Mysuru : ಚಾಮುಂಡಿ ಬೆಟ್ಟದ ನಂದಿ ಮಾರ್ಗದ ರಸ್ತೆ ಬಂದ್

  • ಕಳೆದ ವಾರ ಸುರಿದ ಮಳೆಯಿಂದಾಗಿ ಚಾಮುಂಡಿಬೆಟ್ಟದಿಂದ ನಂದಿಗೆ ತೆರಳುವ ಮಾರ್ಗದ ರಸ್ತೆ ಕುಸಿತ
  • ಶೀಘ್ರದಲ್ಲಿಯೇ ಕಾಮಗಾರಿ ಹಮ್ಮಿಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌
Land slide in mysuru chamundi Hill snr

ಮೈಸೂರು (ನ.04):  ಚಾಮುಂಡಿ ಬೆಟ್ಟದ (chamundi Hill) ನಂದಿ ಮಾರ್ಗದ (Nandi Rout) ರಸ್ತೆ ಮತ್ತೆ ಕುಸಿದಿದೆ.  ಕಳೆದ ವಾರ ಸುರಿದ ಮಳೆಯಿಂದಾಗಿ ಚಾಮುಂಡಿ ಬೆಟ್ಟದಿಂದ ನಂದಿಗೆ ತೆರಳುವ ಮಾರ್ಗದ ರಸ್ತೆ ಕುಸಿದಿತ್ತು. ಶೀಘ್ರದಲ್ಲಿಯೇ ಕಾಮಗಾರಿ ಹಮ್ಮಿಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar) ತಿಳಿಸಿದ್ದರು. ಅಲ್ಲದೆ ಲೋಕೋಪಯೋಗಿ ಸಚಿವರು ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದ್ದರು. ಆದರೆ ಲೋಕೋಪಯೋಗಿ ಸಚಿವರು ಆಗಮಿಸಲಿಲ್ಲ.

ರಸ್ತೆ ದುರಸ್ತಿ ಕಾಮಗಾರಿಯನ್ನು ಇನ್ನೂ ಆರಂಭಿಸದಿದ್ದರಿಂದ ಭೂಮಿ ದಿನೇ ದಿನೇ ಸಡಿಲ ಬಿಟ್ಟು, ಬೆಟ್ಟದಲ್ಲಿ ಮತ್ತಷ್ಟು ಭೂ ಕುಸಿತವಾಗಿದೆ. ದಿನೇದಿನೇ ಆಳ ಹೆಚ್ಚಾಗಿದ್ದು, ಸುಮಾರು 75 ಅಡಿಗಳಷ್ಟು ಆಳಕ್ಕೆ ಮಣ್ಣು ಕುಸಿದಿದೆ. ಅದೇ ಜಾಗದಲ್ಲಿ ಭೂಮಿ (land) ಕುಸಿಯುತ್ತಿರುವುದರಿಂದ ನಂದಿ ರಸ್ತೆಯ ಮೇಲ್ಭಾಗದ ಮಣ್ಣೂ ಕೂಡ ಕುಸಿದು ಬೀಳುವ ಅಪಾಯವಿದೆ.

ಚಾಮುಂಡಿ ಬೆಟ್ಟದ ನಂದಿಗೆ ತೆರಳುವ ಮಾರ್ಗದಲ್ಲಿ (Rout) ಈ ಘಟನೆ ನಡೆದಿರುವುದರಿಂದ ಆ ಮಾರ್ಗದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ (Vehicle Ban) ಹೇರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಸಾರ್ವಜನಿಕರ ಸಂಚಾರಕ್ಕೂ ನಿಯಂತ್ರಣ ಹೇರಿದೆ.

ಇದರ ಜೊತೆಗೆ ಕಳೆದ ಒಂದೆರಡು ವರ್ಷದ ಹಿಂದೆ ಮಳೆಯಿಂದಾಗಿ ಕುಸಿದಿದ್ದ ಸ್ಥಳದಲ್ಲಿಯೂ ರಸ್ತೆ (Road) ಬಿರುಕು ಬಿಟ್ಟಿದೆ. ಅಲ್ಲದೆ ಇಲ್ಲಿ ನಿರ್ಮಿಸಿದ್ದ ತಡೆಗೋಡೆಯು ಒಂದು ಕಡೆಗೆ ವಾಲಿದಂತಿದೆ. ಸುಮಾರು ಅರ್ಧ ಕಿಲೋ ಮೀಟರ್‌ ಅಂತರದಲ್ಲಿ ಒಂದು ಕಡೆ ಭೂಮಿ ಕುಸಿದಿದ್ದರೆ, ಮತ್ತೊಂದು ಕಡೆ ರಸ್ತೆ ಬಿರುಕು ಬಿಟ್ಟಿದೆ.

ಶಾಶ್ವತ ಕಾಮಗಾರಿ

 

ಚಾಮುಂಡಿ ಬೆಟ್ಟದ ಮಾರ್ಗದಲ್ಲಿ ಶಿಥಿಲಾವಸ್ಥೆಯಲ್ಲಿರುವ ರಸ್ತೆ ಸರಿಪಡಿಸಲು ಶಾಶ್ವತ ಕಾಮಗಾರಿ ಹಮ್ಮಿಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar) ಹೇಳಿದ್ದರು.

ಚಾಮುಂಡಿ ಬೆಟ್ಟದಲ್ಲಿ ಮಳೆಯಿಂದಾಗಿ ಭೂ ಕುಸಿದ ಸ್ಥಳಕ್ಕೆ ಭೇಟಿ ನೀಡಿದ ಸಚಿವರ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದರು.

ಭೂ ಕುಸಿತವಾಗಿರುವ ಸ್ಥಳ ಸೇರಿದಂತೆ ಬೆಟ್ಟದಲ್ಲಿ ಶಿಥಿಲಾವಸ್ಥೆಯಲ್ಲಿರುವ ತಡೆಗೋಡೆ ಮತ್ತು ರಸ್ತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಶಾಶ್ವತ ಕಾಮಗಾರಿ ನಡೆಸುವ ಸಂಬಂಧ ಯೋಜನೆ ರೂಪಿಸಲಾಗುವುದು. ದೀಪಾವಳಿ ಬಳಿಕ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವರು. ಭೂ ಕುಸಿತವಾಗಿರುವ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆಯುವರು ಎಂದು ಹೇಳಿದ್ದರು.

ಕಾವೇರಿಗೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ   ಅವರು ನ. 2ರಂದು ಕೆಆರ್‌ಎಸ್‌ಗೆ ಭೇಟಿ ನೀಡುವರು. ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಮಳೆ ಹಾನಿ ಸಂಬಂಧ ಚರ್ಚೆ ನಡೆಸಲಾಗುವುದು. ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಬೆಟ್ಟದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಇದ್ದ ಮಳೆ ನೀರು ಚರಂಡಿಗಳು ಕಾಲ ಕ್ರಮೇಣ ಮುಚ್ಚಿ ಹೋಗಿದ್ದು, ಅವುಗಳನ್ನು ದುರಸ್ತಿಗೊಳಿಸುವ ಮೂಲಕ ಮಳೆ ನೀರುವ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದ್ದರು.

ಮೈಸೂರಿನಲ್ಲಿ ಮಳೆಹಾನಿ ಕುರಿತು ನೀಲನಕ್ಷೆ- ಎಸ್‌ಟಿಎಸ್‌

ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಆಗಿರುವ ಹಾನಿ, ಅನಾಹುತಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಈ ಕುರಿತು ನೀಲನಕ್ಷೆ ತಯಾರಿಸಲಾಗಿದ್ದು ಅದನ್ನು ಮುಖ್ಯಮಂತ್ರಿಗೆ ನೀಡಲಾಗುವುದು ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದ್ದರು.

 ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದ ಸಾಕಷ್ಟುಹಾನಿಯಾಗಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರತಿ ವಾರ್ಡ್‌ಗೆ ತಲಾ . 8 ಲಕ್ಷ ಅನುದಾನ ನೀಡಲಾಗಿದೆ. ಕಬಿನಿಯಲ್ಲಿ ಜೈವಿಕ ಉದ್ಯಾವನವನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ಹಿಂದಿನ ಸಿಎಂ ಯಡಿಯೂರಪ್ಪ ಘೋಷಿಸಿದ್ದರು. ಪಿಪಿಪಿ ಮಾದರಿ ತೆಗೆದು ಸರ್ಕಾರದಿಂದಲೇ ಉದ್ಯಾವನ ಮಾಡಲಾಗುವುದು. ಕಬಿನಿ ಬಳಿ ಸೇತುವೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಅಭಿವೃದ್ಧಿಗೂ ಅನುದಾನ ನೀಡಲಾಗುವುದು ಎಂದು ಅವರು ಹೇಳಿದ್ದರು.

ಮಂಡ್ಯದಲ್ಲಿ ಹಾಲಿಗೆ ನೀರು ಬೆರೆಸಿದ ಪ್ರಕರಣ ತನಿಖೆ ಹೊಣೆಯನ್ನು ಸಿಐಡಿಗೆ ವಹಿಸಲಾಗಿದೆ. 3- 4 ದಿನದಲ್ಲಿ ಸಿಐಡಿ ವರದಿ ಸಲ್ಲಿಕೆಯಾಗಲಿದೆ. ಇದರ ಜೊತೆಗೆ ಸಹಕಾರಿ ಇಲಾಖೆ ಕೂಡ ವರದಿ ಸಿದ್ಧಪಡಿಸಿದ್ದು ಎರಡನ್ನು ಪರಾಮರ್ಶಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ರು.

Latest Videos
Follow Us:
Download App:
  • android
  • ios