ಅದೊಂದು ಸಣ್ಣ ಕುಟುಂಬ. ಗಂಡ, ಹೆಂಡತಿ, ಮಗು. ಅದು ಹಬ್ಬದ ದಿನ. ಮನೆಯಲ್ಲಿ ಒಬ್ಬಟ್ಟು, ಅಂಬೊಡೆ, ವಾಂಗೀಬಾತ್. ಎಲ್ಲವನ್ನೂ ಒಂದು ಟಿಫಿನ್ ಕ್ಯಾರಿಯರ್ನಲ್ಲಿ ತುಂಬಿಕೊಂಡು ಹೆಂಡತಿ ಇಲೆಕ್ಟ್ರಾನಿಕ್ ಸಿಟಿಯಿಂದ ಹೊರಡುತ್ತಾಳೆ. ಜಯನಗರದಲ್ಲಿರೋ ಅಮ್ಮ ಅಪ್ಪಂಗೆ ಕೊಟ್ಟು ಬರುತ್ತೀನಿ ಅನ್ನುತ್ತಾಳೆ. ಆಗ ಗಂಡನ ಎಚ್ಚರಿಕೆ ಮತ್ತು ಪ್ರೀತಿ ತುಂಬಿದ ಮಾತು ಕೇಳಿಸುತ್ತದೆ.

‘ಅದನ್ನ ಕೊಡೋದಕ್ಕೆ ಅಷ್ಟು ದೂರ ಯಾಕ್ ಹೋಗ್ತೀಯಾ? ಡನ್ಜೋ ಮಾಡಿಬಿಡೋಣ!’ ಮೊಬೈಲ್ ಫೋನಿನ ಒಂದು ಬಟನ್ ಅದುಮಿದರೆ ಸಾಕು, ಡನ್ಜೋ ಪಾರ್ಟ್‌ನರ್ ಮನೆಗೆ ಬರುತ್ತಾನೆ. ಕೊಡುವ ಪಾರ್ಸೆಲ್ ಅನ್ನು ಸ್ವೀಕರಿಸುತ್ತಾನೆ. ಅದನ್ನು ಒಯ್ದು ಜಯನಗರದಲ್ಲಿರುವ ಮನೆಯಾಕೆಯ ತವರು ಮನೆಗೆ ತಲುಪಿಸುತ್ತಾನೆ. ಆಮೇಲೆ  ಆಕೆ ಫೋನ್ ಮಾಡಿ ಅಮ್ಮಾ, ಹಬ್ಬದ ಊಟ ಕಳಿಸಿದ್ದೀನಿ ಅಂತಾಳೆ. ಅಮ್ಮ ಅಲ್ಲಿಂದಲೇ ಥ್ಯಾಂಕ್ಯೂ ಮಗಳೇ ಅನ್ನುತ್ತಾಳೆ. ಅಲ್ಲಿಗೆ ಹಬ್ಬ ಸಂಪನ್ನ.

ಆಪತ್ತಿಗಾಗೋನೇ ನೆಂಟ, ಯಾವಾಗ್ಲೂ ಫ್ರೆಂಡ್ ಆಗ್ತಾನೆ ನಮ್ಮ ಬಂಟ

ಎಷ್ಟು ಸರಳವಾಗಿದೆ ಬದುಕು. ಆ ತುದಿಯಿಂದ ಈ ತುದಿಗೆ, ಈ ತುದಿಯಿಂದ ಆ ತುದಿಗೆ ಡ್ರೈವ್ ಮಾಡುವ ಚಿಂತೆಯಿಲ್ಲ. ಪೆಟ್ರೋಲ್ ಖರ್ಚಿಲ್ಲ. ಟ್ರಾಫಿಕ್ಕಿನ ಕಿರಿಕಿರಿ ಇಲ್ಲ. ದಾರಿಯಲ್ಲಿ ಎದುರಾಗುವ ರೋಡ್ ರೇಜ್\ ಚಿಂತೆಯಿಲ್ಲ. ಅಪಘಾತದ ಭಯವಿಲ್ಲ. ಮಾಲಿನ್ಯಯುತ ಗಾಳಿಗೆ ಒಡ್ಡಿಕೊಳ್ಳಬೇಕಿಲ್ಲ. ಬಿಸಿಲ ತಲೆಯಿಲ್ಲ, ಮಳೆಯ ಕೊಳೆಯಿಲ್ಲ, ಚಳಿಯ ಭಯವಿಲ್ಲ. ಕುಂತಲ್ಲೇ ಎಲ್ಲವೂ ತಲುಪಬೇಕಾದ ಜಾಗಕ್ಕೆ ತಲುಪುತ್ತದೆ.

ಮತ್ತೊಂದು ಮನೆ. ಮಗಳು ಸಿನಿಮಾ ನೋಡೋಣ ಅಂತಾಳೆ. ಸಿನಿಮಾಕ್ಕೆ ಥೇಟರ್‌ಗೆ ಯಾಕೆ ಹೋಗಬೇಕು ಅಂತ ಅಪ್ಪನ ಪ್ರಶ್ನೆ. ಕೈಗೆಟುಕುವ ದೂರದಲ್ಲಿ ಅಮೆಜಾನ್ ಫೈರ್‌ಸ್ಟಿಕ್ ಇದೆ. ಅದನ್ನು ಹಾಕಿಕೊಂಡರೆ ಸಾಕು, ಮನೆಯ ಟೀವಿಯಲ್ಲೇ ಸಿನಿಮಾ ಬರುತ್ತದೆ. ಚಿತ್ರಮಂದಿರದ ಎಫೆಕ್ಟ್ ಬೇಕು ಅಂತಾದರೆ ದೊಡ್ಡ ಟೀವಿ ತಂದರಾಯಿತು. ಅದೇನೂ ದುಬಾರಿಯಲ್ಲ.

ಬೇಕಿದ್ದರೆ 1 ಪ್ಲಸ್ 7 ಸ್ವೀಕರ್ ಹಾಕಿಸಿದರಾಯಿತು. ಅದರ ಬೆಲೆಯೂ ಹೆಚ್ಚೇನಿಲ್ಲ. ಮನೆಯಲ್ಲೇ ಸಿನಿಮಾ ನೋಡಬಹುದು. ಬೇಕು ಬೇಕಾದ ಸಿನಿಮಾ ಬರುತ್ತದೆ. ಒಂದು ಸಿನಿಮಾ ನೋಡುವ ಖರ್ಚಲ್ಲಿ ನೂರು ಸಿನಿಮಾ ನೋಡಬಹುದು. ಮತ್ತದೇ ಡ್ರೈವ್ ಮಾಡುವ ಚಿಂತೆಯಿಲ್ಲ. ಪೆಟ್ರೋಲ್ ಖರ್ಚಿಲ್ಲ. ಟ್ರಾಫಿಕ್ಕಿನ ಕಿರಿಕಿರಿ ಇಲ್ಲ. ದಾರಿಯಲ್ಲಿ ಎದುರಾಗುವ ರೋಡ್ ರೇಜ್ ಚಿಂತೆಯಿಲ್ಲ. ಅಪಘಾತದ ಭಯವಿಲ್ಲ. ಮಾಲಿನ್ಯಯುತ ಗಾಳಿಗೆ ಒಡ್ಡಿಕೊಳ್ಳಬೇಕಿಲ್ಲ. ಬಿಸಿಲ ತಲೆಯಿಲ್ಲ, ಮಳೆಯ ಕೊಳೆಯಿಲ್ಲ, ಚಳಿಯ ಭಯವಿಲ್ಲ.

ಮುಲಾಜಿಗೆ ಬಿದ್ದು ಮದುವೆ ಆಗಬೇಡಿ! ಮನಸ್ಸಿಟ್ಟು ಆಗಿ...

ದಿನಸಿ ಸಾಮಾನಿನ ಪಟ್ಟಿ ರೆಡಿಯಾಗಿದೆ. ಇನ್ನೇನು ಕೈ ಚೀಲ ತೆಗೆದುಕೊಂಡು ಶೆಟ್ಟರಂಗಡಿಗೆ ಹೋಗಬೇಕು. ಅಥವಾ ಮಾಲ್ ಮೆಟ್ಟಿಲೇರಬೇಕು. ಅಷ್ಟರಲ್ಲಿ ಮಗಳು ಸಲಹೆ ಕೊಡುತ್ತಾಳೆ. ಅಷ್ಟೆಲ್ಲ ಯಾಕಮ್ಮಾ ಒದ್ದಾಡ್ತೀಯಾ. ನನ್ನ ಹತ್ರ ಆ್ಯಪ್ ಇದೆ. ಅದರಲ್ಲೇ ಬುಕ್ ಮಾಡಿದರೆ ಏನು ಬೇಕೋ ಅದೆಲ್ಲ, ಮನೆಗೇ ಬಂದು ಬೀಳುತ್ತೆ. ನೀನು ಹೋಗೋ ಅಂಗಡಿಗಿಂತ ಬೆಲೆಯೂ ಕಡಿಮೆ. ಗುಣಮಟ್ಟವೂ ಜಾಸ್ತಿ. ಅಲ್ಲಿಗೆ ಬಿಗ್‌ಬಾಸ್ಕೆಟ್ ಆ್ಯಪ್ ಕೆಲಸ ಶುರುಮಾಡುತ್ತದೆ. ಅಮ್ಮ ಮನೆಯಲ್ಲೇ ಉಳಿಯುತ್ತಾಳೆ.

ಡ್ರೈವ್ ಮಾಡುವ ಚಿಂತೆಯಿಲ್ಲ. ಪೆಟ್ರೋಲ್ ಖರ್ಚಿಲ್ಲ. ಟ್ರಾಫಿಕ್ಕಿನ ಕಿರಿಕಿರಿ ಇಲ್ಲ. ದಾರಿಯಲ್ಲಿ ಎದುರಾಗುವ ರೋಡ್ ರೇಜ್ ಚಿಂತೆಯಿಲ್ಲ. ಅಪಘಾತದ ಭಯವಿಲ್ಲ. ಮಾಲಿನ್ಯಯುತ ಗಾಳಿಗೆ ಒಡ್ಡಿಕೊಳ್ಳಬೇಕಿಲ್ಲ. ಬಿಸಿಲ ತಲೆಯಿಲ್ಲ, ಮಳೆಯ ಕೊಳೆಯಿಲ್ಲ, ಚಳಿಯ ಭಯವಿಲ್ಲ.

ಭಾನುವಾರ. ಅಡುಗೆ ಮಾಡಲು ಬೇಜಾರು. ಇವತ್ತು ಎಲ್ಲರೂ ಊಟಕ್ಕೆ ಹೋಗೋಣ ಎಂದು ಅಪ್ಪ ಹೇಳುತ್ತಾನೆ. ಯಾವ ಹೋಟೆಲು ಅನ್ನುವುದನ್ನೂ ಹುಡುಕಲಾಗುತ್ತದೆ. ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಮಗ ಹೇಳುತ್ತಾನೆ. ಅಲ್ಲೀ ತನಕ ಯಾಕೆ ಹೋಗಬೇಕು. ಸ್ವಿಗ್ಗೀ ಇದೆಯಲ್ಲ, ಮನೆಗೇ ತರಿಸಿದರಾಯಿತು. ಮಗನ ಆಜ್ಞೆಯನ್ನು ಶಿರಸಾಪಾಲಿಸಲಾಗುತ್ತದೆ. ಊಟ ಮನೆಗೇ ಬರುತ್ತದೆ. ಮನೆಯಲ್ಲೇ ಕೂತು ಹೋಟೆಲ್ಲಿನ ಬಿಸಿಬೇಳೆಬಾತ್ ಮತ್ತು ಮೊಸರನ್ನದ ಸಮಾರಾಧನೆ ನಡೆಯುತ್ತದೆ.

ಹೆಚ್ಚು ಆಕರ್ಷಕವಾಗಿ ಕಾಣಲು ವೈಜ್ಞಾನಿಕವಾಗಿ ಸಾಬೀತಾದ ವಿಧಾನಗಳಿವು!

ಅಗೇನ್, ಡ್ರೈವ್ ಮಾಡುವ ಚಿಂತೆಯಿಲ್ಲ. ಪೆಟ್ರೋಲ್ ಖರ್ಚಿಲ್ಲ. ಟ್ರಾಫಿಕ್ಕಿನ ಕಿರಿಕಿರಿ ಇಲ್ಲ. ದಾರಿಯಲ್ಲಿ ಎದುರಾಗುವ ರೋಡ್ ರೇಜ್ ಚಿಂತೆಯಿಲ್ಲ. ಅಪಘಾತದ ಭಯವಿಲ್ಲ. ಮಾಲಿನ್ಯಯುತ ಗಾಳಿಗೆ ಒಡ್ಡಿಕೊಳ್ಳಬೇಕಿಲ್ಲ. ಬಿಸಿಲ ತಲೆಯಿಲ್ಲ, ಮಳೆಯ ಕೊಳೆಯಿಲ್ಲ, ಚಳಿಯ ಭಯವಿಲ್ಲ.

ಅಲ್ಲಿಗೆ ಮನೆಯೆಂಬುದು ಜೈಲು. ಆ ಜೈಲಿನೊಳಗೆ ಇರುವುದೇ ನಮಗೆ ಸಂತೋಷ. ಯಾರ ಬಳಿಯಾದರೂ ಮಾತಾಡುವುದಕ್ಕೆ ಫೋನಿದೆ. ಫೋನಲ್ಲೇನ್ರೀ ಮಾತಾಡೋದು, ಮುಖ ನೋಡ್ಕೊಂಡು ಮಾತಾಡಬೇಕು ಅಂದರೆ ವಿಡಿಯೋ ಕಾಲ್ ಇದೆ. ಅವರು ಮಾಡಿದ ಅಡುಗೆಯನ್ನು ಇವರು, ಇವರು ಮಾಡಿದ ಅಡುಗೆಯನ್ನು ಅವರು ಊಟ ಮಾಡಬೇಕಿದ್ದರೆ ಡನ್ಜೋ ಇದೆ. ಎಲ್ಲರೂ ಕೂತು ಒಟ್ಟಿಗೇ ಸಿನಿಮಾ ನೋಡಬೇಕಿದ್ದರೆ ವಾಚ್ ಪಾರ್ಟಿ ಇದೆ. ಬೇರೆ ಬೇರೆಯಾಗಿದ್ದರೂ ಒಂದೇ ಸಮಯಕ್ಕೆ ಒಂದೇ ಸೀರಿಯಲ್ಲನ್ನೋ ಸಿನಿಮಾವನ್ನೋ ನೋಡಬಹುದು. ಹೀಗಾಗಿ ವರ್ಷಾನುಗಟ್ಟಲೆ ಒಬ್ಬರನ್ನೊಬ್ಬರು ಭೇಟಿಯೇ ಆಗದೇ ಬದುಕುವುದನ್ನು ಆಧುನಿಕ ಜೀವನ ಶೈಲಿ ನಮಗೆ ಕಲಿಸಿಕೊಟ್ಟಿದೆ.

ಇದೆಲ್ಲ ಎಷ್ಟು ಸರಳ ಮತ್ತು ಸುಂದರ ಅಂತ ಈ ಕಾಲದ ಎಲ್ಲರಿಗೂ ಅನ್ನಿಸುತ್ತಿದೆ ಎಂಬುದೇ ಇದರ ವಿಶೇಷ. ಏರ್‌ಪೋರ್ಟುಗಳಲ್ಲಿ ಎಲ್ಲರ ಜೊತೆಗೆ ಕುಳಿತಿರುವುದಕ್ಕೆ ಸಂಕಟವಾದರೆ ಅಂಥವರಿಗೆ ಸ್ಪೆಷಲ್ ಲೌಂಜ್‌ಗಳಿವೆ. ಆ ಲೌಂಜ್‌ನಲ್ಲೂ ಬೇರೆಯವರು ಇರುತ್ತಾರಲ್ಲ. ಅದಕ್ಕಾಗಿ ಈಗ ಕ್ಯಾಪ್ಸೂಲುಗಳು ಬರುತ್ತಿವೆ. ಅದರೊಳಗೆ ಹೊಕ್ಕು ಬಾಗಿಲು ಹಾಕಿಕೊಂಡರೆ ನಿನಗೆ ನೀನೇ ಗೆಳೆಯ ನಿನಗೆ ನೀನೇ!
ಯಾಕೆ ಹೀಗಾಗುತ್ತಿದೆ?

ಆಧುನಿಕ ಜೀವನಶೈಲಿಯ ಪರಿಣಾಮ ಇದು ಅನ್ನುವುದು ಒಂದು ವಾದ. ಯಾಕೆಂದರೆ ನಾವು ಭೇಟಿಯಾಗುವ ಯಾರೂ ನಮ್ಮವರಲ್ಲ. ಮಹಾನಗರಗಳಲ್ಲಿ ನಾವು ಓಡಾಡುವಾಗ ವಿದೇಶದಲ್ಲಿ ಓಡಾಡಿದಂತೆ ಅನ್ನಿಸುತ್ತದೆ. ನಮ್ಮದು ಅನ್ನುವ ಭಾವನೆ ಹುಟ್ಟಿಸುವ ಯಾವುದು ಕೂಡ ಇಲ್ಲಿಲ್ಲ. ಹೀಗಾಗಿ ಮನುಷ್ಯ ತನ್ನ ಪಾಡಿಗೆ ತಾನಿರಲು ಬಯಸುತ್ತಾನೆ. ಅವನಿಗೆ ಹೇಳಿಕೊಳ್ಳುವುದಕ್ಕೆ ಏನೂ ಇಲ್ಲ, ಕೇಳಿಸಿಕೊಳ್ಳುವ ಆಸಕ್ತಿಯಿಲ್ಲ. ಅದರಿಂದಾಗಿಯೇ ಮನುಷ್ಯ ಒಂಟಿತನವನ್ನು ಇಷ್ಟಪಡುತ್ತಿದ್ದಾನೆ ಎಂಬಿತ್ಯಾದಿ ವಿಶ್ಲೇಷಣೆಗಳನ್ನೂ ನಾವು ಕೇಳಬಹುದು.

ಅದೇನೇ ಇದ್ದರೂ ಮನುಷ್ಯ ಒಂಟಿತನದತ್ತ ಸಾಗುತ್ತಿದ್ದಾನೆ ಅಥವಾ ಸಾಗುವಂತೆ ಮಾಡಲಾಗುತ್ತಿದೆ ಅನ್ನುವುದಂತೂ ನಿಜ. ಒಂದು ಜಾಹೀರಾತು ಪ್ರಸಾರವಾಗುತ್ತಿತ್ತು. ನಿವೃತ್ತ ಅಪ್ಪ ಹೊರಗೆ ಹೊರಡುತ್ತಿದ್ದಾನೆ. ಹೆಂಡತಿ ಕೇಳುತ್ತಾಳೆ: ಎಲ್ಲಿಗೆ ಸವಾರಿ? ಅಪ್ಪನ ಉತ್ತರ: ಇಲೆಕ್ಟ್ರಿಕ್ ಬಿಲ್ ಕಟ್ಟೋದಕ್ಕೆ. ಮಗನ ಉತ್ತರ: ಅದನ್ನ ನಾನು ಆನ್‌ಲೈನಲ್ಲೇ ಕಟ್ತೀನಿ. ಹೀಗೆ ವಾಟರ್‌ಬಿಲ್, ಫೋನ್ ಬಿಲ್ ಎಲ್ಲವನ್ನೂ ಆನ್‌ಲೈನಲ್ಲೇ ಕಟ್ಟೋದಾಗಿ ಮಗ ಹೇಳುತ್ತಾ ಹೋಗುತ್ತಾನೆ. ಕೊನೆಗೊಮ್ಮೆ ಅಪ್ಪ ಹೊರಗೆ ಹೊರಡುತ್ತಿದ್ದಂತೆ ಮತ್ತೆ ಹೆಂಡತಿ ಕೇಳುತ್ತಾಳೆ : ಎಲ್ಲಿಗೆ ಸವಾರಿ. ಆಗ ಅಪ್ಪ ಹೇಳುತ್ತಾನೆ: ಹೇರ್‌ಕಟ್ ಮಾಡ್ಸೋದಕ್ಕೆ. ಅದನ್ನು ಆನ್‌ಲೈನಲ್ಲೇ ಮಾಡಕ್ಕಾಗಲ್ಲ ಅಲ್ವಾ!

ಮೊನ್ನೆ ಮೊನ್ನೆ ಕ್ಷೌರವನ್ನೂ ಆನ್‌ಲೈನಲ್ಲೇ ಬುಕ್ ಮಾಡಿ. ನಿಮ್ಮ ಮನೆಗೇ ಬಂದು ಕ್ಷೌರ ಮಾಡಿಕೊಟ್ಟು ಹೋಗುತ್ತಾರೆ ಅಂದಾಗ ಈ ಜಾಹೀರಾತು ನೆನಪಾಯಿತು. ಮನುಷ್ಯನನ್ನು ತನ್ನ ಚಿಪ್ಪಿನ ಒಳಗೆ ತಂತ್ರಜ್ಞಾನ ಎಷ್ಟು ಸುಲಭವಾಗಿ ಬಂಧಿಸಿಬಿಟ್ಟಿದೆ ಅಲ್ಲವೇ!

- ನೈನಾ ಆರ್ ಕಣ್ಣನ್