ಕೇವಲ 15 ನಿಮಿಷದಲ್ಲಿ ಮನೆಯಲ್ಲಿಯೇ ಗಟ್ಟಿ ಮತ್ತು ಕೆನೆಭರಿತ ಮೊಸರನ್ನು ತಯಾರಿಸಬಹುದು. ಹೌದು, ಈ ಸುಲಭವಾದ ಟೆಕ್ನಿಕ್‌ನಲ್ಲಿ ನೀವು ಥೇಟ್ ಮಾರುಕಟ್ಟೆಯಂತೆ ಪರ್‌ಫೆಕ್ಟ್ ಮೊಸರನ್ನು ಮಾಡಬಹುದು.
ದೇಹವನ್ನು ತಂಪಾಗಿಸಲು ಮತ್ತು ಹೊಟ್ಟೆಗೆ ಅತ್ಯುತ್ತಮ ಆಹಾರವೆಂದರೆ ಮೊಸರು. ಹಾಗಾಗಿ ಮೊಸರು ಯಾವಾಗಲೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಮನೆಯಲ್ಲಿ ಮೊಸರು ಮಾಡುವ ವಿಷಯಕ್ಕೆ ಬಂದಾಗ ಅನೇಕ ಬಾರಿ ಮೊಸರು ಸರಿಯಾಗಿ ಗಟ್ಟಿಯಾಗುವುದಿಲ್ಲ ಅಥವಾ ನೀರು ಬಿಟ್ಟಂತೆ ಕಾಣುತ್ತದೆ. ಕೆಲವೊಮ್ಮೆ ತೆಳುವಾಗುತ್ತದೆ, ಕೆಲವೊಮ್ಮೆ ಹುಳಿಯಾಗುತ್ತದೆ. ಒಟ್ಟಾರೆ ಅದು ಮೇಲಿನಿಂದ ಗಟ್ಟಿಯಾಗಿರುವಂತೆ ಕಂಡರೂ ಒಳಗೆ ನೀರು ನೀರಾಗಿರುತ್ತದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಮೊಸರು ಮಾಡುವ ಸಹವಾಸ ಬೆಡವೆಂದು ಮಾರುಕಟ್ಟೆಗೆ ತೆರಳುತ್ತಾರೆ. ಆದರೆ ನೀವು ಮಾಡುವ ಮೊಸರು ಅಂಗಡಿಯಲ್ಲಿ ತರುವ ಮೊಸರಿನಂತೆ ಇರಬೇಕೆಂದು ಬಯಸಿದ್ದೇ ಆದಲ್ಲಿ ಈ 15 ನಿಮಿಷಗಳ ಟ್ರಿಕ್ಸ್ ಪ್ರಯತ್ನಿಸಿ.
ಮೊಸರು ಬೇಗನೆ ಗಟ್ಟಿಯಾಗಲು ಸುಲಭವಾದ ಮಾರ್ಗ
ಹಾಲನ್ನು ಕುದಿಸಿ
ಮೊಸರು ಮಾಡುವ ಮೊದಲು ಹಾಲನ್ನು ಚೆನ್ನಾಗಿ ಬಿಸಿ ಮಾಡುವುದು ಮುಖ್ಯ. ಒಂದು ಪಾತ್ರೆಯಲ್ಲಿ ಹಾಲನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಿ. ಹೀಗೆ ಮಾಡುವುದರಿಂದ, ಹಾಲಿನಲ್ಲಿರುವ ಹೆಚ್ಚುವರಿ ನೀರು ಬತ್ತಿಹೋಗುತ್ತದೆ, ಇದರಿಂದಾಗಿ ಮೊಸರು ನಂತರ ಹೆಚ್ಚು ನೀರು ಬಿಡುವುದಿಲ್ಲ ಮತ್ತು ದಪ್ಪವಾಗುತ್ತದೆ.
ಹಾಲನ್ನು ಸ್ವಲ್ಪ ತಣ್ಣಗಾಗಿಸಿ
ಈಗ ಹಾಲನ್ನು ಗ್ಯಾಸ್ ನಿಂದ ತೆಗೆದು ಉಗುರು ಬೆಚ್ಚಗೆ ಬಿಡಿ. ಹಾಲು ತುಂಬಾ ಬಿಸಿಯಾಗಿರಬಾರದು ಅಥವಾ ತುಂಬಾ ತಣ್ಣಗಾಗಬಾರದು ಎಂಬುದನ್ನು ನೆನಪಿನಲ್ಲಿಡಿ. ನೀವು ಅದರಲ್ಲಿ 10 ಸೆಕೆಂಡುಗಳ ಕಾಲ ನಿಮ್ಮ ಬೆರಳನ್ನು ಆರಾಮವಾಗಿ ಇಡಲು ಸಾಧ್ಯವಾದರೆ, ಹಾಲು ಸರಿಯಾದ ತಾಪಮಾನದಲ್ಲಿದೆ ಎಂದು ಅರ್ಥಮಾಡಿಕೊಳ್ಳಿ.
ಮೊಸರು ಸೇರಿಸಿ
ಈಗ ಈ ಹಾಲಿಗೆ 1 ರಿಂದ 2 ಟೀ ಚಮಚ ಫರ್‌ಫೆಕ್ಟ್ ಆಗಿರುವ ಗಟ್ಟಿ ಮೊಸರನ್ನು ಸೇರಿಸಿ. ಮೊಸರು ಹುಳಿಯಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ಮೊಸರನ್ನು ಸೇರಿಸಿದ ನಂತರ, ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಇದರಿಂದ ಅದು ಹಾಲಿನಲ್ಲಿ ಸಮವಾಗಿ ಮಿಶ್ರಣವಾಗುತ್ತದೆ.
ಪಾತ್ರೆ ಮುಚ್ಚಿ
ಮಿಶ್ರಣ ಮಾಡಿದ ಹಾಲಿನ ಪಾತ್ರೆಯನ್ನು ದಪ್ಪ ಮುಚ್ಚಳದಿಂದ ಚೆನ್ನಾಗಿ ಮುಚ್ಚಿ. ಇದು ಒಳಗೆ ಶಾಖವನ್ನು ಉಳಿಸಿಕೊಳ್ಳುತ್ತದೆ ಮತ್ತು ಮೊಸರು ಬೇಗನೆ ಗಟ್ಟಿಯಾಗುತ್ತದೆ.
ಪ್ರೆಶರ್ ಕುಕ್ಕರ್ ಸಹಾಯ ಪಡೆಯಬಹುದು
ಬೇಕಾದರೆ ಪ್ರೆಶರ್ ಕುಕ್ಕರ್ ತೆಗೆದುಕೊಂಡು, ಅದರಲ್ಲಿ ಅರ್ಧ ಗ್ಲಾಸ್ ನೀರು ಸೇರಿಸಿ. ನೀರು ಕುದಿಯಲು ಪ್ರಾರಂಭಿಸಿದಾಗ, ಹಾಲಿನ ಮಿಶ್ರಣದ ಪಾತ್ರೆಯನ್ನು ಅದರಲ್ಲಿ ಇರಿಸಿ. ಕುಕ್ಕರ್‌ನ ಮುಚ್ಚಳವನ್ನು ಹಾಕಿ. ನೆನಪಿಡಿ ಶಿಳ್ಳೆ ಹೊಡೆಸಬೇಡಿ. ಗ್ಯಾಸ್ ಉರಿ ಹೆಚ್ಚಿರಬಾರದು. ಈ ಹಂತದ ಪ್ರಯೋಜನವೆಂದರೆ ಇದು ಮೊಸರಾಗಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ.
ಕೇವಲ 15 ನಿಮಿಷಗಳಲ್ಲಿ ರೆಡಿ
ಕುಕ್ಕರ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಕುಕ್ಕರ್‌ನ ಮುಚ್ಚಳವನ್ನು ತೆರೆದು ಪಾತ್ರೆಯನ್ನು ಹೊರತೆಗೆಯಿರಿ. ಈಗ ಅದನ್ನು ಅಡುಗೆಮನೆಯ ಒಂದು ಮೂಲೆಯಲ್ಲಿ 20-30 ನಿಮಿಷಗಳ ಕಾಲ ಬೆರೆಸದೆ ಇರಿಸಿ, ಇದರಿಂದ ಅದು ಚೆನ್ನಾಗಿ ತಣ್ಣಗಾಗುತ್ತದೆ ಮತ್ತು ಸಂಪೂರ್ಣವಾಗಿ ಗಟ್ಟಿಯಾಗುತ್ತದೆ.
ಈ ಟ್ರಿಕ್ ನ ವಿಶೇಷತೆ ಏನು?
ಈ ವಿಧಾನದಿಂದ 1-2 ಗಂಟೆಗಳ ಕಾಲ ಕಾಯುವ ಅಗತ್ಯವಿಲ್ಲ. ಮೊಸರು ಗಟ್ಟಿ, ಕೆನೆಭರಿತ ಮತ್ತು ಯಾವುದೇ ನೀರನ್ನು ಬಿಡದೆ ಆಗುತ್ತದೆ. ಈ ಟ್ರಿಕ್ ಬೇಸಿಗೆಯಲ್ಲಿ ಬಹಳ ಪರಿಣಾಮಕಾರಿಯಾಗಿದೆ.
ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯ
ಹಾಲು ತುಂಬಾ ಬಿಸಿಯಾಗಿರಬಾರದು ಅಥವಾ ತುಂಬಾ ತಣ್ಣಗಾಗಿರಬಾರದು, ಮೊಸರು ಮಾಡಲು ಬಳಸುವ ಮೊಸರು ತಾಜಾವಾಗಿರಬೇಕು.
ಕುಕ್ಕರ್‌ನಲ್ಲಿ ಸಾಕಷ್ಟು ನೀರು ಇರಬೇಕು. ಆದ್ದರಿಂದ ಕುದಿಯುತ್ತಿದ್ದರೂ ಅದು ಹೊರಗೆ ಚೆಲ್ಲುವುದಿಲ್ಲ.
ಮೊಸರು ಗಟ್ಟಿಯಾದ ನಂತರ, ಅದನ್ನು ತಕ್ಷಣ ಫ್ರಿಜ್‌ನಲ್ಲಿ ಇಡಬೇಡಿ, ಮೊದಲು ಅದನ್ನು ಸಾಮಾನ್ಯ ತಾಪಮಾನಕ್ಕೆ ಬರಲು ಬಿಡಿ.