ಕುವೆಂಪು ವಿಶ್ವವಿದ್ಯಾಲಯದ 2000-2002ನೇ ಸಾಲಿನ ಕನ್ನಡ ಎಂ.ಎ ವಿದ್ಯಾರ್ಥಿಗಳು 25 ವರ್ಷಗಳ ನಂತರ ಮತ್ತೆ ಒಂದಾದರು. 'ಗುರು ನಮನ ಮತ್ತು ಸ್ನೇಹ ಸಂಭ್ರಮ' ಕಾರ್ಯಕ್ರಮವನ್ನು ಆಯೋಜಿಸಿ, ತಮ್ಮ ಗುರುಗಳಿಗೆ ಗೌರವ ಸಲ್ಲಿಸಿ, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಶಿವಮೊಗ್ಗ: 25 ವರ್ಷಗಳ ಹಿಂದೆ ಕುವೆಂಪು ವಿವಿಯ ಕನ್ನಡ ಭಾರತಿಯ ತರಗತಿಯಲ್ಲಿ ಒಟ್ಟಿಗೆ ಕುಳಿತು ಅಕ್ಷರ ಕಲಿತ ಸಹಪಾಠಿಗಳೆಲ್ಲ ಮತ್ತೆ ಕುವೆಂಪು ವಿವಿಯ ಹಿರೇಮಠ್ ಸಭಾಂಗಣದಲ್ಲಿ ಭಾನುವಾರ ಒಂದಾದರು.
2000-2002ನೇ ಸಾಲಿನ ಕನ್ನಡ ಎಂ.ಎ ವಿದ್ಯಾರ್ಥಿಗಳ ಮುಖದಲ್ಲಿ ವಯಸ್ಸು ಏರಿದ್ದರೂ, ಮನಸ್ಸಿನಲ್ಲಿ ಮಾತ್ರ ಅದೇ ಹಳೆಯ ಕಾಲೇಜು ದಿನಗಳ ಮುಗ್ಧತೆ, ಸ್ನೇಹದ ಬೆಚ್ಚನೆ ನೆನಪು. ಪರಸ್ಪರ ಅಪ್ಪಿಕೊಂಡು, ಹಳೆಯ ಹೆಸರುಗಳಿಂದ ಕರೆದು ಸಂಭ್ರಮಿಸಿದ ಆ ಕ್ಷಣ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿತು.
‘ಗುರು ನಮನ ಮತ್ತು ಸ್ನೇಹ ಸಂಭ್ರಮ-2026’
ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ, ಅವರ ಬದುಕಿನ ಭಾಗವಾದ ಪತ್ನಿ, ಮಕ್ಕಳನ್ನೂ ಕರೆತಂದು ಗುರುಗಳ ಪಾದಕ್ಕೆ ನಮಸ್ಕರಿಸಿದ್ದು, ಈ ಕಾರ್ಯಕ್ರಮದ ದೊಡ್ಡ ವಿಶೇಷವಾಗಿತ್ತು. ‘ಸ್ನೇಹ ಸಂಕ್ರಾಂತಿ ಬಳಗ’ದ ಹೆಸರಲ್ಲಿ ಆಯೋಜಿಸಿದ್ದ ‘ಗುರು ನಮನ ಮತ್ತು ಸ್ನೇಹ ಸಂಭ್ರಮ-2026’ ಕಾರ್ಯಕ್ರಮದಲ್ಲಿ ಸುಮಾರು 25ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ತಮ್ಮ ಕುಟುಂಬ ಸಮೇತ ಭಾಗವಹಿಸಿ ಗುರು-ಶಿಷ್ಯ ಸಂಬಂಧದ ಮಹತ್ವವನ್ನು ಮತ್ತೆ ಜಗತ್ತಿಗೆ ಸಾರಿದರು.
ಕಾರ್ಯಕ್ರಮದಲ್ಲಿ ತಮಗೆ ವಿದ್ಯೆ ಕಲಿಸಿದ ನಿವೃತ್ತ ಹಾಗೂ ಹಾಲಿ ಪ್ರಾಧ್ಯಾಪಕರನ್ನು ಶಾಲು, ಹಾರ, ಸ್ಮರಣಿಕೆ ನೀಡಿ ಅತ್ಯಂತ ಭಕ್ತಿ-ಗೌರವದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಕುವೆಂಪು ವಿವಿ ಪ್ರಭಾರ ಕುಲಪತಿ ಡಾ.ಚಂದ್ರಶೇಖರ್, ಗುರುವಂದನೆ ಮತ್ತು ಸ್ನೇಹ ಮಿಲನ ಕಾರ್ಯಕ್ರಮ ಕೇವಲ ಕಾರ್ಯಕ್ರಮ ಅಲ್ಲ, ಇದೊಂದು ತಲೆಮಾರಿನ ಸಂಸ್ಕೃತಿ. ಈ ಬ್ಯಾಚಿನಲ್ಲಿ ಓದಿದ ವಿದ್ಯಾರ್ಥಿಗಳು ಪೊಲೀಸ್ ಅಧಿಕಾರಿಗಳಾಗಿದ್ದಾರೆ, ಪ್ರಾಧ್ಯಾಪಕರಾಗಿದ್ದಾರೆ, ದೊಡ್ಡ ಹುದ್ದೆಗಳಲ್ಲಿದ್ದರೂ ಸರಳವಾಗಿ ವಿನಯವಾಗಿ ಗುರುನಮನ ಸಲ್ಲಿಸುತ್ತಿದ್ದಾರೆ. ಇದೊಂದು ಅಪರೂಪದ ಭಾವುಕ ಕ್ಷಣ. ವಿದ್ಯಾರ್ಥಿಗಳು ಎಂದರೆ ಹೀಗಿರಬೇಕು ಎಂದರು.
ಅರ್ಥಪೂರ್ಣ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಡಾ. ಶ್ರೀಕಂಠ ಕೂಡಿಗೆ ಅವರು, ವಿಶ್ವವಿದ್ಯಾನಿಲಯಗಳೇ ದಾರಿ ತಪ್ಪುತ್ತಿರುವ ಈ ಹೊತ್ತಲ್ಲಿ, ಹಿರಿಯ ವಿದ್ಯಾರ್ಥಿಗಳು ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮ ನಡೆಸುತ್ತಿರುವುದು ಸ್ವಾಗತಾರ್ಹ. ಇಂದು ಕನ್ನಡ ಭಾರತಿ ಸೊರಗುತ್ತಿದೆ, ಅದು ಮತ್ತಷ್ಟು ಗಟ್ಟಿಗೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಭಾರತಿ ನಿರ್ದೇಶಕ ಪ್ರೊ. ನೆಲ್ಲಿಕಟ್ಟೆ ಸಿದ್ದೇಶ್ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ಕನ್ನಡ ಭಾರತಿ ಸೊರಗಿಲ್ಲ, ಅಲ್ಲಿಂದ ಅರಿವಿನ ವಿಸ್ತಾರದ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಪ್ರೊ. ಪ್ರಶಾಂತ್ ನಾಯಕ್ ಮಾತನಾಡಿ, ಆಸ್ತಿಗಾಗಿ ಹೆತ್ತವರನ್ನೇ ಕೊಲ್ಲುವ ಕಾಲವಿದು, ಪ್ರೀತಿಯೇ ಮಾಯವಾಗುತ್ತಿರುವಾಗ, ಹಿರಿಯ ವಿದ್ಯಾರ್ಥಿಗಳು ನಮ್ಮನ್ನು ಗೌರವಿಸಿದ್ದು, ನಮ್ಮ ಕೆಲಸವನ್ನೇ ಗೌರವಿಸಿದಷ್ಟು ಖುಷಿಯಾಗಿದೆ ಎಂದರು.
ಇದೇ ವೇಳೆ ವಿಶ್ರಾಂತ ಪ್ರಾಧ್ಯಾಪಕರಾದ ಕುಮಾರ್ ಚಲ್ಯ, ಡಾ. ಬಸವರಾಜ ನೆಲ್ಲಿಸರ, ಡಾ. ಕೇಶವ ಮೂರ್ತಿ, ಡಾ.ಸಣ್ಣರಾಮ ಸೇರಿದಂತೆ ಹಲವು ಗುರುಗಳು ಮಾತನಾಡಿದರು. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಸ್ನೇಹ ಬಳಗದ ಪ್ರೀತಿ, ನಿರಂಜನ, ಲತೀಫ್, ಪ್ರಕಾಶ್ ಮರ್ಗನಳ್ಳಿ,ನಾದ, ತಿಪ್ಪೇಸ್ವಾಮಿ, ನಾಗೇಶ್, ಸೇರಿದಂತೆ ಹಲವು ಹಿರಿಯ ವಿದ್ಯಾರ್ಥಿಗಳು ಹೊತ್ತಿದ್ದರು.
ಪ್ರಕಾಶ್ ಮರ್ಗನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸುನೀತಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು, ಎಚ್. ಆರ್. ತಿಪ್ಪೇಸ್ವಾಮಿ ವಂದಿಸಿದರು.
ಶಂಕರಘಟ್ಟದ ಕುವೆಂಪು ವಿವಿಯ ಹಿರೇಮಠ್ ಸಭಾಂಗಣದಲ್ಲಿ ಭಾನುವಾರ ಸ್ನೇಹ ಸಂಕ್ರಾಂತಿ ಬಳಗದ ವತಿಯಿಂದ ಆಯೋಜಿಸಿದ್ದ ‘ಗುರು ನಮನ ಮತ್ತು ಸ್ನೇಹ ಸಂಭ್ರಮ-2026’ ಕಾರ್ಯಕ್ರಮದಲ್ಲಿ ನಿವೃತ್ತ ಹಾಗೂ ಹಾಲಿ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು.


