ತೀವ್ರ ಬರಗಾಲದಿಂದ ತತ್ತರಿಸಿರುವ ಮತ್ತು ಬೆಳೆ ನಾಶದಿಂದ ಸಂಕಷ್ಟದಲ್ಲಿರುವ ಜಗಳೂರು ತಾಲೂಕನ್ನು ಸರ್ಕಾರವು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿದೆ. ಸರ್ಕಾರದ ಈ ನಿರ್ಧಾರವು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.

ಜಗಳೂರು: ಸ್ವಾತಂತ್ರ್ಯ ಬಂದು 8 ದಶಕಗಳು ಕಳೆದರೂ, ಜನಪ್ರತಿನಿಧಿಗಳ ಆಡಳಿತದಲ್ಲಿ ಜಗಳೂರು ತಾಲೂಕು ಮಾತ್ರ ಇಂದಿಗೂ ಬಡತನ ಮತ್ತು ಬರದ ನಾಡಾಗಿಯೇ ಉಳಿದಿದೆ. ಬರವನ್ನು ಹಾಸಿ ಹೊದ್ದರೂ ಸರ್ಕಾರದ ಕಣ್ಣಿಗೆ ಜಗಳೂರು ರೈತರ ಸಂಕಷ್ಟ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಈ ಬಾರಿಯ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಗಳೂರು ಇಲ್ಲ!?

ಅರ್ಥಶಾಸ್ತ್ರಜ್ಞ ಡಾ. ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಎರಡನೇ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಜಗಳೂರು, ಅಕ್ಷರಶಃ ಬರಗಾಲದ ಗೂಡಾಗಿದೆ. ಸ್ವಾತಂತ್ರ್ಯದ 80 ವರ್ಷಗಳ ಇತಿಹಾಸದಲ್ಲಿ ಸುಮಾರು 65 ವರ್ಷಗಳ ಕಾಲ ಬರವನ್ನೇ ಉಂಡು ಬದುಕಿನ ಜತೆ ಸೆಣಸಾಡುತ್ತಿರುವ ಇಲ್ಲಿನ ಜನರಿಗೆ, ಸರ್ಕಾರದ ಇತ್ತೀಚಿನ ನಿರ್ಧಾರ ಮೈಮೇಲೆ ಬಿಸಿಎಣ್ಣೆ ಎರಚಿದಂತಾಗಿದೆ.

ಹೈರಾಣಾದ ರೈತಕುಲ:

ತಾಲೂಕಿನ 196 ಗ್ರಾಮಗಳಲ್ಲೂ ಬರಗಾಲದ ಕರಾಳ ಛಾಯೆ ಆವರಿಸಿದೆ. ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಬಿತ್ತಿದ ಬೆಳೆಗಳು ನೆಲಕಚ್ಚಿವೆ. ಮೆಕ್ಕೆಜೋಳ, ರಾಗಿ, ದ್ವಿದಳ ಧಾನ್ಯಗಳು, ಹತ್ತಿ, ಶೇಂಗಾ ಹಾಗೂ ಸೂರ್ಯಕಾಂತಿ ಬೆಳೆಗಳು ತೇವಾಂಶವಿಲ್ಲದೆ ತೆನೆಯಲ್ಲೇ ಕಮರಿಹೋಗಿವೆ. ಅಲ್ಲದೇ ರೈತರು ಅಳಿಸಿ ಹಾಕಿದ್ದಾರೆ. ​ಜಮೀನಿಗೆ ಹಾಕಿದ ಬಿತ್ತನೆ ಖರ್ಚು, ರಸಗೊಬ್ಬರ ಹಾಗೂ ಉಳುಮೆ ಮಾಡಿದ ಸಾಲದ ಹೊರೆ ರೈತನ ತಲೆಮೇಲೆ ಬಂದು ಕುಳಿತಿದೆ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಕುಡಿಯುವ ನೀರಿಗೂ ಪರದಾಡುವ ಭೀಕರ ವಾತಾವರಣ ನಿರ್ಮಾಣವಾಗುತ್ತಿದೆ. ಆದರೆ, ಅಧಿಕಾರ ಗದ್ದುಗೆಯಲ್ಲಿ ಇರುವವರಿಗೆ ಮಾತ್ರ ರೈತರ ಈ ಗೋಳು ಕೇಳಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಣ್ಣುಮುಚ್ಚಿ ಕುಳಿತ ಆಡಳಿತ, ಜನಪ್ರತಿನಿಧಿಗಳು:

ರೈತರ ಪಾಲಿಗೆ ದಾರಿದೀಪವಾಗಬೇಕಿದ್ದ ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು ಇಂದು ಕಣ್ಣುಮುಚ್ಚಿ ಕುಳಿತಿರುವುದು ಕ್ಷಮಿಸಲಾರದ ಅಪರಾಧ. ತಾಲೂಕಿನಲ್ಲಿ ಭೀಕರ ಬರ ತಾಂಡವವಾಡುತ್ತಿದ್ದರೂ, ಇದುವರೆಗೆ ಒಮ್ಮೆಯೂ ಅಧಿಕಾರಿಗಳನ್ನು ಕರೆದು ಮಳೆ ಹಾಗೂ ಬರದ ಪರಿಸ್ಥಿತಿ ಬಗ್ಗೆ ಉನ್ನತಮಟ್ಟದ ಪರಿಶೀಲನಾ ಸಭೆ ನಡೆಸುವ ಸೌಜನ್ಯ ತೋರಿಲ್ಲ ಎಂದು ರೈತರು ಕಿಡಿಕಾರಿದ್ದಾರೆ. ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಜಗಳೂರು ತಾಲೂಕಿನ ರೈತರ ಹೊಲಗಳಿಗೆ ಭೇಟಿ ನೀಡಿ ಸೂಕ್ತ ಪರಿಹಾರ ಸರ್ಕಾರಕ್ಕೆ ಒತ್ತಾಯಿಸಿದ್ದಷ್ಟೇ ರೈತರ ಭಾಗ್ಯ!

ಕಾಗದದ ಮೇಲಿನ ಅಂಕಿಅಂಶಗಳ ಆಟದಲ್ಲಿ ಸಿಲುಕಿ ಜಗಳೂರು ತಾಲೂಕಿನ ನೈಜ ಬರ ಪರಿಸ್ಥಿತಿ ಮುಚ್ಚಿಡುತ್ತಿರುವುದು ಖಂಡನೀಯ. ಸರ್ಕಾರ ಕೂಡಲೇ ತನ್ನ ಎಡವಟ್ಟನ್ನು ತಿದ್ದಿಕೊಂಡು, ಜಗಳೂರು ತಾಲೂಕನ್ನು ಅಧಿಕೃತವಾಗಿ ''ಬರಪೀಡಿತ ತಾಲೂಕು'' ಎಂದು ಘೋಷಿಸಬೇಕು. ರೈತರಿಗೆ ಸೂಕ್ತ ಬೆಳೆ ನಷ್ಟ ಪರಿಹಾರ ಹಾಗೂ ಬೆಳೆ ವಿಮೆ ದೊರಕಿಸಬೇಕಾದ ಹೊಣೆ ಜನಪ್ರತಿನಿಧಿಗಳಲ್ಲಿ ಇರಬೇಕಿದೆ.

ಜಗಳೂರು ತಾಲೂಕಿಗಾದ ಅನ್ಯಾಯಕ್ಕೆ ಆಕ್ರೋಶಗೊಂಡ ಜಗಳೂರು ತಾಲೂಕಿನ ವಿರೋಧ ಪಕ್ಷವಾದ ಬಿಜೆಪಿಯು ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್‌ ನೇತೃತ್ವದಲ್ಲಿ ಹಾಗೂ ರೈತಸಮೂಹ ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋರಾಟದ ಕಿಚ್ಚುಹೊತ್ತಿದೆ. ಬರ ಪಟ್ಟಿಯಿಂದ ಜಗಳೂರು ಕೈಬಿಟ್ಟ ಹಿನ್ನೆಲೆ ಎಚ್ಚೆತ್ತ ಸ್ಥಳೀಯ ಶಾಸಕ ಬಿ.ದೇವೇಂದ್ರಪ್ಪ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮಂತ್ರಿ ಪರಮೇಶ್ವರ್‌ ಅವರನ್ನು ಭೇಟಿಯಾಗಿ ಬರ ಪಟ್ಟಿಗೆ ಜಗಳೂರು ತಾಲೂಕನ್ನೂ ಸೇರಿಸುವಂತೆ ಮನವಿ ಮಾಡಿದ್ದಾರೆ.