ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ತೆರವುಗೊಳಿಸಲಾಗಿದ್ದ ಭಟ್ಕಳದ ಮುರಿನಕಟ್ಟೆಯನ್ನು ಹಿಂದೂ ಸಂಘಟನೆಗಳು ಪುನರ್ ನಿರ್ಮಿಸಿದ್ದವು. ಆದರೆ, ರಾತ್ರೋರಾತ್ರಿ ಅನ್ಯಕೋಮಿನವರು ಇದನ್ನು ಕೆಡವಿ ಹಾಕಿದ್ದು, ಪಟ್ಟಣದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಯು ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಭಟ್ಕಳ: ಉತ್ತರ ಕನ್ನಡ ಜಿಲ್ಲೆ ಭಟ್ಕಳದ ನವಾಯತ್ ಕಾಲನಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನಾದಿ ಕಾಲದಿಂದಲೂ ಮಾರಿಯಮ್ಮನ ಹೊರೆ ಇಳಿಸುತ್ತಿದ್ದ ಮುರಿನಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ತೆರವುಗೊಳಿಸಲಾಗಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ಭಾನುವಾರ ಬೆಳಗ್ಗೆ ಅದನ್ನು ಪುನಃ ಸ್ಥಾಪಿಸಿದ್ದರು. ಆದರೆ, ರಾತ್ರಿ ವೇಳೆಗೆ ಅನ್ಯಕೋಮಿನ ಮುಖಂಡರು ಆಗಮಿಸಿ ಇದನ್ನು ಕೆಡವಿ ಹಾಕಿದ್ದು, ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ತಲೆದೋರಿದೆ. ಕಳೆದ 3-4 ವರ್ಷಗಳಿಂದ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಮುರಿನಕಟ್ಟೆಯನ್ನು ತೆರವುಗೊಳಿಸಲಾಗಿತ್ತು. ಇದು ಹಿಂದೂಗಳ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದು, ಈ ಮುರಿನಕಟ್ಟೆಯನ್ನು ಪುನಃ ಕಟ್ಟಿಕೊಡುವಂತೆ ಹಿಂದೂ ಸಂಘಟನೆಗಳು ಬೇಡಿಕೆ ಇಟ್ಟಿದ್ದವು. ಆದರೆ, ತಾಲೂಕು ಆಡಳಿತವಾಗಲಿ, ಜಿಲ್ಲಾ ಆಡಳಿತವಾಗಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಹಲವು ಭಾರಿ ಸಭೆ ನಡೆಸಲಾಗಿದ್ದರೂ ಪ್ರಯೋಜನವಾಗಿರಲಿಲ್ಲ.

Add Asianetnews Kannada as a Preferred SourcegooglePreferred

ನಮ್ಮ ಸ್ಥಳ ನಮಗೆ ಬೇಕು

ಇದೇ ವೇಳೆ, ಮುರಿನಕಟ್ಟೆಯ ಹಿಂಬದಿಯಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ಮನೆ ಕಟ್ಟಲು ಆರಂಭ ಮಾಡಿದಾಗ, ಹಿಂದೂ ಸಂಘಟನೆಯವರು ಎಚ್ಚರಿಕೆ ನೀಡಿದ್ದರು. ನಮ್ಮ ಸ್ಥಳ ನಮಗೆ ಬೇಕು, ಹಿಂದೂಗಳ ಶ್ರದ್ಧಾ-ಭಕ್ತಿಯ ಕೇಂದ್ರವಾದ ಮುರಿನಕಟ್ಟೆಯನ್ನು ಮರುಸ್ಥಾಪಿಸಬೇಕು ಎಂದು ಪಟ್ಟು ಹಿಡಿದಿದ್ದರು.

ಈ ಮಧ್ಯೆ, ಭಾನುವಾರ ಸುರಿಯುವ ಮಳೆಯನ್ನೂ ಲೆಕ್ಕಸದೆ ಹಿಂದೂ ಸಂಘಟನೆಯ ಕಾರ್ಯಕರ್ತರು ಮುರಿನಕಟ್ಟೆಯನ್ನು ಈ ಹಿಂದೆ ಇದ್ದ ಜಾಗದಲ್ಲಿಯೇ ನಿರ್ಮಾಣ ಮಾಡಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ನೋಡಿಕೊಂಡರು. ಈ ವೇಳೆ, ಅನ್ಯಕೋಮಿನ ಮುಖಂಡರು ಆಗಮಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರೂ, ಸರ್ಕಾರಿ ಜಾಗದಲ್ಲಿ ಕಟ್ಟೆ ಕಟ್ಟುತ್ತಿರುವುದರಿಂದ ಅವರ ತಕರಾರು ಕೂಡಾ ನಡೆಯಲಿಲ್ಲ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಉದ್ವಿಘ್ನ ಪರಿಸ್ಥಿತಿ

ಆದರೆ, ಹಿಂದೂ ಸಂಘಟನೆಯ ಕಾರ್ಯಕರ್ತರು ಭಾನುವಾರ ಬೆಳಗ್ಗೆ ನಿರ್ಮಿಸಿದ ಮುರಿನಕಟ್ಟೆಯನ್ನು ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ‌‌ ಅನ್ಯಕೋಮಿನವರು ಎಸ್ಪಿ ಎಂ.ದೀಪನ್ ಸಮ್ಮುಖದಲ್ಲೇ ಕೆಡವಿ ಹಾಕಿದ್ದು, ಉದ್ವಿಘ್ನ ಪರಿಸ್ಥಿತಿ ತಲೆದೋರಿದೆ. ಇದು ಹಿಂದೂ ಸಂಘಟನೆಯವರ ಆಕ್ರೋಶಕ್ಕೆ ಕಾರಣವಾಗಿದ್ದು, ಸೋಮವಾರ ಭಟ್ಕಳ ಬಂದ್‌ ಮಾಡಿ ಪ್ರತಿಭಟನೆ ಮಾಡುವ ಸಾಧ್ಯತೆಯೂ ಇದೆ.