ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಹೆದರಿ ಓಡುತ್ತಿದ್ದ ರಮೇಶ್ ಎಂಬಾತ ಜಾರಿ ಬಿದ್ದು ತಲೆ ಬಂಡೆಗೆ ಒಡೆದು ಮೃತಪಟ್ಟಿದ್ದಾನೆ. ರಾತ್ರಿಯಿಂದ ನಾಪತ್ತೆಯಾಗಿದ್ದ ರಮೇಶ್ ಅವರ ಶವ ಇಂದು ಅರಣ್ಯ ಹಾಗೂ ಕಾಫಿ ತೋಟದ ಪ್ರದೇಶದಲ್ಲಿ ತೀವ್ರ ರಕ್ತಸ್ರಾವವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು: ಪೊಲೀಸರ ದಾಳಿಗೆ ಹೆದರಿ ಓಡುವಾಗ ಜಾರಿ ಬಿದ್ದು ತಲೆ ಬಂಡೆಗೆ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರಂತ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ. ಎನ್.ಆರ್.ಪುರ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದ ರಮೇಶ್ (35) ಮೃತಪಟ್ಟ ದುರ್ದೈವಿ.
ಕಾಫಿ ತೋಟದಲ್ಲಿ ಜೂಜಾಟ
ಎನ್.ಆರ್.ಪುರ ತಾಲೂಕಿನ ಕಡಬಗೆರೆ ಸಮೀಪದ ಕಾಫಿ ತೋಟ ಹಾಗೂ ಬಾಸಾಪುರ ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಅಂದರ್-ಬಾಹರ್ ಜೂಜಾಟ ನಡೆಯುತ್ತಿತ್ತು. ಜೂಜಾಟದ ಅಡ್ಡೆಯ ಮೇಲೆ ಕಳೆದ ರಾತ್ರಿ ಬಾಳೆಹೊನ್ನೂರು ಪೊಲೀಸರು ಹಠಾತ್ ದಾಳಿ ನಡೆಸಿದ್ದರು.
ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಜೂಜಾಟದಲ್ಲಿ ತೊಡಗಿದ್ದ ಗುಂಪು ದಿಕ್ಕಾಪಾಲಾಗಿ ಓಡಲಾರಂಭಿಸಿದೆ. ಸ್ಥಳದಲ್ಲಿದ್ದ 9 ಜನರಲ್ಲಿ ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಬಾಳೆಹೊನ್ನೂರು ಪೊಲೀಸರು ಯಶಸ್ವಿಯಾಗಿದ್ದರು. ಆದರೆ ಪೊಲೀಸರ ಕೈಗೆ ಸಿಗಬಾರದೆಂದು ಹೆದರಿ ಕಾಡಿನಲ್ಲಿ ಓಡುತ್ತಿದ್ದ ರಮೇಶ್, ನಿಯಂತ್ರಣ ತಪ್ಪಿ ಜಾರಿ ಬಿದ್ದಿದ್ದಾರೆ. ಈ ವೇಳೆ ಅವರ ತಲೆ ಅಲ್ಲೇ ಇದ್ದ ಬಂಡೆಗೆ ಬಲವಾಗಿ ಒಡೆದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಳೆದ ರಾತ್ರಿ ರಮೇಶ್ ಮನೆಗೆ ಮರಳದ ಹಿನ್ನೆಲೆಯಲ್ಲಿ ಅವರ ಕುಟುಂಬದವರಲ್ಲಿ ತೀವ್ರ ಆತಂಕ ಮೂಡಿತ್ತು. ಇಂದು ಬೆಳಿಗ್ಗೆ ಕಡಬಗೆರೆ ಸಮೀಪದ ಕಾಫಿ ತೋಟ ಮತ್ತು ಅರಣ್ಯ ಪ್ರದೇಶದಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದಾಗ, ತಲೆಯಲ್ಲಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟ ಸ್ಥಿತಿಯಲ್ಲಿ ರಮೇಶ್ ಅವರ ಶವ ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.


