ಬೆಂಗಳೂರು ಮೂಲದ ಕನ್ನಡಿಗ ಅನಿಲ್ ಚಕ್ರವರ್ತಿ ಅವರು ಜಾಗತಿಕ ಟೆಕ್ ದೈತ್ಯ 'ಅಡೋಬ್' ಸಂಸ್ಥೆಯ ನೂತನ ಸಿಇಒ ಆಗಿ ನೇಮಕಗೊಂಡಿದ್ದಾರೆ. ಬಸವನಗುಡಿಯಲ್ಲಿ ಬೆಳೆದು, ಸಿಲಿಕಾನ್ ವ್ಯಾಲಿಯಲ್ಲಿ ಉನ್ನತ ಸ್ಥಾನಕ್ಕೇರಿದ ಅವರ ಪಯಣ ಮತ್ತು ಅಡೋಬ್ ಸಂಸ್ಥೆಯಲ್ಲಿ ಅವರ ಜವಾಬ್ದಾರಿಗಳ ವಿವರ ಇಲ್ಲಿದೆ.
ಬೆಂಗಳೂರು (ಸೆ.5): ಜಾಗತಿಕ ತಂತ್ರಜ್ಞಾನ ರಂಗದ ದೈತ್ಯ ಸಂಸ್ಥೆಗಳಲ್ಲಿ ಒಂದಾದ 'ಅಡೋಬ್' (Adobe) ಕಂಪನಿಯ ನೂತನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಭಾರತ ಮೂಲದ, ಬೆಂಗಳೂರಿನ ಅನಿಲ್ ಚಕ್ರವರ್ತಿ ನೇಮಕಗೊಂಡಿದ್ದಾರೆ. ಈ ಮೂಲಕ ಜಾಗತಿಕ ಟೆಕ್ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಭಾರತೀಯ ತಾಂತ್ರಿಕ ದಿಗ್ಗಜರ ಸಾಲಿಗೆ ಮತ್ತೊಬ್ಬ ಕನ್ನಡಿಗ ಸೇರ್ಪಡೆಯಾಗಿದ್ದಾರೆ.
ಸುದೀರ್ಘ 18 ವರ್ಷಗಳಿಗೂ ಹೆಚ್ಚು ಕಾಲ ಅಡೋಬ್ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಶಂತನು ನಾರಾಯಣ್ ಅವರು ಈ ವರ್ಷದ ಆರಂಭದಲ್ಲಿ ಹುದ್ದೆಯಿಂದ ಕೆಳಗಿಳಿಯುವ ಇಚ್ಛೆ ವ್ಯಕ್ತಪಡಿಸಿದ್ದರು. ಅವರ ಸ್ಥಾನಕ್ಕೆ ಇದೀಗ ಅನಿಲ್ ಚಕ್ರವರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ಅಡೋಬ್‌ನ 'ಕಸ್ಟಮರ್ ಎಕ್ಸ್‌ಪೀರಿಯನ್ಸ್ ಆರ್ಕೆಸ್ಟ್ರೇಶನ್' ವಿಭಾಗದ ಅಧ್ಯಕ್ಷರಾಗಿರುವ ಅನಿಲ್, 2026ರ ಡಿಸೆಂಬರ್ 1ರಿಂದ ಅಧಿಕೃತವಾಗಿ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸಕ್ತ ಸಿಇಒ ಶಂತನು ನಾರಾಯಣ್ ಅವರು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ (Executive Chair) ಬಡ್ತಿ ಪಡೆಯಲಿದ್ದು, ಪರಿವರ್ತನೆಯ ಹಂತದಲ್ಲಿ ಅನಿಲ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದಾರೆ.
ಕರ್ನಾಟಕ ಮೂಲದ ತಂತ್ರಜ್ಞಾನ ದಿಗ್ಗಜರಾದ ಆಂಥ್ರೋಪಿಕ್ ಸಿಟಿಒ ರಾಹುಲ್ ಪಾಟೀಲ್, ಓಪನ್‌ಎಐ ಇನ್‌ಫ್ರಾಸ್ಟ್ರಕ್ಚರ್ ಮುಖ್ಯಸ್ಥ ಸಚಿನ್ ಕಟ್ಟಿ ಹಾಗೂ ಆಪಲ್ ಎಐ ವಿಭಾಗದ ಉಪಾಧ್ಯಕ್ಷ ಅಮರ್ ಸುಬ್ರಮಣ್ಯ ಅವರ ಸಾಲಿಗೆ ಈಗ ಅನಿಲ್ ಚಕ್ರವರ್ತಿ ಕೂಡ ಪ್ರಮುಖರಾಗಿ ಸೇರ್ಪಡೆಯಾಗಿದ್ದಾರೆ. ಕಾನ್ವಾ (Canva), ಆಂಥ್ರೋಪಿಕ್ ಹಾಗೂ ಓಪನ್‌ಎಐನಂತಹ ಎಐ-ಆಧಾರಿತ ಸಂಸ್ಥೆಗಳಿಂದ ಕಠಿಣ ಸ್ಪರ್ಧೆ ಎದುರಾಗುತ್ತಿರುವ ಈ ಕೃತಕ ಬುದ್ಧಿಮತ್ತೆ (AI) ಹಾಗೂ ಏಜೆಂಟ್ ಸಿಸ್ಟಮ್‌ಗಳ ಯುಗದಲ್ಲಿ ಅಡೋಬ್ ಅನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿ ಅನಿಲ್ ಹೆಗಲೇರಿದೆ.
ಬಸವನಗುಡಿಯಿಂದ ಸಿಲಿಕಾನ್ ವ್ಯಾಲಿವರೆಗಿನ ಪಯಣ
ಅನಿಲ್ ಚಕ್ರವರ್ತಿ ಅವರು ಬೆಳೆದದ್ದು ನಮ್ಮ ಬೆಂಗಳೂರಿನ ಅತ್ಯಂತ ಪ್ರಾಚೀನ ಹಾಗೂ ಸಾಂಸ್ಕೃತಿಕ ಬಡಾವಣೆಯಾದ ಬಸವನಗುಡಿಯಲ್ಲಿ. 1983ರಿಂದ 1985ರ ಅವಧಿಯಲ್ಲಿ ಬಸವನಗುಡಿಯಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದ ಅವರು, ಬಳಿಕ ವಾರಣಾಸಿಯ 'ಬನಾರಸ್ ಹಿಂದೂ ವಿಶ್ವವಿದ್ಯಾಲಯ'ದ ಐಐಟಿ (IIT-BHU) ಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಪಡೆದರು.
21ನೇ ವಯಸ್ಸಿನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ ಅವರು, ಪ್ರತಿಷ್ಠಿತ 'ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' (MIT) ಯಲ್ಲಿ ಸ್ನಾತಕೋತ್ತರ ಹಾಗೂ ಡಾಕ್ಟರೇಟ್ (PhD) ಪದವಿಗಳನ್ನು 1995ರಲ್ಲಿ ಪೂರ್ಣಗೊಳಿಸಿದರು. ನಾನು ಒಬ್ಬ ಉದಯೋನ್ಮುಖ ವಿಜ್ಞಾನಿಯಿಂದ ಉದ್ಯಮಿಯಾಗಲು ಬಯಸಿದ್ದು ಎಂಐಟಿಯ ಆ ದಿನಗಳಲ್ಲೇ ಎಂದು ಅನಿಲ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ತಮ್ಮ ವೃತ್ತಿಜೀವನವನ್ನು ಪ್ರಸಿದ್ಧ 'ಮೆಕಿನ್ಸೆ' (McKinsey) ಸಂಸ್ಥೆಯಲ್ಲಿ ಆರಂಭಿಸಿದ ಅವರು, 'ಲಾಜಿಕ್ಟಿಯರ್' ಮತ್ತು 'ವೆರಿಸೈನ್' ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದರು. ನಂತರ 2004ರಿಂದ 2013ರವರೆಗೆ 'ಸಿಮ್ಯಾಂಟೆಕ್' (Symantec) ಸಂಸ್ಥೆಯಲ್ಲಿ ಸುದೀರ್ಘ 10 ವರ್ಷ ಸೇವೆ ಸಲ್ಲಿಸಿ, ಇನ್ಫಾರ್ಮೇಷನ್ ಸೆಕ್ಯುರಿಟಿ ವಿಭಾಗದ ಕಾರ್ಯಾಂಗ ಉಪಾಧ್ಯಕ್ಷರಾಗಿ ಎಂಜಿನಿಯರಿಂಗ್ ಹಾಗೂ ಉತ್ಪನ್ನ ನಿರ್ವಹಣೆಯನ್ನು ಯಶಸ್ವಿಯಾಗಿ ನಿಭಾಯಿಸಿದರು. 2013ರಲ್ಲಿ 'ಇನ್ಫಾರ್ಮ್ಯಾಟಿಕಾ' (Informatica) ಕಂಪನಿಗೆ ಮುಖ್ಯ ಉತ್ಪನ್ನ ಅಧಿಕಾರಿಯಾಗಿ (CPO) ಸೇರಿದ ಅವರು, 2015ರಿಂದ 2020ರವರೆಗೆ ಅದೇ ಸಂಸ್ಥೆಯ ಸಿಇಒ ಆಗಿ ಯಶಸ್ವಿ ಆಡಳಿತ ನೀಡಿದರು.
ಅಡೋಬ್‌ನಲ್ಲಿ ಅನಿಲ್ ಬೆಳವಣಿಗೆ
ಇನ್ಫಾರ್ಮ್ಯಾಟಿಕಾ ಸಂಸ್ಥೆಯಲ್ಲಿದ್ದಾಗ ಅಡೋಬ್‌ನ ಶಂತನು ನಾರಾಯಣ್ ಅವರೊಂದಿಗೆ ಪರಿಚಯ ಬೆಳೆಸಿಕೊಂಡ ಅನಿಲ್, 2020ರ ಜನವರಿಯಲ್ಲಿ ಅಡೋಬ್ ಸಂಸ್ಥೆಯ ಡಿಜಿಟಲ್ ಎಕ್ಸ್‌ಪೀರಿಯನ್ಸ್ ವಿಭಾಗದ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಆಗಿ ಸೇರ್ಪಡೆಯಾದರು. ಡಿಸೆಂಬರ್ 2021ರಲ್ಲಿ ಡಿಜಿಟಲ್ ಎಕ್ಸ್‌ಪೀರಿಯನ್ಸ್ ಮತ್ತು ಗ್ಲೋಬಲ್ ಫೀಲ್ಡ್ ಆಪರೇಷನ್ಸ್‌ನ ಅಧ್ಯಕ್ಷರಾಗಿ ಬಡ್ತಿ ಪಡೆದರು.
ಅನಿಲ್ ಅವರ ನೇತೃತ್ವದಲ್ಲಿ ಅಡೋಬ್ ಸಂಸ್ಥೆಯು 'ಕಸ್ಟಮರ್ ಎಕ್ಸ್‌ಪೀರಿಯನ್ಸ್ ಆರ್ಕೆಸ್ಟ್ರೇಶನ್' ಕ್ಷೇತ್ರದಲ್ಲಿ ಜಾಗತಿಕ ಲೀಡರ್ ಆಗಿ ಹೊರಹೊಮ್ಮಿತು. ಅಡೋಬ್ ಸಿಎಕ್ಸ್ ಎಂಟರ್‌ಪ್ರೈಸ್, ಜೆನ್‌ಸ್ಟುಡಿಯೋ, ಬ್ರಾಂಡ್ ವಿಸಿಬಿಲಿಟಿ ಹಾಗೂ ಸಿಎಕ್ಸ್ ಎಂಟರ್‌ಪ್ರೈಸ್ ಕೋವರ್ಕರ್‌ನಂತಹ ಕ್ರಾಂತಿಕಾರಿ ಎಐ-ಆಧಾರಿತ ಉತ್ಪನ್ನಗಳನ್ನು ಸೃಷ್ಟಿಸುವಲ್ಲಿ ಅನಿಲ್ ವಹಿಸಿದ ಪಾತ್ರ ಪ್ರಮುಖವಾದದ್ದು. ಅಷ್ಟೇ ಅಲ್ಲದೆ, ವರ್ಕ್‌ಫ್ರಂಟ್ ಮತ್ತು ಸೆಮ್ರಷ್ (Semrush) ಕಂಪನಿಗಳನ್ನು ಅಡೋಬ್ ಖರೀದಿಸುವಲ್ಲಿ (Acquisition) ಅನಿಲ್ ಪ್ರಮುಖ ಪಾತ್ರ ವಹಿಸಿದ್ದರು.
ಎಐ-ಚಾಲಿತ ಈ ಹೊಸ ಯುಗದಲ್ಲಿ ಅಡೋಬ್ ಸಂಸ್ಥೆಯ ಅಭಿವೃದ್ಧಿಯನ್ನು ಮುನ್ನಡೆಸಲು ಅನಿಲ್ ಚಕ್ರವರ್ತಿ ಅತ್ಯಂತ ಸೂಕ್ತ ಹಾಗೂ ಸಮರ್ಥ ನಾಯಕ ಎಂದು ನಿರ್ಗಮಿತ ಸಿಇಒ ಶಂತನು ನಾರಾಯಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಡೋಬ್‌ಗೆ ಭಾರತವೇ ಅತಿ ದೊಡ್ಡ ಕೇಂದ್ರ
ಅಮೆರಿಕವನ್ನು ಹೊರತುಪಡಿಸಿದರೆ ಅಡೋಬ್ ಸಂಸ್ಥೆಯ ಅತ್ಯಂತ ದೊಡ್ಡ ಉದ್ಯೋಗಿ ಪಡೆ ಇರುವುದು ಭಾರತದಲ್ಲೇ! ಬೆಂಗಳೂರು, ನೋಯ್ಡಾ, ಗುರುಗ್ರಾಮ್, ಮುಂಬೈ ಹಾಗೂ ಹೈದರಾಬಾದ್‌ನ 5 ಕ್ಯಾಂಪಸ್‌ಗಳಲ್ಲಿ ಒಟ್ಟು 8,500ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 1997ರಲ್ಲಿ ಭಾರತಕ್ಕೆ ಕಾಲಿಟ್ಟ ಅಡೋಬ್, ದೇಶದಲ್ಲಿ ತನ್ನ ಸಂಪೂರ್ಣ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೇಂದ್ರಗಳನ್ನು ಆರಂಭಿಸಿದ ಮೊದಲ ಜಾಗತಿಕ ಸಂಸ್ಥೆಯಾಗಿದೆ. ಅಡೋಬ್‌ನ ಪ್ರಸಿದ್ಧ ‘ಇಲಸ್ಟ್ರೇಟರ್’ ಹಾಗೂ ‘ಆಕ್ರೋಬ್ಯಾಟ್ ಪಿಡಿಎಫ್’ ಸಾಫ್ಟ್‌ವೇರ್‌ಗಳ ಶೇ 30ಕ್ಕೂ ಹೆಚ್ಚು ಸಂಶೋಧನೆ ಮತ್ತು ತಾಂತ್ರಿಕ ಆವಿಷ್ಕಾರಗಳು ಭಾರತೀಯ ಟೀಮ್‌ಗಳ ನೇತೃತ್ವದಲ್ಲೇ ನಡೆಯುತ್ತಿರುವುದು ವಿಶೇಷ.


