ಗಣೇಶ ಚತುರ್ಥಿ ಹಬ್ಬದ ದಿನವೇ ಬೆಳಗಾವಿಯಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ಮತ್ತೊಂದು ದುರಂತದಲ್ಲಿ, ಮಂಡ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದು, ಹಬ್ಬದ ಸಂಭ್ರಮದ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿದೆ.
ಬೆಳಗಾವಿ: ನಾಡಿನ ಎಲ್ಲಡೆ ಗೌರಿ-ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗಿದೆ. ಆದರೆ ಗಣೇಶ ಚತುರ್ಥಿ ವೇಳೆಯೇ ಬೆಳಗಾವಿಯಲ್ಲಿ ದೊಡ್ಡ ದುರಂತ ಸಂಭವಿಸಿದ್ದು, ಹಬ್ಬದ ಸಂಭ್ರಮ ಮನೆ ಮಾಡಿದ್ದ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ. ಮನೆಯಲ್ಲಿದ್ದ ಫ್ರಿಡ್ಲ್ ಬ್ಲಾಸ್ಟ್ ಆಗಿ ಇಡೀ ಮನೆ ಬೆಂಕಿಗೆ ಅಹುತಿಯಾಗಿ, ಒಂದೇ ಕುಟುಂಬ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನು ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಸಿಲಾಗುತ್ತಿದೆ.
ಹಬ್ಬದ ದಿನವೇ ದುರಂತ!
ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಾವ್ಹಾಟ್ ಗಲ್ಲಿಯಲ್ಲಿ ತಡರಾತ್ರಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ಗಜಾನನ ದಮೋನೆ ಸೇರಿ ನಾಲ್ವರ ಸಾವನ್ನಪ್ಪಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬದಲ್ಲಿ ಗಣೇಶ ಚತುರ್ಥಿ ದಿನವೇ ಭೀಕರ ದುರ್ಘಟನೆ ನಡೆದಿದೆ. ಮನೆಯಲ್ಲಿ ಹೊತ್ತಿಕೊಂಡ ಬೆಂಕಿಗೆ ಕುಟುಂಬವೇ ಸುಟ್ಟು ಭಸ್ಮವಾಗಿದೆ.
ಇಬ್ಬರ ಸ್ಥಿತಿ ಗಂಭೀರ
ದುರ್ಘಟನೆಯಲ್ಲಿ ಕೊನೆಯುಸಿರೆಳೆದವರನ್ನು ಶಾರಧಾ ದಮೋನೆ (45), ಭಾರತಿ ರಾಜಾರಾಮ ದಮೋನೆ (50), ಪ್ರಿಯಾ ಗಜಾನನ ದಮೋನೆ (28) ಗಂಗಾ ಗಜಾನನ ದಮೋನೆ (25) ಎಂದು ಗುರುತಿಸಲಾಗಿದೆ. ಇನ್ನು, ರೋಷನ್ ದಮೋನೆ (21) ಗಜಾನನ ದಮೋನೆ (61) ಗಂಭೀರ ಗಾಯಗೊಂಡಿದ್ದು, ಗಾಯಾಳುಗಳಿಗೆ ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ.
ಹಬ್ಬಕ್ಕೆ ಹೋಗಿದ್ದ ಯುವಕರ ದುರಂತ ಅಂತ್ಯ
ಇನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸಾವನ್ಪಪಿದ್ದಾರೆ. ಕೊಪ್ಪ ನಿವಾಸಿಗಳಾದ ಕಾವ್ಯ, ಮುತ್ತುರಾಜ್, ಕೀರ್ತನ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಸ್ಕೂಟರ್ ಗೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ, ಈ ವೇಳೆ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದಾರೆ. ನಿನ್ನೆ ಹಬ್ಬಕ್ಕೆ ಅಂತ ಸ್ವತಃ ಊರಿಗೆ ಹೋಗಿದ್ದ ಯುವಕರು ಹಬ್ಬ ಮುಗಿಸಿ ಇಂದು ಬೆಳಗ್ಗಿನ ಜಾವ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.


