ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ರಾಯರ ಮಧ್ಯಾರಾಧನೆಯನ್ನು ವೈಭವದಿಂದ ಆಚರಿಸಲಾಯಿತು. ಮಹಾ ಪಂಚಾಮೃತಾಭಿಷೇಕ, ಚಿನ್ನದ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ರಾಯಚೂರು (ಆ.31): ತುಂಗಾತೀರ ನಿವಾಸಿ,ಯತಿಕುಲ ತಿಲಕ, ಕಲಿಯುಗದ ಕಾಮದೇನು,ಕಲ್ಪವೃಕ್ಷ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 355 ನೇ ಆರಾಧಾನಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಸಪ್ತರಾತ್ರೊತ್ಸವದ ನಾಲ್ಕನೇ ದಿನ ಆಚರೀಸಲ್ಪಡುವ ರಾಯರ ಮಧ್ಯಾರಾಧನೆಯನ್ನು ಅತ್ಯಂತ ಸಂಭ್ರಮ, ಸಡಗರದಿಂದ ಭಾನುವಾರ ನೆರವೇರಿಸಲಾಯಿತು.
ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ಯಾರಾಧನೆ ಪ್ರಯುಕ್ತ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ಶ್ರೀಗುರುಸಾರ್ವಭೌಮರ ಮೂಲಬೃಂದಾವನಕ್ಕೆ ಮಹಾ ಪಂಚಾಮೃತಾಭಿಷೇಕ, ಅಲಂಕಾರ, ಪ್ರಹ್ಲಾದ ರಾಜರ ಉತ್ಸವ ಮೂರ್ತಿಯ ಚಿನ್ನದ ರಥೋತ್ಸವ ಸೇರಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವೈಭವೋಪಿತವಾಗಿ ಶ್ರದ್ಧಾ ಭಕ್ತಿ, ಸಂಭ್ರಮ ಸಡಗರದಿಂದ ಜರುಗಿದವು.
ಬೆಳಗ್ಗೆ ನೈರ್ಮಾಲ್ಯ ವಿಸರ್ಜನೆ, ಶ್ರೀಉತ್ಸವ ರಾಯರ ಪಾದಪೂಜೆ ಮತ್ತು ಪಂಚಾಮೃತ, ಪಂಡಿತರಿಂದ ಪ್ರವಚನ,ಗ್ರಂಥಗಳ ಪಾರಾಯಣ ಸೇರಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ವಿಶೇಷ ಮಹಾಪಂಚಾಮೃತಾಭಿಷೇಕ
ಮಧ್ಯಾರಾಧನೆ ಹಿನ್ನೆಲೆಯಲ್ಲಿ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಮೂಲ ಬೃಂದಾವನದಕ್ಕೆ ಮಹಾ ಪಂಚಾಮೃತಾಭಿಷೇಕವನ್ನು ನೆರವೇರಿಸಿದರು. ಹಾಲು, ಮೊಸರು, ತುಪ್ಪ, ಜೇನು, ವಿವಿಧ ಹಣ್ಣುಗಳು, ಗೋಡಂಬಿ, ಒಣದ್ರಾಕ್ಷಿ ಸೇರಿದಂತೆ ಹಲವು ದ್ರವ್ಯಗಳಿಂದ ಮೂಲ ಬೃಂದಾವನಕ್ಕೆ ಶ್ರೀಗಳು ಅಭಿಷೇಕಗೈದು ಮಂಗಳಾರತಿಯನ್ನು ಮಾಡಿದರು. ನಂತರ ಶ್ರೀಮೂಲ ರಘುಪತಿ ವೇದವಾಸ್ಯದೇವರಿಗೆ ವಿಶೇಷ ಅಲಂಕಾರ ಪೂಜೆ, ಹಸ್ತೋದಕ ಸಂತರ್ಪಣೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದವನ್ನು ನೆರವೇರಿಸಿದರು.
ಚಿನ್ನದ ರಥೋತ್ಸವ
ಈ ವೇಳೆ ಶ್ರೀಮಠದ ಒಳಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಸುವರ್ಣ ರಥದಲ್ಲಿ ರಾಯರ ಚಿನ್ನದ ಪ್ರಭಾವಳಿ,ಪಾದುಕೆ ಹಾಗೂ ಪರಿಮಳ ಗ್ರಂಥವನ್ನಿರಿಸಿ ಮಹಾಮಂಗಳಾರತಿ ಸೇವೆ ಗೈದಯುವುದರ ಮುಖಾಂತರ ಶ್ರೀಪಾದಂಗಳವರು ರಥೋತ್ಸವಕ್ಕೆ ಚಾಲನೆ ನೀಡಿದರು.
ಪ್ರಾಕಾರದ ಸುತ್ತು ಹೊಡೆದ ರಥೋತ್ಸವದ ಮುಂದೆ ಸೇರಿದದ್ದ ಜನಸ್ತೋಮವು ವೇದ-ಮಂತ್ರಗಳ ಘೋಷಣೆ, ಗಾಯನ,ನೃತ್ಯರೂಪಕಗಳನ್ನು ನಡೆಸಿ ಮಧ್ಯಾರಾಧನೆಯ ಸಂಭ್ರಮದಲ್ಲಿ ಮಿಂದೆದ್ದರು. ಇನ್ನು ಸಂಜೆ ಹಗಲು ದೀವಟಗೆ, ಮಾಲ್ಕಿ ಮಂಗಳಾರತಿ ಸೇವೆ, ಸ್ವಸ್ಥಿ ವಚನ ಮತ್ತು ಪ್ರಾಕಾರ ಉತ್ಸವದ ಜೊತೆಗೆ ಶ್ರೀಮಠದ ಮುಂಭಾಗದ ಯೋಗೀಂದ್ರ ಸಭಾಮಂಟಪದಲ್ಲಿ ಜರುಗಿದ ವಿವಿಧ ಸಾಂಸ್ಕೃತಿಕ-ಧಾರ್ಮಿಕ ಸಮಾರಂಭಗಳು ಭಕ್ತ ಸಮುದಾದ ಗಮನ ಸೆಳೆದವು. ಈ ಸಂದರ್ಭದಲ್ಲಿ ಶ್ರೀಮಠದ ವೇದ ಪಂಡಿತರು, ವಿದ್ವಾಂಸರು, ಅಧಿಕಾರಿ-ಸಿಬ್ಬಂದಿ ವರ್ಗದವರು ಹಾಗೂ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ಭಾಗವಹಿಸಿದ್ದರು.


