ಬೆಂಗಳೂರಿನಲ್ಲಿ ಅಪಘಾತದಂತೆ ಬಿಂಬಿಸಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಲಾಗಿದೆ. ಬೈಕ್‌ಗೆ ಟೆಂಪೋ ಡಿಕ್ಕಿ ಹೊಡೆಸಿದ ನಂತರ, ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ವೈದ್ಯಕೀಯ ವರದಿಯಿಂದ ಸತ್ಯ ಬಯಲಾಗಿದೆ. ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಜ.16): ಸಿನಿಮಾವೊಂದರ ದೃಶ್ಯದಂತೆ ಸೃಷ್ಟಿಸಲಾದ ಅಪಘಾತದ ಹಿಂದೆ ಭೀಕರ ಕೊಲೆ ಸಂಚು ಅಡಗಿರುವುದು ಬೆಳಕಿಗೆ ಬಂದಿದೆ. ಅಪಘಾತದ ನೆಪದಲ್ಲಿ ವ್ಯಕ್ತಿಯನ್ನು ಮುಗಿಸಲು ಸ್ಕೆಚ್ ಹಾಕಿದ್ದ ತಂಡವೊಂದು, ಮೊದಲು ಬೈಕ್‌ಗೆ ಟೆಂಪೋ ಡಿಕ್ಕಿ ಹೊಡೆಸಿ ನಂತರ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರ

ಸೈಯದ್ ಯಾಸೀನ್ ಹಲ್ಲೆಗೊಳಗಾದ ವ್ಯಕ್ತಿ. ಜನವರಿ 7 ರಂದು ಸಂಜೆ 4 ಗಂಟೆಯ ಸುಮಾರಿಗೆ ಯಾಸೀನ್ ಅವರು ತಮ್ಮ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಉದ್ದೇಶಪೂರ್ವಕವಾಗಿ ಹಿಂಬದಿಯಿಂದ ಬಂದ ಟೆಂಪೋ ಟ್ರಾವೆಲ್ಲರ್ ಇವರ ಬೈಕ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಮೊದಲು ಇದೊಂದು ಸಂಚಾರಿ ನಿಯಮ ಉಲ್ಲಂಘನೆಯ ಅಪಘಾತ ಎಂದು ಭಾವಿಸಿ ಚಿಕ್ಕಜಾಲ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ವೈದ್ಯಕೀಯ ವರದಿಯಿಂದ ಬಯಲಾದ ಸತ್ಯ

ಆದರೆ, ಯಾಸೀನ್ ಅವರ ವೈದ್ಯಕೀಯ ವರದಿಯು ತನಿಖೆಯ ದಿಕ್ಕನ್ನೇ ಬದಲಿಸಿದೆ. ಯಾಸೀನ್ ದೇಹದ ಮೇಲೆ ಕೇವಲ ಅಪಘಾತದ ಗಾಯಗಳಷ್ಟೇ ಅಲ್ಲದೆ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಗಂಭೀರ ಕುರುಹುಗಳು ಪತ್ತೆಯಾಗಿವೆ. ಕಾಲಿನ ಮೂಳೆ ಮುರಿತದ ಜೊತೆಗೆ ಹೊಟ್ಟೆ ಮತ್ತು ಕುತ್ತಿಗೆಯ ಭಾಗದಲ್ಲಿ ದೊಡ್ಡದಾದ ಗಾಯಗಳಾಗಿವೆ. ವಾಹನದಿಂದ ಗುದ್ದಿಸಿದ ನಂತರ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವುದು ದೃಢಪಟ್ಟಿದೆ.

ವೈಯಕ್ತಿಕ ದ್ವೇಷವೇ ಕಾರಣ?

ಯಾಸೀನ್ ತಂದೆ ಸೈಯದ್ ಯೂಸುಫ್ ನೀಡಿದ ದೂರಿನನ್ವಯ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಹಕಶನ್ ಖಾಲಿದ್, ಫರ್ಹಾನ್ ಖಾಲಿದ್, ಉಸ್ಮಾನ್, ಹಾಶಿಮ್ ಮತ್ತು ಸೈಯದ್ ರಾಹಬೆರ್ ಎಂಬುವವರ ಮೇಲೆ ದೂರು ದಾಖಲಾಗಿದೆ. ಮದುವೆಯ ನಂತರ ಉಂಟಾದ ವೈಯಕ್ತಿಕ ದ್ವೇಷವೇ ಈ ಕೊಲೆ ಸಂಚಿಗೆ ಮೂಲ ಕಾರಣ ಎಂದು ಆರೋಪಿಸಲಾಗಿದೆ. ಸದ್ಯ ಚಿಕ್ಕಜಾಲ ಪೊಲೀಸರು ಈ ಐವರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.