ಯಾವುದೇ ಸಂಬಂಧಕ್ಕೆ ನಂಬಿಕೆಯೇ ತಳಹದಿ. ದಾಂಪತ್ಯದ ನಡುವೆ ಸುಳ್ಳುಗಳು ನುಗ್ಗಿದಾಗ ಈ ನಂಬಿಕೆಯ ತಳಪಾಯ ಕುಸಿಯುತ್ತದೆ. ಹಲವು ಬಾರಿ ಒಮ್ಮೆ ನಂಬಿಕೆ ಕಳೆದುಕೊಂಡರೆ ಮತ್ತೆ ಗಳಿಸಲಾರದಷ್ಟು ಹದಗೆಡುತ್ತದೆ ಸಂಬಂಧ. ನಂಬಿಕೆಯ ಕನ್ನಡಿ ಒಮ್ಮೆ ಒಡೆದರೆ ಮತ್ತೆ ಕೂಡಿಸುವುದು ಕಷ್ಟ. ಕೆಲವೊಮ್ಮೆ ಅಪಾಯರಹಿತ ಎಂದು ಕಾಣುವ ತೀರಾ ಸಣ್ಣದಾದ ಸುಳ್ಳು ಕೂಡಾ ದಾಂಪತ್ಯವನ್ನು ಒಡೆದು ಛಿದ್ರಗೊಳಿಸುವಷ್ಟು ಶಕ್ತವಾಗಿರುತ್ತದೆ. ಸಂಗಾತಿಯೊಂದಿಗಿನ ಸಹಜೀವನ ಚೆನ್ನಾಗಿರಬೇಕೆಂದರೆ ಈ ಸುಳ್ಳುಗಳನ್ನು ದೂರವಿಡಿ.

1. 'ಎಕ್ಸ್' ಕುರಿತು ಸುಳ್ಳು ಹೇಳುವುದು

ನಿಮ್ಮ ಎಕ್ಸ್ ಜೊತೆ ಇನ್ನೂ ಸಂಪರ್ಕ ಇಟ್ಟುಕೊಂಡಿದ್ದೀರೋ ಇಲ್ಲವೋ ಎಂಬುದು ನಿಮಗೆ ಬಿಟ್ಟಿದ್ದು. ಆದರೆ, ಈ ಕುರಿತು ನಿಮ್ಮ ಈಗಿನ ಪಾರ್ಟ್ನರ್ ಬಳಿ ಸುಳ್ಳು ಹೇಳಿ ಸಿಕ್ಕಿಬಿದ್ದರೆ ಮಾತ್ರ ನಿಮ್ಮ ಲವ್ ಲೈಫ್‌ಗೊಂದು ಫುಲ್‌ಸ್ಟಾಪ್ ಸಿಗುವ ಸಾಧ್ಯತೆಗಳೇ ಹೆಚ್ಚು. ನಂತರದಲ್ಲಿ ನೀವು ಸತ್ಯ ಹೇಳಿದರೂ ಅವರು ನಂಬುವುದಿಲ್ಲ. ಎಕ್ಸ್ ಎಂಬುದು ನಿಮ್ಮ ಬದುಕಲ್ಲಿ ಬಿರುಗಾಳಿ ಎಬ್ಬಿಸದೆ, ಕೇವಲ ಸಿಹಿ ನೆನಪಾಗಿರಲಿ. 

ನಿಮ್ಮ ಎಕ್ಸ್ ಬಳಿ ಹಿಂದಿರುಗಲು ಮನಸ್ಸಾಗುತ್ತಿದೆಯೇ? ನೀವು ಒಂಟಿಯಲ್ಲ...

2. ನೊಂದಾಗಲೂ ಎಲ್ಲ ಸರಿಯಿದೆ ಎನ್ನುವುದು

ಜಗಳವಾಡುವಾಗ ನಿಮ್ಮ ನಿಜವಾದ ಭಾವನೆಗಳನ್ನು ಹತ್ತಿಕ್ಕಿ ಎಲ್ಲ ಸರಿಯಿಂದೆ ಎಂಬಂತೆ ನಟಿಸುತ್ತಿದ್ದೀರಾ? ಭಾವನೆಗಳನ್ನು ಹತ್ತಿಕ್ಕುವುದು, ನಿಧಾನವಾಗಿ ಒಳಗೊಳಗೇ ದ್ವೇಷ ಬೆಳೆಸಿಕೊಳ್ಳುವುದು ಯಾವ ಸಂಬಂಧದಲ್ಲೂ ಒಳ್ಳೆಯದು ಮಾಡಿದ್ದೇ ಇಲ್ಲ. ನೀವಿದನ್ನು ಒಳ್ಳೆಯತನದ ತೋರ್ಪಡಿಕೆ ಎಂದುಕೊಳ್ಳಬಹುದು. ಆದರೆ, ಇದು ಸಂಬಂಧವನ್ನು ವೀಕ್ ಆಗಿಸುತ್ತದೆ.

3. ಅತಿಯಾದ ಫ್ಲರ್ಟಿಂಗ್

ನಿಮ್ಮ ಸಹೋದ್ಯೋಗಿ ಅಥವಾ ಗೆಳೆಯರೊಂದಿಗೆ ಅತಿಯಾಗಿ ಫ್ಲರ್ಟ್ ಮಾಡಿ, ಪಾರ್ಟ್ನರ್ ಈ ಬಗ್ಗೆ ಪ್ರಶ್ನಿಸಿದಾಗ, "ಅವನು ಅಥವಾ ಅವಳು ನನ್ನ ಫ್ರೆಂಡ್ ಅಷ್ಟೇ, ಕ್ಲೋಸ್ ಆಗಿದ್ರೆ ತಪ್ಪಾ? ದೊಡ್ಡ ಮನಸ್ಸಿನಿಂದ ಯೋಚಿಸೋದು ಕಲಿ" ಎಂದು ಅವರ ಮೇಲೇ ತಪ್ಪೆಸೆಯಲು ಹೋದಿರೋ, ಇದು ಖಂಡಿತಾ ಸಭ್ಯ ನಡೆಯಲ್ಲ. ನಿಮ್ಮ ಪಾರ್ಟ್ನರ್ ಇದನ್ನು ಒಮ್ಮೆ ಒಪ್ಪಿಕೊಂಡರೂ ಮುಂದಿನ ಬಾರಿ ನಿಮ್ಮ ಫ್ಲರ್ಟಿಂಗ್ ನಡೆಯಿಂದ ಬೇಸತ್ತು ಅನಾಹುತಗಳಾಗಬಹುದು. 

ಆಕರ್ಷಣೆ ಕುರಿತ 6 ಆಕರ್ಷಕ ಆವಿಷ್ಕಾರಗಳಿವು!

4. ಸಂಬಳದ ಕುರಿತ ಸುಳ್ಳು

ನಿಮ್ಮ ಬಿಂದಾಸ್ ಲೈಫ್‌ಸ್ಟೈಲ್ ಹಾಗೂ ಸಂಬಳದ ಕುರಿತು ಸುಳ್ಳು ಸುಳ್ಳೇ ಕೊಚ್ಚಿಕೊಳ್ಳುವುದು ಒಳ್ಳೆಯ ಫಸ್ಟ್ ಇಂಪ್ರೆಶನ್ ನೀಡಬಹುದು. ಆದರೆ, ಸಂಗಾತಿಯೊಂದಿಗೆ ನೀವು ಜೀವನಪೂರ್ತಿ ಇರಬೇಕು. ನೀವು ಹೇಳಿಕೊಂಡ ಲೈಫ್‌ಸ್ಟೈಲ್ ಜೀವನಪೂರ್ತಿ ನಿಭಾಯಿಸಲಾದೀತೇ? ನಿಮ್ಮ ಸಂಬಳದ ಕುರಿತ ಸುಳ್ಳು ಅವರಿಗೆ ಇಂದಲ್ಲ ನಾಳೆ ತಿಳಿದೇ ತಿಳಿಯುತ್ತದೆ. ನೀವಲ್ಲದ ವ್ಯಕ್ತಿತ್ವವನ್ನು ನಿಮ್ಮದೆಂಬಂತೆ ಬಿಂಬಿಸಿಕೊಳ್ಳುವುದು ಹೆಚ್ಚು ಕಾಲ ಬರುವುದಿಲ್ಲ. ಇಬ್ಬರೂ ಹೇಗಿದ್ದೀರೋ ಹಾಗೆ ಒಬ್ಬರನ್ನೊಬ್ಬರು ಒಪ್ಪಿಕೊಂಡಾಗ ಮಾತ್ರ ಜೀವನ ಸಲೀಸಾಗಲು ಸಾಧ್ಯ.

5. ಲೈಂಗಿಕ ವಿಷಯಗಳು

ನೀವು ಲೈಂಗಿಕ ಜೀವನದಲ್ಲಿ ತೃಪ್ತರಾಗಿಲ್ಲ ಎಂಬುದನ್ನು ಪಾರ್ಟ್ನರ್‌ಗೆ ತಿಳಿಸಲು ವಿಧಾನಗಳಿವೆ. ಅದು ಬಿಟ್ಟು ನೀವು ಅದನ್ನು ಎಂಜಾಯ್ ಮಾಡುತ್ತಿದ್ದೀರಾ ಎಂಬಂತೆ ಬಿಂಬಿಸಿಕೊಳ್ಳುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಸೆಕ್ಸ್ ಕುರಿತ ವಿಷಯಗಳ ಬಗ್ಗೆ ಇಬ್ಬರೂ ಮುಕ್ತವಾಗಿ ಮಾತಾಡಿಕೊಂಡರೆ ಮಾತ್ರ ಇಬ್ಬರೂ ಸಂತೋಷದಿಂದ ಇರಬಹುದು. ಅದು ಬಿಟ್ಟು ಈ ವಿಷಯದಲ್ಲಿ ಯಾವುದೇ ರೀತಿಯ ಸುಳ್ಳುಗಳು ಸಂಬಂಧ ಹಾಳು ಮಾಡುತ್ತವೆ.

ಮದುವೆಯಾಗ್ತಿದೀರಾ? ಹಾಗಾದ್ರೆ ಈ 7 ವಿಷಯಗಳನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡ್ಕೋಬೇಡಿ!

6. ನಿಮ್ಮ ಪಾರ್ಟ್ನರ್ ಇಷ್ಟವೇ ನಿಮ್ಮಿಷ್ಟ ಎಂದು ಸುಳ್ಳಾಡುವುದು

ನಿಮ್ಮ ಸಂಗಾತಿಯನ್ನು ಇಂಪ್ರೆಸ್ ಮಾಡುವ ಸಲುವಾಗಿ, ಅವರಿಗೇನಿಷ್ಟವೋ ಅವೆಲ್ಲವೂ ನಿಮಗಿಷ್ಟ ಎಂದು ಹೇಳಿ ಎಂದಾದರೂ ನಾಟಕವಾಡಿದ್ದೀರಾ? ಆದರೆ, ಎಷ್ಟು ದಿನಗಳ ಕಾಲ ಈ ಸುಳ್ಳನ್ನೇ ನಂಬಿಸಿ ಜೀವಿಸಬಹುದು? ಗಂಭೀರವಾದ ಸಂಬಂಧವೊಂದರಲ್ಲಿ ಫೇಕ್ ಆಗಿ ಬದುಕುತ್ತಿರುವ ಬಗ್ಗೆ ನಿಮಗೆ ಪಶ್ಚಾತ್ತಾಪ ಕಾಡದೆ? ನಿಮ್ಮ ಆಸಕ್ತಿಗಳು ಬೇರೆಂದ ಮಾತ್ರಕ್ಕೆ ಪಾರ್ಟ್ನರ್‌ಗೆ ಅದು ಇಷ್ಟವಾಗುವುದಿಲ್ಲ ಎಂದು ಭಾವಿಸುವುದೇಕೆ? 

7. ನಾನಲ್ಲ, ನೀನೇ

ನಿಮ್ಮ ಯಾವ ತಪ್ಪುಗಳನ್ನೂ ಒಪ್ಪಿಕೊಳ್ಳದೇ, ಅದು ನಿಮ್ಮದೇ ತಪ್ಪು ಎಂದು ಗೊತ್ತಿದ್ದಾಗಲೂ ಪಾರ್ಟ್ನರ್ ಮೇಲೆ ಅದನ್ನು ಸರಾಗವಾಗಿ ಎತ್ತಿ ಹಾಕುವುದು, ಸಂಬಂಧವನ್ನು ಹಾಳು ಮಾಡಿಕೊಳ್ಳಬೇಕೆಂಬ ಆಸೆ ಇದ್ದವರು ಮಾತ್ರ ಮಾಡುವ ಕೆಲಸ! ಇದರಿಂದ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಗೌರವ ಕಡಿಮೆಯಾಗುತ್ತದೆ. ನಿಧಾನವಾಗಿ ನಿಮ್ಮಿಬ್ಬರ ನಡುವಿನ ಭಾವನಾತ್ಮಕ ಬಂಧ ಕಳಚತೊಡಗುತ್ತದೆ. 

'ಆ' ಸಮಯದಲ್ಲಿ ನೋವಾಗುತ್ತಾ? ಈ ನಂಬಿಕೆಗಳಿಗೆ ಹೇಳಿ ಗುಡ್‌ ಬೈ!