‘ನಾನು ಸಿಂಪಲ್, ನನ್ನ ಪೆನ್ನು ಪವರ್‌ಫುಲ್’ ಎಂದು ಬೆಳ್ಳೂರಿನಲ್ಲಿ ಗುಡುಗಿದ ಉಪಲೋಕಾಯುಕ್ತ ಬಿ.ವೀರಪ್ಪ. ಡಾಟಾ ಆಪರೇಟರ್ ವಹಿವಾಟು, ಎಫ್‌ಸಿ ಮುಗಿದ ಶಾಲಾ ಬಸ್‌ಗಳು, ಆಸ್ಪತ್ರೆ ಹಾಗೂ ಹಾಸ್ಟೆಲ್ ಅಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಾಗಮಂಗಲ (ಸೆ.11): ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿದ ವೇಳೆ ಅಧಿಕಾರಿಗಳ ವಿರುದ್ಧ ನೂರಾರು ಮಂದಿ ಸಾರ್ವಜನಿಕರು ದೂರುಗಳ ಸುರಿಮಳೆಗೈದರು. ಇದಕ್ಕೆ ತೀವ್ರ ಅಸಮಾಧಾನಗೊಂಡ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ನಾನು ಮಾತ್ರ ಬಹಳ ಸಿಂಪಲ್, ಆದರೆ, ನನ್ನ ಪೆನ್ನು ತುಂಬಾ ಪವರ್ ಫುಲ್ ಆಗಿ ಕೆಲಸ ಮಾಡುತ್ತದೆ ಎಂದು ಗುಡುಗಿದರು.
ಬೆಳ್ಳೂರು ಉಪತಹಸೀಲ್ದಾರ್ ಪದ್ಮ ಅವರಿಗೆ ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಕೆರೆಗಳಿವೆ, ಎಷ್ಟು ಒತ್ತುವರಿಯಾಗಿವೆ ಎಂಬ ಯಾವ ಮಾಹಿತಿಯೂ ಇಲ್ಲ. ಅವರು ನೀಡಿರುವ ಒಂದು ಉತ್ತರವೂ ಸಮರ್ಪಕವಾಗಿಲ್ಲ. ಕಚೇರಿ ಡಾಟಾ ಆಪರೇಟರ್ ನಾಗರತ್ನ ಅವರಿಗೆ ಮಾಸಿಕ ವೇತನ ₹16 ಸಾವಿರದಂತೆ 9 ತಿಂಗಳಿಗೆ ₹1.44 ಲಕ್ಷ ಆಗುತ್ತದೆ. ಅವರ ಮೊಬೈಲ್‌ನಲ್ಲಿ ಯುಪಿಐ ಪರಿಶೀಲಿಸಲಾಗಿ ಕಳೆದ 9 ತಿಂಗಳಲ್ಲಿ ₹4,17,851 ವಹಿವಾಟು ನಡೆಸಿರುವುದು ಕಂಡುಬಂದಿದೆ. ಆದ್ದರಿಂದ ಡಾಟಾ ಆಪರೇಟರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ತಹಸೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಆದೇಶಿಸಿರುವುದಾಗಿ ತಿಳಿಸಿದರು.
ಬೆಳ್ಳೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಆಸ್ಪತ್ರೆಯಲ್ಲಿ ಯಾವೊಬ್ಬ ರೋಗಿ ಹಾಗೂ ವೈದ್ಯರು ಇಲ್ಲದಿರುವುದನ್ನು ಕಂಡು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಆಸ್ಪತ್ರೆ ಫಾರ್ಮಸಿಯಲ್ಲಿ ಅವಧಿ ಮೀರಿದ ಔಷಧಗಳು ಪತ್ತೆಯಾದವು. ಇದರಿಂದ ಆಕ್ರೋಶಗೊಂಡ ಬಿ.ವೀರಪ್ಪ ಅವರು, ಈ ಆಸ್ಪತ್ರೆಯಲ್ಲಿ ಜನರಿಗೆ ಗುಣಮಟ್ಟದ ಸೇವೆ ನೀಡುತ್ತಿಲ್ಲವೆಂಬ ನೂರಾರು ದೂರುಗಳಿವೆ. ಹಾಗಾಗಿ ಮುಚ್ಚಲು ಶಿಫಾರಸ್ಸು ಮಾಡುತ್ತೇನೆ ಎಂದರು.
ನೆಲ್ಲಿಗೆರೆ ಗ್ರಾಪಂನಲ್ಲಿ ಗುಬ್ಬಿ ಹಾಗೂ ಬೆಳ್ಳೂರು ಕ್ರಾಸ್‌ನ ಜಿಎಸ್‌ಟಿ ನೋಂದಣಿ ಇಲ್ಲದ ನಕಲಿ ಅಂಗಡಿಗಳ ಎರಡು ಏಜೆನ್ಸಿಯಲ್ಲಿ ಹಲವು ಸಾಮಗ್ರಿಗಳನ್ನು ಅಕ್ರಮವಾಗಿ ಖರೀದಿ ಮಾಡಿರುವುದು ಹಾಗೂ ನಕಲಿ ಲೆಟರ್ ಹೆಡ್‌ಗಳಲ್ಲಿ ತಾವೇ ಕೃತಕವಾಗಿ ದರ ಪಟ್ಟಿ ಸಿದ್ಧಪಡಿಸಿಕೊಂಡಿರುವುದು ಬೆಳಕಿಗೆ ಬಂದವು. ಇವೆಲ್ಲವನ್ನು ಪರಿಶೀಲಿಸಿದ ಉಪಲೋಕಾಯುಕ್ತರು ಪಿಡಿಒ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದರು.
ಪಟ್ಟಣದ ಎಆರ್‌ಟಿಒ ಕಚೇರಿಗೆ ಭೇಟಿ ನೀಡಿದ ಉಪಲೋಕಾಯುಕ್ತರು, ವಾಹನಗಳ ಕುರಿತು ಮಾಹಿತಿ ಪಡೆದುಕೊಂಡರು. ಎಫ್‌ಸಿ ಮುಗಿದ ವಾಹನಗಳು ನಾಗಮಂಗಲ ಆರ್‌ಟಿಒ ವ್ಯಾಪ್ತಿಯಲ್ಲಿ 40 ಸಾವಿರಕ್ಕೂ ಹೆಚ್ಚು ವಾಹನಗಳಿರುವುದನ್ನು ಕಂಡು ಅಚ್ಚರಿಪಟ್ಟರು. ಈ ಪೈಕಿ 41 ಶಾಲಾ ಬಸ್‌ಗಳಿರುವುದನ್ನು ಕಂಡು ಆರ್‌ಟಿಒ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೂಡಲೇ ಎಫ್‌ಸಿ ಮುಗಿದಿರುವ ವಾಹನಗಳನ್ನು ಸೀಜ್ ಮಾಡಬೇಕು. ಇಲ್ಲದಿದ್ದರೆ ನಿಮ್ಮೆಲ್ಲರನ್ನು ಮನೆಗೆ ಕಳುಹಿಸುತ್ತೇನೆ. ಮಕ್ಕಳು ಹಾಗೂ ಪ್ರಯಾಣಿಕರ ಜೀವದ ಜತೆ ಚೆಲ್ಲಾಟ ಆಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿ ಆರ್‌ಟಿಒ ಅಧಿಕಾರಿಗಳ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿಕೊಂಡರು.
ತೀವ್ರ ತರಾಟೆ
ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗೆ ಭೇಟಿ ನೀಡಿದ ಉಪಲೋಕಾಯುಕ್ತರು ಅಲ್ಲಿನ ವ್ಯವಸ್ಥೆ ಪರಿಶೀಲಿಸಿ ಶೌಚಾಲಯಗಳು ಸರಿ ಇಲ್ಲ. ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ನೀವು ಆಸಕ್ತಿ ತೋರಿಲ್ಲ ಎದು ಕಿಡಿಕಾರಿದರು. ಇದಕ್ಕೆ ಉತ್ತರಿಸಿದ ವಾರ್ಡನ್ ಮಕ್ಕಳ ಕೊರತೆ ಇದೆ. ಈ ಹಾಸ್ಟೆಲ್ ಮುಚ್ಚುವಂತೆ ಶಿಫಾರಸ್ಸು ಪತ್ರ ಕೊಟ್ಟಿದ್ದೇನೆ ಸರ್ ಎಂದಾಗ, ಇದಕ್ಕೆ ಸಿಡಿಮಿಡಿಗೊಂಡ ಉಪಲೋಕಾಯುಕ್ತರು, ನಿಮಗೆ ಕೆಲಸ ಮಾಡಲು ಆಸಕ್ತಿ ಇಲ್ಲ. ಈ ರೀತಿಯ ಹಾಸ್ಟೆಲ್ ತರಲು ಎಷ್ಟು ಶ್ರಮ ಇದೆ ಎಂಬುದು ಗೊತ್ತಿದೆಯಾ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಬದರಿಕೊಪ್ಪಲು ಬಳಿಯ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ನ್ಯಾ.ಬಿ.ವೀರಪ್ಪ ಅವರು ಹಾಸ್ಟೆಲ್‌ನಲ್ಲಿದ್ದ 11 ಜನ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಆದರೆ, ಹಾಜರಾತಿ ಪುಸ್ತಕ ಪರಿಶೀಲಿಸಿದ ವೇಳೆ 36 ಜನ ವಿದ್ಯಾರ್ಥಿಗಳಿರುವುದು ಕಂಡುಬಂತು. ಆದರೆ, 11 ಜನ ವಿದ್ಯಾರ್ಥಿಗಳಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು.
ಈ ವೇಳೆ ಅಧಿಕಾರಿ ಹೇಳಿದ ಮಕ್ಕಳ ದಾಖಲಾತಿ ಪಟ್ಟಿ ಮತ್ತು ಹಾಜರಾತಿ ಪುಸ್ತಕದಲ್ಲಿದ್ದ ವಿದ್ಯಾರ್ಥಿಗಳ ಪಟ್ಟಿಗೂ ಸಾಮ್ಯತೆ ಬಾರದಿದ್ದಾಗ ಆಕ್ರೋಶ ವ್ಯಕ್ತಪಡಿಸಿ ಮಕ್ಕಳ ಹೆಸರಿನಲ್ಲಿ ಸುಳ್ಳು ಲೆಕ್ಕ ಕೊಟ್ಟು ಲಂಚ ಹೊಡೆಯಲು ನಾಚಿಕೆಯಾಗಲ್ವಾ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಹಾಸ್ಟೆಲ್‌ಗೆ ಸಿಸಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ಹಾಜರಾತಿ ಅಳವಡಿಸುವಂತೆ ಸೂಚಿಸಿದರು.


