Asianet Suvarna News Asianet Suvarna News

ಆಕರ್ಷಣೆ ಕುರಿತ 6 ಆಕರ್ಷಕ ಆವಿಷ್ಕಾರಗಳಿವು!

ಮನುಷ್ಯರಿಗೆ ಕೆಲವೊಬ್ಬರು ಮಾತ್ರ ಏಕೆ ಆಕರ್ಷಕವೆನಿಸುತ್ತಾರೆ, ಮತ್ತೆ ಕೆಲವರು ಎಷ್ಟೇ ಸುಂದರವಿದ್ದರೂ ಆಕರ್ಷಕವೆನಿಸುವುದಿಲ್ಲ ಎಂಬುದಕ್ಕೆ ಅವರ ಜೀನ್ಸ್, ಅನುಭವಗಳು, ಆ ಕ್ಷಣದ ಮನಸ್ಥಿತಿ ಮುಂತಾದ ವಿಷಯಗಳು ಕೆಲಸ ಮಾಡುತ್ತವೆ. 
 

6 Unexpected Facts About Attraction
Author
Bangalore, First Published Aug 22, 2019, 3:30 PM IST

ಸೌಂದರ್ಯ ಎನ್ನುವುದು ನೋಡುವವರ ಕಣ್ಣುಗಳಲ್ಲಿದೆ ಎಂಬುದು ಜನಜನಿತ ಮಾತು. ಒಬ್ಬರಿಗೆ ಆಕರ್ಷಕವೆನಿಸಿದ್ದು ಮತ್ತೊಬ್ಬರಿಗೆ ಕಾಣಿಸಬೇಕೆಂದಿಲ್ಲ. ಈ ಆಕರ್ಷಣೆಯ ಹಿಂದೆ ಹಲವಾರು ಸಂಗತಿಗಳು ಕೆಲಸ ಮಾಡುತ್ತವೆ. ಆರೋಗ್ಯಕರ ದೇಹ ಬಹುಷಃ ಎಲ್ಲರಿಗೂ ಆಕರ್ಷಕವೆನಿಸುತ್ತದೆ. ಆದರೆ, ಬಣ್ಣ, ಆಕಾರ, ಚರ್ಮ, ಕೂದಲು, ಬಾಡಿ ಲಾಂಗ್ವೇಜ್ ಮುಂತಾದ ಸಂಗತಿಗಳಿಂದಾಗಿ ಒಬ್ಬೊಬ್ಬರು ಕೆಲವೊಬ್ಬರಿಗೆ ಆಕರ್ಷಕವೆನಿಸುತ್ತಾರೆ. 

1. ಮಕ್ಕಳ ಆಕರ್ಷಣೆಯಲ್ಲಿದೆ ಅಪ್ಪಅಮ್ಮನ ವಯಸ್ಸಿನ ಪಾತ್ರ

ಪೋಷಕರು 30ರ ವಯಸ್ಸಿನಲ್ಲಿರುವಾಗ ಜನಿಸಿದ ಮಕ್ಕಳು ವಯಸ್ಸಿಗೆ ಬಂದಾಗ ವಯಸ್ಸಾದ ಮುಖಗಳು ಹೆಚ್ಚು ಆರ್ಷಕವಾಗಿ ಕಾಣುತ್ತವೆ. ಆದರೆ, 18-20ರ ವಯೋಮಾನದ ಪೋಷಕರಿಗೆ ಹುಟ್ಟಿದ ವ್ಯಕ್ತಿಯು ಯೌವನದಲ್ಲಿರುವವರನ್ನೇ ಆಕರ್ಷಕ ಎಣಿಸುತ್ತಾನೆ ಎಂದು ಸ್ಕಾಟ್‌ಲ್ಯಾಂಡ್‌ನ ಸೇಂಟ್ ಆಂಡ್ರಿವ್ಸ್ ಯೂನಿವರ್ಸಿಟಿ ನಡೆಸಿದ ಸಂಶೋಧನೆ ತಿಳಿಸಿದೆ. ಅಂದರೆ, ಸ್ವಲ್ಪ ವಯಸ್ಸಾದ ಪೋಷಕರಿಗೆ ಜನಿಸಿದ ಕಾಲೇಜಿಗೆ ಹೋಗುವ ಯುವತಿಗೆ ಸಣ್ಣ ವಯಸ್ಸಿನ ಗೆರೆಗಳು ಮೂಡಿರುವ, ಮೆಚ್ಯೂರ್ಡ್ ಮುಖ ಹೆಚ್ಚು ಆಕರ್ಷಕವೆನಿಸುತ್ತದೆಯಂತೆ. ಇನ್ನು ಯುವಕರ ತಾಯಿ ಇನ್ನೂ ಯಂಗ್ ಆಗಿದ್ದರೆ, ಅವರು ಸಣ್ಣ ವಯಸ್ಸಿನ ಜೀವನಸಂಗಾತಿಯನ್ನೇ ಇಷ್ಟಪಡುತ್ತಾರೆ. 

ದಾಂಪತ್ಯದಲ್ಲಿ ಬೇಡ ವಿರಸ; ಅನುದಿನವೂ ಇರಲಿ ಸರಸ!

2. ಕಣ್ಣುಗಳ ಪಾತ್ರ

ಕಣ್ಣಿನ ಕಪ್ಪು ಸರ್ಕಲ್ ಸುತ್ತ ಔಟ್‌ಲೈನ್ ಹೆಚ್ಚು ಡಾರ್ಕ್ ಆಗಿ ಹೈಲೈಟ್ ಆಗಿರುವವರತ್ತ ಯುವಕರು ಹಾಗೂ ಯುವತಿಯರಿಬ್ಬರೂ ಬೇಗ ಆಕರ್ಷಣೆಗೊಳಗಾಗುತ್ತಾರೆ ಎಂಬುದು ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಕಣ್ಣಿನ ಕಪ್ಪು ಭಾಗ ಹೆಚ್ಚು ಕಪ್ಪಾಗಿದ್ದು, ದಪ್ಪನೆಯ ಔಟ್‌ಲೈನ್ ಹೊಂದಿದ್ದಾಗ ಬಿಳಿ ಭಾಗ ಹಾಗೂ ಕಣ್ಣಿನ ಹೊಳಪು ಹೆಚ್ಚಾಗಿ ತೋರುತ್ತದೆ. ಇದು ಯೌವನ ಹಾಗೂ ಆರೋಗ್ಯಯುತವೆನಿಸುತ್ತದೆ. ಇದರಿಂದ ಅಂಥವರ ಕಣ್ಣುಗಳು ಇತರರದಕ್ಕಿಂತ ಆಕರ್ಷಕವೆನಿಸುತ್ತವೆ. ಅಂದ ಹಾಗೆ, ಟೀನೇಜ್‌ನಲ್ಲಿ ಈ ಔಟ್‌ಲೈನ್(ಲಿಂಬಲ್ ರಿಂಗ್ಸ್) ಹೆಚ್ಚು ಒತ್ತಾಗಿರುತ್ತದೆ. 

3. ಪ್ರೊಮೋಷನ್

ಬಹುತೇಕ ಕಂಪನಿಗಳಲ್ಲಿ ದೊಡ್ಡ ಸಂಬಳದ ಕೆಲಸ ಹಾಗೂ ದೊಡ್ಡ ಪೊಸಿಶನ್ ಬಹಳ ಆಕರ್ಷಕವಾಗಿರುವವರೇ ನಿರ್ವಹಿಸುತ್ತಿರುತ್ತಾರೆ. ಇದಕ್ಕೆ ಕಾರಣ, ಎಚ್ಆರ್ ಮ್ಯಾನೇಜರ್‌ಗಳು ಕೂಡಾ ಆಕರ್ಷಕವೆನಿಸುವ ವ್ಯಕ್ತಿಯ ಬಲೆಯಿಂದ ಹೊರಬರಲಾಗದೆ, ಅವರನ್ನೇ ಉದ್ಯೋಗಕ್ಕೆ ಆರಿಸುತ್ತಾರೆ. ನಂತರ ಪ್ರಮೋಶನ್ ಕೊಡುವಾಗ ಕೂಡಾ ಈ ಆಕರ್ಷಣೆ ಕೆಲಸ ಮಾಡುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ. 

ಅತಿಯಾದರೆ ಹಸ್ತಮೈಥುನವೂ ಡೇಂಜರಸ್...ಜೋಪಾನ!

4. ಹಸಿವು ಆಕರ್ಷಣೆಯನ್ನು ಬದಲಿಸಬಲ್ಲದು

ಹಸಿವಾಗಿರುವಾಗ ಹುಡುಗರು ಸ್ವಲ್ಪ ದಪ್ಪಗಿರುವ, ಹೆಚ್ಚು ತೂಕದ ಯುವತಿಯರನ್ನು ಆಕರ್ಷಕವೆಂದರೆ, ಹೊಟ್ಟೆ ತುಂಬಿದ ಯುವಕರು ಸಾಮಾನ್ಯ ತೂಕದ ಯುವತಿಯರನ್ನು ಆಕರ್ಷಕ ಎನ್ನುತ್ತಾರಂತೆ. ಮಾರ್ಟಿನ್ ತೋವಿ ಹಾಗೂ ವೀರೇನ್ ಸ್ವಾಮಿ ನಡೆಸಿದ ಸಂಶೋಧನೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಅಂದರೆ ಆಕರ್ಷಣೆ ಎನ್ನುವುದು ಆಗಾಗ ಬದಲಾಗುತ್ತದೆ ಎಂದಾಯ್ತು. ಒತ್ತಡದ ಸಮಯದಲ್ಲಿ ಕೂಡಾ ಯುವಕರು ಸ್ವಲ್ಪ ದಪ್ಪಗಿರುವ, ರೌಂಡಾಗಿರುವ ಯುವತಿಯರನ್ನು ಆರಿಸುತ್ತಾರಂತೆ. ಇದು ಬಹುಷಃ ವ್ಯಕ್ತಿಯು ಹಸಿವು, ಭಯ, ಒತ್ತಡ, ಅನುಮಾನದಲ್ಲಿರುವಾಗ ತಮ್ಮನ್ನು ಸಂಭಾಳಿಸಬಲ್ಲಂಥ ಹೆಚ್ಚು ಸ್ವತಂತ್ರವಾದ, ಶಕ್ತಿ ಹೊಂದಿದ, ನಿಯಂತ್ರಿಸುವಂಥ ಯುವತಿಯರೆಡೆಗೆ ಅವರು ಆಕರ್ಷಿತರಾಗುತ್ತಾರೆ ಎಂದು ಅಧ್ಯಯನ ಹೇಳಿದೆ. 

5. ದೇಹ ಮ್ಯಾಜಿಕ್ ಮಾಡಬಲ್ಲದು

ಒಂದು ಬಾರ್‌ನಲ್ಲಿ ಸುಮಾರಿಗೆ ಅಂದವಿರುವ ಯುವತಿಯಿದ್ದರೆ ಆಕೆಯನ್ನು ನಾಲ್ಕು ಪುರುಷರು ಬಂದು ಮಾತಾಡಿಸಬಹುದು ಅಥವಾ ಆಕೆಯತ್ತ ಗಮನ ಹರಿಸಬಹುದು. ಆದರೆ, ಇದರಲ್ಲಿ ಆಕೆಯ ಬಾಡಿ ಲಾಂಗ್ವೇಜ್ ಕೆಲಸ ಮಾಡುತ್ತದೆ ಎಂದು ಮೋನಿಕಾ ಮೂರ್ ನಡೆಸಿದ ಅಧ್ಯಯನ ತಿಳಿಸಿದೆ. ಅದರಂತೆ ಕೂದಲ ಮೇಲೆ ಕೈಯಾಡಿಸುವ, ಹುಬ್ಬೇರಿಸಿಕೊಂಡು ನಗುವ, ಕೈಕಾಲು ಅಲುಗಾಡಿಸುವ, ಕತ್ತನ್ನು ಅತ್ತಿತ್ತ ಆಡಿಸುವ ಮಹಿಳೆಯತ್ತ ಪುರುಷರು ಹೆಚ್ಚು ಕಂಫರ್ಟ್ ಆಗಿ ಹೋಗಿ ಮಾತನಾಡಬಲ್ಲರು. ಆದರೆ, ಮಹಾಸುಂದರಿಯೇ ಆಗಿದ್ದರೂ ಆಕೆ ಏನೂ ಮಾಡದೆ ಸುಮ್ಮನೆ ಕುಳಿತಿದ್ದರೆ ಆಕೆಯತ್ತ ಯಾರೂ ಆಕರ್ಷಿತರಾಗುವುದಿಲ್ಲ ಎಂದು ಮೂರ್ ಕಂಡುಕೊಂಡಿದ್ದಾರೆ. 

6. ಕೆಂಪು ಬಣ್ಣ

ಬೆಳಕಿಗೆ ಹುಳುಗಳು ಆಕರ್ಷಿತವಾಗುವಂತೆ, ಕೆಂಪು ಬಣ್ಣಕ್ಕೆ ನಾವೆಲ್ಲರೂ ಹೆಚ್ಚು ಆಕರ್ಷಿತರಾಗುತ್ತೇವಂತೆ. ಕೆಂಪು ಬಣ್ಣ ಧರಿಸಿದ ಯುವತಿ ಉಳಿದವರಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಾಳೆ ಎಂದು ರೋಚೆಸ್ಟರ್ ಯೂನಿವರ್ಸಿಟಿ ನಡೆಸಿದ ಅಧ್ಯಯನದಲ್ಲಿ ಸಾಬೀತಾಗಿದೆ. ಕೆಂಪು ಬಣ್ಣ ಧರಿಸಿದ ಮಹಿಳೆಯರು ಲೈಂಗಿಕವಾಗಿ ಹೆಚ್ಚು ಆ್ಯಕ್ಟಿವ್ ಇರುತ್ತಾರೆಂದು, ಅದು ಫಲವತ್ತತೆಯನ್ನು ಸೂಚಿಸುತ್ತದೆ ಎಂದು ಪುರುಷರು ನಂಬುತ್ತಾರಂತೆ. 

Follow Us:
Download App:
  • android
  • ios