ಫ್ರಿಡ್ಜ್‌ನಲ್ಲಿಟ್ಟ ಹಳೆಯ ಪದಾರ್ಥಗಳಿಂದ ಬರುವ ಕೆಟ್ಟ ವಾಸನೆಯನ್ನು ನಿವಾರಿಸಲು ಈ ಲೇಖನವು ಸರಳ ಮನೆಮದ್ದುಗಳನ್ನು ನೀಡುತ್ತದೆ. ಬೇಕಿಂಗ್ ಸೋಡಾ, ವಿನೆಗರ್ ಮತ್ತು ನಿಂಬೆಹಣ್ಣಿನ ಬಳಕೆಯಿಂದ ದುರ್ವಾಸನೆಯನ್ನು ಹೋಗಲಾಡಿಸುವುದು ಹೇಗೆ ಮತ್ತು ಫ್ರಿಡ್ಜ್ ಅನ್ನು ಸದಾ ಸುವಾಸನೆಯಿಂದ ಇರಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಫ್ರಿಡ್ಜ್​ ಎನ್ನೋದು ಹಲವರ ಮನೆಯಲ್ಲಿ ಮಿನಿ ಅಡುಗೆ ಕೋಣೆಯೇ ಆಗಿರುತ್ತದೆ. ಅಡುಗೆ ಮನೆಯಲ್ಲಿ ಇಡುವ ಎಲ್ಲಾ ಸಾಮಗ್ರಿಗಳೂ ಫ್ರಿಡ್ಜ್​ನಲ್ಲಿ ತುಂಬಿರುತ್ತವೆ. ಬೇಳೆ, ಕಾಳುಗಳಿಂದ ಹಿಡಿದು, ನಿನ್ನೆಯ, ಮೊನ್ನೆಯ, ಭವಿಷ್ಯಕ್ಕೆ ಬೇಕಾಗುವ... ಎಲ್ಲಾ ಅಡುಗೆ ಪದಾರ್ಥಗಳೂ ಅದರಲ್ಲಿ ತುಂಬಿರುತ್ತವೆ. ಫ್ರಿಡ್ಜ್​ಗೇನಾದ್ರೂ ಬಾಯಿ ಇದ್ದರೆ, ಅದು ಮನೆಯವರನ್ನು ಎಷ್ಟು ಶಪಿಸುತ್ತಿತ್ತೋ ಎನ್ನುವಷ್ಟರ ಮಟ್ಟಿಗೆ ಕೆಲವರ ಮನೆಯ ಫ್ರಿಡ್ಜ್​ ನೋಡಲು ಸಾಧ್ಯವಾಗದ ರೀತಿಯಲ್ಲಿ ತುಂಬಿ ತುಳುಕಾಡುತ್ತಿರುತ್ತದೆ.

ಇಷ್ಟೆಲ್ಲಾ ತುಂಬಿದ ಮೇಲೆ ವಾಸನೆ ಬರದೇ ಇರುತ್ತಾ? ಅದರಲ್ಲಿಯೂ ಹೆಚ್ಚಾಗಿ ಹಳೆಯ ಪದಾರ್ಥಗಳೇ ಇರುವ ಕಾರಣದಿಂದ ಫ್ರಿಡ್ಜ್​ ಓಪನ್​ ಮಾಡಿದ ತಕ್ಷಣ ಘಂ ಎನ್ನುವ ಪರಿಮಳದ ಬದಲು ಘುಂ ಎನ್ನುವ ಕೆಟ್ಟ ವಾಸನೆ ಬರುತ್ತದೆ. ಮನೆಯಲ್ಲಿ ಯಾರಾದರೂ ನೆಂಟರಿಷ್ಟರು ಬಂದಾಗ, ಅವರ ಎದುರು ಫ್ರಿಡ್ಜ್​ ತೆಗೆಯುವ ಭಯ ಕೂಡ ಇದೇ ಕಾರಣಕ್ಕೆ ಕೆಲವರಿಗೆ ಕಾಡುವುದು ಉಂಟು. ಹಾಗಿದ್ದರೆ, ಇಲ್ಲಿ ಎರಡು ವಿಭಾಗದಲ್ಲಿ ಟಿಪ್ಸ್​ ನೀಡಲಾಗಿದೆ. ಮೊದಲನೆಯದ್ದು ನಿಮ್ಮ ಮನೆಯ ಫ್ರಿಡ್ಜ್​ ಹೀಗೆ ನಾರುತ್ತಿದ್ದರೆ ಅದನ್ನು ಸರಿ ಮಾಡುವುದು ಹೇಗೆ ಎನ್ನುವುದು, ಇನ್ನೊಂದು, ಸದಾ ಫ್ರಿಡ್ಜ್​ ಸುವಾಸನೆಯಿಂದ ಕೂಡಿರಲು ಏನು ಮಾಡಬೇಕು ಎನ್ನುವುದು.

ವಾಸನೆ ಬಾರದಿರಲು ಏನು ಮಾಡಬೇಕು?

- ಒಂದು ಪಾತ್ರೆಯಲ್ಲಿ ಸ್ವಲ್ಪ ಬೇಕಿಂಗ್​ ಸೋಡವನ್ನು ಹಾಕಿ ಅದನ್ನು ಫ್ರಿಡ್ಜ್​ನಲ್ಲಿ ಇದೆ. ಹೀಗೆ ಮಾಡಿದರೆ, ಕೆಟ್ಟ ವಾಸನೆಗಳನ್ನೆಲ್ಲಾ ಈ ಸೋಡಾ ಹೀರಿಕೊಂಡು ಫ್ರಿಡ್ಜ್​ ಕೆಟ್ಟ ವಾಸನೆಯಿಂದ ಮುಕ್ತವಾಗುವ ರೀತಿಯಲ್ಲಿ ಮಾಡುತ್ತದೆ.

- ಒಂದು ಸಣ್ಣ ಬೌಲ್‪ನಲ್ಲಿ ವೈಟ್ ವಿನೆಗರ್‌ನ್ನು ಫ್ರಿಡ್ಜ್‌ನಲ್ಲಿ ದಿನಪೂರ್ತಿ ಇಟ್ಟರೆ, ರೆಫ್ರಿಜರೇಟರ್‌ನ ಕೆಟ್ಟ ವಾಸನೆ ಕ್ರಮೇಣವಾಗಿ ದೂರವಾಗುತ್ತದೆ.

- ನಿಂಬೆ ಹಣ್ಣನ್ನು ಮೂರು ನಾಲ್ಕು ಹೋಳುಗಳನ್ನಾಗಿ ಮಾಡಿ, ಫ್ರಿಡ್ಜ್‌ನ ಪ್ರತಿಯೊಂದು ಸೆಲ್ಫ್‌ನಲ್ಲಿಯೂ ಕೂಡ ಅಲ್ಲಲ್ಲಿ ಇಡಿ. ಒಂದು ದಿನ ಪೂರ್ತಿ ಇದನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಕ್ರಮೇಣವಾಗಿ ರೆಫ್ರಿಜರೇಟರ್‌ನ ಕೆಟ್ಟ ವಾಸನೆ ದೂರವಾಗುತ್ತದೆ.

ಇನ್ನು ಫ್ರಿಜ್​ ಸದಾ ವಾಸನೆಯಿಂದ ಮುಕ್ತವಾಗಿರಲು ಏನು ಮಾಡಬೇಕು ಎನ್ನುವ ಟಿಪ್ಸ್​ ಇಲ್ಲಿ ನೀಡಲಾಗಿದೆ.

- ಮೊದಲು ಫ್ರಿಡ್ಜ್​ನಲ್ಲಿ ಹಳೆಯ ಪದಾರ್ಥಗಳು, ಕೊಳೆತ ಆಹಾರ ಅಥವಾ ಹಣ್ಣು-ತರಕಾರಿಗಳು ಇದ್ದರೆ ತೆಗೆದುಬಿಡಿ. ನಾಳೆ ಎಸೆಯುವ ಬದಲು ಇಂದೇ ಎಸೆಯಿರಿ.

- ಉಳಿದಿರುವ ಆಹಾರಪದಾರ್ಥವನ್ನು ಇಡಲೇಬೇಕಾದರೆ ಏರ್‌ಟೈಟ್ನರ್ ಗಾಜಿನ ಕಂಟೇನರ್‌ನಲ್ಲಿ ಇಟ್ಟು ಅದನ್ನು ಫ್ರಿಡ್ಜ್​ನಲ್ಲಿ ಇಡಿ. ಇಲ್ಲದಿದ್ದರೆ ವಾಸನೆ ಕಟ್ಟಿಟ್ಟದ್ದೇ.

- ಇನ್ನು ಇದಾಗಲೇ ಫ್ರಿಜ್ಡ್​ ವಾಸನೆ ಬಂದಿದ್ದರೆ, ಮೇಲೆ ಹೇಳಿದಂತೆ ಅಡುಗೆ ಸೋಡಾ ಟ್ರಿಕ್ಸ್​ ಬಳಸಿ. ಒಂದು ಬೌಲ್‌ಗೆ ಉಗುರು ಬೆಚ್ಚಗಿನ ನೀರು ಸೇರಿಸಿ, ಅದಕ್ಕೆ ಒಂದೆರಡು ಚಮಚ ಬೇಕಿಂಗ್ ಸೋಡಾ ಹಾಕಿ ಮಿಕ್ಸ್ ಮಾಡಿ, ಸ್ವಲ್ಪ ದಪ್ಪಗೆ ಗಟ್ಟಿಯಾಗುವವರೆಗೆ ಕಲಸಿ. ಬಳಿಕ ಈ ಪೇಸ್ಟ್‌ ಅನ್ನು ಫ್ರಿಡ್ಜ್​ನ ಒಳಬದಿಯ ಎಲ್ಲಾ ಜಾಗ ಗಳಲ್ಲೂ ಉಜ್ಜಿ, ಆಮೇಲೆ ರೆಫ್ರಿಜರೇಟರ್‌ನ ಬಾಗಿಲನ್ನು ಮುಚ್ಚಿ, ಸುಮಾರು ಒಂದು ಗಂಟೆಯವರೆಗೆ ಹಾಗೆ ಯೇ ಬಿಟ್ಟುಬಿಡಿ. ಆಮೇಲೆ, ಮೃದುವಾದ ಬಟ್ಟೆಯನ್ನು ನೀರಿನಲ್ಲಿ, ಅದ್ದಿಕೊಂಡು ಫ್ರಿಡ್ಜ್‌ನ ಒಳಭಾಗ ವನ್ನು ಚೆನ್ನಾಗಿ ಉಜ್ಜಿ, ಸ್ವಚ್ಛ ಮಾಡಿಕೊಳ್ಳಿ. ಈ ಟ್ರಿಕ್ಸ್ ಅನ್ನು ವಾರದಲ್ಲಿ ಒಂದೆರಡು ಬಾರಿಯಾದರೂ ಮಾಡಿದರೆ ಒಳ್ಳೆಯದು.