂ ಮನುಷ್ಯ ತೃಪ್ತನಾಗುವುದಿಲ್ಲ. ಇಂದ್ರಿಯದ ಆನಂದವನ್ನು ಬೆನ್ನಟ್ಟುವವರು ದುಃಖದ ಮಾರ್ಗವನ್ನು ಅನುಸರಿಸುತ್ತಾರೆ ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿದ್ದಾನೆ.
ಜೀವನ (Life) ದಲ್ಲಿ ಎಲ್ಲವೂ ಇದೆ ಎಂದ್ರೂ ಅನೇಕರಿಗೆ ನೆಮ್ಮದಿ ಇಲ್ಲ. ನೆಮ್ಮದಿಯ ಜೀವನ ನಡೆಸುವುದು ಸವಾಲಿನ ಕೆಲಸವಾಗಿದೆ. ಜೀವನದಲ್ಲಿ ನಾವು ಯಾವಾಗ ಕೊನೆಯ ಬಾರಿಗೆ ಸಂಪೂರ್ಣವಾಗಿ ತೃಪ್ತಿ (Satisfied ) ಹೊಂದಿದ್ದೇವೆ ಎಂಬುದು ನಮಗೆ ನೆನಪಿಲ್ಲ. ಏಕೆಂದರೆ ನಾವು ಸಂಪೂರ್ಣ ತೃಪ್ತಿ ಪಡೆದೇಯಿಲ್ಲ. ಬಾಲ್ಯದಿಂದಲೇ ನಾವು ಆಸೆಯ ಕುದುರೆ ಏರಲು ಶುರು ಮಾಡ್ತೇವೆ. ಚಾಕೋಲೇಟ್, ಆಟಿಕೆ ಹೀಗೆ ಒಂದಾದ್ಮೇಲೆ ಒಂದನ್ನು ಪಡೆಯುವ ಬಯಕೆ ಶುರುವಾಗುತ್ತದೆ. ಬೇಕಾಗಿದ್ದು ಸಿಕ್ಕಿಲ್ಲವೆಂದಾಗ ನಾವು ಅತೃಪ್ತರಾಗುತ್ತೇವೆ ಮತ್ತು ಖಿನ್ನತೆಗೆ ಒಳಗಾಗುತ್ತೇವೆ.
ಬಾಹ್ಯ ಸಂತೋಷ (Happiness) ಕ್ಕಾಗಿ ನಮ್ಮನ್ನು ನಾವು ನೋಯಿಸಿಕೊಳ್ತಿದ್ದೇವೆ ಎಂಬುದು ಜನರಿಗೆ ತಿಳಯೋದೇ ಇಲ್ಲ. ನಾವು ಟೀ, ಕಾಫಿ, ಜಂಕ್ ಫುಡ್ ಅಥವಾ ಮತ್ತ್ಯಾವುದೋ ಚಟವನ್ನು ಹೊಂದಿರುತ್ತೇವೆ. ಅದು ನಮಗೆ ಸಂತೋಷವನ್ನು ನೀಡುತ್ತದೆ. ಟೀ ಕುಡಿದು, ಕಾಫಿ ಸೇವನೆ ಮಾಡಿ ಸಂತೋಷ ಪಡೆಯುತ್ತೇವೆ ನಿಜ. ಆದ್ರೆ ಈ ಸಂತೋಷ ತಾತ್ಕಾಲಿಕ ಮಾತ್ರ. ಇವು ನಮ್ಮ ಆರೋಗ್ಯ, ಜೀವನಶೈಲಿ, ಆರ್ಥಿಕ ಸ್ಥಿತಿ ಮತ್ತು ಮಾನಸಿಕ ಸ್ಥಿರತೆಯ ಮೇಲೂ ಪರಿಣಾಮ ಬೀರುತ್ತವೆ. ಹೆಚ್ಚಿನ ಸಂತೋಷದ ಹಿಂದೆ ದುಃಖ ಇರುತ್ತದೆ.
ಆಂತರಿಕ ಸಂತೋಷವಿದ್ದಾಗ ಮಾತ್ರ ನಿಜವಾದ ಸಂತೋಷ ಲಭಿಸಲು ಸಾಧ್ಯ. ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷವಿಲ್ಲದೆ ಹೋದ್ರೆ ನೀವು ಏನೇ ಮಾಡಿದ್ರೂ ನಿಮಗೆ ಖುಷಿ ಸಿಗಲು ಸಾಧ್ಯವೇ ಇಲ್ಲ. ನಿಜವಾದ ಸಂತೋಷವನ್ನು ಅರ್ಥಮಾಡಿಕೊಂಡವರು ಆನಂದಕ್ಕಾಗಿ ಭೌತಿಕ ವಸ್ತುಗಳ ಮೇಲೆ ಅವಲಂಭಿತರಾಗುವುದಿಲ್ಲ.
ಇಂದ್ರಿಯಗಳನ್ನು ನಿಯಂತ್ರಿಸಿದಾಗ ಮಾತ್ರ ಸಂತೋಷ ಸಾಧ್ಯ : ಇಂದ್ರಿಯ ಸುಖಕ್ಕೆ ನಾವು ಗಂಟು ಬಿದ್ದಾಗ ನಮಗೆ ಎಂದಿಗೂ ಸಂತೋಷ ಲಭಿಸಲು ಸಾಧ್ಯವೇ ಇಲ್ಲ. ನಾವು ಮೊದಲು ಇಂದ್ರಿಯಗಳನ್ನು ನಿಯಂತ್ರಿಸಬೇಕು. ದೈನಂದಿನ ಜೀವನದಲ್ಲಿ ಕೆಲ ವಿಷ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಆಂತರಿಕ ಸಂತೋಷ ಕಾಣಲು ಸಾಧ್ಯ.
ಎಚ್ಚರವಾಗಿಬಿಡುತ್ತೆ, ನಿದ್ರೆಯೇ ಬರೋಲ್ಲ ಎನ್ನೋರಿಗೆ ಇಲ್ಲಿವೆ ಟಿಪ್ಸ್
ಸಾಮಾನ್ಯವಾಗಿ ನಮ್ಮಲ್ಲಿ ಈಗೇನಿದೆ ಎಂಬುದನ್ನು ನಾವು ನೋಡುವುದೇ ಇಲ್ಲ. ಬೇರೆಯವರ ಬಳಿ ಏನಿದೆ ಎಂಬುದನ್ನು ನೋಡ್ತೇವೆ. ಹಾಗೆಯೇ ನಮಗೆ ಏನು ಬೇಕು ಎಂಬ ಬಗ್ಗೆ ಆಲೋಚನೆ ಮಾಡ್ತೇವೆ. ಇದ್ರಿಂದಾಗಿ ನಮಗೆ ಎಂದೂ ಸಂತೋಷ ಸಿಗುವುದಿಲ್ಲ. ನಮ್ಮ ಬಳಿ ಈಗ ಏನಿದೆ ಅದನ್ನು ಪ್ರೀತಿಸಿದಾಗ, ಅದನ್ನು ಒಪ್ಪಿಕೊಂಡು ನಡೆದಾಗ ಮಾತ್ರ ಸಂತೋಷ ಸಿಗಲು ಸಾಧ್ಯ. ಒಂದಾದ್ಮೇಲೆ ಒಂದು ಬೇಡಿಗೆಯಿಟ್ಟುಕೊಳ್ತಾ ಹೋಗುವ ಬದಲು, ಬೇಡಿಕೆಯನ್ನು ಮಿತಗೊಳಿಸಿ ಹಾಗೂ ಇರುವುದ್ರಲ್ಲಿಯೇ ತೃಪ್ತರಾಗಲು ಬಯಸಿ. ಯಾವುದೇ ಆಂತರಿಕ ವಸ್ತುವಿನ ಬಯಕೆಯಾದಾಗ ಉದಾಹರಣೆಗೆ ಟಿವಿ, ಮೊಬೈಲ್, ಬಟ್ಟೆ ಹೀಗೆ ಇಂಥ ವಸ್ತುಗಳ ಮೇಲೆ ನಿಮಗೆ ಆಸೆಯಾದಾಗ ಅದ್ರ ಅಗತ್ಯವಿದೆಯೇ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಿ. ಅದನ್ನು ಪಡೆದ್ರೆ ಮಾತ್ರ ಸಂತೋಷ ಲಭ್ಯವಾಗುತ್ತಾ ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿ.
ತಾಯ್ತನದ ಸುಖ ಅನುಭವಿಸಲಿಲ್ಲ, ಹೆರಿಗೆ ನೋವಿಲ್ಲ, ಕೋಮಾದಲ್ಲೇ ಅಮ್ಮನಾದ ಮಹಿಳೆ!
ನಿಮ್ಮ ಮನಸ್ಸು ನಿಯಂತ್ರಿಸಲು ಯೋಗ ಹಾಗೂ ಧ್ಯಾನ ಉತ್ತಮ ಮಾರ್ಗವಾಗಿದೆ. ಒಂದೇ ಕಡೆ ಮನಸ್ಸನ್ನು ಕೇಂದ್ರೀಕರಿಸಲು ನೀವು ಧ್ಯಾನ ಮಾರ್ಗವನ್ನು ಅನುಸರಿಸಬೇಕು. ಇರುವುದ್ರಲ್ಲಿಯೇ ತೃಪ್ತಿ ಪಡೆಯುವುದನ್ನು ನೀವು ಕಲಿತ್ರೆ ಮಾತ್ರ ಜೀವನ ಸುಂದರವಾಗಿರುತ್ತದೆ. ಇಲ್ಲದರ ಬೆನ್ನು ಹತ್ತಿದ್ರೆ ತಿಳಿಯದೇ ನಿಮ್ಮ ದೈಹಿಕ ಹಾಗೂ ಮಾನಸಿಕ ಎರಡೂ ಆರೋಗ್ಯ ಹದಗೆಡುತ್ತದೆ.
