ಆಗ ತಾನೇ ಹುಷಾರಿಲ್ಲದ ನನ್ನ 98 ವರ್ಷದ ಮುತ್ತಾತನನ್ನು ನೋಡಲು, ಮಂಡ್ಯಗೆ ಹೋಗಲು ಎಲ್ಲಾ ತಯಾರಿಗಳನ್ನು ಮಾಡಿದ್ದೆವು. ‘ಟ್ರಿಂಗ್ ಟ್ರಿಂಗ್’, ನನ್ನ ಅಮ್ಮ ಕರೆ ಸ್ವೀಕರಿಸಿದರು ಅಯ್ಯೋ ಹೌದಾ! ಎಷ್ಟೊತ್ತಿಗೆ, ಎಂದು ಗಾಬರಿಯಲ್ಲಿ ನುಡಿದಾಗಲೇ ನನಗೆ ತಿಳಿಯಿತು, ತಾತನಿಗೇನೋ ಆಗಿದೆ ಎಂದು. ವಿಧಿಯಾಟ ಬಲ್ಲವರಾರು ಎಂಬ ನುಡಿಯಂತೆ, ತಾತ ವಿಧಿವಶರಾಗಿದ್ದರು.

ವಿಪರ್ಯಾಸ ಎಂದರೆ, ತಾತನ ಯೋಗಕ್ಷೇಮ ವಿಚಾರಿಸಲು ಹೋಗಬೇಕಿದ್ದ ನಾವು, ತಾತನಿಗೆ ಕೊನೆಯ ವಿದಾಯ ಹೇಳಲು ಹೋಗಬೇಕಾಯಿತು. ನನ್ನ ತಾತನ ಊರು, ನಾಗಮಂಗಲದ ಪಾಲಗ್ರಾರ. ಬೆಂಗಳೂರಿನಿಂದ ನಾವೆಲ್ಲರೂ ಅಲ್ಲಿಗೆ ಹೋಗುವ ಹೊತ್ತಿಗೆ ತಾತನನ್ನು ತಾತನಿಗಿಂತ ಹೆಚ್ಚಿನ ಮುಪ್ಪಾಗಿದ್ದ ಹೆಂಚಿನ ಮನೆಯಾಚೆ, ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹಾಕಿದ್ದ ಶಾಮಿಯಾನದ ಕೆಳಗೆ, ಮಂಚದ ಮೇಲೆ ತಾತನನ್ನು ಮಲಗಿಸಿದ್ದರು, ಬಿಳಿಯಾಗಿದ್ದ ಕೂದಲು, ಒಣಗಿ ಹೋಗಿದ್ದ ಹಣ್ಣಿನಂತಿದ್ದ ಅವರ ಮುಖ, ಮಾಂಸವಿಲ್ಲದೆ ಬರಿ ಮೂಳೆಯಿಂದ ಕೂಡಿದಂತಹ ದೇಹ.

ಊರಿನವರೆಲ್ಲ ಬಂದಿದ್ದರು. ನನ್ನ ತಾತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರಿಂದ ತಹಶೀಲ್ದಾರರು ಸಹ ಆಗಮಿಸಿದ್ದರು. ಕೊನೆಯ ಬಾರಿಗೆ ತಾತನ ಕೈ ಹಿಡಿದು, ಎಂದಿನಂತೆ ಅವರ ಹಣೆಗೆ ಮುತ್ತನ್ನು ನೀಡಿ, ನಂತರ ತಲೆಗೆ ನೀರು ಹಾಕಿದ ಕ್ಷಣ ನೆನೆದರೆ ಮೈ ಜುಮ್ಮೆನ್ನುತ್ತದೆ. ಎಲ್ಲಾ ಕಾರ್ಯಗಳನ್ನು ಮುಗಿಸಿದೆವು. ಉದ ಯಿಸಿದ ಸೂರ್ಯ, ಮುಳುಗಿ ಆಕಾಶದಲ್ಲಿ ಲೀನನಾಗಿದ ಹಾಗೆ ತಾತನನ್ನು ಪಂಚಭೂತಗಳಲ್ಲಿ ಒಂದಾದ ಬೆಂಕಿಯಲ್ಲಿ ಲೀನನಾಗಿಸಲು ತೋಟದ ಕಡೆಗೆ ಹೊರಟೆವು.

ಕೊನೆಯ ಬಾರಿಗೆ ಆ ಊರಿನ ರಸ್ತೆಗಳಲ್ಲಿ ತಾತನನ್ನು ವೈಭವದಿಂದ ಕರೆದೊಯ್ದರು. ಭೂಮಿ ತಾಯಿಯ ದೇವಾಲಯದಲ್ಲಿ, ಆಕಾಶ ಗೋಪುರದ ಕೆಳಗೆ, ತೆಂಗಿನ ಮರಗಳು ಸುತ್ತಲೂ ಇದ್ದ ಗರ್ಭಗುಡಿಯಲ್ಲಿ, ಮರದ ಕೊಂಬೆಯ ಹಾಸಿಗೆ ಮೇಲೆ ನನ್ನ ತಾತನನ್ನು ಮಲಗಿಸಿ, ಅವರಿಗೆ ಬೆಂಕಿಯ ಅಭಿಷೇಕ ಮಾಡಿದರು. ಧಗ ಧಗ ಉರಿಯುತ್ತಿದ್ದ ಬೆಂಕಿಯೊಳಗೆ, ಜೀವನ ಸಾರ್ಥಕತೆಯ ಚಿಲುಮೆಯಿಂದ ನೆಮ್ಮದಿಯಾಗಿ ಮಲಗಿದ್ದ ನನ್ನ ತಾತ ಆ ಕ್ಷಣದಿಂದ ಮಾದರಿಯಾಗಿಬಿಟ್ಟರು. ಮಧ್ಯಾಹ್ನದ ಸುಡು ಬಿಸಿಲ ಬೇಗೆಯಿಂದ ಬೇಸತ್ತು,

ಹಿಂತಿರುಗಿ ಹೋಗುವಾಗ ನಮ್ಮನ್ನು ಊಟಕ್ಕೆ ಆಹ್ವಾನಿಸಿದ್ದು ಊರಿನ ಜನರು. ಬೆಂಗಳೂರು, ಮಂಡ್ಯ, ಮೈಸೂರಿನಿಂದ ಬಂದಿದ್ದ ಸುಮಾರು 100- 150 ಜನರಿಗೆಲ್ಲರಿಗೂ, ಆ ಊರಿನ ನಾಲ್ಕು -ಐದು ಮನೆಯ ಜನರು ಸೇರಿ ಒಟ್ಟಿಗೆ ಅಡಿಗೆ ಮಾಡಿ ಎಲ್ಲರಿಗೂ ಕೂತು ಊಟ ಮಾಡಲು ಜಾಗ ಸಿದ್ಧ ಮಾಡಿದ್ದರು. ದಣಿದು, ಹಸಿದಿದ್ದ ಎಲ್ಲರಿಗು ಬಿಸಿ ಮುದ್ದೆ, ರುಬ್ಬುಗಲ್ಲಿನಲ್ಲಿ ಅರೆದು ಮಸಾಲಾ ಮಾಡಿ ತಯಾರಿಸಿದ್ದ ಕಾಳು ಸಾರು, ತಂಪಾದ ಮಜ್ಜಿಗೆ ಮೃಷ್ಟಾನ್ನ ಭೋಜನದಂತಿತ್ತು. ಎಲ್ಲರು ಊಟ ಮಾಡಿ, ಬೆಂಗಳೂರಿಗೆ ಹೊರಟೆವು.

ಒಳ್ಳೆಯ ಊಟದ ಹೊರತಾಗಿ ನನಗೆ ಖುಷಿ ತಂದಿದ್ದು, ಆ ಊರಿನ ಜನರ ಪ್ರೀತಿ ವಾತ್ಸಲ್ಯ. ಕಾರ್ಯ ಮಾಡುವುದರಿಂದ, ಊಟ ಬಡಿಸುವವರೆಗೆ ಎಲ್ಲದರಲ್ಲೂ ಅವರು ತೋರಿಸಿದ\ ಕಾಳಜಿ ಮೆಚ್ಚುವಂತಹದ್ದು. ಕುಟುಂಬದವರಾಗದಿದ್ದರು,\ ಎಲ್ಲರು ದೂರ ತೆರಳ ಬೇಕು, ಸಾವಿನ ಮನೆಯಲ್ಲಿ ಅಡುಗೆ ಮಾಡುವುದಿಲ್ಲ ಎಂಬುದನ್ನು ಅರಿತು, ಅವರೇ ಸ್ವಯಂ ಅಡಿಗೆ ಮಾಡಿ ಬಡಿಸಿದರು. ಇದು ನಿಜವಾದ ಬಾಂಧವ್ಯ. ಪಕ್ಕದ ಮನೆಯಲ್ಲಿ ಯಾರಿರುವರೆಂದು ತಿಳಿಯದ ಸಿಟಿಯ ಸ್ವಾರ್ಥ ಬದುಕನ್ನು ನೋಡಿದ್ದ ನನಗೆ ಇದೊಂದು ಮಹತ್ತರ ಭಾವನೆಯೇ ಹೌದು!

- ತನ್ಮಯ ಪ್ರಕಾಶ್