ರಾಜ್ಯದಲ್ಲಿ ಭೀಕರ ಬರಗಾಲದಿಂದ ತತ್ತರಿಸಿರುವ ರೈತರ ನೆರವಿಗೆ ಧಾವಿಸಿರುವ ಸರ್ಕಾರ, ಕೇಂದ್ರದ ಎನ್‌ಡಿಆರ್‌ಎಫ್‌ಗಾಗಿ ಕಾಯದೆ ತಕ್ಷಣವೇ ತಲಾ ₹2,500 ಪರಿಹಾರ ಘೋಷಿಸಿದೆ. ರೈತರ ಸಾಲ ಮರುಪಾವತಿ ಅವಧಿಯನ್ನು 5 ವರ್ಷಗಳಿಗೆ ವಿಸ್ತರಿಸಲಾಗಿದೆ.

ಬೆಂಗಳೂರು (ಸೆ.24): ಭೀಕರ ಬರದ ಬೇಗೆಯಿಂದ ಕಂಗಾಲಾಗಿರುವ ರಾಜ್ಯದ ಶೇಕಡಾ 83 ರಷ್ಟು ಬೆಳೆ ನಷ್ಟ ಅನುಭವಿಸಿದ 40 ರಿಂದ 50 ಲಕ್ಷ ರೈತರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ, ಕೇಂದ್ರದ ಎನ್‌ಡಿಆರ್‌ಎಫ್ (NDRF) ಪರಿಹಾರ ಹಣಕ್ಕಾಗಿ ಕಾಯದೆ ಪ್ರತಿ ರೈತನಿಗೆ ತಕ್ಷಣದಿಂದ ಜಾರಿಗೆ ಬರುವಂತೆ 2,500 ರೂಪಾಯಿ ಸಬ್ಸಿಡಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ವಿಧಾನಸಭೆಯಲ್ಲಿ ನಡೆದ ಭೀಕರ ಬರ ಪರಿಸ್ಥಿತಿಯ ಮೇಲಿನ ಸುದೀರ್ಘ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ರೈತರಿಗಾಗಿ ಒಟ್ಟು 1,250 ಕೋಟಿ ರೂಪಾಯಿಗಳ ನೆರವನ್ನು ತಕ್ಷಣವೇ ಒದಗಿಸಲಾಗುವುದು ಎಂದು ಪ್ರಕಟಿಸಿದರು.

ರೈತರಿಗೆ ಸಾಲಾವಧಿ ವಿಸ್ತರಣೆ & ಮೈಕ್ರೋಫೈನಾನ್ಸ್‌ಗೆ ಎಚ್ಚರಿಕೆ

ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದ ಸಚಿವರು, ರೈತರ ಸಾಲ ಮರುಪಾವತಿ ಅವಧಿಯನ್ನು 36 ತಿಂಗಳಿಂದ 60 ತಿಂಗಳವರೆಗೆ (5 ವರ್ಷ) ವಿಸ್ತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಬರಗಾಲದ ಸಂದರ್ಭದಲ್ಲಿ ಖಾಸಗಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ರೈತರಿಗೆ ಕಿರುಕುಳ ನೀಡಿದರೆ ಅಥವಾ ಬಲವಂತದ ವಸೂಲಿಗೆ ಇಳಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಜೊತೆಗೆ, "ಮನುಷ್ಯರ ಪ್ರಾಣ ಎಷ್ಟು ಮುಖ್ಯವೋ, ಜಾನುವಾರುಗಳ ಜೀವವೂ ಅಷ್ಟೇ ಪ್ರಾಮುಖ್ಯ. ರಾಜ್ಯದಲ್ಲಿ ಸದ್ಯ 33 ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ. ನೀರಿನ ಮೂಲಗಳಿರುವ ಕಡೆಗಳಲ್ಲಿ ರೈತರು ಮೇವು ಬೆಳೆಯಲು ಮೇವಿನ ಕಿಟ್‌ಗಳನ್ನು ವಿತರಿಸುತ್ತಿದ್ದೇವೆ. ಕೃಷಿ ಕೆಲಸಗಳಿಲ್ಲದೆ ಜನರು ಮುಂಬೈ, ಬೆಂಗಳೂರಿಗೆ ಗುಳೆ ಹೋಗುತ್ತಿದ್ದು, ಅವರಿಗಾಗಿ ವಿಕಸಿತ ಭಾರತ ಜಿ ರಾಮ್‌ಜಿ (VB-G RAM G) ಯೋಜನೆಯಡಿ ಕೆಲಸಗಳನ್ನು ಆರಂಭಿಸಲಾಗಿದೆ," ಎಂದರು.

"ಸರ್ಕಾರ ದಿವಾಳಿಯಾಗಿದೆ ಎನ್ನೋದು ಸತ್ಯಕ್ಕೆ ದೂರ"

ಸರ್ಕಾರದ ಆರ್ಥಿಕ ಪರಿಸ್ಥಿತಿ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ಶಾಸಕರ ಆರೋಪಗಳಿಗೆ ತಿರುಗೇಟು ನೀಡಿದ ಪರಮೇಶ್ವರ್, "ಆರ್ಥಿಕ ಇಲಾಖೆಯು ಪೂರಕ ಬಜೆಟ್‌ನಲ್ಲಿ ಹಣ ಇಡದೆ ವೆಚ್ಚ ಮಾಡುವಾಗ ಎಚ್ಚರಿಸುವ ಸಲಹಾ ಪತ್ರ ಬರೆಯುವುದು ಅವರ ಕರ್ತವ್ಯ. 'Don't over step' ಎಂದು ಎಚ್ಚರಿಸಿದ ತಕ್ಷಣ ಸರ್ಕಾರ ದಿವಾಳಿಯಾಗಿದೆ ಎಂದರ್ಥವಲ್ಲ. ಕರ್ನಾಟಕ ಸರ್ಕಾರ ಹಿಂದೆ, ಈಗ ಹಾಗೂ ಎಂದಿಗೂ ದಿವಾಳಿಯಾಗುವುದಿಲ್ಲ. ದೇಶದಲ್ಲೇ ಜಿಎಸ್‌ಟಿ (GST) ಸಂಗ್ರಹಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ," ಎಂದು ಸಮರ್ಥಿಸಿಕೊಂಡರು.

ಇದೇ ವೇಳೆ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, "ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಫಿಸ್ಕಲ್ ಡೆಫಿಸಿಟ್ (ಆರ್ಥಿಕ ಕೊರತೆ) 3.9 ರಷ್ಟಿತ್ತು. ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಆಡಳಿತದಲ್ಲಿ ಇದು 3 ರ ಒಳಗೇ ಇದೆ," ಎಂದು ಅಂಕಿ-ಅಂಶ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಆರ್. ಅಶೋಕ್, "ಆಗ ಇಡೀ ಪ್ರಪಂಚದಲ್ಲೇ ಕೊರೋನಾ ಆರ್ಥಿಕ ಬಿಕ್ಕಟ್ಟಿತ್ತು," ಎಂದರು.

ಅಲ್ಲದೆ, ಆರ್. ಅಶೋಕ್ ಅವರು "ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಲೀಕ್ ಆಗದ ಆರ್ಥಿಕ ಇಲಾಖೆಯ ರಹಸ್ಯ ಪತ್ರ, ಡಿ.ಕೆ. ಶಿವಕುಮಾರ್ ಇರುವಾಗ ಹೇಗೆ ಲೀಕ್ ಆಯ್ತು?" ಎಂದು ಕಿಚಾಯಿಸಿದಾಗ, "ನಾವು ಮಂತ್ರಿ ಸ್ಥಾನಕ್ಕಾಗಿ ಕೋಟ್-ಸೂಟ್ ಹಾಕಿಕೊಂಡು ದೆಹಲಿಗೆ ಹೋಗಿದ್ದು ನಿಜವೇ, ಆದರೆ ಆರ್ಥಿಕ ಇಲಾಖೆಯ ಸೀಕ್ರೆಟ್ ಡಾಕ್ಯುಮೆಂಟ್ ವಿಪಕ್ಷಗಳಿಗೆ ಸಿಕ್ಕಿದೆ ಎಂದು ನಿಮ್ಮ ಮೇಲೆ ಆರೋಪ ಮಾಡಲು ಸಾಧ್ಯವೇ?" ಎಂದು ಪರಮೇಶ್ವರ್ ಮರುಪ್ರಶ್ನಿಸಿದರು.

150 ವರ್ಷಗಳ ಭೀಕರ 'ಸೂಪರ್ ಎಲ್‌ನೀನೋ' ಸೃಷ್ಟಿಸಿದ ಬರ

ರಾಜ್ಯದಲ್ಲಿ ಉಂಟಾಗಿರುವ ಅಭಾವಕ್ಕೆ ಪ್ರಕೃತಿಯ ವಿಕೋಪವೇ ಕಾರಣ ಎಂದ ಸಚಿವರು, "ಕೇಂದ್ರ ಸರ್ಕಾರವು ಏಪ್ರಿಲ್ 13, 2026 ರಂದೇ ಎಲ್‌ನೀನೋದಿಂದಾಗಿ ಬರ ಬರಲಿದೆ ಎಂದು ಪತ್ರ ಬರೆದಿತ್ತು. ತಕ್ಷಣವೇ ಏಪ್ರಿಲ್ 16 ರಂದು ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ಡಿಸಿಗಳು ಹಾಗೂ ಸಿಇಒಗಳ ಸಭೆ ಕರೆದು ಮುನ್ನೆಚ್ಚರಿಕೆ ವಹಿಸಿದ್ದರು. ಹವಾಮಾನ ಇಲಾಖೆ ಶೇ. 5 ರಷ್ಟು ಕಡಿಮೆ ಮಳೆಯಾಗಲಿದೆ ಎಂದಿತ್ತು," ಎಂದು ತಿಳಿಸಿದರು.

"ಇದು ಕಳೆದ 150 ವರ್ಷಗಳಲ್ಲೇ ಬಂದ ಅತ್ಯಂತ ಬಲವಾದ 'ಸೂಪರ್ ಎಲ್‌ನೀನೋ' ಪರಿಣಾಮವಾಗಿದೆ. 76 ವರ್ಷಗಳಲ್ಲಿ 25 ಬಾರಿ ಎಲ್‌ನೀನೋ ಬಂದಿದ್ದರೂ, ಈ ಮಟ್ಟಿನ ಭೀಕರತೆ ಇರಲಿಲ್ಲ. ಲಂಡನ್‌ನಲ್ಲಿ ಸನ್ ಸ್ಟ್ರೋಕ್‌ನಿಂದ 20 ಸಾವಿರ ಜನ ಸತ್ತಿದ್ದರು. ಇಡೀ ಜಗತ್ತಿನಾದ್ಯಂತ ಈ ಸಮಸ್ಯೆ ಇದೆ. ರಾಜ್ಯದಲ್ಲಿ 179 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ರಾಷ್ಟ್ರೀಯ ವಿಕೋಪ ಎಂದು ಘೋಷಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಒಟ್ಟು ₹18,000 ಕೋಟಿ ನಷ್ಟದ ಅಂದಾಜು ಹಾಕಲಾಗಿದೆ," ಎಂದು ವಿವರ ನೀಡಿದರು.

ಕುಡಿಯುವ ನೀರು ಹಾಗೂ ಜಲಾಶಯಗಳ ಸ್ಥಿತಿ

ಪ್ರಸ್ತುತ ಪರಿಸ್ಥಿತಿಯ ದತ್ತಾಂಶ ಹಂಚಿಕೊಂಡ ಸಚಿವರು, ಕಳೆದ ವರ್ಷ ಶೇ. 93 ರಷ್ಟಿದ್ದ ನೀರು ಈ ಬಾರಿ ಶೇ. 72 ಕ್ಕೆ ಕುಸಿದು, ಪ್ರಸ್ತುತ ಶೇ. 50 ಕ್ಕೆ ಬಂದು ನಿಂತಿದೆ. ರಾಜ್ಯದ 531 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಪ್ರತಿಯೊಬ್ಬ ಶಾಸಕರಿಗೆ ₹1 ಕೋಟಿ ನೀಡಲಾಗಿದ್ದು, ಕುಡಿಯುವ ನೀರಿಗಾಗಿ ಒಟ್ಟು ₹117 ಕೋಟಿ ನೀಡಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ (PD) ಖಾತೆಯಲ್ಲಿ ಒಟ್ಟು ₹420 ಕೋಟಿ ಹಣ ಲಭ್ಯವಿದೆ. "ನೀರು ಸ್ಥಗಿತಗೊಂಡಿದೆ ಎಂದು 4-5 ಸಾವಿರ ಜನ ಬೆಂಗಳೂರಿಗೆ ಪಾದಯಾತ್ರೆ ಬೆಳೆಸುತ್ತಿದ್ದಾರೆ. ಅವರು ಬರಲಿ, ನಾವು ಪರ್ಯಾಯ ವ್ಯವಸ್ಥೆ ಮಾಡುತ್ತೇವೆ" ಎಂದು ಅಶೋಕ್ ಪ್ರಶ್ನೆಗೆ ಉತ್ತರಿಸಿದರು. ಜಿಲ್ಲಾ ಮಟ್ಟದಲ್ಲಿ 270, ಉಸ್ತುವಾರಿ ಸಚಿವರು 80 ಹಾಗೂ ಒಟ್ಟಾರೆಯಾಗಿ 832 ಟಾಸ್ಕ್ ಫೋರ್ಸ್ ಸಭೆಗಳು ಸೇರಿ 1,630 ಸಭೆಗಳನ್ನು ನಡೆಸಿ ಪರಿಸ್ಥಿತಿ ನಿಗ್ರಹಿಸಲಾಗಿದೆ ಎಂದರು.

ಕೇಂದ್ರದ ಅನುದಾನ ತಾರತಮ್ಯ 

16ನೇ ಹಣಕಾಸು ಆಯೋಗದ ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ತೀವ್ರ ಅನ್ಯಾಯವಾಗಿದೆ ಎಂದು ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು. "ಮಹಾರಾಷ್ಟ್ರಕ್ಕೆ ₹39,492 ಕೋಟಿ, ಉತ್ತರ ಪ್ರದೇಶಕ್ಕೆ ₹20,420 ಕೋಟಿ, ಬಿಹಾರಕ್ಕೆ ₹1,80,153 ಕೋಟಿ, ಮಧ್ಯಪ್ರದೇಶಕ್ಕೆ ₹15,156 ಕೋಟಿ ಹಾಗೂ ರಾಜಸ್ಥಾನಕ್ಕೆ ₹12,281 ಕೋಟಿ ಸಿಕ್ಕರೆ, ಕೇಂದ್ರಕ್ಕೆ ಅಪಾರ ತೆರಿಗೆ ಕಟ್ಟುವ ಕರ್ನಾಟಕಕ್ಕೆ ಸಿಕ್ಕಿದ್ದು ಕೇವಲ ₹8,559 ಕೋಟಿ! ನಮಗೆ ಎನ್‌ಡಿಆರ್‌ಎಫ್ ಅಡಿ ₹922.28 ಕೋಟಿ ಬರಬೇಕಿದ್ದರೂ ಸಿಕ್ಕಿದ್ದು ಕೇವಲ ₹460 ಕೋಟಿ. ನಾವು ದೆಹಲಿಗೆ ಹೋಗಿ ಮಾತುಕತೆಗೆ ಅವಕಾಶ ಕೇಳಿದರೂ ಕೇಂದ್ರ ಸಮಯ ನೀಡಲಿಲ್ಲ. ಅನಿವಾರ್ಯವಾಗಿ ಕೋರ್ಟ್ ಮೆಟ್ಟಿಲೇರಿ ಅಂತಿಮವಾಗಿ ₹3,400 ಕೋಟಿ ತರಬೇಕಾಯಿತು," ಎಂದು ಅಸಮಾಧಾನ ಹೊರಹಾಕಿದರು.

ಬೆಳೆ ವಿಮೆ & ಅಭಿವೃದ್ಧಿ ಬದ್ಧತೆ

ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ 49 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು, ಅವರಿಗೆ ಪರಿಹಾರ ಸಿಗುವ ವಿಶ್ವಾಸವಿದೆ. ಸರ್ಕಾರದಿಂದಲೇ ₹1,200 ಕೋಟಿ ಬೆಳೆ ವಿಮೆ ಕಂತು ಪಾವತಿಸಬೇಕಾಗುತ್ತದೆ ಎಂದರು. ಅಂತಿಮವಾಗಿ, "ನಾವು ಚುನಾವಣೆಗೆ ಹೋಗುವ ಮುನ್ನ ನೀಡಿದ್ದ 250 ಭರವಸೆಗಳನ್ನು ಈಡೇರಿಸಿದ್ದೇವೆ. ಸಿಎಂ ಸಿದ್ದರಾಮಯ್ಯನವರು ರಸ್ತೆ ಅಭಿವೃದ್ಧಿಗೆ ₹10,000 ಕೋಟಿ ಘೋಷಿಸಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಜನರಿಗೆ ತೊಂದರೆಯಾಗದಂತೆ ಆಡಳಿತ ನಡೆಸುತ್ತಿದ್ದೇವೆ," ಎಂದು ಸ್ಪಷ್ಟಪಡಿಸಿದರು. ಚರ್ಚೆಯ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದನಕ್ಕೆ ಆಗಮಿಸಿದಾಗ, "ಸಿಎಂ/ಡಿಸಿಎಂ ಬಂದಿದ್ದು ನನಗೆ ಆನೆ ಬಲ ಬಂದಂತಾಗಿದೆ," ಎಂದು ಪರಮೇಶ್ವರ್ ಹರ್ಷ ವ್ಯಕ್ತಪಡಿಸಿದರು.