ಮದುವೆಯಾಗ್ತಿದೀರಾ? ಹಾಗಾದ್ರೆ ಈ 7 ವಿಷಯಗಳನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡ್ಕೋಬೇಡಿ!
ಕೆಲವರು ಸೋಷ್ಯಲ್ ಮೀಡಿಯಾಗಳಲ್ಲಿ ತಮ್ಮ ಮದುವೆಯ ಕುರಿತು ಸ್ಟೇಟಸ್ ಮೂಲಕ, ಫೋಟೋ, ವಿಡಿಯೋಗಳ ಮೂಲಕ ಎಷ್ಟೆಲ್ಲ ಹೇಳಿಕೊಳ್ಳುತ್ತಿರುತ್ತಾರೆಂದರೆ, ಅವರು ವಿವಾಹವಾಗಿದ್ದನ್ನೇ ಲೈಫ್‌ಟೈಂ ಅಚೀವ್‌ಮೆಂಟ್ ಎಂದುಕೊಂಡಿದ್ದಾರೇನೋ ಎನಿಸದಿರದು.
ಈ ಸೋಷ್ಯಲ್ ಮೀಡಿಯಾ ಯುಗದಲ್ಲಿ ನಮ್ಮ ಸಾಧನೆಗಳು, ಜೀವನದ ಮೈಲಿಗಲ್ಲುಗಳನ್ನು ಫೇಸ್ಬುಕ್‌ನಲ್ಲಿ ಹಾಕಲಿಲ್ಲವೆಂದ್ರೆ ಬದುಕೇ ಅಪೂರ್ತಿ ಎನಿಸುತ್ತದೆ. ನಮ್ಮ ರಿಲೇಶನ್‌ಶಿಪ್ ಸ್ಟೇಟಸ್‌ನಿಂದ ಹಿಡಿದು ಬರ್ತ್‌ಡೇ ಸೆಲೆಬ್ರೇಶನ್‌ವರೆಗೆ, ಹೋಟೆಲ್ ಭೇಟಿಯಿಂದ ಹಿಡಿದು ಜಿಮ್ ವರ್ಕೌಟ್‌ವರೆಗೆ ಎಲ್ಲವನ್ನೂ ಫೇಸ್ಬುಕ್‌ಗೆ ಹಾಕಿದಾಗಲೇ ಸಮಾಧಾನ.
ಅಂಥದರಲ್ಲಿ ಹೊಸಜೀವನದ ಆರಂಭ ಎಂದೇ ಹೇಳುವ ಮದುವೆಯ ವಿಷಯವನ್ನು ಫೇಸ್ಬುಕ್‌ನಲ್ಲಿ ಹಾಕದೆ ಇರುವುದಾದರೂ ಹೇಗೆ? ಮದುವೆಯಾಗಿದ್ದು ತಿಳಿಸೋದು ಓಕೆ, ಆದರೆ, ಮದುವೆಯ ಕುರಿತ ಇಂಚಿಂಚೂ ಮಾಹಿತಿ ಶೇರ್ ಮಾಡುವುದು ಯಾಕೆ? ವಿವಾಹದಲ್ಲಿ ವಿವಾಹವಾಯಿತೆನ್ನುವುದಷ್ಟೇ ಸಾರ್ವಜನಿಕವಾಗಿರಲಿ, ಉಳಿದಿದ್ದೆಲ್ಲ ವೈಯಕ್ತಿಕವಾಗಿರಲಿ- ಆಗಲೇ ಚೆನ್ನ ಅಲ್ಲವೇ? ವಿವಾಹಕ್ಕೆ ಸಂಬಂಧಿಸಿದಂತೆ ನೀವು ಸೋಷ್ಯಲ್ ಮೀಡಿಯಾಗಳಲ್ಲಿ ಏನು ಹಂಚಿಕೊಳ್ಳಬಾರದು ಎಂಬ ಪಟ್ಟಿ ಇಲ್ಲಿದೆ. ಯಾಕೆ, ಏನು ಗಮನಿಸಿ.
1. ಕೊಚ್ಕೋಬೇಡಿ
ಭಾರತೀಯ ಮದುವೆಗಳೆಂದರೆ ಅಲ್ಲಿ ಮೆಚ್ಚಿಕೊಳ್ಳುವಂಥದ್ದೂ ಇರುತ್ತದೆ, ಅವಮಾನಕಾರಿ ವಿಷಯಗಳೂ ಇರುತ್ತವೆ. ನಿಮ್ಮ ಫ್ರೆಂಡ್ಸ್ ಸರ್ಕಲ್‌ನಲ್ಲಿ ಹಲವರು ವಿಜೃಂಭಣೆಯ ವಿವಾಹದಿಂದ ವಂಚಿತರಾಗಿರಬಹುದು. ಮತ್ತೆ ಕೆಲವರು ಕನಸುಗಳಿಗೆ ಮೂಟೆ ಕಟ್ಟಿ ಎಸೆದಿರಬಹುದು. ಅವರೆದುರು ಹೋಗಿ ನಾನು ಸಭ್ಯಸಾಚಿ ಲೆಹೆಂಗ ತಗೊಂಡು ಧರಿಸಿದ್ದೆ, ನನ್ನ ವೆಡ್ಡಿಂಗ್ ರಿಂಗ್‌ಗೆ 4 ಲಕ್ಷ ಇತ್ಯಾದಿಗಳನ್ನೆಲ್ಲ ಕೊಚ್ಚಿಕೊಳ್ಳುವ ಅಗತ್ಯವಿಲ್ಲ. ನಾಲ್ಕು ಮಂದಿಗೆ ಸಹಾಯ ಮಾಡಿದ್ದನ್ನು ಹೇಳಿಕೊಂಡರಡ್ಡಿ ಇಲ್ಲ, (ಹೇಳಿಕೊಳ್ಳದದಿದ್ದರೆ ಮತ್ತೂ ಉತ್ತಮ) ಇದೇನು ಅಂಥ ಸಾಧನೆಯಲ್ಲವಲ್ಲ!
ಆರೇಂಜ್ಡ್ ಮ್ಯಾರೇಜ್? ಮೊದಲ ಭೇಟಿಯಲ್ಲಿ ಏನೇನು ಪ್ರಶ್ನೆ ಕೇಳ್ಬೇಕು!
2. ಕೌಂಟ್‌ಡೌನ್
'ಕೌಂಟ್‌ಡೌನ್ ಬಿಗಿನ್ಸ್, 7 ಮೋರ್ ಡೇಸ್..' - ನೀವು ಸೆಲೆಬ್ರಿಟಿಯಾಗಿಲ್ಲದ ಹೊರತು ನಿಮ್ಮ ವಿವಾಹದ ಕೌಂಟ್‌ಡೌನ್ ಕಟ್ಟಿಕೊಂಡು ಯಾರಿಗೆ ಏನೂ ಆಗಬೇಕಿಲ್ಲ. ಯಾರೂ ಆ ಬಗ್ಗೆ ಆಸಕ್ತಿಯಿಂದ ಕಾಯುತ್ತಿರುವುದಿಲ್ಲ. ಇನ್ನು ನಿಮ್ಮ ಕುಟುಂಬ, ಗೆಳೆಯರು, ನೆಂಟರಿಷ್ಟರಿಗೆ ಹೇಗಿದ್ದರೂ ವಿವಾಹದ ದಿನ, ದಿನಾಂಕ ಎಲ್ಲವೂ ಗೊತ್ತಿರುತ್ತದೆ. ನಿಮ್ಮ ವಿವಾಹದ ಕುರಿತು ದಿನೇ ದಿನೇ ಸ್ಟೇಟಸ್ ಓದುವುದು ಫ್ರೆಂಡ್‌ಲಿಸ್ಟ್‌ನಲ್ಲಿರುವ ಜನರಿಗೆ ಕಿರಿಕಿರಿ ತರಬಹುದು.
3. ವೆನ್ಯೂ, ಮೆನು ಕುರಿತ ವಿವರ
ಆಹ್ವಾನಿತರಲ್ಲದವರೂ ಮದುವೆಗೆ ಬಂದು ತುಂಬಿಕೊಂಡು ಬೇಕಾಬಿಟ್ಟಿ ತಿಂದು ಹೋಗಲಿ ಎಂಬ ಆಶಯ ನಿಮ್ಮದಾಗಿಲ್ಲದ ಹೊರತು, ಸೋಷ್ಯಲ್ ಮೀಡಿಯಾದಲ್ಲಿ ವಿವಾಹದ ವೆನ್ಯೂ, ಊಟದ ಮೆನು ಇತ್ಯಾದಿ ಸಣ್ಣ ಪುಟ್ಟ ವಿವರಗಳನ್ನು ಹಾಕುವುದು ಉಚಿತವಲ್ಲ. ಕೆಲವೊಂದು ವಿಷಯಗಳು ಎಷ್ಟು ಜನರಿಗೆ ಗೊತ್ತಿರಬೇಕೋ, ಅಷ್ಟೇ ಜನರಿಗೆ ತಿಳಿದಿದ್ದರೆ ಚೆನ್ನ.
4. ಫ್ಯಾಮಿಲಿ ಡ್ರಾಮಾ
ಮದುವೆಗಳೆಂದರೆ ಅಲ್ಲೊಂದಿಷ್ಟು ಫ್ಯಾಮಿಲಿ ಡ್ರಾಮಾಗಳಿರಲೇಬೇಕು. ಅಂಕಲ್ ಒಬ್ಬರು ಕುಡಿದು ತಮಗೆ ಪತ್ನಿ ಇರುವುದನ್ನೇ ಮರೆತಿರಬಹುದು. ಮತ್ಯಾರೋ ಮೈಮೇಲೆ ದೇವರು ಬಂದಂತೆ ಕುಣಿದಿರಬಹುದು, ಆಂಟಿಯೊಬ್ಬರು ಸಾರಿಗೆ ಉಪ್ಪು ಕಡಿಮೆ ಎಂದು ಗಲಾಟೆ ಎಬ್ಬಿಸಿರಬಹುದು, ಮಗದೊಬ್ಬರು ಯಾರದೋ ಚೇರೆಳೆದು ಬೀಳಿಸಿರಬಹುದು. ಅವೆಲ್ಲ ನಿಮಗೆ ಫನ್ನಿ ಎನಿಸಬಹುದು. ಆದ್ದರಿಂದಲೇ ಅದನ್ನು ಫೇಸ್ಬುಕ್‌ನಲ್ಲಿ ಶೇರ್ ಮಾಡಲು ಕೈಬೆರಳು ತುರಿಸಬಹುದು. ಆದರೆ, ಇದು ಒಳ್ಳೆಯದು ಮಾಡುವುದಕ್ಕಿಂತ ಕೆಟ್ಟದು ಮಾಡುವುದೇ ಹೆಚ್ಚು. ಇನ್ನೊಬ್ಬರ ಬಗ್ಗೆ ಪೋಸ್ಟ್ ಮಾಡುವಾಗ ಅವರ ಅನುಮತಿ ಇರಬೇಕು. ತಮಾಷೆ ಎಂದು ಶೇರ್ ಮಾಡಿದರೆ, ತಮಾಷೆ ಹೋಗಿ ಅಮಾಸೆ ಯಾದೀತು. ಎರಡು ನಿಮಿಷದ ನಗುವಿಗೆ ನೀವು ಹಾಕಿದ್ದು, ಜೀವನಪರ್ಯಂತ ಅವರ ಬದುಕಿನ ಮೇಲೆ ಪರಿಣಾಮ ಬೀರೀತು. ನೀವು ಪೋಸ್ಟ್ ಮಾಡುವ ಸಂಗತಿಗಳ ಕುರಿತು ಸ್ವಲ್ಪ ಸೆನ್ಸಿಟಿವ್ ಆಗಿ ಯೋಚಿಸಿ.
ಒಂದು ಮುತ್ತಿನ ಕತೆ ; ಅರ್ಧ ಮುಗಿದ ದಾರಿ
5. ಹೊಸ ಕುಟುಂಬದ ಕುರಿತು ಮದುವೆಗೆ ಮುಂಚೆಯೇ ವಿವರ ಹಾಕುವುದು
ನೀವು ನಿಮ್ಮ ಭಾವಿ ಅತ್ತೆ ಮಾವನ ಜೊತೆ ಬಹಳ ಸಲುಗೆಯಿಂದಿರಬಹುದು, ಹಾಗಂತ ಅವರೊಂದಿಗೆ ಊಟ ಮಾಡಿದ್ದು, ಶಾಪಿಂಗ್ ಹೋಗಿದ್ದು ಎಲ್ಲವನ್ನೂ ಮದುವೆಗೂ ಮುನ್ನವೇ ಫೇಸ್ಬುಕ್‌ನಲ್ಲಿ ಹಾಕಿಕೊಳ್ಳಬೇಡಿ. ಅವರು ನಿಮ್ಮ ವರ್ಚ್ಯುಯಲ್ ವರ್ಲ್ಡ್ ಸೇರಲು ಇಷ್ಟಪಡದಿರಬಹುದು. ಯಾವುದೇ ಸಂಬಂಧ ಅಫೀಶಿಯಲ್ ಆಗದೆ, ಆ ಕುರಿತು ಕೊಚ್ಚಿಕೊಳ್ಳುವುದು ಥರವಲ್ಲ.
6. ಇ-ಇನ್ವೈಟ್
ಈಗ ಬಹುತೇಕ ಜನರು ಸೋಷ್ಯಲ್ ಮೀಡಿಯಾದಲ್ಲಿ ಇ-ಇನ್ವೈಟ್ ತಯಾರಿಸಿ, ಅದನ್ನು ಪಬ್ಲಿಕ್ ಸೆಟಿಂಗ್ಸ್‌ನಲ್ಲಿಡುತ್ತಾರೆ. ಇದರಿಂದ ಪ್ರತಿಯೊಬ್ಬರೂ ಗೆಸ್ಟ್ ಲಿಸ್ಟ್ ನೋಡಬಹುದು. ಆದರೆ, ಮಿಸ್ ಆಗಿ ಹೋದವರು ಇದನ್ನು ನೋಡಿ ಬೇಸರಿಸಿಕೊಳ್ಳುವುದಿಲ್ಲವೇ? ಇ-ಇನ್ವೈಟ್‌ಗಳ ಪ್ರಯೋಜನ ಪಡೆಯಬೇಕು, ಆದರೆ ಸೆಟ್ಟಿಂಗ್ಸ್ ಯಾವಾಗಲೂ ಪ್ರೈವೇಟ್ ಆಗಿರಬೇಕು.
7. ನಿಮ್ಮ ಹನಿಮೂನ್ ಪ್ಲ್ಯಾನ್
ನಿಮ್ಮ ಹನಿಮೂನ್ ನಿಮ್ಮನ್ನು ಆಕಾಶದಲ್ಲೇ ತೇಲಿಸುತ್ತಿರಬಹುದು. ಆದರೆ, ನೀವು ಮೈಸೂರು ಅರಮನೆಯಲ್ಲಿ ಮದುವೆ ನಂತರದ ದಿನಗಳನ್ನು ಕಳೆಯುತ್ತಿದ್ದೀರೋ ಅಥವಾ ಐಸ್‌ಲ್ಯಾಂಡ್‌ನ ರೆಸಾರ್ಟ್‌ನಲ್ಲಿ ಕಳೆಯುತ್ತಿದ್ದೀರೋ ಎಂಬ ಬಗ್ಗೆ ಬೇರೆ ಯಾರಿಗೂ ಅಷ್ಟು ಆಸಕ್ತಿ ಇರದು. ಅಲ್ಲದೆ, ಈ ಜೀವಮಾನದಲ್ಲಿ ಮರೆಯಲಾಗದ ಕ್ಷಣಗಳನ್ನು ವೈಯಕ್ತಿಕವಾಗಿಟ್ಟರೇ ಚೆನ್ನ ಅಲ್ಲವೇ? ಎಲ್ಲಿ ಹೋಗಿದ್ದಿರಿ, ಅಲ್ಲೇನಾಯಿತು ಎಂಬುದೆಲ್ಲ ನಿಮ್ಮಿಬ್ಬರ ಅನುಭವ, ನೆನಪುಗಳಲ್ಲಿ ಸದಾ ಹಸಿರಾಗಿದ್ದರೆ ಹೆಚ್ಚು ಅಮೂಲ್ಯ ಎನಿಸುತ್ತದೆ.