ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ, ಸಿಐಡಿ ಅಧಿಕಾರಿಗಳು ಬಿಜೆಪಿ ಶಾಸಕನ ಆಪ್ತ ಸಹಾಯಕನನ್ನು ವಶಕ್ಕೆ ಪಡೆದಿದ್ದಾರೆ. ಈತ ಈ ಹಿಂದೆ ಬಂಧಿತರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದ ಎಂಬ ಆರೋಪವಿದೆ.
ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮ ಪ್ರಕರಣ ದಿನಕ್ಕೊಂದು ಹೊಸ ಮರುಜೀವ ಪಡೆಯುತ್ತಿದ್ದು, ತನಿಖೆ ತೀವ್ರಗೊಂಡಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ IAS ಅಧಿಕಾರಿ ಜ್ಞಾನೇಂದ್ರಕುಮಾರ್ ಅವರನ್ನು ಬಂಧಿಸಿದ ಬೆನ್ನಲ್ಲೇ, ಪ್ರಕರಣದ ಪ್ರಮುಖ ಕೊಂಡಿಯಾಗಿದ್ದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೋಣಗಾಪುರ ಗ್ರಾಮದ ಬಸವರಾಜ್ ಕನ್ನಾಳೆ ಎಂಬುವವರನ್ನು ಸಿಐಡಿ (CID) ತಂಡ ವಶಕ್ಕೆ ಪಡೆದುಕೊಂಡಿದೆ.
IAS ಅಧಿಕಾರಿ ಮತ್ತು ಬಸವರಾಜ್ ನಡುವಿನ ಲಿಂಕ್!
ಬಂಧಿತ IAS ಅಧಿಕಾರಿ ಜ್ಞಾನೇಂದ್ರಕುಮಾರ್ ಅವರು 2018 ರಿಂದ 2019 ರವರೆಗೆ ಸುಮಾರು 11 ತಿಂಗಳುಗಳ ಕಾಲ ಬಸವಕಲ್ಯಾಣದಲ್ಲಿ ಎಸಿ (AC) ಆಗಿ ಕರ್ತವ್ಯ ನಿರ್ವಹಿಸಿದ್ದರು. ತದನಂತರ 2020-21 ರಲ್ಲಿ ಬೀದರ್ ಜಿಲ್ಲಾ ಪಂಚಾಯ್ತಿ ಸಿಇಒ (CEO) ಆಗಿ ಕಾರ್ಯನಿರ್ವಹಿಸಿದ್ದರು. ಇದೇ ಅವಧಿಯಲ್ಲಿ ಬಸವರಾಜ್ ಕನ್ನಾಳೆ, ಪ್ರಸ್ತುತ ಬಿಜೆಪಿ ಶಾಸಕರಾಗಿರುವ ಡಾ.ಶೈಲೇಂದ್ರ ಬೆಲ್ದಾಳೆ ಅವರ ಪಿಎ ಆಗಿ ಕೆಲಸ ಮಾಡುತ್ತಿದ್ದನು. ಈ ಸಂದರ್ಭದಲ್ಲಿ ಜ್ಞಾನೇಂದ್ರಕುಮಾರ್ ಅವರೊಂದಿಗೆ ಬಸವರಾಜ್ ಅತ್ಯಂತ ನಿಕಟ ಹಾಗೂ ಉತ್ತಮ ಒಡನಾಟ ಬೆಳೆಸಿಕೊಂಡಿದ್ದ ಎನ್ನಲಾಗಿದೆ.
ಮಧ್ಯವರ್ತಿಯಾಗಿ ಕೋಟಿ ಕೋಟಿ ಸಂಪಾದನೆ!
ಈ ಪರಿಚಯವನ್ನೇ ಬಂಡವಾಳ ಮಾಡಿಕೊಂಡ ಬಸವರಾಜ್ ಕನ್ನಾಳೆ, KPSC ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ IAS ಅಧಿಕಾರಿ ಜ್ಞಾನೇಂದ್ರ ಮತ್ತು ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳ ನಡುವೆ ಪ್ರಮುಖ ‘ಮಧ್ಯವರ್ತಿ’ಯಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದನು. ಬೀದರ್ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಅನೇಕ ಅಭ್ಯರ್ಥಿಗಳಿಂದ ಹಣ ಪಡೆದು ಉದ್ಯೋಗ ಕೊಡಿಸುವಲ್ಲಿ ಈತ ಭಾಗಿಯಾಗಿದ್ದನೆಂಬ ಗಂಭೀರ ಆರೋಪ ಕೇಳಿಬಂದಿದೆ. ಕೇವಲ ನಾಲ್ಕೈದು ವರ್ಷಗಳ ಅವಧಿಯಲ್ಲಿ ಈತ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಗಳಿಸಿದ್ದು, ತನ್ನ ತಂದೆಯ ವಯೋನಿವೃತ್ತಿಯ ಶುಭ ಸಂದರ್ಭದಲ್ಲಿ ಐಷಾರಾಮಿ ‘ಇನ್ನೋವಾ’ ಕಾರನ್ನು ಉಡುಗೊರೆಯಾಗಿ ನೀಡಿದ್ದನೆನ್ನಲಾಗಿದೆ. ಈತನ ಹಠಾತ್ ಶ್ರೀಮಂತಿಕೆ ಈಗ ಸಿಐಡಿ ತನಿಖೆಯ ಮುಖ್ಯ ವಸ್ತುವಾಗಿದೆ.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ನೀಡಿದ ಸ್ಪಷ್ಟನೆ!
ಬಸವರಾಜ್ ಕನ್ನಾಳೆ ಸಿಐಡಿ ವಶಕ್ಕೆ ಒಳಗಾಗುತ್ತಿದ್ದಂತೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಬಿಜೆಪಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. "ಈ ಅಕ್ರಮದ ಕುರಿತು ಸಂಪೂರ್ಣ ಸಿಐಡಿ ತನಿಖೆಯಾಗಲಿ ಮತ್ತು ಸತ್ಯಾಸತ್ಯತೆ ಶೀಘ್ರವೇ ಹೊರಬರಲಿ" ಎಂದು ಒತ್ತಾಯಿಸಿದ್ದಾರೆ.
ಉದ್ಯೋಗ ಕೊಡಿಸಿದ ಮಾಹಿತಿ ನನಗಿಲ್ಲ!
ಬಸವರಾಜ್ ಕುರಿತು ಮಾತನಾಡಿದ ಶಾಸಕರು, ಆತ ಹಿಂದೆ ನನ್ನ ಬಳಿಯೂ ಬರುತ್ತಿದ್ದ, ಆಪ್ತನಾಗಿದ್ದ ನಿಜ. ಆದರೆ ಆತನೊಂದಿಗೆ ನನಗೆ ಯಾವುದೇ ರೀತಿಯ ವ್ಯವಹಾರಿಕ ಅಥವಾ ಹಣಕಾಸಿನ ಸಂಬಂಧ ಇರಲಿಲ್ಲ. ಆತ ಬಿಜೆಪಿಯ ಅಧಿಕೃತ ಮುಖಂಡನೂ ಅಲ್ಲ, ಪಕ್ಷದಲ್ಲಿ ಯಾವುದೇ ಹುದ್ದೆಯಲ್ಲೂ ಇಲ್ಲ. ಆತನಿಗೆ ರಾಜಕೀಯದಲ್ಲಿ ಎಲ್ಲರ ಜೊತೆಗೂ ಒಡನಾಟ ಇಟ್ಟುಕೊಳ್ಳುವ ಅಭ್ಯಾಸವಿತ್ತು. ಕೇವಲ ನನ್ನ ಬಳಿ ಮಾತ್ರವಲ್ಲದೆ ಈಶ್ವರ್ ಖಂಡ್ರೆ ಹಾಗೂ ಜಿ.ಪರಮೇಶ್ವರ್ ಅವರಂತಹ ಪ್ರಭಾವಿ ನಾಯಕರ ಜೊತೆಯೂ ಆತನಿಗೆ ಒಳ್ಳೆಯ ಸಂಬಂಧವಿತ್ತು. ಆತ ಯಾರಿಗೆಲ್ಲಾ ಉದ್ಯೋಗ ಕೊಡಿಸಿದ್ದಾನೆ ಎಂಬ ಮಾಹಿತಿ ನನಗಿಲ್ಲ. ಈ ಅಕ್ರಮದಲ್ಲಿ ಯಾರಿದ್ದಾರೆ, ಏನು ನಡೆದಿದೆ ಎಂಬುದು ನಿಷ್ಪಕ್ಷಪಾತ ತನಿಖೆಯಿಂದಷ್ಟೇ ಹೊರಬರಬೇಕಿದೆ ಎಂದು ಶಾಸಕ ಬೆಲ್ದಾಳೆ ಹೇಳಿದ್ದಾರೆ.


