ಚಿಕ್ಕಬಳ್ಳಾಪುರಕ್ಕೆ ನೀರುಣಿಸುವ ಜಕ್ಕಲಮಡುಗು ಜಲಾಶಯಕ್ಕೆ 72 ವರ್ಷಗಳ ಹಿಂದೆ ಸರ್ ಎಂ. ವಿಶ್ವೇಶ್ವರಯ್ಯನವರು ಅಡಿಗಲ್ಲು ಹಾಕಿದ್ದ ಸ್ಮಾರಕವು ಗುಡ್ಡದ ಮೇಲೆ ಅನಾಥವಾಗಿದೆ. ಈ ಐತಿಹಾಸಿಕ ದಾಖಲೆಯನ್ನು ಸಂರಕ್ಷಿಸಿ, ಉದ್ಯಾನವನ ನಿರ್ಮಿಸುವ ಮೂಲಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ನಿವೃತ್ತ ಶಿಕ್ಷಕ ಕೆ.ಎಂ.ರೆಡ್ಡಪ್ಪ ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ಸೆ.24: ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಶ್ರೀನಿವಾಸ ಸಾಗರ ಶಿಲ್ಟ್ ಜಲಾಶಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಶಂಕುಸ್ಥಾಪನೆ ಮಾಡಿದ ಮಾಹಿತಿಯನ್ನು ಒಳಗೊಂಡ ನಾಮಫಲಕದ ಸ್ಮಾರಕಕ್ಕೆ ಸುಮಾರು 72 ವರ್ಷಗಳಾಗಿದ್ದು, ಇದು ಯಾರ ಗಮನಕ್ಕೂ ಬಾರದೆ ಒಂದು ಗುಡ್ಡದ ಮೇಲೆ ಅನಾಥವಾಗಿರುವುದು ಬೇಸರ ತರುವ ಸಂಗತಿಯಾಗಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕೆ.ಎಂ.ರೆಡ್ಡಪ್ಪ ತಿಳಿಸಿದ್ದಾರೆ.
ಸರ್ ಎಂ.ವಿ. ಅಡಿಗಲ್ಲು ಹಾಕಿದ ಆ ಅಪರೂಪದ ಸ್ಮಾರಕ ಅನಾಥವಾಗಿದ್ದೇಕೆ?
ಚಿಕ್ಕಬಳ್ಳಾಪುರ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಅಂದಿನ ಎಂಜಿನಿಯರ್ ಆಗಿದ್ದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ತಮ್ಮ ದೂರದೃಷ್ಟಿಯ ಫಲವಾಗಿ 1955 ಏಪ್ರಿಲ್ 24 ರಂದು ಶ್ರೀನಿವಾಸ ಸಾಗರ ಶಿಲ್ಟ್ ಜಲಾಶಯಕ್ಕೆ ಶಿಲಾನ್ಯಾಸ ಮಾಡಲಾಗಿತ್ತು. ಈ ಜಲಾಶಯ ಜಕ್ಕಲಮಡುಗು ಗ್ರಾಮದ ಪ್ರದೇಶದಲ್ಲಿ ಇರುವುದರಿಂದ, ಜಕ್ಕಲಮಡುಗು ಜಲಾಶಯ ಎಂದು ಜನಜನಿತವಾಗಿದೆ.
ಅಂದಿನಿಂದ ಇಂದಿನವರೆಗೂ ಚಿಕ್ಕಬಳ್ಳಾಪುರ ನಗರಕ್ಕೆ ಶುದ್ಧ ಕುಡಿಯುವ ನೀರು ಸರಬರಾಜಾಗುತ್ತಿದ್ದು ಹಾಗೂ ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರಕ್ಕೂ ಈ ಜಲಾಶಯದಿಂದ ನೀರು ಸರಬರಾಜಾಗುತ್ತಿದೆ. ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್.ಎಂ.ವಿ ರವರು ನಾಮಸ್ಮರಣೆಗೆ ಇರುವ ಏಕೈಕ ಶಿಲಾನ್ಯಾಸ ಸ್ಮಾರಕ ಇದಾಗಿದ್ದು, ಇದನ್ನು ಮುಂದಿನ ದಿನಗಳ ದಾಖಲೆಯಾಗಿ ಸಂರಕ್ಷಿಸಿ ಕಾಪಾಡಬೇಕಾಗಿರುತ್ತದೆ.

ಆದ್ದರಿಂದ ಚಿಕ್ಕಬಳ್ಳಾಪುರ ನಗರಸಭೆ, ಜಿಲ್ಲಾಡಳಿತ ಅಥವಾ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಯಾವುದಾದರೂ ಸರಿಯೇ ಈ ಶಿಲಾನ್ಯಾಸ ಸ್ಮಾರಕದ ಬಗ್ಗೆ ಗಮನ ಹರಿಸಿ ಅದು ಅಳಿಯದಂತೆ ರಕ್ಷಣೆ ಒದಗಿಸುವುದರ ಜೊತೆಗೆ ಪ್ರಕೃತಿ ಸೌಂದರ್ಯದ ನಡುವೆ ಇರುವ ಈ ಜಲಾಶಯದ ಬಳಿ ಒಂದು ಉದ್ಯಾನವನವನ್ನು ನಿರ್ಮಿಸಿ,ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದಾಗ, ಈ ಸ್ಥಳವು ಪ್ರವಾಸಿಗರ ಆಕರ್ಷಣೀಯ ತಾಣವಾಗಿ ಮಾರ್ಪಡುತ್ತದೆ ಎಂದು ತಮ್ಮ ಅಭಿಪ್ರಾಯ ವಾಗಿದೆ ಎಂದು ಮನವಿ ಮಾಡಿದ್ದಾರೆ.


