ಡೊಮಿನಿಕನ್ ರಿಪಬ್ಲಿಕ್ ದೇಶದ ಲಾಸ್ ಸಲಿನಾಸ್ ಅನ್ನೋ ಹಳ್ಳಿಯೊಂದು ಇಡೀ ಜಗತ್ತನ್ನೇ ಅಚ್ಚರಿಗೊಳಿಸಿದೆ. ಇಲ್ಲಿ ಹುಟ್ಟುವ ಕೆಲವು ಮಕ್ಕಳು ನೋಡೋಕೆ ಹೆಣ್ಣುಮಕ್ಕಳಂತೆ ಇರ್ತಾರೆ, ಹಾಗೇ ಬೆಳೀತಾರೆ. ಆದ್ರೆ 12 ವರ್ಷ ತುಂಬುತ್ತಿದ್ದಂತೆ ಹುಡುಗರಾಗಿ ಬದಲಾಗಿಬಿಡ್ತಾರೆ.
ಹುಟ್ಟಿದಾಗ ಹೆಣ್ಣು ಮಗು ಅಂತ ಎಲ್ಲರೂ ಸಂಭ್ರಮಿಸ್ತಾರೆ. ಫ್ರಾಕ್ ಹಾಕಿ, ಹೂ ಮುಡಿಸಿ ಮುದ್ದಾಗಿ ಬೆಳೆಸ್ತಾರೆ. ಆದ್ರೆ, ಆ ಮಗು 12 ವರ್ಷ ತುಂಬುತ್ತಿದ್ದಂತೆ ಇದ್ದಕ್ಕಿದ್ದಂತೆ ಹುಡುಗನಾಗಿ ಬದಲಾದರೆ? ಕೇಳೋಕೆ ಫ್ಯಾಂಟಸಿ ಕಥೆಯಂತೆ ಅನಿಸಿದರೂ ಇದು ಅಕ್ಷರಶಃ ಸತ್ಯ. ಕೆರಿಬಿಯನ್ ಸಮುದ್ರದಲ್ಲಿರುವ ಡೊಮಿನಿಕನ್ ರಿಪಬ್ಲಿಕ್ ದೇಶದ ಸಲಿನಾಸ್ ಎಂಬ ಪುಟ್ಟ ಹಳ್ಳಿಯಲ್ಲಿ ಈ ವಿಚಿತ್ರ ತಲೆಮಾರುಗಳಿಂದ ನಡೀತಿದೆ. ವಿಜ್ಞಾನ ಲೋಕವನ್ನೇ ಬೆಚ್ಚಿಬೀಳಿಸಿದ ಈ ಅಪರೂಪದ ರಹಸ್ಯದ ಹಿಂದಿನ ಅಸಲಿ ಕಥೆ ಏನು ಅಂತ ನೋಡೋಣ ಬನ್ನಿ.
ಸಾಮಾನ್ಯವಾಗಿ ಹೆರಿಗೆ ಆದ ತಕ್ಷಣ ಹುಟ್ಟಿದ್ದು ಗಂಡೋ, ಹೆಣ್ಣೋ ಅಂತ ವೈದ್ಯರು ಹೇಳ್ತಾರೆ. ಆದರೆ ಸಲಿನಾಸ್ ಹಳ್ಳಿಯಲ್ಲಿ ಮಾತ್ರ 12 ವರ್ಷ ಬರೋವರೆಗೂ ಸ್ಪಷ್ಟತೆ ಇರೋದಿಲ್ಲ. ಯಾಕಂದ್ರೆ ಇಲ್ಲಿ ಹುಟ್ಟೋ ಕೆಲವು ಮಕ್ಕಳು 12ನೇ ವಯಸ್ಸಿಗೆ, ಅಂದ್ರೆ ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಹುಡುಗಿಯರಿಂದ ಹುಡುಗರಾಗಿ ಬದಲಾಗ್ತಾರೆ. ಸ್ಥಳೀಯವಾಗಿ ಈ ಮಕ್ಕಳನ್ನು 'ಗೆವೆಡೋಸೆಸ್' (Guevedoces) ಅಂತ ಕರೀತಾರೆ. ಸ್ಪ್ಯಾನಿಷ್ ಭಾಷೆಯಲ್ಲಿ ಇದರರ್ಥ '12ನೇ ವಯಸ್ಸಿನಲ್ಲಿ ಪುರುಷತ್ವ ಪಡೆಯುವವರು' ಅಂತ. ಇಲ್ಲಿ ಹುಟ್ಟುವ ಪ್ರತಿ 90 ಮಕ್ಕಳಲ್ಲಿ ಒಬ್ಬರಿಗೆ ಹೀಗೆ ಆಗೋದು ವಿಶೇಷ.
ಈ ಹಳ್ಳಿಯಲ್ಲಿ ಕೆಲವು ಮಕ್ಕಳು ಹುಟ್ಟಿದಾಗ ನೋಡೋಕೆ ಪಕ್ಕಾ ಹುಡುಗಿಯರಂತೆಯೇ ಇರ್ತಾರೆ. ಹಾಗಾಗಿ ಪೋಷಕರು ಅವರಿಗೆ ಹೆಣ್ಣುಮಕ್ಕಳ ಹೆಸರಿಟ್ಟು, ಲಂಗ-ದಾವಣಿ, ಗೌನ್ ಹಾಕಿ ಪ್ರೀತಿಯಿಂದ ಬೆಳೆಸುತ್ತಾರೆ. ಆದರೆ, ಅವರಿಗೆ 12 ವರ್ಷ ತುಂಬುತ್ತಿದ್ದಂತೆ ದೇಹದಲ್ಲಿ ನಿಧಾನವಾಗಿ ಬದಲಾವಣೆ ಶುರುವಾಗುತ್ತೆ. ದೇಹದಲ್ಲಿ ಗಂಡಸರ ಹಾರ್ಮೋನುಗಳು ಇದ್ದಕ್ಕಿದ್ದಂತೆ ಬಿಡುಗಡೆಯಾಗಿ, ಪುರುಷರ ಜನನಾಂಗಗಳು ಬೆಳೆಯಲು ಆರಂಭಿಸುತ್ತವೆ. ಧ್ವನಿ ಒಡೆದು ಗಡುಸಾಗುತ್ತೆ. ದೇಹದ ಭಾಷೆ ಕೂಡ ಸಂಪೂರ್ಣವಾಗಿ ಹುಡುಗರಂತೆಯೇ ಆಗಿಬಿಡುತ್ತೆ.
ಇದನ್ನು ನೋಡಿದ ಕೆಲವರು ಇದೇನೋ ದೆವ್ವದ ಕಾಟ, ಇಲ್ಲಾಂದ್ರೆ ಪವಾಡ ಅಂದ್ಕೊಂಡ್ರು. ಆದರೆ 1970ರಲ್ಲಿ ಕಾರ್ನೆಲ್ ಯೂನಿವರ್ಸಿಟಿಯ ಪ್ರಸಿದ್ಧ ಹಾರ್ಮೋನ್ ತಜ್ಞೆ ಡಾ. ಜೂಲಿಯನ್ ಇಂಪೆರಾಟೋ ಈ ಹಳ್ಳಿಗೆ ಬಂದು ಸಂಶೋಧನೆ ನಡೆಸಿದ್ರು. ಆಗಲೇ ಇದರ ಹಿಂದಿನ ಅಸಲಿ ರಹಸ್ಯ ಬಯಲಾಯ್ತು. ಇಲ್ಲಿ ನಡೀತಿರೋದು ಯಾವುದೇ ವಿಚಿತ್ರವಲ್ಲ, ಇದೊಂದು ಅಪರೂಪದ ಆನುವಂಶಿಕ ಕಾಯಿಲೆ (Genetic Disorder) ಅಂತ ಅವರು ಸ್ಪಷ್ಟಪಡಿಸಿದರು.
ಈ ಮಕ್ಕಳಿಗೆ ಗಂಡಸರ ಕ್ರೋಮೋಸೋಮ್ ಇದ್ದರೂ, ತಾಯಿಯ ಗರ್ಭದಲ್ಲಿರುವಾಗ '5-ಆಲ್ಫಾ ರಿಡಕ್ಟೇಸ್' ಎಂಬ ಎಂಜೈಮ್ ಕೊರತೆ ಇರುತ್ತೆ. ಇದರಿಂದ ಗರ್ಭದಲ್ಲಿ 'ಡೈಹೈಡ್ರೊ-ಟೆಸ್ಟೋಸ್ಟೆರಾನ್' ಎಂಬ ಪುರುಷ ಹಾರ್ಮೋನ್ ಉತ್ಪತ್ತಿಯಾಗಲ್ಲ. ಹಾಗಾಗಿ, ಹೊಟ್ಟೆಯಲ್ಲಿ ಗಂಡು ಮಗು ಇದ್ದರೂ, ಹುಟ್ಟುವಾಗ ಹೆಣ್ಣು ಮಗುವಿನ ರೂಪದಲ್ಲಿ ಹೊರಬರುತ್ತಾರೆ. ಆದರೆ 12 ವರ್ಷ ಆಗುತ್ತಿದ್ದಂತೆ, ದೇಹದಲ್ಲಿ ಮತ್ತೆ ದೊಡ್ಡ ಪ್ರಮಾಣದಲ್ಲಿ 'ಟೆಸ್ಟೋಸ್ಟೆರಾನ್' ಬಿಡುಗಡೆಯಾಗುತ್ತೆ. ಇದರಿಂದ ಗರ್ಭದಲ್ಲಿ ಆಗಬೇಕಿದ್ದ ಬದಲಾವಣೆಗಳು 12 ವರ್ಷದ ನಂತರ ಆಗಿ, ಆ ಹುಡುಗಿ ಪೂರ್ತಿ ಹುಡುಗನಾಗಿ ಬದಲಾಗುತ್ತಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಸಂಚಲನ
ಈ ಹಳ್ಳಿಯ ಜನರ ಮೇಲಿನ ಸಂಶೋಧನೆಗಳು ವೈದ್ಯಕೀಯ ಜಗತ್ತಿಗೆ ದೊಡ್ಡ ಬೂಸ್ಟ್ ನೀಡಿದವು. ಪುರುಷರಲ್ಲಿ ಬರುವ ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆ ಮತ್ತು ಬೊಕ್ಕತಲೆ ಸಮಸ್ಯೆಗೆ ಔಷಧಿ ಕಂಡುಹಿಡಿಯಲು ಈ ಸಂಶೋಧನೆ ಬಹಳಷ್ಟು ಸಹಾಯ ಮಾಡಿತು. ಪ್ರಸ್ತುತ ಜಗತ್ತಿನಾದ್ಯಂತ ಲಕ್ಷಾಂತರ ಪುರುಷರು ಬಳಸುತ್ತಿರುವ 'ಫಿನಾಸ್ಟರೈಡ್' (Finasteride) ಎಂಬ ಔಷಧಿಯನ್ನು ಇದೇ ಸಂಶೋಧನೆಯ ಆಧಾರದ ಮೇಲೆ ತಯಾರಿಸಲಾಗಿದೆ. ಇನ್ನು ಈ ಹಳ್ಳಿಯಲ್ಲಿ 12 ವರ್ಷಕ್ಕೆ ಹುಡುಗರಾಗಿ ಬದಲಾದವರು, ದೊಡ್ಡವರಾದ ಮೇಲೆ ಸಾಮಾನ್ಯ ಗಂಡಸರಂತೆಯೇ ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಈ ಗ್ರಾಮವು ಬಹಳ ಕಾಲ ಹೊರ ಜಗತ್ತಿನಿಂದ ಪ್ರತ್ಯೇಕವಾಗಿದ್ದ ಕಾರಣ, ಈ ಆನುವಂಶಿಕ ಸಮಸ್ಯೆ ತಲೆಮಾರುಗಳಿಂದ ಮುಂದುವರಿದುಕೊಂಡು ಬಂದಿದೆ.

