ಕೆಂಭಾವಿ ಪಿಎಸ್ಐ ಅಮೋಜಿ ಕಾಂಬಳೆ, ಅಪಘಾತ ಪ್ರಕರಣವನ್ನು ಕೊಲೆ ಎಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಿ ವಿಚಾರಣೆ ವೇಳೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ಕ್ಯಾನ್ಸರ್ ಪೀಡಿತ ವ್ಯಕ್ತಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿ ಪೊಲೀಸ್ ಠಾಣೆಯ ಪಿಎಸ್ಐ ಅಮೋಜಿ ಕಾಂಬಳೆ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಆಟೋ ಅಪಘಾತ ಪ್ರಕರಣವನ್ನು ಕೊಲೆ ಎಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದುದಲ್ಲದೆ, ವಿಚಾರಣೆಗೆಂದು ಕರೆಸಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಐದು ತಿಂಗಳ ಹಿಂದಿನ ಆಟೋ ಅಪಘಾತ ಪ್ರಕರಣ

ಕಳೆದ ಐದು ತಿಂಗಳ ಹಿಂದೆ ಸುರಪುರ ತಾಲ್ಲೂಕಿನ ಕರಡ್ಕಲ್ ಸಮೀಪ ಆಟೋ ರಿಕ್ಷಾವೊಂದು ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ಆಟೋದಲ್ಲಿದ್ದ ಆರು ಜನರ ಪೈಕಿ ಸಾಹೀಲ್ ಎಂಬ ಯುವಕ ಮೃತಪಟ್ಟಿದ್ದಾನೆ. ಆ ಸಂದರ್ಭದಲ್ಲಿ ಪ್ರಕರಣವನ್ನು ಅಪಘಾತವೆಂದು ದಾಖಲಿಸಲಾಗಿತ್ತು. ಆದರೆ, ಸಾಹೀಲ್ ಸಾವಿನ ಕುರಿತು ಕುಟುಂಬದವರು ಕೊಲೆ ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಕೆಂಭಾವಿ ಪೊಲೀಸರು ಅಪಘಾತದಲ್ಲಿ ಇದ್ದ ಇತರರನ್ನು ವಿಚಾರಣೆಗೆ ಒಳಪಡಿಸಿದ್ದರು.

ವಿಚಾರಣೆಗೆ ಕರೆಸಿ ಹಲ್ಲೆ ನಡೆಸಿದ ಆರೋಪ

ಈ ಪ್ರಕರಣದ ಸಂಬಂಧ ಮಹಿಬೂಬ್ ಅಲಿ ಎಂಬಾತನನ್ನು ವಿಚಾರಣೆಗೆಂದು ಕೆಂಭಾವಿ ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ವಿಚಾರಣೆ ವೇಳೆ ಅಪಘಾತವನ್ನು ಕೊಲೆ ಎಂದು ಒಪ್ಪಿಕೊಳ್ಳುವಂತೆ ಪಿಎಸ್ಐ ಅಮೋಜಿ ಕಾಂಬಳೆ ಹಾಗೂ ಸಿಬ್ಬಂದಿ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕ್ಯಾನ್ಸರ್ ಇದೆ ಎಂದರೂ ಬಿಡದ ಪೊಲೀಸ್

ಹಲ್ಲೆಗೊಳಗಾದ ಮಹಿಬೂಬ್ ಅಲಿ, ತನಗೆ ಕ್ಯಾನ್ಸರ್ ಕಾಯಿಲೆ ಇದೆ ಎಂದು ಹೇಳಿಕೊಂಡರೂ ಪೊಲೀಸರು ಬಿಡದೆ ಥಳಿಸಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡ ಅವರು ಸದ್ಯ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣದ ಸತ್ಯಾಸತ್ಯತೆ ಕುರಿತು ತನಿಖೆ ಅಗತ್ಯ

ಈ ಆರೋಪಗಳು ಸತ್ಯವಾಗಿದ್ದಲ್ಲಿ ಇದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ತನಿಖೆ ನಡೆಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಕೆಂಭಾವಿ ಪಿಎಸ್ಐ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಪೊಲೀಸ್ ಇಲಾಖೆಯ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ. ತನಿಖೆಯ ಬಳಿಕ ಪ್ರಕರಣದ ನಿಜಾಂಶ ಹೊರಬರಬೇಕಿದೆ.