ಪುತ್ತೂರಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಟ್ಟಡ ಕಾಮಗಾರಿಯ ದೂಳಿನ ವಿರುದ್ಧ ವಿದ್ಯಾರ್ಥಿನಿಯರು ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಶಾಸಕ ಅಶೋಕ್ ರೈ ಮತ್ತು ಪ್ರಭಾರ ಪ್ರಾಂಶುಪಾಲೆ ವೇದಶ್ರೀ ನಿಡ್ಯಾ ನಡುವೆ ವಾಗ್ವಾದ ಬೆನ್ನಲ್ಲೇ ಮೇಲೆ ಪ್ರಾಂಶುಪಾಲೆಯನ್ನ ಸರ್ಕಾರ ಅಮಾನತು ಮಾಡಿದೆ.

ಪುತ್ತೂರು (ಫೆ.26): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿನಿಯರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರು. ಕಾಲೇಜಿನ ಪಕ್ಕದಲ್ಲೇ ನಡೆಯುತ್ತಿರುವ ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಯಿಂದಾಗಿ ತರಗತಿಯೊಳಗೆ ಅತಿಯಾದ ದೂಳು ತುಂಬಿಕೊಳ್ಳುತ್ತಿತ್ತು. ಇದರಿಂದ ಪಾಠ ಕೇಳಲು ಅಸಾಧ್ಯವಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ರಸ್ತೆ ಬಂದ್ ಮಾಡಿ ದಿಢೀರ್ ಪ್ರತಿಭಟನೆ ನಡೆಸಿದ್ದರು.

ಶಾಸಕ ಅಶೋಕ್ ರೈ- ಪ್ರಾಂಶುಪಾಲೆ ನಡುವೆ ವಾಗ್ವಾದ

ಪ್ರತಿಭಟನಾ ಸ್ಥಳಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೈಡ್ರಾಮಾ ನಡೆದಿತ್ತು. 'ಸಮಸ್ಯೆಯನ್ನು ನನ್ನ ಗಮನಕ್ಕೆ ಯಾಕೆ ತಂದಿಲ್ಲ?' ಎಂದು ಶಾಸಕರು ಪ್ರಶ್ನಿಸಿದಾಗ, ಪ್ರಭಾರ ಪ್ರಾಂಶುಪಾಲೆ ವೇದಶ್ರೀ ನಿಡ್ಯಾ ಅವರೊಂದಿಗೆ ತೀವ್ರ ವಾಗ್ವಾದ ನಡೆದಿತ್ತು. ಈ ಮಾತಿನ ಚಕಮಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಶೈಕ್ಷಣಿಕ ಸಮಸ್ಯೆ ಬಗೆಹರಿಸುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಶಾಸಕರು ಕಿಡಿಕಾರಿದ್ದರು.

ಪ್ರಭಾರ ಪ್ರಾಂಶುಪಾಲೆ ವೇದಶ್ರೀ ನಿಡ್ಯಾ ಅಮಾನತು

ವಿದ್ಯಾರ್ಥಿನಿಯರನ್ನು ಪ್ರತಿಭಟನೆಗೆ ಪ್ರೇರೇಪಿಸಿದ ಹಾಗೂ ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ವೇದಶ್ರೀ ನಿಡ್ಯಾ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಸರ್ಕಾರದ ಕಠಿಣ ಕ್ರಮಕ್ಕೆ ಶೈಕ್ಷಣಿಕ ವಲಯದಲ್ಲಿ ಚರ್ಚೆ

ಪ್ರತಿಭಟನೆಗೆ ಸಹಕಾರ ನೀಡಿದ ಮತ್ತು ಶಾಸಕರೊಂದಿಗೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಈ ಅಮಾನತು ಕ್ರಮ ಜರುಗಿಸಲಾಗಿದೆ ಎನ್ನಲಾಗುತ್ತಿದೆ. ಆಸ್ಪತ್ರೆ ಕಾಮಗಾರಿಯಿಂದ ವಿದ್ಯಾರ್ಥಿನಿಯರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದರೂ, ಅದನ್ನು ಸರಿಪಡಿಸುವ ಬದಲು ಪ್ರತಿಭಟನೆಗೆ ದಾರಿ ಮಾಡಿಕೊಟ್ಟಿದ್ದು ಶಿಸ್ತು ಕ್ರಮಕ್ಕೆ ಕಾರಣವಾಗಿದೆ. ಈ ಘಟನೆ ಪುತ್ತೂರಿನ ಶೈಕ್ಷಣಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

YouTube video player