ಪ್ರೀತಿಯ ಮುಗಿದ ಅಧ್ಯಾಯವನ್ನು ಮತ್ತೆ ತೆಗೆದು ಪಾರ್ಟ್ 2 ಆರಂಭಿಸಲು ಮನಸ್ಸಾಗುತ್ತಿದೆಯೇ? ಬ್ರೇಕಪ್ ಬಳಿಕ ಮತ್ತೆ ಹಳೆ ಗೆಳತಿ/ಗೆಳೆಯನ ಪ್ರೀತಿಯ ನೆನಪು ಕಾಡತೊಡಗುತ್ತದೆಯೇ? ಅಯ್ಯೋ ತಪ್ಪು ಮಾಡಿಬಿಟ್ಟೆ, ಇವನೇ ನನಗೆ ಸರಿ. ಕ್ಷಮೆ ಕೇಳಿ ಮತ್ತೆ ಒಂದಾಗಲೇ ಎಂದು ಮನಸ್ಸು ಮತ್ತೆ ಮತ್ತೆ ಹೇಳುತ್ತಿದೆಯೇ? ನೀವು ಒಂಟಿಯಲ್ಲ

- ಶೇ.50ರಷ್ಟು ಜೋಡಿಗಳು ಬ್ರೇಕಪ್ ಬಳಿಕ ಮತ್ತೆ ಒಂದಾಗುತ್ತವೆ. 'ಸೋಷ್ಯಲ್ ಸೈಕಲಾಜಿಕಲ್ ಆ್ಯಂಡ್ ಪರ್ಸನಾಲಿಟಿ ಸೈನ್ಸ್' ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನಗಳ ವರದಿಯ ಪ್ರಕಾರ, ಬ್ರೇಕಪ್ ಬಳಿಕ ಎಷ್ಟು ಜೋಡಿಗಳು ಬೇರೆ ಬೇರೆ ಹಾದಿ ಹಿಡಿಯುತ್ತವೋ, ಅಷ್ಟೇ ಸಂಖ್ಯೆಯ ಜೋಡಿಗಳು ಮೊದಲಿನ ಸಂಬಂಧಕ್ಕೆ ಮರಳುತ್ತವೆ ಎಂದು ತಿಳಿಸಿದೆ. ಈ ಕುರಿತ ಕಾರಣಗಳನ್ನು ವಿವರಿಸಿದ ಕೆಲ ಅಧ್ಯಯನಗಳ ಕುರಿತು ಇಲ್ಲಿದೆ...

ಆಕರ್ಷಣೆ ಕುರಿತ 6 ಆಕರ್ಷಕ ಆವಿಷ್ಕಾರಗಳಿವು!

ಅಧ್ಯಯನಗಳು

ಬ್ರೇಕಪ್ ಬಳಿಕ ಮತ್ತೆ ತಮ್ಮ ಹಳೆ ಪ್ರೀತಿಯನ್ನು ಹುಡುಕಿ ಹೋಗಿದ್ದಕ್ಕೆ ಕಾರಣಗಳೇನು ಎಂದು ಉಟಾ ಹಾಗೂ ಟೊರೊಂಟೊ ವಿಶ್ವವಿದ್ಯಾಲಯದ ಸಂಶೋಧಕರು ಕೇಳಿದ ಪ್ರಶ್ನೆಗೆ ಜೋಡಿಗಳು ಸುಮಾರು 27 ರೀತಿಯ ವಿವಿಧ ಕಾರಣಗಳನ್ನು ನೀಡಿದ್ದಾರೆ. ಇನ್ನು ಬೇರೆಯಾಗಲು 23 ಕಾರಣಗಳನ್ನು ನೀಡಿದ್ದಾರೆ. ಈ ಎರಡೂ ನಿರ್ಧಾರಗಳ ಹಿಂದಿರುವ ಕೆಲ ಸಾಮಾನ್ಯ ಕಾರಣಗಳು ಇಲ್ಲಿವೆ.

ಪ್ರಮುಖ ಕಾರಣಗಳು

ಶೇ.68 ಜೋಡಿಗಳು ತಮಗೆ ಹಳೆಯ ಲವರ್ ಜೊತೆ ಇದ್ದ ಭಾವನಾತ್ಮಕ ಬಾಂಧವ್ಯಕ್ಕಾಗಿ ಅವರ ಬಳಿ ಹಿಂದಿರುಗಿದ್ದಾಗಿ ಹೇಳಿದ್ದಾರೆ. ಅಲ್ಲದೆ, ತಾವು ತಮ್ಮ ಎಕ್ಸ್ ಲವರ್ ಮೇಲೆ ಎಷ್ಟು ಅವಲಂಬಿತರಾಗಿದ್ದೆವು ಎಂಬುದು ದೂರಾದಾಗಲೇ ತಿಳಿದಿದ್ದು. ಈ ಅವಲಂಬನೆಯನ್ನು ದೂರ ಮಾಡಿಕೊಳ್ಳುವುದು ಕಷ್ಟ. ಅವರಿಲ್ಲದೆ ಬದುಕುವುದು ಕಷ್ಟ ಎಂದೂ ಈ ಜೋಡಿಗಳು ವಿವರಿಸಿದ್ದಾರೆ. ಇದು ಬಹಳ ಕಾಮನ್ ಕಾರಣವಲ್ಲವೇ?

ಸಂಬಂಧ ಹಾಳು ಮಾಡಿಕೊಳ್ಳದೆ ಹೊಟ್ಟೆಕಿಚ್ಚಿನ ಸಂಗಾತಿಯನ್ನು ನಿಭಾಯಿಸೋದು ಹೇಗೆ?

ಭವಿಷ್ಯ

ಈಗಾಗಲೇ ಭವಿಷ್ಯದ ಕುರಿತು ಬಾಯ್‌ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್ ಜೊತೆ ಕನಸು ಕಟ್ಟಿರುತ್ತಾರೆ. ಭವಿಷ್ಯ ಹೀಗೆಯೇ ಇರುತ್ತದೆ ಎಂಬುದೊಂದು ಕಲ್ಪನೆ ಇರುತ್ತದೆ. ಆದರೆ, ಬಹಳ ಜೋಡಿಗಳು ಬ್ರೇಕಪ್ ಬಳಿಕ ತಮ್ಮ ಭವಿಷ್ಯ ಏನೆಂದು ಎಷ್ಟು ಯೋಚಿಸಿದರೂ ಏನೂ ಕಾಣುವುದಿಲ್ಲ. ಇದರಿಂದ ಭಯಗೊಳ್ಳುತ್ತಾರೆ. ಅಲ್ಲದೆ, ಒಬ್ಬರೇ ಇರಲಾಗುತ್ತದೆಯೇ, ಅಥವಾ ಯಾರೋ ಅಪರಿಚಿತರೊಂದಿಗೆ ತಾವು ಹೊಂದಿಕೊಳ್ಳಬಹುದೇ, ಅವರನ್ನು ಸಂಗಾತಿ ಎಂದು ಒಪ್ಪಿಕೊಳ್ಳಬಹುದೇ ಎಂಬ ಪ್ರಶ್ನೆಗಳೇ ಆತಂಕಕಾರಿ. ಜೊತೆಗೆ, ಬ್ರೇಕಪ್ ಬಳಿಕ ಕಾಡುವ ಒಂಟಿತನ, ದುಃಖ, ನೋವು ಇವೆಲ್ಲವನ್ನೂ ನಿಭಾಯಿಸಲಾಗದೆ ಒದ್ದಾಡುವವರು ಹಲವರು. ಜಗಳ, ವಿರಸ ಏನೇ ಇದ್ದರೂ ಸಂಬಂಧದಲ್ಲಿದ್ದಾಗಲೇ ಖುಷಿಯಾಗಿದ್ದೆ ಎಂಬ ಭಾವನೆ ಇವರನ್ನು ಕಾಡುವುದು ಕೂಡಾ ಮತ್ತೆ ತಮ್ಮ ಎಕ್ಸ್- ಪಾರ್ಟ್ನರ್ಸ್ ಬಳಿ ಹಿಂದಿರುಗಲು ಒಂದು ಕಾರಣ. 

ಇತರೆ ಕಾರಣಗಳು

ತಮ್ಮ ಎಕ್ಸ್ ಬದಲಾಗಬಹುದಲ್ಲಾ, ಅವನ ಯಾವ ನಡತೆಯಿಂದ ತಾವು ಬ್ರೇಕಪ್ ಮಾಡಿಕೊಂಡೆವೋ ಅದು ಬದಲಾಗುತ್ತದೆ, ನಾವು ಚೆನ್ನಾಗಿರಬಲ್ಲೆವು ಎಂಬ ಯೋಚನೆ, ಇದುವರೆಗೂ ಆ ಸಂಬಂಧದಲ್ಲಿ ಮಾಡಿದ ಭಾವನಾತ್ಮಕ ಹೂಡಿಕೆ, ಒಬ್ಬರಿಗೆ ನಮ್ಮನ್ನು ಅರ್ಥೈಸಲು ಹಾಕಿದ ಶ್ರಮ ಮುಂತಾದ ಕಾರಣಗಳೂ ಮತ್ತೆ ಹಳೆಯ ಸಂಬಂಧಕ್ಕೆ ಹಿಂದಿರುಗುವಂತೆ ಮಾಡುತ್ತವೆ. ಜೊತೆಗೆ, ಸದಾ ಕಾಲ ಬ್ರೇಕಪ್ ವಿಷಯದಲ್ಲಿ ತಾವು ತೆಗೆದುಕೊಂಡ ನಿರ್ಧಾರ ತಪ್ಪೋ, ಸರಿಯೋ ಎಂಬ ಅನುಮಾನ ಸಿಕ್ಕಾಪಟ್ಟೆ ಹಿಂಸೆ ಮಾಡುತ್ತಿರುತ್ತದೆ.

ಇದಲ್ಲದೆ, ಬ್ರೇಕಪ್ ಬಳಿಕ ಮತ್ತೊಬ್ಬರು ಹೊಸ ಹೊಸ ಸ್ನೇಹಿತರನ್ನು ಮಾಡಿಕೊಂಡು ಖುಷಿಯಾಗಿದ್ದರೆ, ಅದನ್ನು ನೋಡಿ ಸಹಿಸಲು ಸಾಧ್ಯವಾಗುವುದಿಲ್ಲ. ವಿಚಿತ್ರ ಎನಿಸಬಹುದು, ಆದರೆ, ತಾವು ದುಃಖದಲ್ಲಿರುವಾಗ ಎಕ್ಸ್ ಖುಷಿಯಾಗಿರುವುದು ನೋಡಿ ಜಗಳವಾಡಿಯಾದರೂ ಸರಿ, ಅವರ ಬದುಕಲ್ಲಿ ಮರುಪ್ರವೇಶ ಪಡೆಯಲು ಯತ್ನಿಸಿ ಗೆಲ್ಲುವವರು ಕೆಲವರು. ಇನ್ನು ಎಲ್ಲ ಸಂಬಂಧಗಳಲ್ಲೂ ಒಂದಿಷ್ಟು ಮರೆಯಲಾಗದ ನೆನಪುಗಳು, ಅನುಭವಗಳಿರುತ್ತವೆ. ವ್ಯಕ್ತಿಯಿಂದ ದೂರಾದ ಬಳಿಕ ಈ ಹಿತಾನುಭವಗಳೇ ಪದೇ ಪದೆ ಕಾಡಲಾರಂಭಿಸುತ್ತವೆ. ಸ್ವಲ್ಪ ಸಮಯ ಹೋದಂತೆಲ್ಲ, ತಮ್ಮ ಸಂಬಂಧ ಚೆನ್ನಾಗಿಯೇ ಇತ್ತಲ್ಲ ಎನಿಸತೊಡಗುತ್ತದೆ. ಇದೂ ಕೂಡಾ ಮತ್ತೆ ಎಕ್ಸ್ ಜೊತೆ ಸೇರಲು ಕಾರಣವಾಗುತ್ತದೆ. 

ವಿವಾಹಕ್ಕೂ ಮುಂಚೆ ನಿಮ್ಮ ಬಾಯ್‌ಫ್ರೆಂಡ್ ಜೊತೆ ಈ ಅನುಭವ ಇದ್ರೆ ಒಳ್ಳೇದು!

ಜೊತೆಯಾಗದವರು

ಶೇ.38ರಷ್ಟು ಜನರು ತಮ್ಮ ಸಂಗಾತಿ ನಂಬಿಕೆ ಅನರ್ಹ ಎಂಬ ಕಾರಣದಿಂದ ಬ್ರೇಕಪ್ ಆಗಿದ್ದವರು ಮತ್ತೆ ಪ್ಯಾಚ್ ಅಪ್ ಮಾಡಿಕೊಳ್ಳಲು ಸಿದ್ಧರಿರುವುದಿಲ್ಲ. ಇನ್ನು ಹೀಗೆ ಬ್ರೇಕಪ್ ಬಳಿಕ ಮತ್ತೆ ಹಳೆ ಸಂಗಾತಿ ಜೊತೆ ಸಂಪರ್ಕ ಸಾಧಿಸದಿರಲು ಇತರೆ ಕಾರಣಗಳೆಂದರೆ ಪದೇ ಪದೆ ಜಗಳ, ಅವಮಾನ, ಹೆಚ್ಚುತ್ತಲೇ ಸಾಗಿದ ಭಾವನಾತ್ಮಕ ದೂರ ಇತ್ಯಾದಿ. ಇದೆಲ್ಲದರ ಹೊರತಾಗಿಯೂ ಎಕ್ಸ್ ಬಳಿ ಹಿಂದಿರುಗದ ಶೇ.49ರಷ್ಟು ಜೋಡಿಗಳು ಮಿಕ್ಸ್ಡ್ ಫೀಲಿಂಗ್ಸ್ ವ್ಯಕ್ತಪಡಿಸಿದ್ದಾರೆ.