ನಾವು ಆಧುನಿಕ ಜಗತ್ತಿನಲ್ಲಿದ್ದೇವೆ, ಜೀವನಶೈಲಿ ಎಷ್ಟೇ ಆಧುನಿಕವಾಗಿದ್ದರೂ ಮನಸ್ಸು ಮಾತ್ರ ಇನ್ನೂ ನೂರು ವರ್ಷ ಹಿಂದೆಯೇ ಇದೆ.. ಅಂತೆಲ್ಲ ಕೊರೆದು ಬೋರು ಹೊಡೆಸುವ ಉದ್ದೇಶ ನನ್ನದಲ್ಲ. ಆದರೆ ಮೇಲಿನ ಘಟನೆಗಳನ್ನು ನೋಡುವಾಗ ಗಂಡನಿಗೆ ಸಿಕ್ಕ ‘ಆಧುನಿಕ’ ಬದುಕು ಹೆಂಡ್ತಿಗೆ ಯಾಕೆ ಸಿಕ್ತಿಲ್ಲ ಅನ್ನುವುದು ಬಹಳ ಕಾಲದಿಂದ ಸಮಸ್ಯೆಯಾಗಿ ತಲೆಯಲ್ಲಿ ಉಳಿದುಕೊಂಡು ಬಿಟ್ಟಿದೆ.

ಊರಲ್ಲಿ ಅಡಿಕೆ ಕೃಷಿ ಮಾಡುವ ಶ್ರೀಮಂತ ಸಂಬಂಧಿಯೊಬ್ಬರು ನನ್ನ ಬಳಿ ಜಗಳಕ್ಕೇ ಇಳಿದಿದ್ದರು,‘ನೀನ್ಯಾಕೆ, ನಿನ್ನ ಗಂಡನ ಹೆಸರನ್ನು ನಿನ್ನ ಹೆಸರಿನ ಜೊತೆಗೆ ಸೇರಿಸಿಕೊಂಡಿಲ್ಲ’ ಅಂತ. ‘ನೀವು ನಿಮ್ಮ ಹೆಂಡ್ತಿ ಹೆಸರನ್ನು ಸೇರಿಸಿಕೊಂಡಿದ್ದೀರಾ?’ ಅಂತ ಕೇಳಿದ್ದು ಅವರನ್ನು ರೊಚ್ಚಿಗೆಬ್ಬಿಸಿತು.

ಮಾಡರ್ನ್ ಲೈಫಲ್ಲಿ ನಾವೇಕೆ ಒಂಟಿ

‘ನಮ್ಮ ಸಂಸ್ಕೃತಿ ಬಗ್ಗೆ ನಿಮ್ಮಂಥವರಿಗೆ ರೆಸ್ಪೆಕ್ಟ್ ಇಲ್ಲ’ ಅಂತೆಲ್ಲ ಕೂಗಾಡಿದರು. ಸಂಸ್ಕೃತಿಗೂ ಇದಕ್ಕೂ ಏನು ಸಂಬಂಧವೋ ಗೊತ್ತಾಗಲಿಲ್ಲ. ದೇವರನ್ನು ನೆನೆಸಿಕೊಂಡೆ. ಶಿವ ಕಣ್ಮುಂದೆ ಬಂದ. ಅವನು ‘ಉಮಾಪತಿ’ ಅಂದರೆ ಉಮೆಯ ಗಂಡ. ವಿಷ್ಣು ಲಕ್ಷ್ಮೀಪತಿ. ರಾಮ ‘ಸೀತಾಪತಿ’. ಹೆಚ್ಚಿನೆಲ್ಲ ದೇವರೂ ಹೆಂಡ್ತಿ ಹೆಸರನ್ನೇ ಜೊತೆಗೆ ಸೇರಿಸಿಕೊಂಡಿದ್ದಾರೆ. ಗಂಡನ ಹೆಸರನ್ನು ಸೇರಿಸಿಕೊಂಡ ದೇವಿ ಒಬ್ಬಳೂ ನೆನಪಿಗೆ ಬರಲಿಲ್ಲ. ಗತಿಸಿದ ಅಜ್ಜಿ ನೆನಪಾದರು. ಸಾಯುವವರೆಗೂ ಅವರು ಲಕ್ಷ್ಮೀಯಷ್ಟೇ ಆಗಿದ್ದರು.

ಈಗ ಬದುಕಿರುವ ಇನ್ನೊಬ್ಬ ಅಜ್ಜಿಯ ಹೆಸರಿನಲ್ಲೂ ಗಂಡನ ಹೆಸರು ಜೊತೆಗಿಲ್ಲ. ಮತ್ತೆಂಥ ಸಂಸ್ಕೃತಿ ಇದು? ಮತ್ತೆ ನೋಡಿದರೆ ಇದು ಇಂಗ್ಲಿಷರೊಡನೆ ವಿದೇಶದಿಂದ ನಮಗೆ ಆಮದಾದದ್ದು. ಆದರೆ ಅಲ್ಲಿ ಗಂಡ ಹೆಂಡತಿಗಿಂತ ಅಕ್ಕರೆಯಲ್ಲಿ ಮಗುವನ್ನು ನೋಡಿಕೊಳ್ಳೋದಾಗ್ಲೀ, ಮನೆ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುವುದಾಗಲೀ ನಮ್ಮಲ್ಲಿಗೆ ಆಮದಾಗಿಲ್ಲಾ ಯಾಕೆ? ಇವೆಲ್ಲ ಉತ್ತರಗಳಿಲ್ಲದ ಪ್ರಶ್ನೆಗಳಲ್ಲ. ಆದರೆ ಉತ್ತರ ಬೇಕಿಲ್ಲದ ಪ್ರಶ್ನೆಗಳು.

ಯಾಂತ್ರೀಕೃತ ಬದುಕಲ್ಲಿ ಸಂಬಂಧಗಳು ಕಳೆದು ಹೋಗುತ್ತಿವೆಯಾ?

‘ನಾನು ಸೆಲ್ಫ್ ರೆಸ್ಪೆಕ್ಟ್ ಇರುವವನು. ಹೆಂಡತಿ ಮಾತು ಕೇಳಲ್ಲ’ ಅಂತಾರೆ. ಹೆಂಡ್ತಿ ಮಾತು ಕೇಳಿದ್ರೆ ಸೆಲ್ಫ್ ರೆಸ್ಪೆಕ್ಟ್ ಇರಲ್ಲ ಅಂತ ನಮ್ಮಗಳ ಮನಸ್ಸಲ್ಲಿ ತುಂಬಿದವರ‌್ಯಾರು? ಯೋಚಿಸಬೇಕು. ಒಂದೋ ಹೆಂಡ್ತಿ ದೇವತೆ (ಅರ್ಥಾತ್ ಗಂಡನ ಅಂಡರ್‌ವೇರ್‌ಅನ್ನೂ ಭಕ್ತಿಯಿಂದ ತೊಳೆಯುವ ದಾಸಿ), ಇಲ್ಲಾ ರಾಕ್ಷಸಿ (ಪಾಪದ ಗಂಡನ ಕೊಲೆಗೆ ಸ್ಕೆಚ್ ಹಾಕುವಷ್ಟು ಕ್ರೂರಿ). ಅವಳೂ ನಮ್ಮಂತೆ ಉಪ್ಪು, ಹುಳಿ, ಖಾರ ತಿಂದ ದೇಹ ಹೊತ್ತವಳು ಅನ್ನೋದು ನಮ್ಮ ಮನಸ್ಸಿಗೆ ಯಾಕೆ ಬರಲ್ಲ ಅಂದ್ರೆ ಸೀರಿಯಲ್ ಡೈಲಾಗ್ ಆಗುತ್ತೇನೋ.

ಇದರ ಇನ್ನೊಂದು ರೂಪ- ಗಂಡ (ಅರ್ಥಾತ್ ಯಜಮಾನ್ರು, ಒಂದೋ ಕ್ರೂರ ಡಿಕ್ಟೇಟರ್, ಇಲ್ಲಾ ವ್ಯಕ್ತಿತ್ವವೇ ಇಲ್ಲದ ಅಮ್ಮಾವ್ರ ಗಂಡ. ಸಾಮಾನ್ಯ ಗಂಡ ಹಾಗೂ ಜಗಳವಾಡಿದರೂ ಕ್ಷಣದಲ್ಲಿ ರಿಪೇರಿಯಾಗುವ ಹೆಂಡ್ತಿ ಯಾರಿಗೂ ಬೇಕಿಲ್ವಲ್ಲಾ ಅನ್ನೋದೊಂದು ಬೇಜಾರು.

ಮತ್ತೊಂದು ವಿಷ್ಯ, ಇಷ್ಟೆಲ್ಲ ಬರೆದ ನನ್ನ ಮೇಲೆ ‘ಸ್ತ್ರೀವಾ(ವ್ಯಾ)ದಿ (ನೆಗೆಟಿವ್ ಅರ್ಥದಲ್ಲಿ) ಬರುವ ಎಲ್ಲ ಸಾಧ್ಯತೆ ಇದೆ. ಈ ಬಗ್ಗೆ ಇನ್ನೊಂದಿಷ್ಟು ಬರೆಯುವ ಮನಸ್ಸಿದ್ದರೂ ‘ಅಪವಾದ’ ಭೀತಿಯಿಂದ ಇದನ್ನಿಲ್ಲಿಗೇ ನಿಲ್ಲಿಸುವೆ.

-ಪ್ರಿಯಾ ಕೇರ್ವಾಶೆ