ಬೆಂಗಳೂರಲ್ಲಿ ಮನೆ ಬಾಡಿಗೆ ಪಡೆಯೋಕು ಡಿಸ್ಟಿಂಕ್ಷನ್ ತಗೋಬೇಕಾ? ಮಾರ್ಕ್ಸ್ ನೋಡಿ ಮನೆ ಕೊಡಲ್ಲ ಎಂದ ಓನರ್
ಬೆಂಗಳೂರಿಗೆ ವಿದ್ಯಾಭ್ಯಾಸ, ಜಾಬ್ ಅಂತ ಪ್ರತಿ ದಿನ ಸಾವಿರಾರು ಮಂದಿ ಆಗಮಿಸ್ತಾರೆ. ಕಾಲೇಜ್ ಸೀಟ್, ಕೆಲಸ ಗಿಟ್ಟಿಸಿಕೊಳ್ಳೋದು ಓಕೆ. ಆದ್ರೆ ಈ ಮಹಾನಗರದಲ್ಲಿ ಮನೆ ಹುಡುಕೋ ಕಷ್ಟ ಬೇಡಪ್ಪಾ ಅಂತಿದ್ದಾರೆ ಜನ್ರು. ಈ ಹಿಂದೆ ಬಾಡಿಗೆ ಮನೆ ಹುಡುಕ್ತಿದ್ದ ವ್ಯಕ್ತಿಯೊಬ್ಬನಲ್ಲಿ ಮನೆ ಓನರ್ ಲಿಂಕ್ಡ್‌ಇನ್ ಪ್ರೊಫೈಲ್ ಕೇಳಿದ್ದರು. ಈ ಬಾರಿ ವ್ಯಕ್ತಿಯೊಬ್ಬನ ಬಳಿ ಪಿಯುಸಿ ಮಾರ್ಕ್ಸ್ ಕಾರ್ಡ್ ಕೇಳಲಾಗಿದೆ.
ಬೆಂಗಳೂರಿಗೆ ಹಲವು ರಾಜ್ಯಗಳಿಂದ ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ಜನರು ಬಂದು ಸೇರುತ್ತಾರೆ. ಆದರೆ ಈ ಮಹಾನಗರದಲ್ಲಿ ಮನೆ ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ. ಹುಡುಕಿದವರಿಗಷ್ಟೇ ಗೊತ್ತು ಅದರ ಕಷ್ಟ. ಬಜೆಟ್, ಕಂಫರ್ಟ್ ಎಲ್ಲದಕ್ಕೂ ತಕ್ಕದಾದ ಮನೆ ದುರ್ಬೀನು ಹಾಕಿ ಹುಡುಕಿದರೂ ಸಿಗಲ್ಲ. ಹೀಗಾಗಿ ಜನರು ಡೇಟಿಂಗ್ ಆಪ್, ಕ್ರಿಕೆಟ್ ಸ್ಟೇಡಿಯಂ ಹೀಗೆ ಎಲ್ಲೆಂದರಲ್ಲಿ ಬಾಡಿಗೆ ಮನೆಗಾಗಿ ಸರ್ಚ್ ಮಾಡುತ್ತಾರೆ. ವಿಭಿನ್ನವಾದ ಪೋಸ್ಟರ್‌ಗಳನ್ನು ಸಿದ್ಧಪಡಿಸಿ ವೈರಲ್ ಮಾಡುತ್ತಾರೆ. ಹಾಗೆಯೇ ಬೆಂಗಳೂರಿನ ಮನೆ ಓನರ್‌ಗಳ ಡಿಮ್ಯಾಂಡ್ ಸಹ ವಿಚಿತ್ರವಾಗಿರುತ್ತದೆ.
ನಗರಕ್ಕೆ ಜನರು ಎಲ್ಲೆಲ್ಲಿಂದಲೋ ಬರುವ ಕಾರಣ ಮನೆ ಮಾಲೀಕರು (House owner) ಸಹ ಕಣ್ಣುಮುಚ್ಚಿ ಮನೆ ಬಾಡಿಗೆಗೆ (Rent) ಕೊಡಲಾಗುವುದಿಲ್ಲ. ಅವರ ಕುರಿತಾಗಿ ವಿಚಾರಿಸಬೇಕಾಗುತ್ತದೆ. ಇಲ್ಲದಿದ್ದರೆ ಯಾವುದಾದರೂ ದುಷ್ಕೃತ್ಯ ಎಸಗಿದರೆ ಅದಕ್ಕೆ ಮನೆ ಮಾಲೀಕರೇ ಹೊಣೆಯಾಗಬೇಕಾಗುತ್ತದೆ. ಅದರಲ್ಲೂ ಬ್ಯಾಚುಲರ್ಸ್ ಅಂದ್ರೆ ಮನೆ ಕೊಡೋಕೆ ಮಾಲೀಕರು ಹಿಂದೇಟು ಹಾಕ್ತಾರೆ. ಬಾಡಿಗೆದಾರರ ಧರ್ಮ, ಲಿಂಗ, ವೈವಾಹಿಕ ಸ್ಥಿತಿಯ ಬಗ್ಗೆ ವಿಚಾರಿಸಿಕೊಳ್ತಾರೆ. ಆದರೆ ಇತ್ತೀಚಿಗೆ ಮನೆ ಓನರ್ಸ್ ಇದೆಲ್ಲವನ್ನೂ ಬಿಟ್ಟು ವಿಚಿತ್ರ ಮಾಹಿತಿಗಳನ್ನು ಕೇಳುತ್ತಿದ್ದಾರೆ. ತಿಂಗಳುಗಳ ಹಿಂದೆ ಬೆಂಗಳೂರಿನ ಮನೆ ಮಾಲೀಕರು ಬಾಡಿಗೆದಾರರ ಲಿಂಕ್ಡ್‌ಇನ್ ಪ್ರೊಫೈಲ್‌ನ್ನು ಕೇಳಿದ್ದ ವಾಟ್ಸಾಪ್ ಸಂದೇಶ ಎಲ್ಲೆಡೆ ವೈರಲ್ ಆಗಿತ್ತು. ಹಾಗೆಯೇ ಈ ಬಾರಿ ಇನ್ನೊಬ್ಬ ಮನೆ ಮಾಲೀಕರು ಬಾಡಿಗೆದಾರರ ಪಿಯುಸಿ ಮಾರ್ಕ್ಸ್ ಕಾರ್ಡ್‌ನ (Puc marks card) ಮಾಹಿತಿ ಕೇಳಿದ್ದಾರೆ.
ಅರೆ..ಹೀಗೂ ಮಾಡ್ತಾರಾ.ಬೆಂಗಳೂರಿನಲ್ಲಿ ಬಾಡಿಗೆ ಮನೆಗಾಗಿ ಕಿಡ್ನಿ ಮಾರಾಟಕ್ಕಿಟ್ಟ ವ್ಯಕ್ತಿ!
ಯೋಗೇಶ್ ಎಂಬ ವ್ಯಕ್ತಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದಾಗ ಇಂಥಾ ಅನುಭವವಾಗಿದೆ. 12ನೇ ತರಗತಿಯಲ್ಲಿ ಕಡಿಮೆ ಅಂಕಗಳಿಸಿದ ಕಾರಣಕ್ಕಾಗಿ ಈತನಿಗೆ ಬಾಡಿಗೆ ಮನೆ ಕೊಡಲಾಗುವುದಿಲ್ಲ ಎಂದು ಓನರ್ ಹೇಳಿದ್ದಾರೆ. ಟ್ವಿಟರ್ ಬಳಕೆದಾರ ಶುಭ್ ಎಂಬವರು ಮನೆ ಮಾಲೀಕರ ವಾಟ್ಸಾಪ್ ಮೆಸೇಜ್‌ನ್ನು ಟ್ವಿಟರ್‌ಬಲ್ಲಿ ಹಂಚಿಕೊಂಡಿದ್ದಾರೆ. 'ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದ ತನ್ನ ಸೋದರ ಸಂಬಂಧಿಗೆ ಪಿಯುಸಿಯಲ್ಲಿ ಅಂಕ ಕಡಿಮೆಯಿದೆ ಎಂದು ಹೇಳಿ ಮನೆ ನೀಡಲು ನಿರಾಕರಿಸಲಾಗಿದೆ. ಅವನಿಗೆ 12ನೇ ತರಗತಿಯಲ್ಲಿ 76% ಅಂಕವಿತ್ತು ಮತ್ತು ಮಾಲೀಕರು ಕನಿಷ್ಠ 90% ಅನ್ನು ನಿರೀಕ್ಷಿಸುತ್ತಿದ್ದರು. ಇದು ಬಾಡಿಗೆ ಮನೆ ನೀಡದಿರಲು ಕಾರಣವಾಗಿದೆ' ಎಂದು ಹೇಳಿಕೊಂಡಿದ್ದಾರೆ.
ಬ್ರೋಕರ್ ವಾಟ್ಸಾಪ್ ಚಾಟ್ ಸ್ಕ್ರೀನ್‌ಶಾಟ್‌ನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. 'ಅಂಕಗಳು ನಿಮ್ಮ ಫ್ಯೂಚರ್ ನಿರ್ಧರಿಸುವುದಿಲ್ಲ. ಆದರೆ ಈ ಅಂಕಗಳು ನಿಮಗೆ ಬೆಂಗಳೂರಿನಲ್ಲಿ ಮನೆ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತದೆ' ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ. ವಾಟ್ಸಾಪ್ ಚಾಟ್ ಪ್ರಕಾರ, ಮನೆ ಮಾಲೀಕರು ಯೋಗೇಶ್‌ನ ಲಿಂಕ್ಡ್‌ಇನ್, ಟ್ವಿಟರ್ ಪ್ರೊಫೈಲ್ ಹಾಗೂ ಉದ್ಯೋಗಕ್ಕೆ ಸೇರುವ ಆಫರ್ ಲೆಟರ್ ನೋಡಲು ಬಯಸಿದ್ದರು. ಇದರ ಜತೆಯಲ್ಲೇ ಗುರುತಿನ ದಾಖಲೆಗಳ ಜೊತೆಗೆ 10ನೇ ಮತ್ತು 12ನೇ ಅಂಕಪಟ್ಟಿಗಳನ್ನು ತೋರಿಸಲು ಕೇಳಿಕೊಂಡರು. ಮಾತ್ರವಲ್ಲ ಮನೆ ಮಾಲೀಕರು ಯೋಗೇಶ್ ತನ್ನ ಕುರಿತಾಗಿ 150-200 ಪದದ ಪರಿಚಯವನ್ನು ಬರೆಯುವಂತೆ ಒತ್ತಾಯಿಸಿದರು.
ಬೆಂಗಳೂರಲ್ಲಿ ಬಾಡಿಗೆಗೆ ಮನೆ ಕೊಡೋಕೆ ಲಿಂಕ್ಡ್‌ಇನ್ ಪ್ರೊಫೈಲ್ ಕೇಳಿದ ಓನರ್, ಪೋಸ್ಟ್ ವೈರಲ್
ಈಗಾಗಲೇ ಬೆಂಗಳೂರಿನಲ್ಲಿ ಬಾಡಿಗೆಗೆ ಮನೆ ಹುಡುಕುತ್ತಿರುವ ಸಂಕಷ್ಟ Peak Bengaluru ಎಂಬ ಹೆಸರಲ್ಲಿ ವೈರಲ್ ಆಗುತ್ತಿದೆ. ಹಾಗಯೇ ಸದ್ಯ ಈ ಪೋಸ್ಟ್ ಸಹ ವೈರಲ್ ಆಗುತ್ತಿದ್ದು ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.