ಕಬ್ಬಿಣದ ಕಾವಲಿಗಳು ಆರೋಗ್ಯಕರವಾದರೂ, ಬಿಸಿಯಾಗಿರುವಾಗ ಅದರ ಮೇಲೆ ತಣ್ಣೀರು ಸುರಿಯುವುದು 'ಥರ್ಮಲ್ ಶಾಕ್' ಉಂಟುಮಾಡುತ್ತದೆ. ಇದರಿಂದಾಗಿ ಸೂಕ್ಷ್ಮ ಕಾರ್ಬನ್ ಕಣಗಳು ಬಿಡುಗಡೆಯಾಗಿ, ಆಹಾರದ ಮೂಲಕ ದೇಹವನ್ನು ಸೇರಿದರೆ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು.
ಕಬ್ಬಿಣದ ಕಾವಲಿಗಳಲ್ಲಿ ದೋಸೆ, ಚಪಾತಿ, ರೋಟಿ... ಹೀಗೆ ಹಲವು ತಿನಿಸುಗಳನ್ನು ಬಹುತೇಕ ಮಂದಿಯ ಮನೆಯಲ್ಲಿ ಮಾಡುತ್ತಾರೆ. ಇದು ಅತ್ಯಂತ ಆರೋಗ್ಯಕರವೂ ಹೌದು. ಕಬ್ಬಿಣದ ಕಾವಲಿಯ ಮೇಲೆ ಮಾಡುವ ತಿನಿಸಿನಿಂದ ಹಲವು ರೀತಿಯ ಪ್ರಯೋಜನ ಇವೆ. ನಾನ್ ಸ್ಟಿಕ್ ಪಾತ್ರೆಗಳಲ್ಲಿ ದೋಸೆ, ರೋಟಿ, ಚಪಾತಿ ಮಾಡುವುದು ಕಬ್ಬಿಣ ಕಾವಲಿಗಿಂತಲೂ ಅತ್ಯಂತ ಸುಲಭ ಹಾಗೂ ಎಣ್ಣೆ ಕೂಡ ಹೆಚ್ಚು ಬೇಡ. ಆದರೆ ನಾನ್ ಸ್ಟಿಕ್ ಪಾತ್ರೆಗಳನ್ನು ದೀರ್ಘಕಾಲ ಉಪಯೋಗಿಸಿದರೆ ಕ್ಯಾನ್ಸರ್ನಂಥ ಮಾರಣಾಂತಿಕ ರೋಗಕ್ಕೂ ತುತ್ತಾಗಬಹುದು. ಅದು ಗೀರು ಬಿಟ್ಟಾಗ ಅದರ ಮೇಲೆಯೇ ತಿನಿಸು ಮಾಡಿದರೆ, ಅದಕ್ಕಿಂತ ಅಪಾಯ ದೇಹಕ್ಕೆ ಮತ್ತೊಂದಿಲ್ಲ ಎನ್ನುವುದು ಇದಾಗಲೇ ಸಾಬೀತಾಗಿದೆ. ಈ ಬಗ್ಗೆ ವೈದ್ಯರು ಕೂಡ ಸಾಕಷ್ಟು ಎಚ್ಚರಿಕೆ ಕೊಡುತ್ತಲೇ ಇದ್ದಾರೆ.
ಈ ಸತ್ಯವನ್ನು ಅರಿತವರು ಕಬ್ಬಿಣದ ಮೊರೆ ಹೋಗುತ್ತಿದ್ದಾರೆ. ಅಷ್ಟಕ್ಕೂ 40-50 ವರ್ಷಗಳ ಹಿಂದೆ ಈ ನಾನ್ಸ್ಟಿಕ್ ಎನ್ನುವ ಕಲ್ಪನೆಯೇ ಇರಲಿಲ್ಲ ಎನ್ನುತ್ತಾರೆ ಹಿರಿಯರು. ಆದರೆ ಈಗಿನ ಪೀಳಿಗೆಗೆ ನೋಡಲು ಚೆಂದ ಇರಬೇಕು, ಮಾಡಲು ಈಸಿ ಇರಬೇಕು ಎನ್ನುವ ಕಾರಣಕ್ಕೆ ಅನಾರೋಗ್ಯಕರವಾಗಿರುವುದೆಲ್ಲಾ ಉತ್ಪಾದನೆ ಮಾಡುತ್ತಿರುವ ಕಾರಣದಿಂದಲೇ ಬಹುತೇಕ ಮಂದಿ ಕ್ಯಾನ್ಸರ್ನಂಥ ಭೀಕರ ರೋಗಕ್ಕೆ ತುತ್ತಾಗುತ್ತಿರುವುದನ್ನು ಎಲ್ಲರೂ ನೋಡುತ್ತಲೇ ಇರುತ್ತೇವೆ. ಅಷ್ಟಕ್ಕೂ ನಮ್ಮ ಅನಾರೋಗ್ಯಕ್ಕೆ ಸಂಬಂಧಿಸಿದ ಬಹಳಷ್ಟು ವಿಷಯಗಳು, ಅನಾರೋಗ್ಯದ ಮೂಲ ಕೇಂದ್ರ ಅಡುಗೆ ಮನೆ ಎನ್ನುವುದು ಕೂಡ ಅಷ್ಟೇ ದಿಟ.
ಕಾವಲಿ ಮೇಲೆ ಬಿಸಿ ನೀರು ಅಪಾಯ
ನೀವು ನಾನ್ಸ್ಟಿಕ್ ಪಾತ್ರೆ ಬಳಸುತ್ತಿರಲಿ ಅಥವಾ, ಕಬ್ಬಿಣದ ತವಾನೇ ಬಳಸುತ್ತಿರಲಿ ಒಂದು ವಿಷ್ಯ ನೆನಪಿಡಿ. ಅಷ್ಟಕ್ಕೂ ಕಬ್ಬಿಣದ ತವಾ, ಅತ್ಯಂತ ಆರೋಗ್ಯಕರವಾಗಿರುವುದು ನಿಜವೇ. ಆದರೆ ಇದನ್ನು ಉಪಯೋಗಿಸಿದ ಬಳಿಕ ಅರ್ಥಾತ್ ದೋಸೆ, ಚಪಾತಿ, ರೋಟಿ, ತಾಳಿಪಿಟ್ಟು, ವಡಪೆ... ಇತ್ಯಾದಿಗಳನ್ನು ಮಾಡಿದ ತಕ್ಷಣ ಹೆಚ್ಚಿನವರು ಅದನ್ನು ತೊಳೆಯುವುದಕ್ಕಾಗಿ ನಲ್ಲಿಯ ಕೆಳಗೆ ಇಡುತ್ತಾರೆ. ಅರ್ಥಾತ್ ಕಾವಲಿ ಬಿಸಿ ಇರುವಾಗಲೇ ನೀರು ಬಿಟ್ಟು ಬಿಡುವುದು ಸಹಜ. ಇದರಿಂದ ಕಾವಲಿ ಬಿಸಿ ಇರುವಾಗಲೇ ಎಣ್ಣೆ ಜಿಡ್ಡು ಹೋಗುತ್ತದೆ, ಕಾವಲಿ ಕ್ಲೀನ್ ಆಗುತ್ತದೆ ಎನ್ನುವ ಅನಿಸಿಕೆ.
ವಿಜ್ಞಾನ ಹೇಳುವುದೇನು?
ಆದರೆ, ಇದರ ಹಿಂದಿರೋ ಅಪಾಯಕಾರಿ ಅಂಶದ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಇದರ ಹಿಂದಿರುವ ವಿಜ್ಞಾನವನ್ನು ಸ್ವಲ್ಪ ತಿಳಿದುಕೊಳ್ಳೋಣ. ಕಬ್ಬಿಣವು ತುಂಬಾ ಬಿಸಿಯಾಗಿದ್ದಾಗ ಅದರ ಮೇಲೆ molecules ಅರ್ಥಾತ್ ಅಣುಗಳು ಶೇಖರಣೆ ಆಗಿರುತ್ತವೆ. ಏಕಾಏಕಿ ಬಿಸಿಯಾಗಿರುವ ತವಾದ ಮೇಲೆ ತಣ್ಣೀರು ಹಾಕಿದರೆ ಅದನ್ನು ವಿಜ್ಞಾನದ ಭಾಷೆಯಲ್ಲಿ ಥರ್ಮಲ್ ಶಾಕ್ ಎನ್ನುತ್ತೇವೆ. ಒಳಗಡೆಯಿಂದ ಅದು ಸುಟ್ಟು ಹೋಗುತ್ತದೆ. ಅದರ ಮೇಲೆ ಇರುವ ಸೂಕ್ಷ್ಮಕಾರ್ಬನ್ ಕಣಗಳು, ಅವು ಲೂಸ್ಆಗುತ್ತವೆ. ಅದೇ ಕಾವಲಿಯ ಮೇಲೆ ನೀವು ಮತ್ತೊಮ್ಮೆ ರೋಟಿ, ದೋಸೆ ಮಾಡಿದಾಗ ಅದರ ಮೇಲೆ ಕಪ್ಪು ಬಣ್ಣ ಕುಳಿತುಕೊಳ್ಳುವುದನ್ನು ನೀವು ಸಾಕಷ್ಟು ನೋಡಿರಬಹುದು. ಇದು ಹೊಟ್ಟೆಗೆ ಹೋದರೆ, ಅಪಾಯ ಕಟ್ಟಿಟ್ಟದ್ದೇ. ಮೆಟಲ್ನ ಟಾಕ್ಸಿಕ್ ಕಣಗಳಿಂದ ಮಾರಣಾಂತಿಕ ಕಾಯಿಲೆಗಳು ಬರುತ್ತವೆ.


