ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ, ಶಾಲೆಯ ಕ್ಷುಲ್ಲಕ ಜಗಳವೊಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಇನ್ಸ್ಟಾಗ್ರಾಮ್‌ನಲ್ಲಿ 'ಡಾನ್' ಆಗಿ ಮೆರೆಯುವ ಗೀಳಿನಿಂದ ಪ್ರೇರಿತರಾಗಿ ಮೂವರು ಅಪ್ರಾಪ್ತರು ಈ ಕೃತ್ಯ ಎಸಗಿದ್ದಾರೆ  

ಹುಬ್ಬಳ್ಳಿ / ಕುಂದಗೋಳ: ಅಪ್ರಾಪ್ತ ಬಾಲಕರಿಂದಲೇ ಅಪ್ರಾಪ್ತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಭೀಕರ ಹತ್ಯೆ. ಸಾಮಾಜಿಕ ಜಾಲತಾಣ ಪ್ರಚೋದನೆಯ ಶಂಕೆ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಅಪ್ರಾಪ್ತ ಬಾಲಕರಿಂದಲೇ ಅಪ್ರಾಪ್ತ ಬಾಲಕನನ್ನು ಚಾಕುವಿನಿಂದ ಇರಿದು ಹತ್ಯೆಗೈದ ಮನಕಲಕುವ ಘಟನೆ ಬುಧವಾರ ಸಂಜೆ ನಡೆದಿದೆ. ಈ ಘಟನೆ ಜಿಲ್ಲೆಯಲ್ಲಿ ಭಾರೀ ಆಘಾತಕ್ಕೆ ಕಾರಣವಾಗಿದ್ದು, ಬಾಲಕರ ಮೇಲೆ ಸಾಮಾಜಿಕ ಜಾಲತಾಣಗಳ ದುಷ್ಪ್ರಭಾವದ ಬಗ್ಗೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಕುಂದಗೋಳ ಪಟ್ಟಣದ ಪೂಜಾರ ಓಣಿಯ ನಿವಾಸಿ ನಿಂಗರಾಜ್ ಅವಾರಿ (16) ಈ ದುರ್ಘಟನೆಯಲ್ಲಿ ಮೃತಪಟ್ಟ ಬಾಲಕ. ನಿಂಗರಾಜ್ ಸ್ಥಳೀಯ ಅನುದಾನಿತ ಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯಾಗಿದ್ದು, ಓದಿನಲ್ಲಿ ಚುರುಕಾಗಿದ್ದ ಹಾಗೂ ಶಿಸ್ತುಬದ್ಧ ಬಾಲಕನಾಗಿದ್ದನೆಂದು ಕುಟುಂಬಸ್ಥರು ತಿಳಿಸಿದ್ದಾರೆ.

ಶಾಲೆಯ ಕ್ಷುಲ್ಲಕ ವಿಚಾರ ಕೊಲೆಯಲ್ಲಿ ಅಂತ್ಯ

ಪ್ರಾಥಮಿಕ ತನಿಖೆಯ ಪ್ರಕಾರ, ಇದೇ ಶಾಲೆಯ ಓರ್ವ ಬಾಲಕ ಸೇರಿ ಮೂವರು ಅಪ್ರಾಪ್ತ ಬಾಲಕರು ಈ ಕೃತ್ಯ ಎಸಗಿದ್ದಾರೆ. ಶಾಲೆಯಲ್ಲಿ ನಡೆದ ಸಣ್ಣ ವಿಚಾರಕ್ಕೆ ಸಂಬಂಧಿಸಿದ ಜಗಳವೇ ನಂತರ ಭೀಕರ ಹತ್ಯೆಯಾಗಿ ಪರಿಣಮಿಸಿದೆ ಎನ್ನಲಾಗಿದೆ.

ನಿನ್ನೆ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಆರೋಪಿತ ಬಾಲಕರು ಮೋಸ ಮಾಡಿ ನಿಂಗರಾಜ್‌ನನ್ನು ಕಾರ್ಯಕ್ರಮದ ಸ್ಥಳದಿಂದ ಬೇರೆಡೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಒಬ್ಬ ಬಾಲಕ ನಿಂಗರಾಜ್‌ನನ್ನು ಹಿಂದಿನಿಂದ ಹಿಡಿದುಕೊಂಡು, ಉಳಿದ ಇಬ್ಬರು ಚಾಕುವಿನಿಂದ ಮೂರು ಬಾರಿ ಇರಿದಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ. ಸಾರ್ವಜನಿಕ ಸ್ಥಳದ ಸಮೀಪದಲ್ಲೇ ಈ ಕೃತ್ಯ ನಡೆದಿದ್ದು, ಗಂಭೀರ ಗಾಯಗಳಿಂದ ನಿಂಗರಾಜ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಬಳಿಕ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಇನ್ಸ್ಟಾಗ್ರಾಮ್ ‘ಡಾನ್’ ಸಂಸ್ಕೃತಿ ಹತ್ಯೆಗೆ ಕಾರಣವೇ?

ಈ ಹತ್ಯೆಯ ಹಿಂದೆ ಸಾಮಾಜಿಕ ಜಾಲತಾಣಗಳ ಪ್ರಚೋದನೆ ಪ್ರಮುಖ ಪಾತ್ರವಹಿಸಿದೆ ಎಂಬ ಆರೋಪವನ್ನು ಮೃತ ಬಾಲಕನ ಪೋಷಕರು ಮಾಡಿದ್ದಾರೆ. ಆರೋಪಿತ ಬಾಲಕರು ಇನ್ಸ್ಟಾಗ್ರಾಮ್‌ನಲ್ಲಿ ತಮ್ಮನ್ನು “ಡಾನ್”ಗಳಂತೆ ಪ್ರದರ್ಶಿಸಿಕೊಳ್ಳುತ್ತಿದ್ದರು, ಪುಂಡತನದ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರು ಮತ್ತು ಇತರ ಬಾಲಕರ ಮೇಲೆ ಹಲ್ಲೆ ನಡೆಸಿದ ದೃಶ್ಯಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು ಎಂದು ಪೋಷಕರು ತಿಳಿಸಿದ್ದಾರೆ.

“ಒಬ್ಬನನ್ನು ಹೊಡೆದ್ರೆ ನಾನು ಡಾನ್ ಆಗ್ತೇನೆ ಅನ್ನೋ ಭಾವನೆ ಅವರ ತಲೆಯಲ್ಲಿತ್ತು. ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ನೋಡಿದ್ರೆ ಎಲ್ಲವೂ ಗೊತ್ತಾಗುತ್ತದೆ”

– ಮೃತ ಬಾಲಕನ ಪೋಷಕರ ಆಕ್ರಂದನ

ಸ್ನೇಹಿತರ ನಡುವೆ ಏನಾದರೂ ಗಂಭೀರ ವೈಯಕ್ತಿಕ ಜಗಳ ಅಥವಾ ಪ್ರೇಮ ಸಂಬಂಧ ಇರಲಿಲ್ಲ ಎಂದು ಕುಟುಂಬ ಸ್ಪಷ್ಟಪಡಿಸಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಮೆಂಟೇನ್ ಮಾಡಲು, ಪುಂಡರಂತೆ ತೋರಿಸಿಕೊಳ್ಳಲು ಈ ಕೃತ್ಯ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

“ನಿನ್ನೆ ಶಾಲೆಗೆ ಹೋದ ಮಗ ಮನೆಗೆ ಮರಳಿ ಬರಲಿಲ್ಲ” – ಪೋಷಕರ ನೋವು

“ನಿನ್ನೆ ನಮ್ಮ ಮಗ ಶಾಲೆಗೆ ಹೋಗಿದ್ದ. ಆದರೆ ಸಂಜೆ ಮನೆಗೆ ವಾಪಸ್ ಬಂದಿರಲಿಲ್ಲ. ನಂತರ ಪೊಲೀಸರು ಕರೆ ಮಾಡಿ ಕೊಲೆ ನಡೆದಿರುವ ವಿಚಾರ ತಿಳಿಸಿದರು. ನಾನು ಸ್ಥಳಕ್ಕೆ ಹೋಗಿ ನೋಡಿದ್ದಷ್ಟೇ ನಿಜ. ಉಳಿದ ವಿಷಯಗಳ ಬಗ್ಗೆ ನನಗೆ ಏನೂ ತಿಳಿದಿಲ್ಲ,” ಎಂದು ನಿಂಗರಾಜ್‌ನ ತಂದೆ ಕಣ್ಣೀರಿಡುತ್ತಿದ್ದಾರೆ.

ನಿಂಗರಾಜ್ 10ನೇ ತರಗತಿ ಕಲಿಯುತ್ತಿದ್ದ, ಭವಿಷ್ಯದ ಕನಸುಗಳನ್ನು ಕಂಡಿದ್ದ ಬಾಲಕನಾಗಿದ್ದಾನೆ. ಜಗಳದ ಬಗ್ಗೆ ಕುಟುಂಬಕ್ಕೆ ಯಾವುದೇ ಮುಂಚಿತ ಮಾಹಿತಿ ಇರಲಿಲ್ಲ. ಆರೋಪಿತರಲ್ಲಿ ಒಂದಿಬ್ಬರು ಶಾಲೆಯ ವಿದ್ಯಾರ್ಥಿಗಳಾಗಿದ್ದು, ಉಳಿದವರು ಕಾಲೇಜು ವಿದ್ಯಾರ್ಥಿಗಳಾಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.

ಮೂವರು ಅಪ್ರಾಪ್ತ ಆರೋಪಿಗಳು ವಶಕ್ಕೆ – ತನಿಖೆ ಮುಂದುವರಿಕೆ

ಘಟನೆಯ ಬೆನ್ನಲ್ಲೇ ಕುಂದಗೋಳ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಮೂವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಾಲ ನ್ಯಾಯ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸರು ಹತ್ಯೆಯ ನಿಖರ ಕಾರಣ, ಸಾಮಾಜಿಕ ಜಾಲತಾಣಗಳ ಪಾತ್ರ, ಬಳಸಿದ ಚಾಕುವಿನ ಮೂಲ ಹಾಗೂ ಘಟನೆಯಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.