'ಮಾಲ್ಗುಡಿ ಡೇಸ್' ಖ್ಯಾತಿಯ ಅರಸಾಳು ರೈಲ್ವೆ ನಿಲ್ದಾಣವು ಸಂಗ್ರಹಾಲಯವನ್ನು ಹೊಂದಿದ್ದರೂ, ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಶೌಚಾಲಯ, ನೀರು ಮತ್ತು ರಾತ್ರಿ ದೀಪಗಳ ಕೊರತೆಯಿಂದಾಗಿ ನೂರಾರು ಪ್ರಯಾಣಿಕರು ಮತ್ತು ಪ್ರವಾಸಿಗರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಿಲ್ದಾಣದ ನಿರ್ವಹಣೆ ವಿಫಲವಾಗಿದ್ದು, ಅಧಿಕಾರಿಗಳು ಗಮನಹರಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ರಿಪ್ಪನ್‍ಪೇಟೆ: ‘ಮಾಲ್ಗುಡಿ ಡೇಸ್’ ಧಾರಾವಾಹಿ ಚಿತ್ರೀಕರಣಗೊಂಡ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಈಗ ಮೂಲಸೌಲಭ್ಯ ಎಂಬುದು ಮರೀಚಿಕೆಯಾಗಿದೆ. ಮಾಲ್ಗುಡಿ ಚಿತ್ರೀಕರಣದ ಸವಿನೆನಪಿಗೆ ಇಲ್ಲಿ ಸಂಗ್ರಹಾಲಯ ನಿರ್ಮಿಸಿ ರೈಲು ನಿಲ್ದಾಣ ಅಭಿವೃದ್ಧಿಪಡಿಸಲಾಗಿದೆ. ಧಾರಾವಾಹಿಯ ಸ್ಮರಣಿಕೆಗಾಗಿ ಇಲ್ಲಿ ಸದಾ ಜನಜಂಗುಳಿ ಇರುತ್ತದೆ. ಆದರೆ ಇಲ್ಲಿ ಬರುವ ಪ್ರಯಾಣಿಕರಿಗೆ ಸೂಕ್ತ ಸೌಕರ್ಯ ಇಲ್ಲದೆ ಪರಾಡುವಂತಾಗಿದೆ.

Add Asianetnews Kannada as a Preferred SourcegooglePreferred

ಅರಸಾಳು ರೈಲ್ವೆ ನಿಲ್ದಾಣದಲ್ಲಿ ಸಮರ್ಪಕವಾಗಿ ನಿರ್ವಹಣೆ ಇಲ್ಲವಾಗಿದೆ ಎಂದು ರೈಲ್ವೆ ಪ್ರಯಾಣಿಕರಾದ ಗಾಯಿತ್ರಿ ವಿನಾಯಕ, ಸುಶೀಲ ಮೂಡಾಗ್ರ ಕೆ.. ಗೀತಾ ಅಣ್ಣಪ್ಪ, ಸೀತಾರಾಜಪ್ಪ, ಗೀತಾ ಕರಿಬಸಪ್ಪ, ವೇದಾವತಿ ಆರೋಪಿಸಿದ್ದಾರೆ.

ಶೌಚಾಲಯವಿಲ್ಲ, ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ

ತಾಳುಗುಪ್ಪ-ಶಿವಮೊಗ್ಗ-ಬೆಂಗಳೂರು-ಮೈಸೂರು ಇಂಟರ್ ಸಿಟಿ ಸೇರಿದಂತೆ ಹಲವು ಪ್ಯಾಸಂಜರ್ ರೈಲು ಗಾಡಿಗಳು ನಿತ್ಯ ಈ ಮಾರ್ಗದಲ್ಲಿ ಹೋಗಿ ಬರುತ್ತಿದ್ದು ಇಲ್ಲಿನ ಆರಸಾಳು ರೈಲ್ವೆ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬೆಂಗಳೂರು, ಮೈಸೂರು, ತಾಳುಗುಪ್ಪ, ಜೋಗ, ಭಟ್ಕಳ, ಶಿರಸಿ, ಸಿದ್ದಾಪುರ, ಕುಂದಾಪುರ, ಉಡುಪಿ, ಕೊಡಚಾದ್ರಿ, ಕೊಲ್ಲೂರು, ಹೊಂಬುಜ, ಸಿಗಂದೂರು ಹೀಗೆ ಸುತ್ತಮುತ್ತಲಿನ ಪ್ರಕ್ಷಣೀಯ ಧಾರ್ಮಿಕ ಸ್ಥಳಗಳಿಗೆ ಹಾಗೂ ನಿರುದ್ಯೋಗಿಗಳು ಉದ್ಯೋಗಿಗಳು ಮತ್ತು ಸಂಬಂಧಿಕರ ಊರುಗಳಿಗೆ ಹೋಗಿ ಬರುವವರಿಗೆ ತುಂಬಾ ಅನುಕೂಲಕರವಾಗಿರುವ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸರಿಯಾದ ಶೌಚಾಲಯವಿಲ್ಲ. ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲವಾಗಿದೆ. ರಾತ್ರಿ ವೇಳೆಯಲ್ಲಿ ನಿಲ್ದಾಣದ ಬಳಿ ಸರಿಯಾದ ಬೀದಿ ದೀಪಗಳಿಲ್ಲದೆ ಕತ್ತಲು ಅವರಿಸಿಕೊಂಡಿದ್ದು ಮಹಿಳೆಯರಿಗೆ ಮಕ್ಕಳಿಗೆ ಭದ್ರತೆ ಇಲ್ಲದಂತಾಗಿ ಪ್ರಯಾಣಿಕರು ಪರದಾಡುವಂತಾಗಿದೆ.

ನಿಲ್ದಾಣದ ಅವರಣದಲ್ಲಿ ಸ್ವಚ್ಛತೆಯಿಲ್ಲದೆ ಕಸ ತುಂಬಿಕೊಂಡಿದ್ದು ಶೌಚಾಲಯಗಳಿಗೆ ಹೋದರೆ ನೀರು ಸಹ ಇಲ್ಲ. ಇನ್ನು ಕುಡಿಯುವ ನೀರಯಂತೂ ಇಲ್ಲವೆ ಇಲ್ಲವಾಗಿ ಮಹಿಳೆಯರು ಮಕ್ಕಳು ವೃದ್ದರು ಅನಾರೋಗ್ಯ ಪೀಡಿತರು ದೂರದ ಬೆಂಗಳೂರು ಮೈಸೂರು ತೆರಳುವ ಪ್ರಯಾಣಿಕರು ಶೌಚಾಲಯವಿಲ್ಲದೆ ಬಯಲು ಪ್ರದೇಶವನ್ನು ಆವಲಂಬಿಸುವುದು ಆನಿರ್ವಾಯವಾಗಿದೆ.

ಮಹಿಳೆಯವರು, ಹೆಣ್ಣುಮಕ್ಕಳು ರೈಲ್ವೆ ನಿಲ್ದಾಣದಲ್ಲಿ ಗಿಡದ ಪೊದೆಯ ಮರೆಯಲ್ಲಿ ಕುಳಿತು ಮೂತ್ರ ವಿಸರ್ಜನೆ ಮಾಡಬೇಕಾಗಿದೆ. ಇದರೊಂದಿಗೆ ಆನಾರೋಗ್ಯ ಪೀಡಿತರ ಸ್ಥಿತಿಯಂತೂ ಕೇಳೋರಿಲ್ಲದಂತಾಗಿದೆ. ಕಡಿಮೆ ಖರ್ಚಿನಲ್ಲಿ ರಾಜದಾನಿಗೆ ತೆರಳುವ ಪ್ರಯಾಣಿಕರಿಗೆ ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಸುಲಭ ಶೌಚಾಲಯಗಳಿಲ್ಲದೆ ಪರದಾಡುವ ಪರಿಸ್ಥಿತಿಯಿದ್ದು ರೈಲ್ವೆ ಇಲಾಖೆಯ ಅಧಿಕಾರಿ ವರ್ಗ ಇತ್ತ ಗಮನಹರಿಸಿ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸುವಂತೆ ರೈಲ್ವೆ ಪ್ರಯಾಣಿಕರಾದ ಗಾಯಿತ್ರಿ ವಿನಾಯಕ, ಸುಶೀಲ ಮೂಡಾಗ್ರ ಕೆ. ಗೀತಾಅಣ್ಣಪ್ಪ, ಸೀತಾರಾಜಪ್ಪ, ಗೀತಾ ಕರಿಬಸಪ್ಪ, ವೇದಾವತಿ ಆಗ್ರಹಿಸಿದ್ದಾರೆ.

ಮುಂಜಾನೆ ರಾಜದಾನಿಯಿಂದ 5.50ಕ್ಕೆ ಬರುವ ಮೈಸೂರು-ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ ಇಂಟರ್ ಸಿಟಿ ರೈಲು ತಾಳುಗುಪ್ಪದಿಂದ ಹೊರಟು ಸಾಗರ, ಅನಂದಪುರಂ, ಆರಸಾಳು ಕುಂಸಿ ಶಿವಮೊಗ್ಗ ಮಾರ್ಗ ರಾಜದಾನಿ ಬೆಂಗಳೂರಿಗೆ 6.20 ಹೋಗುವ ಇಂಟರ್ ಸಿಟಿ ರೈಲು ನಂತರ 7.45 ರಿಂದ 8 ಗಂಟೆಗೆ ಶಿವಮೊಗ್ಗ ಪ್ಯಾಸಂಜರ್ ರೈಲು ಹೀಗೆ ಹೋಗಿ ಬರುವ ಹಲವಾರು ರೈಲು ಗಾಡಿಗಳು ಆರಸಾಳು ಮಾಲ್ಗುಡಿ ನಿಲ್ದಾಣದಲ್ಲಿ ನಿಲ್ಲಿಸಿ ಹೋಗುವುದರಿಂದಾಗಿ ಸಾಕಷ್ಟು ಪ್ರಯಾಣಿಕರು ಓಡಾಡುವಂತಾಗಿದೆ.

ಮಾಲ್ಗುಡಿ ಮೂಸಿಯಂ ವೀಕ್ಷಣೆ

ಇನ್ನೂ ಮಾಲ್ಗುಡಿ ಮೂಸಿಯಂ ವೀಕ್ಷಣೆಗೆ ರಾಜ್ಯದ ಹಲವಾರು ಕಡೆಗಳಿಂದ ಪ್ರವಾಸಿಗರು ಬರುತ್ತಿದ್ದು ಸರಿಯಾದ ವ್ಯವಸ್ಥೆಗಳಿಲ್ಲದೆ ಹೋಟಲ್‍ಗಳಿಲ್ಲ ಮತ್ತು ಶೌಚಾಲಯಗಳಂತೂ ಇಲ್ಲದಿರುವುದು, ಕುಡಿಯುವ ಶುದ್ದ ನೀರಿನ ಘಟಕ ಸಹ ಇಲ್ಲದಿರುವುದು ಸ್ಟೆಷನ್ ಪಕ್ಕದಲ್ಲಿನ ಶೌಚಾಲಯಗಳು ನೀರಿನ ಸೌಲಭ್ಯಗಳಿಲ್ಲದೆ ಬಾಗಿಲುಗಳೆಲ್ಲಾ ಮುರಿದು ಹೋಗಿ ತೆರೆದುಕೊಂಡಿರುವುದು ನಿರ್ವಹಣೆಯಲ್ಲದೆ ಇರುವುದನ್ನು ಸಾಕ್ಷೀಕರಿಸುತ್ತಿವೆ.

ಇನ್ನಾದರೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಇತ್ತ ಗಮನಹರಿಸುವ ಮೂಲಕ ಅರಸಾಳು ಮಾಲ್ಗುಡಿ ಮೂಸಿಯಂ ಮತ್ತು ರೈಲ್ವೆ ನಿಲ್ದಾಣದಲ್ಲಿ ಸಮಸ್ಯಗಳಿಗೆ ಪರಿಹಾರ ಕಲ್ಪಿಸುವತ್ತ ಗಮನಹರಿಸಬೇಕಿದೆ.