ಕರ್ನಾಟಕ ಸಾಫ್ಟ್ ಬಾಲ್ ಪ್ರಿಮಿಯರ್ ಲೀಗ್ (KSPL) ಸೀಸನ್-3ಕ್ಕೆ ಬೆಂಗಳೂರಿನಲ್ಲಿ ಅದ್ದೂರಿ ಚಾಲನೆ ದೊರೆತಿದೆ. ನಟ ಡಾರ್ಲಿಂಗ್ ಕೃಷ್ಣ, ಐಂದ್ರಿತಾ ರೈ ಸೇರಿದಂತೆ ಗಣ್ಯರು ಭಾಗವಹಿಸಿದ್ದ ಈ ಸಮಾರಂಭವು, ಗ್ರಾಮೀಣ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸುವ ಗುರಿಯನ್ನು ಹೊಂದಿದೆ.

ಬೆಂಗಳೂರು (ಸೆ.5): ರಾಜ್ಯದ ಗ್ರಾಮೀಣ ಭಾಗದ ಉದಯೋನ್ಮುಖ ಕ್ರೀಡಾಪಟುಗಳ ಪ್ರತಿಭೆಗೆ ವೇದಿಕೆ ಕಲ್ಪಿಸುವ ಉದ್ದೇಶದ ‘ಕರ್ನಾಟಕ ಸಾಫ್ಟ್ ಬಾಲ್ ಪ್ರಿಮಿಯರ್ ಲೀಗ್’ (KSPL) ಸೀಸನ್-3 ಸರಣಿಗೆ ನಗರದ ಗಾಯತ್ರಿ ವಿಹಾರದಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಚಲನಚಿತ್ರ ನಟ ಡಾರ್ಲಿಂಗ್ ಕೃಷ್ಣ, ನಟಿ ಐಂದ್ರಿತಾ ರೈ, ಹಿರಿಯ ನಿರ್ದೇಶಕ ಎಸ್. ನಾರಾಯಣ್, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಕೆಎಸ್‌ಪಿಎಲ್ ಚೇರ್ಮನ್ ಸಿದ್ಧರಾಮ್ ದೇಸಾಯಿ, ಸಾಫ್ಟ್ ಬಾಲ್ ಕ್ರಿಕೆಟ್ ಫೌಂಡೇಷನ್ ಮುಖ್ಯಸ್ಥ ಡಾ. ಗಂಗಾಧರ್ ರಾಜು ಹಾಗೂ ನಟ ರವಿಚೇತನ್ ಸೇರಿದಂತೆ ಹಲವು ಗಣ್ಯರು ದೀಪ ಬೆಳಗಿಸುವ ಮೂಲಕ ಪಂದ್ಯಾವಳಿಯನ್ನು ಉದ್ಘಾಟಿಸಿದರು.

'ಹೆಸರಿಗಷ್ಟೇ ಸಾಫ್ಟ್, ಆಡುವುದು ಸಿಕ್ಕಾಪಟ್ಟೆ ಹಾರ್ಡ್!': ಡಾರ್ಲಿಂಗ್ ಕೃಷ್ಣ

ಉದ್ಘಾಟನೆ ನೆರವೇರಿಸಿ ಮಾತನಾಡಿದ ನಟ ಡಾರ್ಲಿಂಗ್ ಕೃಷ್ಣ, 'ನಾನೂ ಕೂಡ ಸಾಫ್ಟ್ ಬಾಲ್ ಪಂದ್ಯ ಆಡಿದ್ದೇನೆ. ಹೆಸರಿಗೆ ಸಾಫ್ಟ್ ಬಾಲ್ ಎಂದಿದ್ದರೂ ಆಡಿದ ಮೇಲೆಯೇ ತಿಳಿಯುವುದು ಅದು ಅತ್ಯಂತ ಹಾರ್ಡ್ ಆದ ಆಟ ಎಂದು. ಲೆದರ್ ಬಾಲ್ ಕ್ರಿಕೆಟ್‌ಗೂ ಇದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಗಲ್ಲಿ ಗಲ್ಲಿಗಳಲ್ಲಿ ಟೆನ್ನಿಸ್ ಬಾಲ್ ಆಡುವ ಪ್ರತಿಭಾವಂತರನ್ನು ಹುಡುಕಿ ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಕೆಎಸ್‌ಪಿಎಲ್ ಮಾಡುತ್ತಿರುವುದು ಶ್ಲಾಘನೀಯ. ಈ ಸರಣಿ ನೂರಾರು ಆವೃತ್ತಿಗಳನ್ನು ಕಾಣಲಿ' ಎಂದು ಶುಭ ಹಾರೈಸಿದರು.

'ಹಳ್ಳಿ ಮಕ್ಕಳಿಗೆ ರಾಷ್ಟ್ರೀಯ ಮಟ್ಟದ ವೇದಿಕೆ': ನಟಿ ಐಂದ್ರಿತಾ ರೈ

ನಟಿ ಐಂದ್ರಿತಾ ರೈ ಮಾತನಾಡಿ, 'ನಮ್ಮ ದೇಶದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕ್ರಿಕೆಟ್ ಹುಚ್ಚಿರುತ್ತದೆ. ನನಗೂ ಮತ್ತು ದಿಗಂತ್‌ಗೂ ಕ್ರಿಕೆಟ್ ಎಂದರೆ ಪಂಚಪ್ರಾಣ. ಗಲ್ಲಿ ಹಾಗೂ ಬಾಕ್ಸ್ ಕ್ರಿಕೆಟ್ ಆಡಿದ ಅನುಭವ ನನಗಿದೆ. ಹಳ್ಳಿಯಿಂದ ದೆಹಲಿವರೆಗಿನ ನಮ್ಮ ಗ್ರಾಮೀಣ ಭಾಗದ ಮಕ್ಕಳಿಗೆ ತಮ್ಮ ಕ್ರೀಡಾ ಕೌಶಲ್ಯ ಪ್ರದರ್ಶಿಸಲು ಕೆಎಸ್‌ಪಿಎಲ್ ಸೂಕ್ತ ವೇದಿಕೆ ರೂಪಿಸಿದೆ. ಈ ಆವೃತ್ತಿಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ಆಟಗಾರರಿಗೂ ಶುಭಾಶಯಗಳು' ಎಂದರು.

32 ತಂಡಗಳು, 63 ಪಂದ್ಯಗಳು!

ಈ ಬಾರಿಯ ಕೆಎಸ್‌ಪಿಎಲ್ ಸೀಸನ್-3 ಆವೃತ್ತಿಯಲ್ಲಿ ಒಟ್ಟು 32 ತಂಡಗಳು ಭಾಗವಹಿಸುತ್ತಿದ್ದು, ಚಾಂಪಿಯನ್‌ ಪಟ್ಟಕ್ಕಾಗಿ ಒಟ್ಟು 63 ಪಂದ್ಯಗಳು ನಡೆಯಲಿವೆ. ಸಂಸ್ಥೆಯ ಉಗಮ ಮತ್ತು ಬೆಳವಣಿಗೆಯ ಕುರಿತು ಮಾತನಾಡಿದ ಸಾಫ್ಟ್ ಬಾಲ್ ಕ್ರಿಕೆಟ್ ಫೌಂಡೇಷನ್ ಮುಖ್ಯಸ್ಥ ಡಾ. ಗಂಗಾಧರ್ ರಾಜು, 'ಆರಂಭದ ದಿನಗಳಲ್ಲಿ ಅನುಭವಿಸಿದ ಕಷ್ಟಗಳು ಹಾಗೂ ಗ್ರಾಮೀಣ ಆಟಗಾರರನ್ನು ಸಂಘಟಿಸಲು ಪಟ್ಟ ಶ್ರಮ ಇಂದು ಸಾರ್ಥಕವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ 'ಐಎಸ್‌ಪಿಎಲ್' (ISPL) ಆಯೋಜಿಸುವ ಬೃಹತ್ ಪರಿಕಲ್ಪನೆ ಹೊಂದಿದ್ದೇವೆ. ನಮ್ಮ ಹಳ್ಳಿ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕೆಂಬುದೇ ಸಂಸ್ಥೆಯ ಮೂಲ ಉದ್ದೇಶ," ಎಂದು ವಿವರಿಸಿದರು.