ಹಾಸಿಗೆಯ ಜೀವಿತಾವಧಿ ಸಾಮಾನ್ಯವಾಗಿ 7-10 ವರ್ಷಗಳು, ಆದರೆ ಬೆನ್ನು ನೋವು ಅಥವಾ ಹಾಸಿಗೆಯಲ್ಲಿ ಗುಳಿ ಕಾಣಿಸಿಕೊಂಡರೆ ಅದನ್ನು ಕೂಡಲೇ ಬದಲಾಯಿಸುವುದು ಉತ್ತಮ. ನೆಮ್ಮದಿಯ ನಿದ್ದೆ ಮತ್ತು ಬೆನ್ನುಮೂಳೆಯ ಆರೋಗ್ಯಕ್ಕಾಗಿ ಹಾಸಿಗೆಯು ದೇಹಕ್ಕೆ ಸರಿಯಾದ ಸಪೋರ್ಟ್ ನೀಡುತ್ತಿದೆಯೇ ಎಂದು ಪರಿಶೀಲಿಸುವುದು ಅತ್ಯಗತ್ಯ.
ರಾತ್ರಿ ನೆಮ್ಮದಿಯ ನಿದ್ದೆ ಬರಲು ಆರಾಮದಾಯಕ ಹಾಸಿಗೆ ಇರುವುದು ಬಹಳ ಮುಖ್ಯ. ನಾವು ಸಾಮಾನ್ಯವಾಗಿ ಬೆಡ್ ಶೀಟ್, ದಿಂಬುಗಳ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಕೊಡುತ್ತೇವೆ. ಆದರೆ ನಾವು ಮಲಗುವ ಹಾಸಿಗೆಯ (Mattress) ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಅನೇಕರು ದಶಕಗಳ ಕಾಲ ಒಂದೇ ಹಾಸಿಗೆಯನ್ನು ಬಳಸುತ್ತಾರೆ. ಕಾಲಕ್ರಮೇಣ ಹಾಸಿಗೆಯ ಸಾಂದ್ರತೆ ಮತ್ತು ದೇಹಕ್ಕೆ ನೀಡುವ ಬೆಂಬಲ (Support) ಕಡಿಮೆಯಾಗುತ್ತದೆ. ಹಾಗಾದರೆ ಒಂದು ಹಾಸಿಗೆಯನ್ನು ಎಷ್ಟು ವರ್ಷಗಳಿಗೊಮ್ಮೆ ಬದಲಾಯಿಸಬೇಕು? ಅದರ ಲಕ್ಷಣಗಳೇನು? ಇಲ್ಲಿದೆ ಮಾಹಿತಿ.
ಹಾಸಿಗೆಯ ಜೀವಿತಾವಧಿ ಎಷ್ಟು?
ಸಾಮಾನ್ಯವಾಗಿ ಒಂದು ಉತ್ತಮ ಗುಣಮಟ್ಟದ ಹಾಸಿಗೆಯ ಜೀವಿತಾವಧಿ 7 ರಿಂದ 10 ವರ್ಷಗಳು ಎಂದು ಪರಿಗಣಿಸಲಾಗುತ್ತದೆ. ಇದು ಹಾಸಿಗೆಯ ಗುಣಮಟ್ಟ, ಅದರ ಬಳಕೆ, ವ್ಯಕ್ತಿಯ ತೂಕ ಮತ್ತು ನೀವು ಅದನ್ನು ಎಷ್ಟು ಚೆನ್ನಾಗಿ ನಿರ್ವಹಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿದಿನ ಬಳಸುವ ಹಾಸಿಗೆಯ ಒಳಗಿರುವ ಫೋಮ್ ಅಥವಾ ಸ್ಪ್ರಿಂಗ್‌ಗಳು ಕಾಲಾನಂತರದಲ್ಲಿ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ.
ಹಾಸಿಗೆ ಹಾಳಾಗಿದೆ ಎಂದು ತಿಳಿಯುವುದು ಹೇಗೆ?
ಸಮತಟ್ಟಾಗಿಲ್ಲದ ಮೇಲ್ಮೈ: ಹಾಸಿಗೆಯ ಯಾವುದಾದರೂ ಒಂದು ಭಾಗದಲ್ಲಿ ಗುಳಿ ಬಿದ್ದಿದ್ದರೆ ಅಥವಾ ಮೇಲ್ಮೈ ಏರುಪೇರಾಗಿದ್ದರೆ ಅದು ಹಾಸಿಗೆ ಹಾಳಾಗಿದೆ ಎಂಬುದರ ಮೊದಲ ಸಂಕೇತ. ಅಂತಹ ಹಾಸಿಗೆಯ ಮೇಲೆ ಮಲಗಿದಾಗ ದೇಹವು ಒಂದು ಕಡೆ ವಾಲುವುದು ಅಥವಾ ಅಸಹಜವಾಗಿ ಬಾಗಿದಂತೆ ಭಾಸವಾಗುತ್ತದೆ.
ಬೆಳಿಗ್ಗೆ ಎದ್ದಾಗ ದೇಹದಲ್ಲಿ ನೋವು: ನೀವು ಪ್ರತಿದಿನ ಬೆಳಿಗ್ಗೆ ಎದ್ದಾಗ ಬೆನ್ನು, ಕುತ್ತಿಗೆ ಅಥವಾ ಭುಜದ ನೋವಿನಿಂದ ಬಳಲುತ್ತಿದ್ದರೆ ಮತ್ತು ಅದಕ್ಕೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೆ, ನಿಮ್ಮ ಹಳೆಯ ಹಾಸಿಗೆಯೇ ಅದಕ್ಕೆ ಕಾರಣವಿರಬಹುದು. ಹಳೆಯ ಹಾಸಿಗೆಯು ಬೆನ್ನುಮೂಳೆಗೆ ಸರಿಯಾದ ಸಪೋರ್ಟ್ ನೀಡುವುದಿಲ್ಲ.
ಹಾಸಿಗೆಯಿಂದ ಬರುವ ಶಬ್ದ: ನೀವು ಸ್ಪ್ರಿಂಗ್ ಹಾಸಿಗೆಯನ್ನು ಬಳಸುತ್ತಿದ್ದರೆ ಮತ್ತು ಮಲಗುವಾಗ ಅಥವಾ ಮಗ್ಗುಲು ಬದಲಿಸುವಾಗ ಕಿರಿಕಿರಿ ಉಂಟುಮಾಡುವ ಶಬ್ದ ಬರುತ್ತಿದ್ದರೆ, ಒಳಗಿನ ಸ್ಪ್ರಿಂಗ್‌ಗಳು ಸವೆದು ಹೋಗಿವೆ ಎಂದರ್ಥ.
ಅಲರ್ಜಿ ಅಥವಾ ಸೀನು: ಹಳೆಯ ಹಾಸಿಗೆಗಳಲ್ಲಿ ಧೂಳಿನ ಕಣಗಳು (Dust Mites) ಮತ್ತು ಬ್ಯಾಕ್ಟೀರಿಯಾಗಳು ಸುಲಭವಾಗಿ ಸೇರಿಕೊಳ್ಳುತ್ತವೆ. ಇದರಿಂದ ಕೆಲವರಿಗೆ ಅಲರ್ಜಿ ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು.
ಯಾವಾಗ ಬದಲಾಯಿಸುವುದು ಸೂಕ್ತ?
7 ರಿಂದ 10 ವರ್ಷಗಳು ಎಂಬುದು ಕೇವಲ ಒಂದು ಅಂದಾಜು ಸಮಯವಷ್ಟೇ. ಒಂದು ವೇಳೆ ನಿಮ್ಮ ಹಾಸಿಗೆಗೆ ಕೇವಲ 5 ವರ್ಷವಾಗಿದ್ದರೂ ಸಹ, ಮೇಲೆ ತಿಳಿಸಿದ ಸಮಸ್ಯೆಗಳು ಕಂಡುಬರುತ್ತಿದ್ದರೆ ಅದನ್ನು ಬದಲಾಯಿಸುವುದು ಉತ್ತಮ. ನಿದ್ದೆಯ ಗುಣಮಟ್ಟ ಕುಸಿಯುತ್ತಿದ್ದರೆ ಅಥವಾ ಎದ್ದ ತಕ್ಷಣ ಆಯಾಸ ಎನಿಸುತ್ತಿದ್ದರೆ ಹೊಸ ಹಾಸಿಗೆಯ ಬಗ್ಗೆ ಯೋಚಿಸುವ ಸಮಯ ಬಂದಿದೆ ಎಂದು ತಿಳಿಯಿರಿ. ಒಟ್ಟಾರೆಯಾಗಿ ಉತ್ತಮ ಆರೋಗ್ಯ ಮತ್ತು ನೆಮ್ಮದಿಯ ನಿದ್ದೆಗಾಗಿ ನಿಮ್ಮ ದೇಹಕ್ಕೆ ಸರಿಯಾದ ಬೆಂಬಲ ನೀಡುವ ಹಾಸಿಗೆಯನ್ನು ಆರಿಸಿಕೊಳ್ಳುವುದು ಬಹಳ ಮುಖ್ಯ.


