ತುಮಕೂರಿನಲ್ಲಿ ಶಾಮಿಯಾನ ಹಾಗೂ ಫ್ಲವರ್ ಡೆಕೋರೇಷನ್ ಅಂಗಡಿ ಮಾಲೀಕ ಮಂಜುನಾಥ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದ ಪ್ರಕರಣವನ್ನು ಪೊಲೀಸರು 48 ಗಂಟೆಯೊಳಗೆ ಭೇದಿಸಿದ್ದಾರೆ. ಈ ಸಂಬಂಧ ತಮಿಳುನಾಡು ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತುಮಕೂರು: ಶಾಮಿಯಾನ ಹಾಗೂ ಫ್ಲವರ್ ಡೆಕೋರೇಷನ್ ಅಂಗಡಿ ಮಾಲೀಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ಪ್ರಕರಣವನ್ನು ತುಮಕೂರು ಜಿಲ್ಲಾ ಪೊಲೀಸರು 48 ಗಂಟೆಯೊಳಗೆ ಯಶಸ್ವಿಯಾಗಿ ಬೇಧಿಸಿದ್ದಾರೆ. ಈ ಸಂಬಂಧ ತಮಿಳುನಾಡು ಮೂಲದ ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ತಮಿಳುನಾಡಿನ ಹೊಸೂರು ಬತ್ತಲಪಲ್ಲಿಯ ಸತೀಶ್ ಕುಮಾರ್ (40), ಸೇಲಂ ತಾಲ್ಲೂಕಿನ ಕಡತ್ತೂರು ಗ್ರಾಮದ ಕೇಶವನ್ (43), ದಿಂಡಗಲ್ ತಾಲ್ಲೂಕಿನ ಕವಿತೇಶ್ವರನ್, ಹಾಗೂ ದಿಂಡಗಲ್ ಜಿಲ್ಲೆಯ ಅರುಣ್ ಪ್ರಶಾಂತ್ (26) ಬಂಧಿತ ಆರೋಪಿಗಳು.

ಘಟನೆ ಹೇಗೆ ನಡೆದಿದೆ?

ಹುಳಿಯಾರು ಸಮೀಪದ ಕೆಂಕೆರೆ ಗ್ರಾಮದ ಜಮೀನಿನಲ್ಲಿ ವಾಸವಾಗಿದ್ದ ಮಂಜುನಾಥ್ ಅವರು ಇತ್ತೀಚೆಗೆ ಹೊಸ ಮನೆ ನಿರ್ಮಿಸಿಕೊಂಡು ಕುಟುಂಬದೊಂದಿಗೆ ನೆಲೆಸಿದ್ದರು. ಜನವರಿ 11ರಂದು ರಾತ್ರಿ ಸುಮಾರು 8.30 ಗಂಟೆ ವೇಳೆಗೆ ಮಂಜುನಾಥ್ ಮನೆ ಹೊರಗೆ ಕುಳಿತು ಖಾರಪುರಿ ತಿನ್ನುತ್ತಿದ್ದರು. ಅದೇ ಸಮಯದಲ್ಲಿ ಅವರ ಮಗಳು 5 ವರ್ಷದ ಅನುಷ ಮನೆಯ ಪಕ್ಕದ ನಲ್ಲಿಯ ಬಳಿ ಮುಖಕ್ಕೆ ಮಾಸ್ಕ್ ಧರಿಸಿದ ಇಬ್ಬರು ವ್ಯಕ್ತಿಗಳನ್ನು ಕಂಡು ಕಳ್ಳರು ಬಂದಿದ್ದಾರೆ ಎಂದು ಕೂಗಿದ್ದಾಳೆ. ಇದರಿಂದ ಆತಂಕಗೊಂಡ ಮತ್ತೊಬ್ಬ ಮಗಳು 8 ವರ್ಷದ ಯಶಸ್ವಿ ಮನೆಯೊಳಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಈ ಸಂದರ್ಭ ದುರುಳರು ಮಂಜುನಾಥನ ಮೇಲೆ ಮನಸೋ ಇಚ್ಛೆ ಚಾಕು ಇರಿದು ಕತ್ತಲಲ್ಲಿ ಪರಾರಿಯಾಗಿದ್ದಾರೆ.

ಘಟನೆಯ ವೇಳೆ ಐದು ಜನರು ಮಂಜುನಾಥ್ ಅವರನ್ನು ಹಿಡಿದುಕೊಂಡು ಮನೆ ಬಾಗಿಲು ತೆರೆಯುವಂತೆ ಬೆದರಿಕೆ ಹಾಕಿದ್ದಾರೆ. ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದು, ತಲೆಯನ್ನು ಬಟ್ಟೆಯಿಂದ ಸಂಪೂರ್ಣ ಮುಚ್ಚಿಕೊಂಡು ಕಣ್ಣು ಮಾತ್ರ ಕಾಣುವಂತೆ ಮಾಡಿಕೊಂಡಿದ್ದರು. ಆರೋಪಿಗಳು ಮಂಜುನಾಥನ ಮೊಬೈಲ್ ಫೋನ್ ಕಿತ್ತುಕೊಂಡು, ಚಾಕುವಿನಿಂದ ಪಕ್ಕೆ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಪೊಲೀಸ್ ಕಾರ್ಯಾಚರಣೆ

ಈ ಪ್ರಕರಣದ ತನಿಖೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಡಿಷನಲ್ ಎಸ್ಪಿಗಳಾದ ಪುರುಷೋತ್ತಮ್ ಮತ್ತು ಗೋಪಾಲ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ತಿಪಟೂರು ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಯಶ್ ಕುಮಾರ್ ಶರ್ಮ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ಚಿ.ನಾ.ಹಳ್ಳಿ ಸಿಪಿಐ ಜನಾರ್ಧನ್, ಸಿರಾ ಸಿಪಿಐ ಪ್ರವೀಣ್ ಕುಮಾರ್, ತುಮಕೂರಿನ ಜಯನಗರ ಪಿಎಸ್‌ಐ ತಿರುಮಲೇಶ್, ಹಂದನಕೆರೆ ಪಿಎಸ್‌ಐ ಚಿತ್ತರಂಜನ್, ಸಿರಾ ಠಾಣೆ ಸಿಬ್ಬಂದಿಗಳಾದ ನಾಗರಾಜು, ಭಕ್ತ ಕುಂಬಾರ, ಕೆಂಚರಾಯಪ್ಪ, ಮಂಜುನಾಥಸ್ವಾಮಿ, ಜಯನಗರ ಠಾಣೆಯ ಚಂದ್ರನಾಯ್ಕ, ಅರುಣ್ ಕುಮಾರ್, ಮನುಶಂಕರ್, ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು ಹಾಗೂ ರಮೇಶ್ ಸೇರಿದಂತೆ ಹಲವರು ಸೇರಿದ್ದರು. ಸತತ ಶೋಧ ಕಾರ್ಯಾಚರಣೆ, ತಾಂತ್ರಿಕ ಮಾಹಿತಿ ಹಾಗೂ ಸ್ಥಳೀಯ ಸುಳಿಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಕೆ.ವಿ. ಅಶೋಕ್ ತಿಳಿಸಿದ್ದಾರೆ.