ಮುಂಡಗೋಡ ಮೂಲದ ಬೌದ್ಧ ಸನ್ಯಾಸಿ ತಾಶಿ ಧೊಂದೂಪ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಕೊಲ್ಲಾಪುರ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಏ. 28ರಂದು ಗ್ರಾಮೀಣ ಠಾಣೆ ವ್ಯಾಪ್ತಿಯ ಇಲ್ಲಿಯ ಬೈಪಾಸ್‌ನ ಹಳಿಯಾಳ ರಸ್ತೆ ಸೇತುವೆ ಕೆಳಗೆ ಶವ ಪತ್ತೆಯಾಗಿತ್ತು

ಧಾರವಾಡ: ಮುಂಡಗೋಡ ಮೂಲದ ಬೌದ್ಧ ಸನ್ಯಾಸಿಯ ಕೊಲೆ ಪ್ರಕರಣವನ್ನು ಗ್ರಾಮೀಣ ಠಾಣೆಯ ಪೊಲೀಸರು ಬೇಧಿಸಿದ್ದು, ಐವರು ಆರೋಪಿಗಳ ಪೈಕಿ 18 ವರ್ಷದ ಯುವಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಟ್ಟೇಹಳ್ಳಿಯ ಬೌದ್ಧ ಸನ್ಯಾಸಿ ತಾಶಿ ಧೊಂದೂಪ (40) ಶವ ಏ. 28ರಂದು ಗ್ರಾಮೀಣ ಠಾಣೆ ವ್ಯಾಪ್ತಿಯ ಇಲ್ಲಿಯ ಬೈಪಾಸ್‌ನ ಹಳಿಯಾಳ ರಸ್ತೆ ಸೇತುವೆ ಕೆಳಗೆ ಪತ್ತೆಯಾಗಿತ್ತು. ಇದು ಕೊಲೆ ಎಂದು ಗೊತ್ತಾದ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸರು ಎಂಟು ತಂಡಗಳನ್ನು ರಚಿಸಿ ವಾರದೊಳಗೆ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಗುಂಜನ್‌ ಆರ್ಯ ಮಾಹಿತಿ ನೀಡಿದರು.

ಆರೋಪಿಗಳಿವರು

ಸಂಕೇತ ಸತ್ಯಪ್ಪ ಯಾದವ (24), ವೈಭವ ಮಾರುತಿ ಚವ್ಹಾಣ (30) ಹಾಗೂ ಓರ್ವ ಅಪ್ರಾಪ್ತ ಕೊಲೆ ಆರೋಪಿಗಳಾಗಿದ್ದು, ಇನ್ನೂ ಇಬ್ಬರು ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ.

ಕೊಲೆ ಮಾಡಿದ ಎಲ್ಲ ಆರೋಪಿಗಳು ಕೊಲ್ಲಾಪೂರ ಮೂಲದವರಾಗಿದ್ದು, ಹಣಕ್ಕಾಗಿ ಈ ದುಷ್ಕೃತ್ಯ ಎಸಗಿದ್ದಾರೆ. ಕಬ್ಬು ಕಟಾವು ಸೇರಿ ಬೇರೆ ಬೇರೆ ಕೆಲಸಕ್ಕಾಗಿ ಈ ಮುಂಚೆ ಆಗಾಗ ಮುಂಡಗೋಡಕ್ಕೆ ಆರೋಪಿಗಳು ಬರುತ್ತಿದ್ದರು. ಮುಂಡಗೋಳ ಸ್ಥಳದ ಪರಿಚಯವಿತ್ತು. ಹಣದ ಅವಶ್ಯಕತೆ ಆರೋಪಿಗಳಿಗೆ ಹೆಚ್ಚಿದ್ದ ಕಾರಣ ಏ. 28ರಂದು ಕೊಲ್ಲಾಪುರದಿಂದ ಕಾರಿನಲ್ಲಿ ಬಂದಿದ್ದಾರೆ. ಮುಂಡಗೋಡ ಕ್ಯಾಂಪ್‌ನಲ್ಲಿ ಅಂದು ಮೂವರ ಮೇಲೆ ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ವಿಫಲ ಯತ್ನವಾದ ಬಳಿಕ ಕೊಲೆಯಾದ ತಾಶಿ ದೊಂದೊಪ ಅವರನ್ನು ಅಪಹರಿಸಿ ಹಣ ಕೇಳಿದ್ದಾರೆ.

ಈ ಸಂದರ್ಭದಲ್ಲಿ ಕೈಕಾಲು ಕಟ್ಟಿ ತೀವ್ರವಾಗಿ ಹಲ್ಲೆ ನಡೆಸಿದಾಗ ತಾಶಿ ಅವರ ಮೂಗಿಗೆ ಬಲವಾಗಿ ಪೆಟ್ಟು ಬಿದ್ದು ಉಸಿರಾಟ ಸಮಸ್ಯೆಯಿಂದ ಕಾರಿನಲ್ಲಿಯೇ ತಾಶಿ ಮೃತಪಟ್ಟಿದ್ದಾರೆ.

ಸಿಸಿ ಕ್ಯಾಮೆರಾ ಪರಿಶೀಲನೆ

ಮುಂಡಗೋಡದಿಂದ ಶವವನ್ನು ಕಾರಿನಲ್ಲಿಯೇ ತಂದಿರುವ ಆರೋಪಿಗಳು ಹಳಿಯಾಳ ಸೇತುವೆ ಬಳಿ ಎಸೆದು ಬೈಪಾಸ್‌ ಮೂಲಕ ಕೊಲ್ಲಾಪೂರಕ್ಕೆ ಹೋಗಿದ್ದಾರೆ.

ಆರೋಪಿಗಳನ್ನು ಇಷ್ಟು ಶೀಘ್ರ ಪತ್ತೆ ಮಾಡಲು ಅವರು ಬಳಸಿದ ಸಿಎನ್‌ಜಿ ಕಾರು ಪ್ರಮುಖ ಪಾತ್ರ ವಹಿಸಿದೆ. ಮುಂಡಗೋಡದಿಂದ ಕೊಲ್ಲಾಪೂರ ವರೆಗೆ ಸುಮಾರು 30ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿ ಕೊನೆಗೆ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು. ಪರಿಶೀಲನೆ ವೇಳೆ ಕಾರು ಅಸ್ಪಷ್ಟವಾಗಿ ಪತ್ತೆಯಾಗಿತ್ತು. ಆದರೆ, ಆರೋಪಿಗಳು ಯಾರೆಂದು ಗೊತ್ತಾಗಿರಲಿಲ್ಲ. ಸಾಮಾನ್ಯವಾಗಿ ಕಾರುಗಳಿಗೆ ಸಿಎನ್‌ಜಿ ಹಾಕಿಸಿಕೊಳ್ಳುವಾಗ ಕಾರಿನಲ್ಲಿದ್ದ ಎಲ್ಲರನ್ನು ಇಳಿಸಲಾಗುತ್ತದೆ. ಅಂತೆಯೇ, ಕೊಲೆ ಮಾಡಿ ಶವವನ್ನು ಕಾರಿನಲ್ಲಿಯೇ ಹಾಕಿಕೊಂಡು ಕೊಲ್ಲಾಪೂರಕ್ಕೆ ಹೋಗುವಾಗ ಕಲಘಟಗಿ ಬಳಿ ಸಿಎನ್‌ಜಿ ಪಂಪ್‌ನಲ್ಲಿ ಈ ಎಲ್ಲ ಆರೋಪಿಗಳು ಕೆಳಗೆ ಇಳಿದಿದ್ದು, ಇದು ಸಿಸಿ ಟಿವಿ ಮೂಲಕ ಗೊತ್ತಾಯಿತು. ಹೀಗಾಗಿ ಆರೋಪಿಗಳನ್ನು ಪತ್ತೆ ಹಚ್ಚಲು ತುಂಬ ಸುಲಭವಾಯಿತು ಎಂದು ಗುಂಜನ ಆರ್ಯ ಮಾಹಿತಿ ನೀಡಿದರು.

ಇದನ್ನೂ ಓದಿ: ಮಗು ಮಾರಾಟ ಮಾಡಿ ಪತ್ನಿ ಕಾಣೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್; ಗಂಡನ ಅಸಲಿ ಕೃತ್ಯ ಬಯಲು

ಎಎಸ್ಪಿ ಶಿವಾನಂದ ಕಟಗಿ, ವಿನೋದ ಮುಕ್ತೇದಾರ, ಪಿಐ ಎಸ್‌.ಎಸ್. ಕಮತಗಿ ಹಾಗೂ ಗ್ರಾಮೀಣ ಪೊಲೀಸರು ಐದು ದಿನಗಳಲ್ಲಿಯೇ ಈ ಕೊಲೆ ಪ್ರಕರಣವನ್ನು ಬೇಧಿಸಿದ್ದು, ಅವರಿಗೆ ನಗದು ಬಹುಮಾನ ಸಹ ನೀಡಲಾಗುವುದು ಎಂದ ಗುಂಜನ ಆರ್ಯ ಹೇಳಿದರು.

ಇದನ್ನೂ ಓದಿ: ಬಾತುಕೋಳಿ ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳ ದುರ್ಮರಣ: ಒಂದು ಮಗು ಗಂಭೀರ