ಯಾದಗಿರಿ ರೈಲ್ವೆ ನಿಲ್ದಾಣದ ಮೂಲಕ ವಂದೇ ಭಾರತ್ ರೈಲು ಸಂಚಾರ, 12 ಪ್ರಮುಖ ರೈಲುಗಳ ನಿಲುಗಡೆ ಹಾಗೂ ನಿಲ್ದಾಣವನ್ನು 'ಬಿ' ದರ್ಜೆಗೇರಿಸುವಂತೆ ಕರವೇ ಜಿಲ್ಲಾ ಘಟಕವು ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಲಾಗಿದೆ.

ಯಾದಗಿರಿ: ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತಿರುವ ವಂದೇ ಭಾರತ್‌, ಬೆಂಗಳೂರು-ಮುಂಬೈ ಸ್ಲೀಪರ್ ಎಸಿ ರೈಲು ಗುಂತಕಲ್‌ನಿಂದ ರಾಯಚೂರು, ಯಾದಗಿರಿ ಕಲ್ಬುರ್ಗಿ ಮಾರ್ಗದಲ್ಲಿ ಸಂಚರಿಸುವಂತೆ ಹಾಗೂ ಯಾದಗಿರಿ ರೈಲ್ವೆ ನಿಲ್ದಾಣದಿಂದ ಹಾಯ್ದು ಹೋಗುವ ಇನ್ನುಳಿದ 12 ರೈಲುಗಳು ನಿಲ್ಲಿಸುವಂತೆ ಮತ್ತು ರೈಲು ನಿಲ್ದಾಣವನ್ನು ಸಿ ದರ್ಜೆಯಿಂದ ಬಿ ದರ್ಜೆಗೇರಿಸುವ ಕುರಿತು, ಯಾದಗಿರಿ ನಗರದ ರೈಲ್ವೆ ನಿಲ್ದಾಣಕ್ಕೆ ಬುಧವಾರ ಆಗಮಿಸಿದ್ದ ದಕ್ಷಿಣ ಕೇಂದ್ರ ವಿಭಾಗ, ಸಿಕಂದರಾಬಾದ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಡಾ. ಆರ್. ಗೋಪಾಲ ಕೃಷ್ಣನ್ ಅವರನ್ನು ಭೇಟಿಯಾದ ಕರವೇ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧ್ಯಕ್ಷರಾದ ಟಿ.ಎನ್. ಭೀಮುನಾಯಕ ಮನವಿ ಸಲ್ಲಿಸಿದರು.

ಈ ರೈಲು ಮುಂಚೆ ಇದೇ ಮಾರ್ಗದಲ್ಲಿ ಸಂಚರಿಸುವ ಉದ್ದೇಶ ಹೊಂದಿತ್ತು. ಆದರೆ ಕಾರಣಾಂತರಗಳಿಂದ ಹುಬ್ಬಳ್ಳಿ ಮಾರ್ಗದಲ್ಲಿ ಓಡಿಸಲು ಚಿಂತನೆ ನಡೆಸಿರುವ ಬಗ್ಗೆ ವರದಿಯಾಗುತ್ತಿದ್ದು, ಇದು ಸರಿಯಲ್ಲ. ಜೊತೆಗೆ ಈ ಭಾಗದ ಜನರಿಗೆ ಬಹಳ ವಂಚಿಸಿದಂತೆ ಆಗುತ್ತದೆ ಎಂದು ಅವರಿಗೆ ತಿಳಿಸಿದ ಭೀಮುನಾಯಕ್‌, ಈ ಮಾರ್ಗದಲ್ಲಿಯೇ ಸಂಚರಿಸಿದಲ್ಲಿ ಆಂಧ್ರ-ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂದರು.

16 ವರ್ಷ ಕಳೆದರೂ ಮೂಲಭೂತ ಸೌಕರ್ಯಗಳಿಲ್ಲ

ಈ ಭಾಗದಿಂದ ಅತಿಹೆಚ್ಚು ಜನ ಮುಂಬೈ, ಬೆಂಗಳೂರಿಗೆ ಸಂಚಾರ ದಟ್ಟಣೆಯಿದೆ. ಅಲ್ಲದೆ, ಉದ್ಯಮಿಗಳು, ವರ್ತಕರು ಹೆಚ್ಚಿನ ಸಂಖ್ಯೆಯಲ್ಲಿ ತಿರುಗಾಟ ನಡೆಸುವುದರಿಂದ ಈ ರೈಲು ಇದೇ ಮಾರ್ಗದಲ್ಲಿ ಸಂಚಾರ ಮಾಡುವುದು ಸೂಕ್ತ. ಆದ್ದರಿಂದ ಇದನ್ನು ಮನಗಂಡು ಸದರಿ ರೈಲನ್ನು ಇದೇ ಮಾರ್ಗದಲ್ಲಿಯೇ ಓಡಿಸಲು ಸಂಬಂಧಿಸಿದವರಿಗೆ ಶಿಫಾರಸು ಮಾಡಬೇಕೆಂದು ಕಲ್ಯಾಣ ಕರ್ನಾಟಕ ಭಾಗದ ಜನತೆ ಪರವಾಗಿ ಒತ್ತಾಯಿಸುವುದಾಗಿ ನಾಯಕ್‌ ತಿಳಿಸಿದರು.

ಸಿಕಿಂದರಾಬಾದ್‌ ವಿಭಾಗದಲ್ಲಿ ಯಾದಗಿರಿ ರೈಲ್ವೆ ನಿಲ್ದಾಣವು ಎರಡನೇ ಕ್ರಮಾಂಕ ಅತೀ ಹೆಚ್ಚು ಪ್ರಯಾಣಿಕರ ಸಂಚಾರವುಳ್ಳ ಮತ್ತು ಕೇಂದ್ರ ಸರ್ಕಾರಕ್ಕೆ ಅತೀ ಹೆಚ್ಚು ಆದಾಯ ಕೊಡುವ ಸ್ಟೇಷನ್ ಇದಾಗಿದ್ದು, ಜಿಲ್ಲೆಯಾಗಿ ಸುಮಾರು 16 ವರ್ಷ ಕಳೆದರೂ ಕೂಡ ರೈಲ್ವೆಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವುದಿಲ್ಲ.

12 ರೈಲುಗಳ ನಿಲುಗಡೆಗೆ ಆಗ್ರಹ

ಈಗಾಗಲೇ ಕೇಂದ್ರ ಸರ್ಕಾರವು ಯಾದಗಿರಿ ಮಾಹತ್ವಾಂಕ್ಷೆ ಜಿಲ್ಲೆಯೆಂದು ಘೋಷಣೆ ಮಾಡಿರುತ್ತಾರೆ, ಈ ರೈಲ್ವೆ ನಿಲ್ದಾಣದಿಂದ ಹಾದು ಹೋಗುವ, ಪ್ರಮುಖ ರೈಲುಗಳಾದ ಪದ್ಮಾವತಿ ಎಕ್ಸ್‌ಪ್ರೆಸ್‌ (12731/12732), ರಾಜಕೋಟ್ ಎಕ್ಸ್‌ಪ್ರೆಸ್‌ (16613/16641), ದ್ವಾರಕಾ ಎಕ್ಸ್‌ಪ್ರೆಸ್‌ (19567/19568), ವಾಸ್ಕೋ ಎಕ್ಸ್‌ಪ್ರೆಸ್‌ (17321/17322), ಏಕ್ತಾನಗರ ಎಕ್ಸ್‌ಪ್ರೆಸ್‌ (20919/20920), ಸಾಯಿನಗರ ಶಿರಡಿ (22601/22602), ಅಹ್ಮದಾಬಾದ್ ಎಕ್ಸ್‌ಪ್ರೆಸ್‌ (22689/22690) ಮಧುರೈ ಎಕ್ಸ್‌ಪ್ರೆಸ್‌ (22101/22102), ತಿರುಪತಿ ಹಮ್‌ಸಫರ್ ಎಕ್ಸ್‌ಪ್ರೆಸ್‌ (22705/22706), ಗೋರಖಪುರ ಎಕ್ಸ್‌ಪ್ರೆಸ್‌ (22533/22534), ಅಹ್ಮದಾಬಾದ್ ಹಮ್ ಸಫರ್ ಎಕ್ಸ್‌ಪ್ರೆಸ್‌ (22191/22920), ಮತ್ತು ಗೋರಖಪುರ ಎಕ್ಸ್‌ಪ್ರೆಸ್‌ (12591/12592), ಸೇರಿ ಒಟ್ಟು 12 ರೈಲುಗಳು ವಾರದ ಹಾಗೂ ದಿನನಿತ್ಯ ಸಂಚರಿಸುವ ರೈಲುಗಳಾಗಿದ್ದು ಇವುಗಳು ನಿಲುಗಡೇಯಾಗದೇ ಕಾರಣಕ್ಕೆ ಜಿಲ್ಲೆಯ ಜನರಿಗೇ ತುಂಬಾ ಬೇಸತ್ತಿರುತ್ತಾರೆ, ಆದ ಕಾರಣ ತಾವುಗಳು ಈ ಮೇಲೀನ ರೈಲುಗಳು ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕೋರಿದರು.

ಇಂಟರಸಿಟಿ ರೈಲು ಪುನಾರಂಭಿಸುವಂತೆ ಮನವಿ

ಇನ್ನು, ಕೋವಿಡ್ ಸಮಯದಲ್ಲಿ ಬಂದ್ ಮಾಡಿರುವ ಸೊಲ್ಲಾಪುರ- ರಾಯಚೂರು ಇಂಟರಸಿಟಿ ರೈಲು ಪುನಾರಂಭಿಸಬೇಕು. ಮತ್ತು ಬಹುದಿನಗಳ ಈ ಭಾಗದ ಜನರ ಬೇಡಿಕೆಯಾದ ಕಲ್ಬುರ್ಗಿಯಿಂದ ಬೆಂಗಳೂರು ಹೋಗುವ ಸೂಪರ್ ಫಾಸ್ಟ್ ಪ್ಯಾಸೆಂಜರ್ ರೈಲು ಕೂಡಲೇ ಪ್ರಾರಂಭ ಮಾಡಬೇಕು, ದಿನವೊಂದಕ್ಕೆ 5-6 ಲಕ್ಷಕ್ಕಿಂತ ಹೆಚ್ಚು ಆದಾಯ ಬರುತ್ತೀರುವುದರಿಂದ, ಆದಕಾರಣ ಯಾದಗಿರಿ ರೈಲ್ವೆ ನಿಲ್ದಾಣವು ಸಿ ದರ್ಜೆ ಹೊಂದಿರುವ ನಿಲ್ದಾಣವನ್ನು ಕೂಡಲೇ ಬಿ ಗ್ರೇಡ್ ಮೇಲ್ದರ್ಜೆಗೆ ಏರಿಸಿಬೇಕು.

ಒಂದು ವೇಳೆ ಮಾರ್ಗ ಬದಲಾವಣೆ ಮಾಡದಿದ್ದಲ್ಲಿ, ಈ ಭಾಗದ ಜನರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಯಾದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆಂದು ಎಚ್ಚರಿಸಿದರು.