ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಆದ ಬಳಿಕ, ರಾಜ್ಯ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಆಯೋಗವು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಯಾದಗಿರಿ ಎಸ್ಪಿಗೆ ನಿರ್ದೇಶನ ನೀಡಲಾಗಿದೆ.

ಬೆಂಗಳೂರು/ಯಾದಗಿರಿ (ಫೆ.26): ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಪೂಜಿಸಲ್ಪಡುವವರ ಅಸಲಿ ಬಣ್ಣ ಬಯಲಾದಾಗ ಅದು ಇಡೀ ಸಮಾಜಕ್ಕೇ ಆಘಾತ ನೀಡುತ್ತದೆ. ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ಎಂಬಾತ ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಈಗ ಈ ಪ್ರಕರಣಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ. ಈ ಮೂಲಕ ವಿವಾದಿತ ಮುತ್ಯಾಗೆ ಪೋಕ್ಸೋ (POCSO) ಕಂಟಕ ಎದುರಾಗಿದ್ದು, ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳಾ ಆಯೋಗದ ಹಸ್ತಕ್ಷೇಪ:

ಮಲ್ಲಿಕಾರ್ಜುನ ಮುತ್ಯಾ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಹಾಗೂ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋಗಳನ್ನು ಆಧರಿಸಿ ರಾಜ್ಯ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಆಯೋಗದ ಅಧ್ಯಕ್ಷರ ನಿರ್ದೇಶನದ ಮೇರೆಗೆ ಕಾರ್ಯದರ್ಶಿಗಳು ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ (SP) ದಿನಾಂಕ 25.02.2026 ರಂದು ಅಧಿಕೃತ ಪತ್ರ ಬರೆದಿದ್ದಾರೆ.

ಪತ್ರದಲ್ಲಿನ ಪ್ರಮುಖಾಂಶಗಳು:

ಮಹಿಳಾ ಆಯೋಗವು ಎಸ್ಪಿಗೆ ಬರೆದಿರುವ ಪತ್ರದಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. 'ಮಲ್ಲಿಕಾರ್ಜುನ ಮುತ್ಯಾ ಎಂಬಾತ ಅಪ್ರಾಪ್ತ ಹೆಣ್ಣು ಮಗುವಿನೊಂದಿಗೆ ಅಸಭ್ಯವಾಗಿ ಹಾಗೂ ಅಶ್ಲೀಲವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಕೃತ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿರುತ್ತದೆ. ಆದ್ದರಿಂದ ಈ ಪ್ರಕರಣದ ಬಗ್ಗೆ ನಿಯಮಾನುಸಾರ ತಕ್ಷಣವೇ ಪರಿಶೀಲಿಸಿ, ಪೋಕ್ಸೋ ಕಾಯ್ದೆಯಡಿ (Protection of Children from Sexual Offences Act) ಪ್ರಕರಣ ದಾಖಲಿಸಿ, ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ನಿರ್ದೇಶನ ನೀಡಿದೆ.

ಪೊಲೀಸರಿಗೆ ಸವಾಲು:

ಸದ್ಯ ಈ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಮಹಿಳಾ ಆಯೋಗದ ಪತ್ರವು ಸ್ಥಳೀಯ ಪೊಲೀಸರ ಮೇಲೆ ತನಿಖೆಯನ್ನು ಚುರುಕುಗೊಳಿಸಲು ಹೆಚ್ಚಿನ ಒತ್ತಡ ತಂದಿದೆ. ಅಪ್ರಾಪ್ತ ಬಾಲಕಿಯ ಸುರಕ್ಷತೆ ಮತ್ತು ಇಂತಹ ವಿಕೃತ ಮನಸ್ಥಿತಿಯ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೋಕ್ಸೋ ಅಡಿ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಮುತ್ಯಾನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಭಕ್ತರ ಆಕ್ರೋಶ ಮತ್ತು ಸಮಾಜದ ಕಳವಳ:

ಪವಾಡ ಪುರುಷನೆಂದು ನಂಬಿದ್ದ ಮುತ್ಯಾನ ಈ ಕರಾಳ ಮುಖ ನೋಡಿ ಆತನ ಭಕ್ತರು ಮತ್ತು ಸಾರ್ವಜನಿಕರು ದಂಗಾಗಿದ್ದಾರೆ. ಪವಿತ್ರ ಮಠಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳಲ್ಲಿ ಇಂತಹ ಘಟನೆಗಳು ನಡೆಯುವುದು ನಂಬಿಕೆಗೆ ಧಕ್ಕೆ ತರುತ್ತದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗ ಮಹಿಳಾ ಆಯೋಗದ ಮಧ್ಯಸ್ಥಿಕೆಯಿಂದಾಗಿ ಸಂತ್ರಸ್ತ ಬಾಲಕಿಗೆ ನ್ಯಾಯ ಸಿಗುವ ಭರವಸೆ ಮೂಡಿದೆ. ಮತ್ತೊಂದೆಡೆ ಸ್ಥಳೀಯ ಭಕ್ತರು ಮುತ್ಯಾ ಅವರನ್ನು ಏನೂ ತಪ್ಪಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ.