ಬೆಂಗಳೂರಿನ ನಂತರ ಇದೇ ಮೊದಲ ಬಾರಿಗೆ ಮಂಗಳೂರಿನ ಹೊರವಲಯದಲ್ಲಿ ಟಿಟಿಡಿ ವತಿಯಿಂದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣವಾಗಲಿದೆ. ರಾಜ್ಯ ಸಚಿವ ಸಂಪುಟವು ಈ ಯೋಜನೆಗೆ 10 ಎಕರೆ ಜಾಗವನ್ನು ಮಂಜೂರು ಮಾಡಿದ್ದು, ಡಿಸೆಂಬರ್‌ನಲ್ಲಿ ಶಿಲಾನ್ಯಾಸ ನೆರವೇರುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡ (ಸೆ.23): ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರಗೆ ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್‌(ಟಿಟಿಡಿ) ವತಿಯಿಂದ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸ್ಥಾಪನೆಯಾಗಲಿದೆ.

ಮಂಗಳೂರು ಹೊರವಲಯದ ಸುರತ್ಕಲ್‌ನ ಬಡಗಎಕ್ಕಾರು ಬೆಟ್ಟ ಪ್ರದೇಶದಲ್ಲಿ ತಿರುಪತಿ ಮಾದರಿಯಲ್ಲೇ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನ ಇನ್ನು ಎರಡು ವರ್ಷದಲ್ಲಿ ತಲೆ ಎತ್ತಲಿದೆ.

ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ರಾಜ್ಯದ ಏಕೈಕ ತಿರುಪತಿಯ ದೇವಸ್ಥಾನ ಇದೆ. ಇದನ್ನು ಹೊರತುಪಡಿಸಿದರೆ ಮಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜ್ಯದ ಎರಡನೇ ತಿರುಪತಿ ತಿಮ್ಮಪ್ಪನ ದೇವಸ್ಥಾನ ಇದಾಗಿದೆ. ಈ ದೇವಸ್ಥಾನ ನಿರ್ಮಾಣಕ್ಕೆ ಮಂಗಳೂರಿನಲ್ಲಿ ಮೊನ್ನೆ ಸಿಎಂ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ 10 ಎಕರೆ ಜಾಮೀನು ಮಂಜೂರುಗೊಳಿಸಲು ಅನುಮತಿ ಲಭಿಸಿದೆ. ಟಿಟಿಡಿ ಬೋರ್ಡ್‌ ಸದಸ್ಯ ಆರ್‌.ಎನ್‌. ದರ್ಶನ್‌ ಅವರ ಅವಿರತ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಮಂಗಳೂರು ಬಳಿಕ ಬೆಳಗಾವಿಯಲ್ಲಿ ಟಿಟಿಡಿ ದೇವಸ್ಥಾನ ಸ್ಥಾಪನೆ ಪ್ರಸ್ತಾವನೆಯಲ್ಲಿದೆ.

ಏನೆಲ್ಲ ಇರಲಿದೆ?:

ಮಂಗಳೂರಲ್ಲಿ ಸ್ಥಾಪನೆಯಾಗುವ ತಿಮ್ಮಪ್ಪನ ದೇವಸ್ಥಾನ ತಿರುಮಲ ಮಾದರಿಯಲ್ಲೇ ಇರುವುದರಿಂದ ಅಲ್ಲಿ ನಡೆಯುವ ಬಹುತೇಕ ಸೇವೆಗಳು ಇಲ್ಲಿಯೂ ನಡೆಯಲಿದೆ. ತಿರುಪತಿಯ ಸುಪ್ರಭಾತ, ಕಲ್ಯಾಣೋತ್ಸವ, ಬ್ರಹ್ಮೋತ್ಸವ ಸೇರಿದಂತೆ ನಿತ್ಯವೂ ನಡೆಯುವ ಸೇವೆಗಳೂ ಇರಲಿದೆ. ಇದಲ್ಲದೆ 10 ಎಕರೆ ಜಾಗದಲ್ಲಿ ಕಲ್ಯಾಣ ಮಂಟಪ ಇರಲಿದ್ದು, ಸಾಮಾನ್ಯರಿಗೂ ವಿವಾಹ ಕಾರ್ಯ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ.

ಡಿಸೆಂಬರ್‌ಗೆ ಶಿಲಾನ್ಯಾಸ?:

ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ ಡಿಸೆಂಬರ್‌ಗೆ ಶಿಲಾನ್ಯಾಸ ನೆರವೇರಿಸಿ ಎರಡೇ ವರ್ಷದಲ್ಲಿ ಇಲ್ಲಿ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಲು ಸಾಧ್ಯವಾಗಲಿದೆ. ಈಗ 15ರಲ್ಲಿ 10 ಎಕರೆ ಜಾಗ ಟಿಟಿಡಿಗೆ ಮಂಜೂರುಗೊಂಡಿದೆ. ಲೀಸ್‌ ಡೀಡ್‌ ಮೂಲಕ ಟಿಟಿಡಿಗೆ ಜಾಗ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ದೇವಸ್ಥಾನ ನಿರ್ಮಾಣದ ರೂಪುರೇಷೆ ಅಂತಿಮಗೊಳ್ಳಲಿದೆ. ನಂತರ ಕಾಮಗಾರಿ ಆರಂಭವಾಗಲಿದೆ.

ಯಾಕಾಗಿ ತಿರುಪತಿಯಿಂದ ಹೊರಗೆ ದೇವಸ್ಥಾನ?

ತಿರುಪತಿ ತಿಮ್ಮಪ್ಪನ ದರುಶನಕ್ಕೆ ಭಕ್ತರು ದೂರದ ಆಂಧ್ರಪ್ರದೇಶದ ತಿರುಮಲಕ್ಕೆ ತೆರಳಬೇಕು. ಎಲ್ಲರಿಗೆ ಎಲ್ಲ ಕಾಲದಲ್ಲೂ ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಸಾಧ್ಯವಾಗುತ್ತಿಲ್ಲ. ವಿಪರೀತ ಜನಸಂದಣಿ, ಮಾರುದ್ಧದ ಸರತಿಸಾಲು. ಇಂತಹ ತೊಂದರೆಯನ್ನು ತಪ್ಪಿಸಲು ತಿರುಮಲದಿಂದ ಹೊರಗೆ ವೆಂಕಟೇಶ್ವರ ದೇವರ ದೇವಸ್ಥಾನ ನಿರ್ಮಿಸಲು ಟಿಟಿಡಿ ಯೋಜನೆ ರೂಪಿಸುತ್ತಿದೆ. ಈಗಾಗಲೇ ಕರ್ನಾಟಕ, ತಮಿಳುನಾಡು, ಅಸ್ಸಾಂ, ಮುಂಬೈ, ಬಿಹಾರ ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲೂ ತಿಮ್ಮಪ್ಪನ ದೇವಸ್ಥಾನ ನಿರ್ಮಿಸಲು ಸ್ವತಃ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಚಿಂತನೆ ನಡೆಸಿದ್ದಾರೆ. ಇದರ ಭಾಗವಾಗಿ ಮಂಗಳೂರಲ್ಲಿ ಟಿಟಿಡಿ ಜಾಗ ಕೇಳಿದ್ದು, ಸರ್ಕಾರದ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ತಿರುಮಲ ತಿರುಪತಿಗೆ ಕರ್ನಾಟಕದ ಕರಾವಳಿ ಭಾಗದಿಂದ ಅನೇಕ ಭಕ್ತರು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಬಳಿಕ ಮಂಗಳೂರಲ್ಲಿ ತಿಮ್ಮಪ್ಪನ ದೇವಸ್ಥಾನ ಟಿಟಿಡಿಯಿಂದಲೇ ನಿರ್ಮಾಣವಾಗಲಿದೆ. ಅದಕ್ಕಾಗಿ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಕ್ಯಾಬಿನೆಟ್‌ನಲ್ಲಿ 10 ಎಕರೆ ಜಾಗ ಮಂಜೂರುಗೊಳಿಸಿದ್ದು, ಡಿಸೆಂಬರ್‌ಗೆ ದೇವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಇರಾದೆ ಇದೆ. ಇದಕ್ಕಾಗಿ ಸಹಕಾರ ನೀಡಿದ ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್‌, ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಕುಮಾರ್‌ ನಾಯಕ್‌, ಮಾಜಿ ಸಂಸದ ಡಿ.ಕೆ.ಸುರೇಶ್‌ ಇವರಿಗೆ ಅಭಿನಂದನೆಗಳು.

-ಆರ್‌.ಎನ್‌. ದರ್ಶನ್, ಬೋರ್ಡ್‌ ಮೆಂಬರ್‌, ಟಿಟಿಡಿ