ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ರೈತನೋರ್ವನನ್ನು ನಾಡಬಾಂಬ್ ಸ್ಫೋಟಿಸಿ ಕೊಲೆ ಮಾಡಲು ಯತ್ನಿಸಲಾಗಿದೆ. ರೈತ ಕರಿಯಣ್ಣ ಪಂಪ್‌ಹೌಸ್‌ನ ಸ್ಟಾಟರ್ ಆನ್ ಮಾಡಿದಾಗ ಬಾಂಬ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಪಾವಗಡ (ತುಮಕೂರು)
ನಾಡಬಾಂಬ್ ಸ್ಫೋಟಿಸಿ ರೈತನೋರ್ವನನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕನಿಕಲಬಂಡೆ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ನಡೆದಿದೆ. ಅದೃಷ್ಟವಶಾತ್ ರೈತ ಪಾರಾಗಿದ್ದಾನೆ. ರೈತ ಕರಿಯಣ್ಣ ತಮ್ಮ ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ಪಂಪ್‌ಹೌಸ್‌ನಲ್ಲಿದ್ದ ಸ್ಟಾಟರ್ ಆನ್ ಮಾಡುತ್ತಿದ್ದಂತೆ ಬಾಂಬ್ ಸ್ಫೋಟಗೊಂಡಿದೆ.
ಪಂಪ್‌ಹೌಸ್‌ನ ಮೂಲೆಯಲ್ಲಿ ಪರಿಶೀಲಿಸಿದಾಗ ಮತ್ತೊಂದು ಬಾಂಬ್ ಪತ್ತೆಯಾಗಿದೆ. ಘಟನೆ ಬಗ್ಗೆ ರೈತ ಕರಿಯಣ್ಣ ಮಾತನಾಡಿ, ಕಳೆದ 3 ತಿಂಗಳ ಹಿಂದೆ ವೆಂಕಟೇಶ್ ಎನ್ನುವರು ತಮ್ಮ ಜಮೀನಿಗೆ ಪ್ರವೇಶಿಸಿ ಈ ಜಮೀನು ನಮಗೆ ಸೇರಿದ್ದು ಎಂದು ಪ್ರಾಣ ಬೆದರಿಕೆ ಹಾಕಿದ್ದ. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಇದೇ ದ್ವೇಷದಿಂದ ಆತನೇ ಪಂಪ್‌ಹೌಸ್‌ನಲ್ಲಿ ಬಾಂಬ್ ಇಟ್ಟಿರುವ ಶಂಕೆ ಇದೆ ಎಂದು ತಿಳಿಸಿದ್ದಾನೆ. ಘಟನೆ ಸಂಬಂಧ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಘಟನಾ ಸ್ಥಳಕ್ಕೆ ಎಸ್ಪಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


