ಮೆಡಿಟೇಶನ್ ಗೊತ್ತು. ಕುಳಿತುಕೊಂಡು ಏಕಾಗ್ರತೆ ಸಾಧಿಸಿ ಮಾಡುವಂಥದು. ಆದರೆ ಏನಪ್ಪಾ ಇದು ವಾಕಿಂಗ್ ಮೆಡಿಟೇಶನ್? ನಡೆದಾಡುತ್ತಲೇ ಧ್ಯಾನ ಮಾಡುವ ಹೊಸ ಸಾಧನವೇ ವಾಕಿಂಗ್ ಮೆಡಿಟೇಶನ್. ಏನು ನಡೆಯುತ್ತಲೇ ಧ್ಯಾನ ಮಾಡೋದಾ? ಸಾಧ್ಯನಾ ಇದು ಎಂದ್ರಾ? 

ಒಮ್ಮೆ ಯೋಚಿಸಿ, ತಲೆ ಗಜಿಬಿಜಿಯಾದಾಗ ಹೋಗಿಬಂದ ಆ ಒಂದು ವಾಕ್ ನಿಮ್ಮನ್ನು ಅದೆಷ್ಟು ರಿಫ್ರೆಶ್ ಮಾಡಿತ್ತಲ್ಲವೇ? ನಿಜವೆಂದರೆ ನಡಿಗೆಯೇ ಒಂದು ವಿಧದ ಧ್ಯಾನ. ಅದಕ್ಕೆ ನೀವು ಧ್ಯಾನವನ್ನೂ ಸೇರಿಸಿದಿರಾದರೆ, ಅದು ಖಂಡಿತಾ ಸಮಾಧಾನ ಕೊಡೋ ವಿಧಾನ. ವಾಕಿಂಗ್ ಹಾಗೂ ಮೆಡಿಟೇಶನ್ ಎರಡನ್ನೂ ಮಿಳಿತಗೊಳಿಸಿದರೆ ಖಂಡಿತಾ ಲಾಭ ಕೂಡಾ ಡಬಲ್ ಡಬಲ್ ಆಗೇ ಸಿಗುವುದು. ಇಲ್ಲಿ ನಿಮ್ಮ ಧ್ಯಾನ ನಿಮ್ಮ ನಡಿಗೆಯ ಮೇಲೆ, ಕಾಲುಗಳೆರಡನ್ನು ಇಡುವ ವೇಗ, ಶೈಲಿಯ ಮೇಲೆಯೇ ಹಬ್ಬಿರುತ್ತದೆ. ಇದು ಧ್ಯಾನಾವಸ್ಥೆಗೆ ನೂಕುತ್ತದೆ. 

ವೆಹಿಕಲ್ ಬಿಟ್ಟು ವಾಕಿಂಗ್ ಮಾಡಿ; ಈ ಆ್ಯಪ್‌ಗಳೇ ನಿಮ್ಮಗೆ ದುಡ್ಡು ಕೊಡುತ್ವೆ!

ಈ ವಾಕಿಂಗ್ ಮೆಡಿಟೇಶನ್ ಎಂದರೇನು, ಇದು ಹೇಗೆ ಕೆಲಸ ಮಾಡುತ್ತದೆ, ಮಾಡುವುದು ಹೇಗೆ ಎಂದೆಲ್ಲ ವಿವರವಾಗಿ ತಿಳ್ಕೋಬೇಕಾ? ಮುಂದೆ ಓದಿ...ಸುಮ್ಮನೆ ನಡೆದರೆ ಸಾಲುವುದಿಲ್ಲ. ವಾಕಿಂಗ್  ಮೆಡಿಟೇಶನ್ಗಾಗಿ ನೀವು ಕೆಲ ಸ್ಟೆಪ್‌ಗಳನ್ನು ಫಾಲೋ ಮಾಡಬೇಕಾಗುತ್ತದೆ ಅದನ್ನಿಲ್ಲಿ ಕೊಡಲಾಗಿದೆ.

1. ಉತ್ತಮ ಸ್ಥಳ ಹುಡುಕಿ

ವಾಕಿಂಗ್ ಮೆಡಿಟೇಶನ್‌ಗಾಗಿ ಉತ್ತಮವಾದ ಸ್ಥಳ ಆಯ್ದುಕೊಳ್ಳಿ. ನಿಮ್ಮ ಗಮನ ಸೆಳೆವ ವಸ್ತುಗಳ್ಯಾವುವೂ ಇಲ್ಲದಂತ ಪ್ರಶಾಂತ ವಾತಾವರಣ ಹುಡುಕಿ. ರಸ್ತೆಬದಿ ಇಲ್ಲವೇ ಗಿಜಿಗುಡವ ತಾಣಗಳ್ಯಾವುವೂ ಬೇಡ. ಕನಿಷ್ಠ ಪಕ್ಷ 20-30 ಹೆಜ್ಜೆಗಳನ್ನಿಡುವಷ್ಟು ಜಾಗವಿದ್ದರೂ ಆದೀತು. ದಟ್ಟವಾಗಿ ಹಬ್ಬಿದ ಮರಗಳಿರುವ ಮಾನವನಿರ್ಮಿತ ಸದ್ದುಗಳಿಲ್ಲವಾದ ತಾಣವಾದರೆ ಮತ್ತಷ್ಟು ಒಳ್ಳೆಯದು. 

2. ಸರಿಯಾದ ವಿನ್ಯಾಸ ಬೇಕು

ಸುಮ್ಮನೇ ಪ್ರಶಾಂತ ವಾತಾವರಣದಲ್ಲಿ ನಡೆಯುವುದಲ್ಲ. ನಡಿಗೆಗೊಂದು ನಿರ್ದಿಷ್ಟ ವಿನ್ಯಾಸ ಇರಬೇಕು. ಆಗ ಮಾತ್ರ ನಿಮ್ಮ ದೇಹ ಹಾಗೂ ಮನಸ್ಸು ಒಂದೇ ಕಡೆ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ಒಂದೇ ವೇಗದಲ್ಲಿ 100 ಹೆಜ್ಜೆ ನಡೆದು ಒಂದು ಜಾಗಕ್ಕೆ ತಲುಪಬೇಕು. ನಂತರ ಒಂದೆರಡು ನಿಮಿಷ ಬ್ರೇಕ್ ನೀಡಿ ಮುಂಚಿನದೇ ವೇಗದಲ್ಲಿ ಎಲ್ಲಿಂದ ಶುರು ಮಾಡಿದ್ದಿರೋ ಅಲ್ಲಿಗೆ 100 ಹೆಜ್ಜೆಗಳಲ್ಲಿ, ಅಷ್ಟೇ ಸಮಯದಲ್ಲಿ ಹೋಗಬೇಕು. ಇದೇ ರೀತಿಯಾಗಿ ಹಲವಾರು ಬಾರಿ ಕನಿಷ್ಠ ಅರ್ಧ ಗಂಟೆ ಮಾಡಿ. 

ಫ್ರೀಯಾಗಿದ್ದೇ ಫಿಟ್ ಆಗಿರ್ಬೇಕಾ? ಜಿಮ್, ಜುಂಬಾ ಬಿಟ್ಹಾಕಿ...

3. ಪ್ರತಿ ಹೆಜ್ಜೆಯ ಮೇಲೂ ನಿಗಾ ಇರಲಿ\

ನೀವೊಂದು ವಿನ್ಯಾಸದಲ್ಲಿ ನಡಿಗೆ ಆರಂಭಿಸಿದ ಮೇಲೆ ಪ್ರತಿ ಹೆಜ್ಜೆಯ ಮೇಲೂ ಸಂಪೂರ್ಣ ಗಮನವಿರಬೇಕು. ಸಾಮಾನ್ಯವಾಗಿ ನೀವು ನಡೆಯುವಾಗ ಗಮನಿಸದ ಸಣ್ಣ ಸಣ್ಣ ಸಂಗತಿಗಳನ್ನು ಹೆಜ್ಜೆ ಇಡುವಾಗ ಗಮನಿಸಬೇಕು. ಕಾಲನ್ನೆತ್ತುವುದು, ಮುಂದೆ ತೆಗೆದುಕೊಂಡು ಹೋಗುವುದು, ನೆಲಕ್ಕೆ ಊರುವುದು, ಅಷ್ಟರಲ್ಲಿ ಮತ್ತೊಂದು ಕಾಲು ಎಲ್ಲಿ ಯಾವ ರೀತಿಯಲ್ಲಿ ಮುಂದೆ ಬರುತ್ತಿರುತ್ತದೆ, ನೆಲದ ಸ್ಪರ್ಶ ಹೇಗನಿಸುತ್ತಿದೆ, ದೇಹದ ತೂಕ ಹೇಗೆ ಕಾಲಿನಿಂದ ಕಾಲಿಗೆ ಬದಲಾಗುತ್ತಿದೆ - ಪ್ರತಿಯೊಂದನ್ನೂ ಗಮನಿಸಿ. 

4. ಒಂದೇ ವೇಗ ಇರಲಿ

ನಿಮಗೆ ಯಾವುದೇ ಸ್ಥಳ ಸೇರಬೇಕಾಗಿಲ್ಲ ಎಂಬಂತೆ ವಾಕ್ ಮಾಡಿ. ಅಂದರೆ ನಿಧಾನವಾಗಿ, ಯಾವುದೇ ಗಡಿಬಿಡಿಯಿಲ್ಲದೆ ಶಾಂತಭಾವದಿಂದ ವಾಕ್ ಮಾಡಿ. ನೈಸರ್ಗಿಕವಾಗಿ ಹೇಗೆ ನಡಿಗೆ ಬರುತ್ತಿದೆಯೋ ಅಂತೆಯೇ ಮಾಡಿ. ಅದಕ್ಕೆ ಹೊಸ ಸ್ಟೈಲ್ ಸೇರಿಸುವ ಅಗತ್ಯವಿಲ್ಲ. ಆದರೆ, ಆರಂಭದಿಂದ ಕೊನೆವರೆಗೂ ಒಂದೇ ವೇಗವಿರಲಿ. ನಡಿಗೆಯ ವೇಗ ನಿಧಾನವಿದ್ದಾಗ ಅದನ್ನು ಗಮನಿಸಲು, ದೇಹದ ಮೇಲೆ ಪ್ರಜ್ಞೆ ಇಟ್ಟುಕೊಳ್ಳಲು ಸಮಯ ಸಿಗುತ್ತದೆ. 

5. ಕೈಗಳ ಬಗ್ಗೆಯೂ ಗಮನವಿರಲಿ

ಈ ಮೈಂಡ್‌ಫುಲ್ ವಾಕ್ ಮಾಡುವಾಗ, ಕಾಲುಗಳ ಕಡೆಯೇ ಹೆಚ್ಚು ಗಮನ ಹೋಗಿರುತ್ತದೆ. ಸಡನ್ ಆಗಿ ಕೈಗಳನ್ನೇನು ಮಾಡಬೇಕು, ಹೇಗೆ ಬೀಸಬೇಕು ಎಂಬೆಲ್ಲ ಗೊಂದಲಗಳು ಶುರುವಾಗಬಹುದು. ಅವುಗಳನ್ನು ಹಲವು ರೀತಿ ಇಟ್ಟುಕೊಳ್ಳಬಹುದು. ಬೆನ್ನ ಹಿಂದೆ ಕಟ್ಟಿಕೊಳ್ಳಬಹುದು ಅಥವಾ ಮುಂದೆ ಜೋಡಿಸಿಕೊಳ್ಳಬಹುದು. ಇಲ್ಲವೇ ಬದಿಯಲ್ಲಿ ತಮ್ಮ ಪಾಡಿಗೆ ತಾವು ಒಂದೇ ಓಘದಲ್ಲಿ ಚಲಿಸಲು ಬಿಡಬಹುದು.

ನಡಿಗೆಯಲ್ಲಿ ವೇಗವಿದ್ದರೆ ಆಯಸ್ಸು ಹೆಚ್ಚಳ!

6. ಏಕಾಗ್ರತೆ ಸಾಧಿಸಿ

ಹೀಗೆ ನಡೆಯುವಾಗ ನೀವು ನಿಮ್ಮ ನಡಿಗೆಯ ಕುರಿತು, ಯೋಚನೆಗಳ ಕುರಿತು ಏಕಾಗ್ರತೆ ಸಾಧಿಸಲು ಸಾಧ್ಯವಾದಷ್ಟು ಟ್ರೈ ಮಾಡಿ. ಬರಬರುತ್ತಾ ಏಕಾಗ್ರತೆ ತಾನಾಗಿಯೇ ಸಿದ್ದಿಸುತ್ತದೆ. ಉಸಿರಾಟದ ಗತಿಯನ್ನೂ ಕಾಲುಗಳ ಗತಿಯೊಂದಿಗೆ ಜೋಡಿಸಲು ಯತ್ನಿಸಿ. ಮಧ್ಯೆ ಮಧ್ಯೆ ಮನಸ್ಸು ಬೇರೆ ಕಡೆ ಓಡಬಹುದು. ತಕ್ಷಣ ಅದನ್ನು ಗುರುತಿಸಿ, ಎಳೆತಂದು ಎಲ್ಲಿ ನಿಲ್ಲಿಸಬೇಕೋ ಅಲ್ಲಿ ನಿಲ್ಲಿಸಿ. 

ಅರ್ಧ ಗಂಟೆ ಈ ವಾಕಿಂಗ್ ಮೆಡಿಟೇಶನ್ ಮಾಡಿದ ಬಳಿಕ ನಿಮ್ಮನ್ನು ನೀವೇ ಗಮನಿಸಿಕೊಳ್ಳಿ. ಅದೆಷ್ಟು ಸಮಾಧಾನ, ಪ್ರಶಾಂತತೆ, ಯೋಚನೆಗಳಲ್ಲಿ ಸ್ಪಷ್ಟತೆ ನಿಮಗೆ ಒಲಿದಿರುತ್ತದೆ ಎಂದು ನೋಡಿದರೆ ಖಂಡಿತಾ ಅಚ್ಚರಿ ಪಡುತ್ತೀರಿ. ಮತ್ತೇಕೆ ತಡ? ಇಂದಿನಿಂದಲೇ ವಾಕಿಂಗ್ ಮೆಡಿಟೇಶನ್ ಅಭ್ಯಾಸ ಮಾಡಿಕೊಳ್ಳಿ.