ಕೇರಳದ ಉದ್ಯಮಿ ಡಾ. ಶಿಬಿನ್ ಮ್ಯಾಥ್ಯೂ ಕೇವಲ 60 ದಿನಗಳಲ್ಲಿ 22 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕಟ್ಟುನಿಟ್ಟಾದ ಕ್ಯಾಲೋರಿ ನಿಯಂತ್ರಣ ಮತ್ತು ಹೈ-ಪ್ರೋಟೀನ್ ಆಹಾರ ಕ್ರಮದಿಂದ ಇದು ಸಾಧ್ಯವಾಗಿದ್ದು, ಈ ಕಠಿಣ ಡಯಟ್ ಅನ್ನು ತಜ್ಞರ ಸಲಹೆಯಿಲ್ಲದೆ ಅನುಸರಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ.

ಕೇವಲ 60 ದಿನಗಳಲ್ಲಿ 22 ಕೆಜಿ ತೂಕ ಇಳಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಆದರೆ ಕೇರಳದ ಉದ್ಯಮಿ ಡಾ. ಶಿಬಿನ್ ಮ್ಯಾಥ್ಯೂ ಅವರ ಕಟ್ಟುನಿಟ್ಟಾದ ಶಿಸ್ತು ಮತ್ತು ಕಠಿಣ ಪರಿಶ್ರಮ ಇದನ್ನು ಸಾಧ್ಯವಾಗಿಸಿದೆ. ಅತ್ಯಂತ ಕಟ್ಟುನಿಟ್ಟಾದ ಕ್ಯಾಲೋರಿ ನಿಯಂತ್ರಣ (calorie deficit) ಮತ್ತು ಹೆಚ್ಚಿನ ಪ್ರೋಟೀನ್ ಒಳಗೊಂಡ ಆಹಾರ ಪದ್ಧತಿಯನ್ನು ದಿನವೂ ಪಾಲಿಸುವ ಮೂಲಕ ಅವರು ಈ ಗಮನಾರ್ಹ ಬದಲಾವಣೆ ಕಂಡುಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಾವೂ ಹೇಗೆ 110 ಕೆಜಿಯಿಂದ 88 ಕೆಜಿಗೆ ತೂಕ ಇಳಿಸಿಕೊಂಡೆ ಎಂಬುದನ್ನು ಹಂಚಿಕೊಂಡಿರುವ ಡಾ. ಶಿಬಿನ್ ಮ್ಯಾಥ್ಯೂ, ಈ ಯಶಸ್ಸಿನ ಹಿಂದಿನ ನಿಖರವಾದ ದಿನಚರಿಯನ್ನು ಬಹಿರಂಗಪಡಿಸಿದ್ದಾರೆ. ಆದರೆ ಜೊತೆಯಲ್ಲೇ ಒಂದು ಪ್ರಮುಖ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಕಠಿಣ ಆಹಾರ ಕ್ರಮವನ್ನು ಯಾರೂ ಕುರುಡಾಗಿ ಅನುಕರಿಸಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಡಾ. ಶಿಬಿನ್ ಮ್ಯಾಥ್ಯೂ ತೂಕ ಇಳಿಕೆಯ ದಿನಚರಿ

ತಮ್ಮ ಈ ಯಶಸ್ಸಿನ ಬಗ್ಗೆ ಬರೆದುಕೊಂಡಿರುವ ಶಿಬಿನ್ ಈ ಕಠಿಣ ಶಿಸ್ತನ್ನು ಪಾಲಿಸುವುದು ಕಷ್ಟವಾಗಿತ್ತು, ಆದರೆ ಫಲಿತಾಂಶ ನಿಮ್ಮ ಕಣ್ಣಮುಂದಿದೆ. ಇದನ್ನು ಸಾಧ್ಯವಾಗಿಸಲು ನಾನು ದಿನವೂ ತಪ್ಪದೇ ಪಾಲಿಸಿದ ಹೈ-ಪ್ರೋಟೀನ್ ಆಹಾರ ಕ್ರಮ ಇಲ್ಲಿದೆ ಎಂದು ಬರೆದಿದ್ದಾರೆ. ಅವರ ದಿನನಿತ್ಯದ ಆಹಾರವು ಅತ್ಯಂತ ಸರಳವಾಗಿದ್ದು, ಮೊಟ್ಟೆ, ಚಿಕನ್ ಹಾಗೂ ಹೈ-ಪ್ರೋಟೀನ್ ಮೊಸರನ್ನು ಒಳಗೊಂಡಿತ್ತು.

ಬೆಳಿಗ್ಗೆ

  • 1 ಕಪ್ ಕಾಫಿ 2 ಮೊಟ್ಟೆಗಳು 2 ಸ್ಕೂಪ್ ಹೈ-ಪ್ರೋಟೀನ್ ಮೊಸರು (ಇದಕ್ಕೆ ಚಿಲ್ಲಿ ಆಯಿಲ್ ಸೇರಿಸಲಾಗಿತ್ತು)
  • (ನೀವು ಒಮ್ಮೆ ಪ್ರಯತ್ನಿಸುವವರೆಗೆ ಚಿಲ್ಲಿ ಆಯಿಲ್ ಮತ್ತು ಮೊಸರಿನ ಕಾಂಬಿನೇಷನ್ ಬಗ್ಗೆ ನಿರ್ಧಾರಕ್ಕೆ ಬರಬೇಡಿ ಎಂದು ಶಿಬಿನ್ ಹೇಳುತ್ತಾರೆ)

ಮಧ್ಯಾಹ್ನ

  • 1 ಚಿಕನ್ ಬ್ರೆಸ್ಟ್ (ಕೋಳಿ ಮಾಂಸದ ಭಾಗ) 1 ಮೊಟ್ಟೆ 1 ಸ್ಕೂಪ್ ಹೈ-ಪ್ರೋಟೀನ್ ಮೊಸರು ತಾಜಾ ಸೌತೆಕಾಯಿ

ಸಂಜೆ:

  •  1 ಕಪ್ ಕಾಫಿ

ರಾತ್ರಿ:

  • 1 ಸೇಬು
  • ಎಚ್ಚರಿಕೆ

ತಮ್ಮ ಈ 60 ದಿನಗಳ ಆಹಾರ ಪದ್ಧತಿಯ ಹಿಂದಿನ ಮನಸ್ಥಿತಿಯನ್ನು ವಿವರಿಸಿದ ಅವರು, ಕಟ್ಟುನಿಟ್ಟಾದ ಕ್ಯಾಲೋರಿ ಕೊರತೆ, ಹೆಚ್ಚಿನ ಪ್ರೋಟೀನ್ ಮತ್ತು ಯಾವುದೇ ನೆಪಗಳಿಲ್ಲ (Strict deficit, high protein, zero excuses). ನಿಮ್ಮ ಬದಲಾವಣೆಯ ಪಯಣಕ್ಕೆ ನೀವು ಸಿದ್ಧರಿದ್ದೀರಾ? ಎಂದು ಕೇಳಿದ್ದಾರೆ. ತಮ್ಮ ಸಂಪೂರ್ಣ ಆಹಾರ ಯೋಜನೆಯನ್ನು ಹಂಚಿಕೊಂಡಿದ್ದರೂ, ಇದನ್ನು ಇತರರು ನೇರವಾಗಿ ಕಾಪಿ ಮಾಡಬಾರದು ಎಂದು ಡಾ. ಶಿಬಿನ್ ಎಚ್ಚರಿಸಿದ್ದಾರೆ.

ಇದು ನನ್ನ ವೈಯಕ್ತಿಕ ಗುರಿಗಳಿಗಾಗಿ ರೂಪಿಸಲಾದ ಅತ್ಯಂತ ಕಠಿಣ ಮತ್ತು ಆಕ್ರಮಣಕಾರಿ (aggressive) ಡಯಟ್ ಆಗಿತ್ತು. ಯಾವುದೇ ಕಠಿಣ ಕ್ಯಾಲೋರಿ ನಿಯಂತ್ರಣದ ಕ್ರಮವನ್ನು ಕೈಗೊಳ್ಳುವ ಮುನ್ನ ನಿಮ್ಮ ದೇಹದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಿ ಮತ್ತು ತಜ್ಞರ ಸಲಹೆ ಪಡೆಯಿರಿ" ಎಂದು ಅವರು ಬರೆದಿದ್ದಾರೆ.

ಆರೋಗ್ಯ ತಜ್ಞರು ಏನು ಹೇಳುತ್ತಾರೆ?

ಆರೋಗ್ಯ ತಜ್ಞರ ಪ್ರಕಾರ ಇಷ್ಟು ಕಡಿಮೆ ಅವಧಿಯಲ್ಲಿ ತೀವ್ರ ಪ್ರಮಾಣದಲ್ಲಿ ತೂಕ ಇಳಿಸುವ ಇಂತಹ ಕಟ್ಟುನಿಟ್ಟಾದ ಆಹಾರ ಕ್ರಮಗಳು ಎಲ್ಲರಿಗೂ ಸೂಕ್ತ ಅಥವಾ ಸುರಕ್ಷಿತವಾಗಿರುವುದಿಲ್ಲ. ಪ್ರತಿಯೊಬ್ಬರ ದೇಹದ ಅಗತ್ಯತೆಗಳು ಬೇರೆಯದೇ ಆಗಿರುತ್ತವೆ. ತೂಕ ಇಳಿಸಲು ಹಠಾತ್ ಬದಲಾವಣೆಗಳನ್ನು ಮಾಡುವ ಬದಲು, ಸಮತೋಲಿತ ಆಹಾರ, ನಿಯಮಿತ ಪ್ರೋಟೀನ್ ಸೇವನೆ ಹಾಗೂ ದೀರ್ಘಕಾಲದವರೆಗೆ ಕಾಯ್ದುಕೊಳ್ಳಬಹುದಾದ ಸುಲಭ ಕ್ಯಾಲೋರಿ ನಿಯಂತ್ರಣದ ಪದ್ಧತಿಯನ್ನು ಅನುಸರಿಸುವುದು ಉತ್ತಮ. ಯಾವುದೇ ಹೊಸ ಡಯಟ್ ಪ್ಲಾನ್ ಆರಂಭಿಸುವ ಮುನ್ನ ವೈದ್ಯರು ಅಥವಾ ಪ್ರಮಾಣೀಕೃತ ಆಹಾರ ತಜ್ಞರ (Dietitian) ಸಲಹೆ ಪಡೆಯುವುದು ಅಗತ್ಯವಾಗಿದೆ.

View post on Instagram