ಚಿಕ್ಕಮಗಳೂರಿನ ಅರಳುಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ಬಾತುಕೋಳಿ ಹಿಡಿಯಲು ಹೋಗಿ ನಾಲ್ವರು ಮಕ್ಕಳು ಮುಳುಗಿ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಓರ್ವ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಶಾಸಕ ಎಚ್.ಡಿ.ತಮ್ಮಯ್ಯ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿದ್ದಾರೆ.

ಚಿಕ್ಕಮಗಳೂರು: ಆಟವಾಡುತ್ತಾ ಬಾತುಕೋಳಿ ಹಿಡಿಯುವುದಕ್ಕೆ ಹೋದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ಧಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಅರಳುಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ಸೋಮವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅರಳುಗುಪ್ಪೆ ಗ್ರಾಮದ ಅಬ್ದುಲ್ ರೆಹಮಾನ್ (13), ನಾಯಜ್ (12), ಶಿವಮೊಗ್ಗದ ಮೈದಿಹಾ (9), ಅರಮಾನ್ (8) ಮೃತಪಟ್ಟ ಮಕ್ಕಳು. ಅರಳುಗುಪ್ಪೆಯ 4 ವರ್ಷದ ಅರ್ಮನ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗಾಗಿ ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬಾತುಕೋಳಿ ಹಿಡಿಯಲು ಹೋದ ಮಕ್ಕಳು

ಕಾರಂಜಿ ಕೆರೆ ಮಧ್ಯ ಭಾಗದಲ್ಲಿ ಮಾತ್ರ ನೀರಿದ್ದು, ಕೆರೆ ಪಾತ್ರದಲ್ಲಿ ಈ ಮಕ್ಕಳು ಆಟವಾಡುವಾಗ ಈ ದುರ್ಘಟನೆ ನಡೆದಿದೆ. ಆಟವಾಡುತ್ತಿರುವಾಗ ತಮ್ಮೊಂದಿಗಿದ್ದ ಬಾತುಕೋಳಿ ನೀರಿಗಿಳಿದಿದೆ ಎಂದು ಅದನ್ನು ಹಿಡಿಯಲು ಹೋದ ಬಾಲಕಿ ನೀರಿಗೆ ಬಿದ್ದಿದ್ದಾಳೆ. ಈ ಬಾಲಕಿಯನ್ನು ರಕ್ಷಿಸಲು ಹೋದ ಒಬ್ಬರ ಹಿಂದೊಬ್ಬರಂತೆ ಮಕ್ಕಳು ನೀರಿಗಿಳಿದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜಿಲ್ಲಾಸ್ಪತ್ರೆಯ ಶವಾಗಾರದ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಶಾಸಕ ತಮ್ಮಯ್ಯ ಸಾಂತ್ವನ

ಶಾಸಕ ಎಚ್.ಡಿ.ತಮ್ಮಯ್ಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಆರೋಗ್ಯ ವಿಚಾರಿಸಿದರಲ್ಲದೆ ಮೃತ ಮಕ್ಕಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ ಇಂತಹ ಘಟನೆಗಳು ನಡೆಯಬಾರದು. ಮೃತ ಮಕ್ಕಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತೇವೆ. ಎಷ್ಟೇ ಪರಿಹಾರ ನೀಡಬಹುದು. ಆದರೆ ಮಕ್ಕಳನ್ನು ಮರಳಿ ಕೊಡಲು ಸಾಧ್ಯವಿಲ್ಲ. ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ ಎಂದರು.

ಕೆರೆಗಳ ಬಳಿ ಯಾವ ರೀತಿ ಮುಂಜಾಗ್ರತ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆಸಿದ್ದೇನೆ. ಕ್ಷೇತ್ರದಲ್ಲಿ ಈ ರೀತಿ ಹಲವು ಕೆರೆಗಳಿವೆ. ಮಕ್ಕಳ ಸುರಕ್ಷತೆಗೆ ಇಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರು.

ನಾಲ್ಕು ವರ್ಷದ ಓರ್ವ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಮಗುವಿಗೆ ಯಾವುದೇ ಅಪಾಯವಾಗದಂತೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.